ಶುಕ್ರವಾರ, ಡಿಸೆಂಬರ್ 13, 2019
26 °C

ಹೆದ್ದಾರಿಗೆ ಇಳಿಯುವ ಮುನ್ನ ಫಾಸ್ಟ್ಯಾಗ್‌ ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಳಕೆದಾರರ ಶುಲ್ಕ ಪಾವತಿಯನ್ನು ಡಿಜಿಟಲೀಕರಣಕ್ಕೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಡಿಜಿಟಲ್‌ ರೂಪದಲ್ಲಿ ಶುಲ್ಕ ಪಾವತಿ ಮಾಡುವ ಸಾಧನವಾದ ಫಾಸ್ಟ್ಯಾಗ್‌ನ ಮಾರಾಟ ಏರಿಕೆಯಾಗುತ್ತಿದೆ. ಫಾಸ್ಟ್ಯಾಗ್‌ ಅನ್ನು ಕಡ್ಡಾಯಗೊಳಿಸುವ ಮೂಲಕ ಆದಾಯ ಹೆಚ್ಚಳದ ನಿರೀಕ್ಷೆಯಲ್ಲಿ ಕೇಂದ್ರ ಸರ್ಕಾರವಿದೆ. ಅಲ್ಲದೆ ತೆರಿಗೆ ವಂಚೆನೆಗೆ ಕಡಿವಾಣ ಹಾಕುವ ಗುರಿಯೂ ಇದೆ. ನಗದು ರೂಪದಲ್ಲಿ ಹೆದ್ದಾರಿ ಶುಲ್ಕ ಪಾವತಿಯನ್ನು ತೊರೆದು, ಫಾಸ್ಟ್ಯಾಗ್‌ ವ್ಯವಸ್ಥೆ ಅಳವಡಿಕೆಗೆ ಎಲ್ಲರೂ ಸಿದ್ಧರಾಗಬೇಕಿದೆ

ಡಿಸೆಂಬರ್ 1ರ ಹೊತ್ತಿಗೆ...

* ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲಾ ವಾಹನಗಳೂ ‘ಫ್ಯಾಸ್ಟ್ಯಾಗ್’ ಹೊಂದಿರಬೇಕು

* ಫ್ಯಾಸ್ಟ್ಯಾಗ್ ಮೂಲಕವೇ ಹೆದ್ದಾರಿ ಬಳಕೆದಾರರ ಶುಲ್ಕ ಪಾವತಿ ಆಗಲಿದೆ

* ಪ್ರತಿ ಪಾವತಿಗೆ ಶೇ 2.5ರಷ್ಟು ಕ್ಯಾಶಬ್ಯಾಕ್‌ ದೊರೆಯಲಿದೆ. 2019–20ನೇ ಸಾಲಿನ ಆರ್ಥಿಕ ವರ್ಷದ ಅಂತ್ಯದವೆರೆಗೆ (2020ರ ಮಾರ್ಚ್‌ 31) ಕ್ಯಾಶ್‌ಬ್ಯಾಕ್‌ ಸೌಲಭ್ಯ ಇರಲಿದೆ

* ಎಲ್ಲಾ ಟೋಲ್‌ಪ್ಲಾಜಾಗಳಲ್ಲಿ ಒಂದೊಂದು ಹೈಬ್ರಿಡ್‌ ಬೂತ್ ಇರಲಿದೆ. ಇದರಲ್ಲಿ ‘ಫಾಸ್ಟ್ಯಾಗ್’ ಮತ್ತು ನಗದು ರೂಪದಲ್ಲೂ ಟೋಲ್‌ ಶುಲ್ಕ ಪಾವತಿ ಮಾಡಲು ಅವಕಾಶವಿರುತ್ತದೆ

ಫಾಸ್ಟ್ಯಾಗ್‌ ಏನು? ಎತ್ತ?

ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ (ಆರ್‌ಎಫ್‌ಐಡಿ) ಸವಲತ್ತು ಉಳ್ಳ, ಸ್ಮಾರ್ಟ್‌ ಲೇಬಲ್‌ಗಳನ್ನು ಫ್ಯಾಸ್ಟ್ಯಾಗ್ ಎನ್ನಲಾಗುತ್ತದೆ. ಫಾಸ್ಟ್ಯಾಗ್‌ನಲ್ಲಿ ಕ್ಯುಆರ್‌ ಜೋಡ್‌ ಇರಲಿದೆ (ಕೆಲವು ಬ್ಯಾಂಕ್‌ಗಳ ಫಾಸ್ಟ್ಯಾಗ್‌ನಲ್ಲಿ ಬಾರ್‌ಕೋಡ್ ಇರಲಿದೆ). ಫಾಸ್ಟ್ಯಾಗ್‌ ಅನ್ನು ವಾಹನದ ಮುಂಭಾಗದ ಗಾಜಿಗೆ (ವಿಂಡ್‌ಸ್ಕ್ರೀನ್‌) ಅಂಟಿಸಿರಲಾಗುತ್ತದೆ. ಇದನ್ನು ವಾಹನದ ನೋಂದಣಿ ಸಂಖ್ಯೆಗೆ ಜೋಡಿಸಿರಲಾಗುತ್ತದೆ. ಆಯಾ ವಾಹನದ ಫಾಸ್ಟ್ಯಾಗ್‌ ಖಾತೆಯಲ್ಲಿ ಮುಂಚಿತವಾಗಿ ಹಣ ಜಮೆ ಮಾಡಿರಬೇಕು.

ಟೋಲ್‌ಬೂತ್‌ಗಳ ಫಾಸ್ಟ್ಯಾಗ್‌ ಲೇನ್‌ನಲ್ಲಿ ರೀಡರ್ ಇರಲಿದೆ. ಆ ಲೇನ್ ಅನ್ನು ವಾಹನ ಹಾದುಹೋದಾಗ ಅದರಲ್ಲಿರುವ ಫಾಸ್ಟ್ಯಾಗ್‌ ಅನ್ನು ರೀಡರ್, ರೀಡ್ ಮಾಡಲಿದೆ. ಆ ಫಾಸ್ಟ್ಯಾಗ್‌ನ ಖಾತೆಯಿಂದ ಶುಲ್ಕ ಪಾವತಿ ಆಗಲಿದೆ. 

ಐಸಿಐಸಿಐ, ಎಚ್‌ಡಿಎಫ್‌ಸಿ, ಆಕ್ಸಿಸ್‌, ಎಸ್‌ಬಿಐ, ಏರ್‌ಟೆಲ್ ಪೇಮೆಂಟ್ ಬ್ಯಾಂಕ್ ಸೇರಿದಂತೆ 22 ಬ್ಯಾಂಕ್‌ಗಳು ಫಾಸ್ಟ್ಯಾಗ್ ಮಾರಾಟ ಮಾಡುತ್ತವೆ. ಆಯ್ದ ಶಾಖೆಗಳಲ್ಲಿ ಈ ಸೇವೆ ಲಭ್ಯವಿದೆ. ಆನ್‌ಲೈನ್‌ನಲ್ಲೂ ಖರೀದಿಸಬಹುದಾಗಿದೆ. ಟೋಲ್‌ ಪ್ಲಾಜಾಗಳಲ್ಲೂ ಫಾಸ್ಟ್ಯಾಗ್ ಖರೀದಿಸಬಹುದು.

ಏರ್‌ಟೆಲ್ ಪೇಮೆಂಟ್ ಬ್ಯಾಂಕ್‌ ಮತ್ತು ಪೇಟಿಎಂನಲ್ಲೂ ಫಾಸ್ಟ್ಯಾಗ್‌ ಖರೀದಿಸಬಹುದು. ಆನ್‌ಲೈನ್‌ನಲ್ಲಿ ಫಾಸ್ಟ್ಯಾಗ್‌ ಖಾತೆಯನ್ನು ರಿಚಾರ್ಜ್ ಮಾಡಬಹುದು. ಬ್ಯಾಂಕ್‌ ಖಾತೆಯನ್ನೂ ಲಿಂಕ್ ಮಾಡಬಹುದು.

ಫಾಸ್ಟ್ಯಾಗ್‌ನ ಬೆಲೆ ₹ 100, ಫಾಸ್ಟ್ಯಾಗ್‌ ಖರೀದಿ ವೇಳೆ ₹ 150–250 ಭದ್ರತಾ ಶುಲ್ಕ ಇರಿಸಬೇಕು (ಬೇರೆ–ಬೇರೆ ಬ್ಯಾಂಕ್‌ಗಳ ಭದ್ರತಾ ಠೇವಣಿ ಶುಲ್ಕದಲ್ಲಿ ವ್ಯತ್ಯಾಸವಿದೆ).

ಅಂಕಿಸಂಖ್ಯೆ

ಎನ್‌ಎಚ್‌ಎಐ ಅಧೀನದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳ ಉದ್ದ 1.4 ಲಕ್ಷ ಕಿ.ಮೀ., ಈಗ ಬಳಕೆಗೆ ಶುಲ್ಕ (ಟೋಲ್‌) ಪಾವತಿ ಮಾಡಬೇಕಾದ ಹೆದ್ದಾರಿಗಳ ಒಟ್ಟು ಉದ್ದ 24,996 ಕಿ.ಮೀ. 2019ರ ಅಂತ್ಯಕ್ಕೆ ಟೋಲ್‌ ಪಾವತಿ ಮಾಡಬೇಕಾದ ಹೆದ್ದಾರಿಗಳ ಉದ್ದ 27,000 ಕಿ.ಮೀ. ಕಡ್ಡಾಯ ಫಾಸ್ಟ್ಯಾಗ್ ಜಾರಿ ನಂತರ, ಟೋಲ್ ಮೂಲದ ನಿರೀಕ್ಷಿತ ವಾರ್ಷಿಕ ಆದಾಯ ₹ 1 ಲಕ್ಷ ಕೋಟಿ.

‘ಇ–ವೇ ಬಿಲ್‌’ ಜೋಡಣೆ

ವಾಣಿಜ್ಯ ವಾಹನಗಳ ಫ್ಯಾಸ್ಟ್ಯಾಗ್‌ಗೆ ‘ಇ–ವೇ ಬಿಲ್‌’ ಅನ್ನು ಜೋಡಿಸಲಾಗುತ್ತದೆ. ಇದರಿಂದ ವಾಣಿಜ್ಯ ವಾಹನಗಳು ಎಲ್ಲೆಲ್ಲಿ ಸಂಚರಿಸುತ್ತವೆ ಎಂಬುದರ ಬಗ್ಗೆ ನಿಗಾ ಇರಿಸಲು ಸಾಧ್ಯವಾಗುತ್ತದೆ ಎಂದು ಸಚಿವಾಲಯ ಹೇಳಿದೆ.

‘ಇ–ವೇ ಬಿಲ್‌’ ಅನ್ನು ಒಂದು ಬಾರಿ ಮಾತ್ರ ಬಳಸಬೇಕು. ಆದರೆ ಈಗ ಒಮ್ಮೆ ಬಿಲ್‌ ಪಡೆದು, ಹಲವು ಬಾರಿ ಸಾಗಣೆ ಮಾಡಲಾಗುತ್ತಿದೆ. ಅಲ್ಲದೆ ಬಿಲ್‌ನಲ್ಲಿ ಸೂಚಿಸಲಾಗಿರುವ ಸ್ಥಳಗಳಿಗಿಂತ ಬೇರೆ ಸ್ಥಳಗಳಿಗೆ ಸಾಗಣೆ ಮಾಡಲಾಗುತ್ತಿದೆ. ಈ ಮೂಲಕ ತೆರಿಗೆ ಪಾವತಿಯನ್ನು ತಪ್ಪಿಸಲಾಗುತ್ತಿದೆ. ಫಾಸ್ಟ್ಯಾಗ್‌ಗಳಿಗೆ ಇ–ವೇ ಬಿಲ್‌ ಅನ್ನು ಜೋಡಿಸುವುದರಿಂದ, ತೆರಿಗೆ ವಂಚನೆಗೆ ಕಡಿವಾಣ ಹಾಕಬಹುದು’ ಎಂದು ಸಚಿವಾಲಯ ಹೇಳಿದೆ.

ಫಾಸ್ಟ್ಯಾಗ್‌ಗೆ ಇ–ವೇ ಬಿಲ್‌ ಜೋಡಿಸುವುದರಿಂದ ವಾಹನ ಇರುವ ಸ್ಥಳದ ಮಾಹಿತಿ ಸಿಗುವ ಜತೆಗೆ ಅದು ಎಷ್ಟು ಬಾರಿ ರಾಷ್ಟ್ರೀಯ ಹೆದ್ದಾರಿಯ ಟೋಲ್‌ ಪ್ಲಾಜಾವನ್ನು ಹಾದು ಹೋಗಿದೆ ಎನ್ನುವ ನಿಖರವಾದ ಮಾಹಿತಿಯೂ ಸಿಗಲಿದೆ. ತೆರಿಗೆ ವಂಚನೆಗೆ ಕಡಿವಾಣ ಬೀಳುವುದರಿಂದ, ಸರ್ಕಾರಕ್ಕೆ ತೆರಿಗೆ ರೂಪದ ಆದಾಯದಲ್ಲಿ ಏರಿಕೆ ಆಗಲಿದೆ ಎಂದು ಸಚಿವಾಲಯ ಹೇಳಿದೆ.

ಇ–ವೇ ಬಿಲ್‌ಗಳಿಗೆ ಫಾಸ್ಟ್ಯಾಗ್‌ ಜೋಡಿಸಲು ಜಿಎಸ್‌ಟಿ ಮಂಡಳಿ ಈಗಾಗಲೇ ಒಪ್ಪಿಗೆ ನೀಡಿದೆ. ಇದನ್ನು ಅನುಷ್ಠಾನಕ್ಕೆ ತರುವ ಪ್ರಕ್ರಿಯೆ ಜಾರಿಯಲ್ಲಿವೆ.

ಆಧಾರ: ಪಿಟಿಐ, ಎನ್‌ಎಚ್‌ಎಐ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಮೈ ಫಾಸ್ಟ್ಯಾಗ್ ಆ್ಯಪ್‌

ಪ್ರತಿಕ್ರಿಯಿಸಿ (+)