ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ: ಮಹಾಮೈತ್ರಿ ಸೀಟು ಹಂಚಿಕೆ ಅಂತಿಮ

Last Updated 30 ಮಾರ್ಚ್ 2019, 3:41 IST
ಅಕ್ಷರ ಗಾತ್ರ

ಪಟ್ನಾ: ಬಿಹಾರದ 40 ಲೋಕಸಭಾ ಕ್ಷೇತ್ರಗಳಿಗೆ ಮಹಾಮೈತ್ರಿಯ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಲಾಗಿದೆ. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಈ ಕುರಿತ ವಿವರಗಳನ್ನು ನೀಡಿದರು.

ಆರ್‌ಜೆಡಿ ನಾಯಕಿ ಮೀಸಾ ಭಾರತಿ ಅವರಿಗೆ ಪಾಟಲೀಪುತ್ರ ಕ್ಷೇತ್ರದಿಂದ ಮತ್ತು ಅಬ್ದುಲ್‌ ಬಾರಿ ಸಿದ್ದಿಕಿ ಅವರಿಗೆ ದರ್ಬಾಂಗ ಕ್ಷೇತ್ರದಿಂದ, ಕಾಂಗ್ರೆಸ್‌ನ ಮೀರಾ ಕುಮಾರ್‌ ಅವರಿಗೆ ಸಸಾರಾಂ ಕ್ಷೇತ್ರದಿಂದ ಟಿಕೆಟ್‌ ಘೋಷಿಸಲಾಗಿದೆ.

ಸೀಟು ಹಂಚಿಕೆ ಒಪ್ಪಂದದ ಪ್ರಕಾರ ಆರ್‌ಜೆಡಿಗೆ 20 ಕ್ಷೇತ್ರಗಳು ದೊರೆಯುತ್ತವೆ. ಅದರ ಪೈಕಿ ಒಂದು ಕ್ಷೇತ್ರವನ್ನು ಸಿಪಿಎಂಎಲ್‌ಗೆ ಬಿಟ್ಟುಕೊಡಲಿದೆ. ಕಾಂಗ್ರೆಸ್‌ಗೆ 9 ಕ್ಷೇತ್ರಗಳು, ಉಪೇಂದ್ರ ಕುಶ್ವಾಹ ಅವರ ಆರ್‌ಎಲ್‌ಎಸ್‌ಪಿಗೆ 5 ಮತ್ತು ಜಿತನ್‌ರಾಂ ಮಾಂಝಿ ಅವರ ಎಚ್‌ಎಎಂ ಹಾಗೂ ಮುಕೇಶ್‌ ಸಾಹ್ನಿ ಅವರ ವಿಐಪಿ ಪಕ್ಷಗಳಿಗೆ ತಲಾ ಮೂರು ಕ್ಷೇತ್ರಗಳನ್ನು ನೀಡಲಾಗಿದೆ.

ಬಿಜೆಪಿ ತ್ಯಜಿಸಿ ಇತ್ತೀಚೆಗೆ ಕಾಂಗ್ರೆಸ್‌ ಸೇರಿದ್ದ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್‌ ಅವರು ದರ್ಬಾಂಗ ಕ್ಷೇತ್ರದಿಂದ ಟಿಕೆಟ್‌ ಬಯಸಿದ್ದರು. ಅಲ್ಲಿಂದ ಅಬ್ದುಲ್‌ ಬಾರಿ ಸಿದ್ದಿಕಿ ಅವರು ಆರ್‌ಜೆಡಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದರಿಂದ ಕೀರ್ತಿ ಅವರಿಗೆ ಕ್ಷೇತ್ರವಿಲ್ಲದಂತಾಗಿದೆ. ಈ ಬೆಳವಣಿಗೆಯಿಂದ ಕಾಂಗ್ರೆಸ್‌ ಮುಖಂಡರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ಬೇಗುಸರಾಯ್‌ ಕ್ಷೇತ್ರದಿಂದ ಆರ್‌ಜೆಡಿ ಅಭ್ಯರ್ಥಿಯಾಗಿ ತನ್ವೀರ್‌ ಹಸನ್‌ ಅವರನ್ನು ಕಣಕ್ಕೆ ಇಳಿಸುವುದಾಗಿ ತೇಜಸ್ವಿ ಘೋಷಿಸಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಹಾಗೂ ಸಿಪಿಐ ಅಭ್ಯರ್ಥಿಯಾಗಿ ಕನ್ಹಯ್ಯ ಕುಮಾರ್‌ ಕಣಕ್ಕಿಳಿಯಲಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲೂ ತನ್ವೀರ್‌ ಈ ಕ್ಷೇತ್ರದಿಂದ ಸ್ಪರ್ಧಿಸಿ ಎರಡನೇ ಸ್ಥಾನದಲ್ಲಿದ್ದರು ಎಂದು ತೇಜಸ್ವಿ ಹೇಳಿದರು.

ಶಿವಹರ್‌ ಕ್ಷೇತ್ರವನ್ನು ಬಿಟ್ಟು ಆರ್‌ಜೆಡಿ ಪಾಲಿಗೆ ಬಂದಿರುವ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ. ಈ ಕ್ಷೇತ್ರದಲ್ಲಿ ತಮ್ಮ ಆಪ್ತರಿಗೆ ಟಿಕೆಟ್‌ ನೀಡಬೇಕು ಎಂದು ತೇಜಸ್ವಿ ಅವರ ಸಹೋದರ ತೇಜಪ್ರತಾಪ್‌ ಯಾದವ್‌ ಬಯಸಿದ್ದರು. ಪಕ್ಷದಿಂದ ಇವರಿಗೆ ಸೂಕ್ತ ಸ್ಪಂದನೆ ದೊರೆಯದ ಕಾರಣ ಅವರು ಗುರುವಾರ ಪಕ್ಷದ ವಿದ್ಯಾರ್ಥಿ ಘಟಕದ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದರು. ತೇಜಪ್ರತಾಪ್‌ ಅವರ ಸಿಟ್ಟನ್ನು ಶಮನಗೊಳಿಸುವ ಸಲುವಾಗಿ ಈ ಕ್ಷೇತ್ರದ ಅಭ್ಯರ್ಥಿಯ ಹೆಸರು ಘೋಷಿಸಿಲ್ಲ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT