ಅಮಿತ್ ಶಾ ನೇತೃತ್ವದಲ್ಲೇ ಲೋಕಸಭೆ ಚುನಾವಣೆ ಎದುರಿಸಲು ಬಿಜೆಪಿ ನಿರ್ಧಾರ

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ನೇತೃತ್ವದಲ್ಲೇ ಎದುರಿಸಲು ಬಿಜೆಪಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಪಕ್ಷದ ಅಧ್ಯಕ್ಷರಾಗಿ ಅಮಿತ್ ಶಾ ಅವಧಿ 2019ರ ಜನವರಿಗೆ ಪೂರ್ಣಗೊಳ್ಳಲಿದೆ. ಹೀಗಾಗಿ ಹೊಸ ಅಧ್ಯಕ್ಷರ ಆಯ್ಕೆಗೆ ನಡೆಯಬೇಕಿರುವ ಆಂತರಿಕ ಚುನಾವಣೆಯನ್ನು ಮುಂದೂಡಲು ದೆಹಲಿಯಲ್ಲಿ ಶನಿವಾರ ಆರಂಭವಾಗಿರುವ ಎರಡು ದಿನಗಳ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ರಾಜನಾಥ್ ಸಿಂಗ್ ಅವರ ಅವಧಿ 2014ರಲ್ಲಿ ಪೂರ್ಣಗೊಂಡಿದ್ದು, ನಂತರ ಅಮಿತ್ ಶಾ ಆಯ್ಕೆಯಾಗಿದ್ದರು. ಶಾ ಅಧ್ಯಕ್ಷತೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸುವುದು ಬಿಜೆಪಿಯ ಗುರಿ ಎಂದು ಮೂಲಗಳ ಹೇಳಿಕೆ ಉಲ್ಲೇಖಿಸಿ ಸುದ್ದಿವಾಹಿನಿಗಳು ವರದಿ ಮಾಡಿವೆ.
‘ಅಜೇಯ ಬಿಜೆಪಿ’ಗೆ ನಿರ್ಧಾರ: ಮುಂಬರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನು ಎದುರಿಸಲು ‘ಅಜೇಯ ಬಿಜೆಪಿ’ ಎಂಬ ಧ್ಯೇಯವಾಕ್ಯದಡಿ ಕಾರ್ಯನಿರ್ವಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ತೆಲಂಗಾಣ, ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸ್ಗಡ ವಿಧಾನಸಭೆ ಚುನಾವಣೆಗಳಿಗೆ ಹೆಚ್ಚಿನ ಒತ್ತು ನೀಡಲೂ ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸಾಮಾಜಿಕ ನ್ಯಾಯ, ಆರ್ಥಿಕ ಯಶಸ್ಸು ಮತ್ತು ಬಡವರಿಗಾಗಿ ಘೋಷಿಸಿರುವ ಯೋಜನೆಗಳ ಕುರಿತ ಚರ್ಚೆಗೆ ಒತ್ತು ನೀಡಲು ಬಿಜೆಪಿ ಆದ್ಯತೆ ನೀಡಿದೆ. ರಾಷ್ಟ್ರೀಯ ಪೌರ ನೋಂದಣಿ (ಎನ್ಆರ್ಸಿ) ವಿಚಾರವೂ ಚರ್ಚೆಯಾಗುವ ಸಾಧ್ಯತೆ ಇದೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ನಂತರ ಇದೇ ಮೊದಲ ಬಾರಿಗೆ ಬಿಜೆಪಿಯ ರಾಷ್ಟ್ರಮಟ್ಟದ ಸಭೆ ನಡೆಯುತ್ತಿದೆ.
*****
ಎಸ್ಸಿ, ಎಸ್ಟಿ ವಿಷಯಕ್ಕೆ ಸಂಬಂಧಿಸಿ ಗೊಂದಲ ಮೂಡಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ, ಇದರಿಂದ 2019ರ ಲೋಕಸಭೆ ಚುನಾವಣೆ ಮೇಲೆ ಯಾವುದೇ ಪರಿಣಾಮವಾಗದು.
– ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.