ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಬಂಧ ಮೊಟಕು ವಿಷಾದನೀಯ

ಗಂಭೀರ ಸ್ಥಿತಿ ಎಂದು ಬಿಂಬಿಸಲು ಪಾಕಿಸ್ತಾನದ ಯತ್ನ: ಭಾರತ ಆರೋಪ
Last Updated 8 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ರಾಜತಾಂತ್ರಿಕ ಸಂಬಂಧವನ್ನು ಮೊಟಕುಗೊಳಿಸುವ ಮೂಲಕ ದ್ವಿಪಕ್ಷೀಯ ಸಂಬಂಧವು ಗಂಭೀರ ಸ್ಥಿತಿಯಲ್ಲಿದೆ ಎಂದು ಬಿಂಬಿಸುವುದು ಪಾಕಿಸ್ತಾನದ ಉದ್ದೇಶ ಎಂದು ಭಾರತ ಆರೋಪಿಸಿದೆ. ಸಂಬಂಧ ಮೊಟಕು ಮಾಡಿದ ನಿರ್ಧಾರವನ್ನು ಹಿಂದಕ್ಕೆ ಪಡೆಯುವಂತೆಯೂ ಭಾರತ ಕೋರಿದೆ.

ಪಾಕಿಸ್ತಾನದ ನಿರ್ಧಾರವು ವಿಷಾದನೀಯ. ಜಮ್ಮು ಮತ್ತು ಕಾಶ್ಮೀರವು ಭಾರತದ ಆಂತರಿಕ ವಿಚಾರ ಎಂದು ವಿದೇಶಾಂಗ ಸಚಿವಾಲಯವು ಹೇಳಿದೆ.

ಅಭಿವೃದ್ಧಿಗಾಗಿ ಭಾರತವು ಕೈಗೊಂಡಿರುವ ಕ್ರಮವನ್ನು ಪಾಕಿಸ್ತಾನವು ಕೆಟ್ಟದಾಗಿ ಬಿಂಬಿಸಿದ್ದರಲ್ಲಿ ಆಶ್ಚರ್ಯ ಏನೂ ಇಲ್ಲ. ಭಾವನೆಗಳನ್ನು ಕೆರಳಿಸುವ ಮೂಲಕ ಗಡಿಯಾಚಿನ ಭಯೋತ್ಪಾದನೆಯನ್ನು ಆ ದೇಶವು ಯಾವಾಗಲೂ ಸಮರ್ಥಿಸುತ್ತದೆ ಎಂದು ಆರೋಪಿಸಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತವು ಸೋಮವಾರ ರದ್ದುಮಾಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನ, ಭಾರತೀಯ ಹೈಕಮಿಷನರ್‌ ಅಜಯ್‌ ಬಿಸರಿಯ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಲು ಸೂಚಿಸಿತ್ತು. ಹಾಗೆಯೇ ದ್ವಿಪಕ್ಷೀಯ ಸಂಬಂಧವನ್ನು ಮೊಟಕು ಮಾಡಿತ್ತು.

ಯಾರನ್ನಾದರೂ ಖರೀದಿಸಬಹುದು: ಆಜಾದ್ ಹೇಳಿಕೆಗೆ ಬಿಜೆಪಿ ವಿರೋಧ

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ವೇಳೆ ಜನರೊಂದಿಗೆ ನಡೆಸಿದ ಮಾತುಕತೆ ಮತ್ತು ಆಹಾರ ಸೇವನೆಯ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆದರೆ, ಜನರನ್ನು ಹಣಕೊಟ್ಟು ಕರೆತಂದು ವಿಡಿಯೊ ಚಿತ್ರೀಕರಿಸಲಾಗಿದೆ ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಗುಲಾಂ
ನಬಿ ಆಜಾದ್‌ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದೆ.

ಆಜಾದ್‌ ಅವರು ತಕ್ಷಣವೇ ಕ್ಷಮೆ ಕೇಳಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಈ ಹೇಳಿಕೆಯನ್ನು ಜಾಗತಿಕ ವೇದಿಕೆಗಳಲ್ಲಿ ಭಾರತದ ವಿರುದ್ಧ ಪಾಕಿಸ್ತಾನವು ಬಳಸಿಕೊಳ್ಳಬಹುದು ಎಂಬ ಆತಂಕವನ್ನೂ ಬಿಜೆಪಿ ವ್ಯಕ್ತಪಡಿಸಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರವನ್ನು ರದ್ದುಪಡಿಸಿದ ಬಳಿಕ ಡೊಭಾಲ್‌ ಅವರು ಆ ರಾಜ್ಯಕ್ಕೆ ಭೇಟಿ ನೀಡಿದ್ದರು. ಈ ವೇಳೆಯಲ್ಲಿ ಅವರು ಜನರೊಂದಿಗೆ ಮಾತನಾಡಿದ, ಮುಚ್ಚಿದ ಅಂಗಡಿಗಳ ಮುಂದೆಬೀದಿಯಲ್ಲಿ ನಿಂತು ಆಹಾರ ಸೇವಿಸಿದ ವಿಡಿಯೊಗಳು ಬಹಿರಂಗವಾಗಿದ್ದವು.

‘ಹಣ ಕೊಟ್ಟರೆ ಯಾರು ಬೇಕಾದರೂ ಜತೆಗೆ ಬರುತ್ತಾರೆ’ ಎಂದು ಈ ಬಗ್ಗೆ ಆಜಾದ್‌ ಅವರು ಟೀಕೆ ಮಾಡಿದ್ದರು.

ಇದೊಂದು ದುರದೃಷ್ಟಕರ ಹೇಳಿಕೆ ಎಂದು ಬಿಜೆಪಿ ವಕ್ತಾರ ಶಾನವಾಜ್‌ ಹುಸೇನ್‌ ಹೇಳಿದ್ದಾರೆ. ‘ಪಾಕಿಸ್ತಾನದ ಜನರಿಂದ ಇಂತಹ ಹೇಳಿಕೆ ನಿರೀಕ್ಷಿಸಬಹುದೇ ಹೊರತು ಭಾರತದ ಅತ್ಯಂತ ದೊಡ್ಡ ರಾಜಕೀಯ ಪಕ್ಷದಿಂದಲ್ಲ’ ಎಂದು ಅವರು ಟೀಕಿಸಿದ್ದಾರೆ.

ಪಾಕಿಸ್ತಾನ ಹೇಳಿದ್ದೇನು?

ಭಾರತದಿಂದ ಅಫ್ಗಾನಿಸ್ತಾನ ಆಮದು ಮಾಡಿಕೊಂಡ ಸರಕನ್ನು ವಾಘಾ ಗಡಿಯ ಮೂಲಕ ಸಾಗಿಸಲು ಅವಕಾಶ ಕೊಡುವುದಿಲ್ಲ, ಯಾಕೆಂದರೆ ಈ ವ್ಯಾಪಾರ ದ್ವಿಪಕ್ಷೀಯವೇ ಹೊರತು ತ್ರಿಪಕ್ಷೀಯ ಅಲ್ಲ

ಭಾರತದ ಸಿಖ್‌ ಯಾತ್ರಿಕರಿಗೆ ವೀಸಾಮುಕ್ತ ಪ್ರವಾಸಕ್ಕೆ ಅವಕಾಶ ಕೊಡುವ ಗುರುದಾಸಪುರದ ದೇರಾ ಬಾಬಾ ನಾನಕ್‌ ದೇಗುಲ ಮತ್ತು ಕರ್ತಾರ್‌ಪುರದ ದರ್ಬಾರ್‌ ಸಾಹಿಬ್‌ ನಡುವಣ ಸಂಪರ್ಕ ಕಾರಿಡಾರ್‌ ಯೋಜನೆ ನಿಲ್ಲದು. ಅದು ನಮ್ಮ ಬದ್ಧತೆ

ಕಾಶ್ಮೀರದ ಬಗ್ಗೆ ಭಾರತ ಕೈಗೊಂಡಿರುವ ನಿರ್ಧಾರದ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುವುದಿಲ್ಲ, ಬದಲಿಗೆ ರಾಜಕೀಯ ಮತ್ತು ಕಾನೂನು ಆಯ್ಕೆಗಳನ್ನು ಪರಿಶೀಲಿಸುತ್ತೇವೆ

***

ಭಾರತದ ಸಂವಿಧಾನವು ಹಿಂದೆ, ಈಗ ಮತ್ತು ಮುಂದೆ ದೇಶದ ಸಾರ್ವಭೌಮತ್ವಕ್ಕೆ ಸಂಬಂಧಿಸಿದ ವಿಚಾರ. ಪ್ರಾಂತ್ಯದಲ್ಲಿ ಗಂಭೀರ ಸ್ಥಿತಿ ಇದೆ ಎಂದು ಬಿಂಬಿಸುವ ಮೂಲಕ ಹಸ್ತಕ್ಷೇಪ ನಡೆಸುವ ಯತ್ನ ಯಶಸ್ವಿಯಾಗದು

ವಿದೇಶಾಂಗ ಸಚಿವಾಲಯದ ಹೇಳಿಕೆ

ಪರಸ್ಪರರನ್ನು ನೋಯಿಸುವುದನ್ನು ಮುಂದುವರಿಸುವ ಅಗತ್ಯ ಇಲ್ಲ. ಭಿನ್ನಮತ ಏನೇ ಇರಲಿ, ಏಳು ದಶಕಗಳ ಕಾಶ್ಮೀರ ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸುವತ್ತ ಗಮನ ಹರಿಸಬೇಕು

ಮಲಾಲಾ ಯೂಸುಫ್‌ಜೈ, ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತೆ

ಅವರು ನಿರ್ಧಾರ ಮರುಪರಿಶೀಲನೆ ಮಾಡುವರೇ? ಹಾಗಾದರೆ ನಾವೂ ಮಾಡುತ್ತೇವೆ. ಮರುವಿಮರ್ಶೆ ಎಂಬುದು ಎರಡೂ ಕಡೆಯಿಂದ ಆಗಬೇಕು. ಅದುವೇ ಶಿಮ್ಲಾ ಒಪ್ಪಂದ

ಶಾ ಮೆಹಮೂದ್‌ ಖುರೇಷಿ, ಪಾಕಿಸ್ತಾನದ ವಿದೇಶಾಂಗ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT