ಗುರುವಾರ , ಏಪ್ರಿಲ್ 2, 2020
19 °C

ಮೋದಿ ಸರ್ಕಾರವನ್ನು ಟೀಕಿಸಿದ್ದ ಬ್ರಿಟನ್ ಸಂಸದೆಗೆ ಭಾರತ ಪ್ರವೇಶ ನಿರಾಕರಣೆ

ಪಿಟಿಐ Updated:

ಅಕ್ಷರ ಗಾತ್ರ : | |

Debbie Abrahams

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕ್ರಮವನ್ನು ಟೀಕಿಸಿದ್ದ ಬ್ರಿಟನ್‌ ಸಂಸದೆ ಡೆಬ್ಬಿ ಅಬ್ರಹಮ್ಸ್‌ ಅವರು ಮಾನ್ಯತೆ ಪಡೆದ ವೀಸಾ ಹೊಂದಿಲ್ಲ ಎಂದು ಅವರಿಗೆ ಭಾರತ ಪ್ರವೇಶಿಸಲು ಅಧಿಕಾರಿಗಳು  ನಿರಾಕರಿಸಿದ್ದಾರೆ.

ಲೇಬರ್‌ ಪಕ್ಷದ ಸಂಸದೆ ಅಬ್ರಹಮ್ಸ್‌ ಅವರು ಕಾಶ್ಮೀರಕ್ಕೆ ತೆರಳುವ ಸಂಸತ್‌ ಸದಸ್ಯರ ಗುಂಪಿನ ಅಧ್ಯಕ್ಷರೂ ಆಗಿದ್ದಾರೆ. ದುಬೈನಿಂದ ಎಮಿರೇಟ್ಸ್‌ ವಿಮಾನದಲ್ಲಿ ಇಲ್ಲಿನ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ  ಸೋಮವಾರ ಬೆಳಿಗ್ಗೆ 9ಕ್ಕೆ, ಭಾರತದ ಹರ್‌ಪ್ರೀತ್‌ ಉಪಲ್‌ ಜೊತೆಗೆ ಅವರು ಬಂದಿಳಿದಿದ್ದರು.
ಎರಡು ದಿನಗಳ ಕಾಲ ಅವರು ಭಾರತದಲ್ಲಿ ಪ್ರವಾಸ ಕೈಗೊಳ್ಳಲಿದ್ದ ಅವರು ಒಂದು ವರ್ಷದ ಮಾನ್ಯತೆಯೊಂದಿಗೆ ಕಳೆದ ಅಕ್ಟೋಬರ್‌ನಲ್ಲಿ ಇ–ವೀಸಾ ಪಡೆದಿದ್ದರು.  

ಅವರು ಭಾರತಕ್ಕೆ ಬರುವ ಮೊದಲೇ ಅವರ ಇ–ವೀಸಾ ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ. ಇದರ ಹೊರತಾಗಿಯೂ ಅವರು ಭಾರತಕ್ಕೆ ಬಂದಿದ್ದಾರೆ ಎಂದು ತಿಳಿಸಿರುವ ಗೃಹ ಸಚಿವಾಲಯದ ಅಧಿಕಾರಿಗಳು, ಇ–ವೀಸಾ ರದ್ದತಿಗೆ ಯಾವುದೇ ಕಾರಣವನ್ನು ತಿಳಿಸಿಲ್ಲ.

‘ನಾನು ಭಾರತದಲ್ಲಿ ಸಂಬಂಧಿಕರನ್ನು ಹೊಂದಿದ್ದೇನೆ. ನನ್ನೊಂದಿಗೆ ಭಾರತದ ಸಿಬ್ಬಂದಿ ಸಹ ಇದ್ದಾರೆ. ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳ ರಕ್ಷಣೆಗಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ. ಈ ವಿಷಯದಲ್ಲಿ ನಮ್ಮ ಹಾಗೂ ಇತರೆ ದೇಶಗಳ ಸರ್ಕಾರಗಳನ್ನೂ ಪ್ರಶ್ನಿಸುತ್ತೇನೆ, ಇದು ಮುಂದುವರಿಯಲಿದೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಭಾರತ ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಮಾಡಿದಾಗ ಇದು ಕಾಶ್ಮೀರದ ಜನರ ನಂಬಿಕೆಗೆ ದ್ರೋಹ ಮಾಡಿದಂತಾಗಿದೆ ಎಂದು ಅಬ್ರಹಮ್ಸ್‌ ಟೀಕಿಸಿದ್ದರು. 

‘ವಲಸೆ ಅಧಿಕಾರಿಗಳಿಗೆ ಇ–ವೀಸಾ ಸೇರಿದಂತೆ ಎಲ್ಲ ದಾಖಲೆಗಳನ್ನು ತೋರಿಸಲಾಗಿದೆ. ನನ್ನ ಭಾವಚಿತ್ರವನ್ನು ಸಹ ಅವರು ಸೆರೆ ಹಿಡಿದಿದ್ದಾರೆ. ನಂತರ ನನ್ನ ಇ–ವೀಸಾ ತಿರಸ್ಕರಿಸಲಾಗಿದೆ ಎಂದು ಹೇಳಿದ ಅಧಿಕಾರಿಯು, 10 ನಿಮಿಷ ನಂತರ ಅಲ್ಲಿಂದ ತೆರಳಿದ್ದರು. ಮರಳಿ ಬಂದ ನಂತರ ಅಸಭ್ಯವಾಗಿ ಮತ್ತು ಆಕ್ರಮಣಕಾರಿಯಾಗಿ ನಡೆದುಕೊಂಡರು. ನಂತರ ನನ್ನನ್ನು ನಿಲ್ದಾಣದ ಬೇರೆ ಕಡೆಗೆ ಕರೆದುಕೊಂಡು ಹೋಗಿ ಕುಳಿತುಕೊಳ್ಳುವಂತೆ ಆದೇಶಿಸಿದರು. ಜನರು ಈ ಎಲ್ಲ ಬೆಳವಣಿಗೆಗಳನ್ನು ನೋಡಲಿ ಎಂಬ ಉದ್ದೇಶದಿಂದ ಈ ಆದೇಶವನ್ನು ತಿರಸ್ಕರಿಸಿದೆ’ ಎಂದು ಅವರು ತಿಳಿಸಿದ್ದಾರೆ.

‘ನನ್ನ ಮೇಲೆ ನಿಗಾ ವಹಿಸಿರುವ ಅಧಿಕಾರಿಗೂ ಯಾವುದೇ ಮಾಹಿತಿ ಇಲ್ಲ. ನನ್ನನ್ನು ಅಪರಾಧಿಯಂತೆ ಪರಿಗಣಿಸಲಾಗಿದೆ ಎಂಬ ಅಂಶವನ್ನು ನನ್ನ ಹೇಳಿಕೆಯಿಂದ ಹಿಂಪಡೆಯಲು ಸಿದ್ಧವಿದ್ದೇನೆ. ನನ್ನ ಕುಟುಂಬ ಮತ್ತು ಸ್ನೇಹಿತರನ್ನು ಭೇಟಿ ಮಾಡಲು ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇದೆ’ ಎಂದು ಅಬ್ರಹಮ್ಸ್‌ ತಿಳಿಸಿದ್ದಾರೆ.

ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರು, ‘ಈ ಕ್ರಮವು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಕಾಶ್ಮೀರದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಹಾಗಾದರೆ, ವಿಮರ್ಶಕರಿಗೆ ಏಕೆ ಹೆದರುತ್ತಿದೆ? ಅಲ್ಲಿನ ಪರಿಸ್ಥಿತಿ ಉತ್ತಮವಿದ್ದರೆ, ವಿಮರ್ಶಕರಿಗೆ ಸ್ವತಃ ಅಲ್ಲಿಗೆ ಭೇಟಿ ನೀಡಲು ಸರ್ಕಾರ ಪ್ರೋತ್ಸಾಹಿಸಬಾರದೇಕೆ?’ ಎಂದು ಟ್ವೀಟ್‌ ಮಾಡಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು