ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಕೈಬಿಡುವ ತಂತ್ರಕ್ಕೆ ಮಿಶ್ರಫಲ

Last Updated 2 ನವೆಂಬರ್ 2018, 20:00 IST
ಅಕ್ಷರ ಗಾತ್ರ

ನವದೆಹಲಿ: ಮಧ್ಯ ಪ್ರದೇಶ, ತೆಲಂಗಾಣ ಮತ್ತು ಮಿಜೋರಾಂ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ 229 ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ.

ಹೊಸ ಮುಖಗಳನ್ನು ಕಣಕ್ಕೆ ಇಳಿಸುವ ಮೂಲಕ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಲ್ಲಬೇಕು ಎಂಬ ಕಾರ್ಯತಂತ್ರ ಅಳವಡಿಸಲು ಬಿಜೆಪಿ ಹಿಂದೆಯೇ ಯೋಚಿಸಿತ್ತು. ಆದರೆ, ಅಂದುಕೊಂಡ ಮಟ್ಟದಲ್ಲಿ ಈ ಕಾರ್ಯತಂತ್ರವನ್ನು ಜಾರಿಗೊಳಿಸಲು ಸಾಧ್ಯವಾಗಿಲ್ಲ.

ಮೊದಲ ಪಟ್ಟಿಯಲ್ಲಿ ಮಧ್ಯ ಪ್ರದೇಶದ 27 ಶಾಸಕರಿಗೆ ಟಿಕೆಟ್‌ ನಿರಾಕರಿಸಲಾಗಿದೆ. ಇವರಲ್ಲಿ ಇಬ್ಬರು ಸಚಿವರೂ ಸೇರಿದ್ದಾರೆ.ಇಲ್ಲಿ 90ಕ್ಕೂ ಹೆಚ್ಚು ಶಾಸಕರಿಗೆ ಟಿಕೆಟ್‌ ನಿರಾಕರಿಸಬೇಕು ಎಂದು ಅಂದಾಜಿಸಲಾಗಿತ್ತು. ಛತ್ತೀಸಗಡದ 77 ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಈಗಾಗಲೇ ಪ್ರಕಟವಾಗಿದೆ. ಅದರಲ್ಲಿ 14 ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಲಾಗಿದೆ.

ಹಾಲಿ ಶಾಸಕರ ಬದಲಿಗೆ ಹೊಸಬರನ್ನು ಕಣಕ್ಕೆ ಇಳಿಸುವುದಕ್ಕೆ ಆರ್‌ಎಸ್‌ಎಸ್‌ ಕೂಡ ಒಲವು ತೋರಿತ್ತು. ಆದರೆ, ಹಾಲಿ ಶಾಸಕರ ಬದಲಿಗೆ ಹೊಸಬರಿಗೆ ಟಿಕೆಟ್‌ ಕೊಟ್ಟರೆ ಇನ್ನೂ ಹೆಚ್ಚಿನ ಅಪಾಯ ಎದುರಾಗಬಹುದು ಎಂದು ಗುಪ್ತಚರ ವರದಿ ಹೇಳಿತ್ತು. ಹಾಗಾಗಿ, ಹಲವು ಶಾಸಕರಿಗೆ ಟಿಕೆಟ್‌ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌, ಮಾಜಿ ಮುಖ್ಯಮಂತ್ರಿ ಸುಂದರಲಾಲ್‌ ಪಟ್ವಾ ಅಳಿಯ ಸುರೇಂದ್ರ ಪಟ್ವಾ, ಮಾಧವ ರಾವ್ ಸಿಂಧಿಯಾ ಸಹೋದರಿ ಯಶೋಧರಾ ರಾಜೇ, ಹಿರಿಯ ಮುಖಂಡ ನರೋತ್ತಮ ಮಿಶ್ರಾ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಪಟ್ವಾ ಮತ್ತು ರಾಜೇ ಅವರು ಚೌಹಾಣ್‌ ಸಂಪುಟದಲ್ಲಿ ಸಚಿವರು.

ಚೌಹಾಣ್‌ ಅವರು ತಮ್ಮ ತವರೂರು ಬುದ್ನಿಯ ಬದಲಿಗೆ ಭೋಪಾಲ್‌ನ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬ ವದಂತಿ ಇತ್ತು. ಈಗ ಅದಕ್ಕೆ ತೆರೆ ಬಿದ್ದಿದೆ. ಮಧ್ಯ ಪ್ರದೇಶದ 230 ಕ್ಷೇತ್ರಗಳ ಪೈಕಿ ಮೊದಲ ಪಟ್ಟಿಯಲ್ಲಿ 177 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹೆಸರಿಸಲಾಗಿದೆ.

ವ್ಯಾಪಂ ಹಗರಣದಲ್ಲಿ ಆರೋಪ ಕೇಳಿ ಬಂದ ಲಕ್ಷ್ಮಿಕಾಂತ್‌ ಶರ್ಮಾ ಅವರ ಸಹೋದರ ಉಮಾಕಾಂತ್‌ ಶರ್ಮಾ ಅವರಿಗೆ ಸಿರೊಂಜ್‌ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ. 2013ರ ಚುನಾವಣೆ ಹೊತ್ತಿಗೆ ವ್ಯಾಪಂ ಹಗರಣದ ಸುದ್ದಿ ಬಹಳ ಜೋರಾಗಿತ್ತು. ಹಾಗಾಗಿ ಆ ಚುನಾವಣೆಯಲ್ಲಿಯೇ ಲಕ್ಷ್ಮಿಕಾಂತ್‌ ಅವರಿಗೆ ಟಿಕೆಟ್‌ ನಿರಾಕರಿಸಲಾಗಿತ್ತು. ಈ ಕ್ಷೇತ್ರದಿಂದ ಅವರು ನಾಲ್ಕು ಬಾರಿ ಗೆದ್ದಿದ್ದರು. ಲಕ್ಷ್ಮಿಕಾಂತ್‌ ಅವರು ಬ್ರಾಹ್ಮಣ ಸಮುದಾಯದ ಪ್ರಮುಖ ನಾಯಕ. ಹಾಗಾಗಿ ಈ ಬಾರಿ ಅವರ ಸಹೋದರನಿಗೆ ಟಿಕೆಟ್‌ ನೀಡಲಾಗಿದೆ.

ಸಚಿವೆ ಮಾಯಾ ಸಿಂಗ್ ಅವರಿಗೆ ಈ ಬಾರಿ ಟಿಕೆಟ್‌ ನೀಡಲಾಗಿಲ್ಲ. ಸ್ಥಳೀಯ ಕಾರ್ಪೊರೇಟರ್‌ಗೆ ಟಿಕೆಟ್‌ ನೀಡಲಾಗಿದೆ. ಕಳೆದ ಐದು ವರ್ಷಗಳಿಂದ ಈ ಕಾರ್ಪೊರೇಟರ್‌ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದರು. ಟಿಕೆಟ್‌ ನೀಡದೇ ಇದ್ದರೆ ಅವರು ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆ ಇತ್ತು.

ಟಿಕೆಟ್‌ ವಂಚಿತರಾದ ಇನ್ನೊಬ್ಬ ಸಚಿವ ಗೌರಿಶಂಕರ್‌ ಬಿಸೆನ್‌. ಇವರು ಮತದಾರರಿಗೆ 10 ಸಾವಿರ ಸೀರೆಗಳನ್ನು ವಿತರಿಸುತ್ತಿದ್ದ ವಿಡಿಯೊ ಜತೆಗೆ ಚುನಾವಣಾ ಆಯೋಗಕ್ಕೆ ಇತ್ತೀಚೆಗೆ ದೂರು ಸಲ್ಲಿಕೆಯಾಗಿತ್ತು. ಬಿಸೆನ್‌ ಅವರು ಕೃಷಿ ಸಚಿವರಾಗಿದ್ದಾರೆ. ಅವರಿಗೆ ಟಿಕೆಟ್‌ ನಿರಾಕರಿಸುವ ಮೂಲಕ 2017ರಲ್ಲಿ ಮಧ್ಯಪ‍್ರದೇಶದಾದ್ಯಂತ ನಡೆದ ರೈತರ ಪ್ರತಿಭಟನೆಗಳು ಬೀರಬಹುದಾದ ಪರಿಣಾಮ ತಗ್ಗಿಸುವ ಪ್ರಯತ್ನವೂ ನಡೆದಿದೆ ಎಂದು ಹೇಳಲಾಗಿದೆ.

ಹೆಸರಲ್ಲೇನಿದೆ ಎನ್ನುವಂತಿಲ್ಲ

ನವದೆಹಲಿ: ಹೆಸರಲ್ಲೇನಿದೆ? ಅದು ಒಂದು ಹೆಸರು ಮಾತ್ರ ಅಲ್ಲವೇ ಎಂಬ ಪ್ರಶ್ನೆಗೆ ‘ಖಂಡಿತಾ ಅಲ್ಲ’ ಎಂಬ ಉತ್ತರ ಕೊಡಬೇಕಾದ ಪ್ರಸಂಗ ಮಧ್ಯ ಪ್ರದೇಶ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಳಿಕ ನಡೆದಿದೆ.

ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಮಂಧಾತಾ ಕ್ಷೇತ್ರದ ಅಭ್ಯರ್ಥಿಯಾಗಿ ನರೇಂದ್ರ ಸಿಂಗ್‌ ತೋಮರ್‌ ಹೆಸರು ಇದೆ. ಈ ಚುನಾವಣೆ ಬಳಿಕ ಮಧ್ಯ ಪ್ರದೇಶದಲ್ಲಿ ನಾಯಕತ್ವ ಬದಲಾವಣೆಯ ಕಾರ್ಯತಂತ್ರ ಆಗಲೇ ರೂಪುಗೊಂಡಿದೆ ಎಂಬ ಸುದ್ದಿಗಳು ಈ ಹೆಸರಿನಿಂದಾಗಿ ಹರಿದಾಡಿದವು. ರಾಜಕೀಯ ವಲಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಯೇ ಆಯಿತು.

ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಸ್ಥಾನದಲ್ಲಿ ಬೇರೆ ಯಾರನ್ನಾದರೂ ಸ್ಥಾಪಿಸಬೇಕು ಎಂಬ ಬಯಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಇದೆ ಎಂಬುದೆಲ್ಲ ಚರ್ಚೆಯಲ್ಲಿ ಹಾದು ಹೋದವು.

ಯಾಕೆಂದರೆ, ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್‌ ಅವರು ಮಧ್ಯಪ್ರದೇಶದ ಗ್ವಾಲಿಯರ್‌ ಲೋಕಸಭಾ ಕ್ಷೇತ್ರದ ಸದಸ್ಯ. ಚರ್ಚೆ ಬೇರೆ ಬೇರೆ ಆಯಾಮಗಳಿಗೆ ವಿಸ್ತರಿಸಿಕೊಳ್ಳುವುದನ್ನು ತಡೆಯಲು ತೋಮರ್‌ ಅವರೇ ರಂಗಕ್ಕಿಳಿದರು. ‘ಮಂಧಾತಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ನರೇಂದ್ರ ಸಿಂಗ್‌ ತೋಮರ್‌ ನಾನಲ್ಲ, ಅವರು ಬೇರೆ ವ್ಯಕ್ತಿ’ ಎಂದು ತೋಮರ್‌ ಟ್ವೀಟ್‌ ಮಾಡಿದರು.

ಮಾಜಿ ಮುಖ್ಯಮಂತ್ರಿ ಬಾಬುಲಾಲ್‌ ಗೌರ್‌ ಪ್ರತಿನಿಧಿಸುತ್ತಿದ್ದ ಗೋವಿಂದಪುರ ಮತ್ತು ಪ್ರಮುಖ ಬ್ರಾಹ್ಮಣ ಮುಖಂಡ ಕೈಲಾಶ್‌ ವಿಜಯವರ್ಗೀಯ ಪ್ರತಿನಿಧಿಸಿದ್ದ ಮಹೂ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಇನ್ನೂ ಪ್ರಕಟಿಸಿಲ್ಲ. ಹಾಗಾಗಿ ನಾಯಕತ್ವ ಬದಲಾವಣೆಯ ವದಂತಿಗಳಿಗೆ ಇನ್ನೂ ಅವಕಾಶ ಇದೆ.

ರಾಜವಂಶಸ್ಥರಿಗೂ ರಾಜಕೀಯ ಉಮೇದು

ವಿಧಾನಸಭೆ ಚುನಾವಣೆಗೆ ಟಿಕೆಟ್‌ ಹಂಚಿಕೆ ಪ್ರಕ್ರಿಯೆ ಅಂತಿಮಗೊಳ್ಳುತ್ತಿರುವುದರ ನಡುವೆಯೇ ರಾಜಸ್ಥಾನದಲ್ಲಿ ರಾಜವಂಶಸ್ಥರು ಟಿಕೆಟ್‌ಗಾಗಿ ಭಾರಿ ಲಾಬಿಗೆ ಇಳಿದಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳೆರಡರಲ್ಲೂ ಟಿಕೆಟ್‌ ಆಕಾಂಕ್ಷಿ ರಾಜವಂಶಸ್ಥರಿದ್ದಾರೆ.

ಕಳೆದ ಚುನಾವಣೆಯಲ್ಲಿ ಹಲವು ಮಂದಿ ಅದೃಷ್ಟ ಪರೀಕ್ಷಿಸಿದ್ದರು. ಈ ಬಾರಿ ಅದೃಷ್ಟ ಪ‍ರೀಕ್ಷೆಗೆ ಮುಂದಾದವರ ಸಂಖ್ಯೆ ಇನ್ನೂ ಹೆಚ್ಚಾಗಿದೆ. ರಾಜವಂಶಸ್ಥರು ಕಾಂಗ್ರೆಸ್‌ಗಿಂತ ಬಿಜೆಪಿಯತ್ತಲೇ ಹೆಚ್ಚು ಆಕರ್ಷಿತರಾಗಿದ್ದಾರೆ.

ಬಿಜೆಪಿಯಿಂದ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಗ್ವಾಲಿಯರ್ ರಾಜಕುಟುಂಬದವರು. ಬಿಕಾನೇರ್‌ನ ಬಿಜೆಪಿ ಅಭ್ಯರ್ಥಿ ಸಿದ್ಧಿ ಕುಮಾರಿ ಆ ಕ್ಷೇತ್ರದಿಂದ ಎರಡು ಸಲ ಗೆದ್ದಿದ್ದಾರೆ. ಸಿದ್ಧಿಕುಮಾರಿ ಅವರ ಅಜ್ಜ ಬಿಕಾನೇರ್‌ನ ರಾಜರಾಗಿದ್ದರು. ಜೈಪುರದ ಮಹಾರಾಣಿ ಗಾಯತ್ರಿದೇವಿ ಅವರ ಮೊಮ್ಮಗಳು ದಿಯಾ ಕುಮಾರಿ ಅವರು ಸವಾಯ್‌ ಮಾಧೋಪುರ ಕ್ಷೇತ್ರದಿಂದ ಕಳೆದ ಬಾರಿ ಗೆದ್ದಿದ್ದರು. ಈ ಬಾರಿಯೂ ಸ್ಪರ್ಧಿಸುವ ಉಮೇದು ಅವರಿಗೆ ಇದೆ. 2013ರಲ್ಲಿ ಬಿಜೆಪಿ ಸೇರಿದ್ದ ಅವರು ನರೇಂದ್ರ ಮೋದಿ ಸಮ್ಮುಖದಲ್ಲಿಯೇ ತಮ್ಮ ಪ್ರಚಾರ ಆರಂಭಿಸಿದ್ದರು.

2008ರಲ್ಲಿ ಗೆದ್ದು 2013ರಲ್ಲಿ ಸೋತಿದ್ದ ರೋಹಿಣಿ ದೇವಿ, ಕರೌಲಿ ರಾಜಕುಟುಂಬಕ್ಕೆ ಸೇರಿದವರು. ಜೈಸಲ್ಮೇರ್‌ ರಾಜಕುಟುಂಬದ ರಾಜೇಶ್ವರಿ ರಾಜ್ಯ ಲಕ್ಷ್ಮಿ ಅವರೂ ಈ ಬಾರಿ ಸ್ಪರ್ಧಿಸುವ ಆಸಕ್ತಿ ತೋರಿದ್ದಾರೆ. ಆದರೆ ಅವರು ಈವರೆಗೆ ಯಾವುದೇ ಪಕ್ಷಕ್ಕೆ ಸೇರಿಲ್ಲ.

ಕೋಟದ ಮಾಜಿ ಮಹಾರಾಜ ಬೃಜರಾಜ್‌ ಸಿಂಗ್‌ ಅವರ ಮಗ ಇಜಯರಾಜ ಸಿಂಗ್‌ 2009ರಲ್ಲಿ ಕೋಟ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ನಲ್ಲಿ ಗೆದ್ದು 2014ರಲ್ಲಿ ಸೋತರು. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಅವರು ಮುಂದಾಗಿದ್ದಾರೆ. ಅಲ್ವರ್‌ ರಾಜಕುಟುಂಬದ ಜಿತೇಂದ್ರ ಸಿಂಗ್‌ ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದರು. ಅವರು ಎರಡು ಬಾರಿ ಅಲ್ವರ್‌ ಕ್ಷೇತ್ರವನ್ನು ವಿಧಾನಸಭೆಯಲ್ಲಿ ಪ್ರತಿನಿಧಿಸಿದ್ದರು. ಈ ಬಾರಿ ಅವರು ಮತ್ತೆ ವಿಧಾನಸಭಾ ಕಣಕ್ಕೆ ಇಳಿಯಲು ಯತ್ನಿಸುತ್ತಿದ್ದಾರೆ.

ಲೊಹಾರುವಿನ ಮಾಜಿ ನವಾಬ ಐಮಾಮುದ್ದೀನ್‌ ಅಹ್ಮದ್‌ ಖಾನ್‌ ಅವರು ಹಿಂದೆ ಇದ್ದ ಕಾಂಗ್ರೆಸ್‌ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದರು. 2013ರಲ್ಲಿ ಅವರಿಗೆ ಗೆಲುವು ದಕ್ಕಿರಲಿಲ್ಲ. ಈ ಬಾರಿ ಅವರು ಕಣಕ್ಕಿಳಿಯಲು ಉತ್ಸುಕರಾಗಿದ್ದಾರೆ.

ಕುಶ್ವಾಹಾ ಮೇಲೆ ಜೆಡಿಯು ಆಕ್ರೋಶ

ಕೇಂದ್ರ ಸಚಿವ ಉಪೇಂದ್ರ ಕುಶ್ವಾಹಾ ವಿರುದ್ಧ ಬಿಹಾರ ಜೆಡಿಯು ಭಾರಿ ಅಕ್ರೋಶ ಹೊರಹಾಕಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು 2020ರ ಬಳಿಕ ಆ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ ಎಂದು ತಮ್ಮ ಬಳಿ ಹೇಳಿದ್ದಾಗಿ ಕುಶ್ವಾಹಾ ಅವರು ಇತ್ತೀಚೆಗೆ ಹೇಳಿದ್ದರು.

ಕುಶ್ವಾಹಾ ಅವರು ನಿತೀಶ್‌ ಅವರ ಬಗ್ಗೆ ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂದು ಜೆಡಿಯು ಅಸಮಾಧಾನ ವ್ಯಕ್ತಪಡಿಸಿದೆ. ‘ಜನರು ಆಯ್ಕೆ ಮಾಡಿದ ಕಾರಣಕ್ಕೆ ಅವರು ಮುಖ್ಯಮಂತ್ರಿಯಾಗಿದ್ದಾರೆ. ಜನರು ವಿಶ್ವಾಸ ಮುಂದುವರಿಸಿದ್ದರಿಂದ ಅವರು ಈಗಲೂ ಮುಖ್ಯಮಂತ್ರಿಯಾಗಿ ಇದ್ದಾರೆ. ಎಲ್ಲಿಯತನಕ ಜನರಿಗೆ ವಿಶ್ವಾಸ ಇರುತ್ತದೆಯೋ ಅಲ್ಲಿವರೆಗೆ ನಿತೀಶ್‌ ಅವರು ಆ ಹುದ್ದೆಯಲ್ಲಿ ಇರುತ್ತಾರೆ’ ಎಂದು ಜೆಡಿಯು ವಕ್ತಾರ ಅಜಯ್‌ ಅಲೋಕ್‌ ಹೇಳಿದ್ದಾರೆ.

ನಿತೀಶ್‌ ಮತ್ತು ಕುಶ್ವಾಹಾ ಅವರು ಬದ್ಧ ಪ್ರತಿಸ್ಪರ್ಧಿಗಳು. ಹಾಗಾಗಿಯೇ ಕುಶ್ವಾಹಾ ಮೇಲೆ ಜೆಡಿಯು ಆಕ್ರೋಶ ಹೆಚ್ಚಾಗಿದೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರು ಎಂಬ ಕಾರಣಕ್ಕೆ ಕುಶ್ವಾಹಾ ಅವರನ್ನು ನಿತೀಶ್‌ 2013ರಲ್ಲಿ ಜೆಡಿಯುನಿಂದ ಹೊರ ಹಾಕಿದ್ದರು. ಬಳಿಕ, ಆರ್‌ಎಲ್‌ಎಸ್‌ಪಿ ಸ್ಥಾಪಿಸಿದ್ದ ಕುಶ್ವಾಹಾ ಎನ್‌ಡಿಎ ಸೇರಿ 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಬಳಿಕ ಕೇಂದ್ರದಲ್ಲಿ ಸಚಿವರೂ ಆದರು.

***

ಒಂದಷ್ಟು ತಿಂದ ಮೇಲೆ ಅಪೇಕ್ಷೆ ಈಡೇರಿದೆ ಎಂದು ಹೇಳಲು ಮುಖ್ಯಮಂತ್ರಿ ಹುದ್ದೆ ಎಂಬುದು ರಸಗುಲ್ಲಾ ಅಥವಾ ಮಾಂಸದೂಟ ಅಲ್ಲ. ಮತದಾರರ ಆಶೀರ್ವಾದ ಇರುವ ತನಕ ನಿತೀಶ್‌ ಮುಖ್ಯಮಂತ್ರಿಯಾಗಿ ಇರಲಿದ್ದಾರೆ

ಅಜಯ್‌ ಅಲೋಕ್‌, ಜೆಡಿಯು ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT