ಬುಲಂದ್‌ಶಹರ್‌ ಗಲಭೆ: ಮೂವರು ಪೊಲೀಸ್ ಅಧಿಕಾರಿಗಳ ವರ್ಗಾವಣೆ

7

ಬುಲಂದ್‌ಶಹರ್‌ ಗಲಭೆ: ಮೂವರು ಪೊಲೀಸ್ ಅಧಿಕಾರಿಗಳ ವರ್ಗಾವಣೆ

Published:
Updated:

ಲಖನೌ: ಗೋ ಹತ್ಯೆ ನಡೆದಿದೆ ಎಂದು ಆರೋಪಿಸಿ ಇಲ್ಲಿನ ಬುಲಂದ್‌ಶಹರ್‌ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಬುಲಂದ್‌ಶಹರ್‌ನ ಹಿರಿಯ ಸೂಪರಿಂಟೆಂಡೆಂಟ್‌ ಆಫ್‌ ಪೊಲೀಸ್‌(ಎಸ್‌ಎಸ್‌ಪಿ) ಕೃಷ್ಣ ಬಹದೂರ್‌ ಸಿಂಗ್‌, ಸಯನಾ ವೃತ್ತಾಧಿಕಾರಿ ಡಿಎಸ್‌ಪಿ ಸತ್ಯಪ್ರಕಾಶ್‌ ಶರ್ಮಾ ಹಾಗೂ ಚಿಂಗರ್‌ವಾಟಿ ಪೊಲೀಸ್‌ ಠಾಣಾಧಿಕಾರಿ ಸುರೇಶ್‌ ಕುಮಾರ್‌ ಅವರನ್ನು ವರ್ಗಾವಣೆ ಮಾಡಲಾಗಿದೆ. ಸೀತಾಪುರ ಸೂಪರಿಂಟೆಂಡೆಂಟ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಭಾಕರ್‌ ಚೌಧರಿ ಅವರನ್ನು ಬುಲಂದ್‌ಶಹರ್‌ ಎಸ್‌ಎಸ್‌ಪಿಯನ್ನಾಗಿ ನೇಮಿಸಲಾಗಿದೆ.

ಇದನ್ನೂ ಓದಿ: ಗೋಹತ್ಯೆ ಆರೋಪ: ಉತ್ತರ ಪ್ರದೇಶದಲ್ಲಿ ಗುಂಪು ಗಲಭೆ; ಇನ್‌ಸ್ಪೆಕ್ಟರ್‌, ಯುವಕ ಸಾವು

ಸದ್ಯ ಕೃಷ್ಣ ಬಹದೂರ್‌ ಸಿಂಗ್‌ ಅವರನ್ನು ಪೊಲೀಸ್‌ ಪ್ರಧಾನ ಕಚೇರಿ ಲಖನೌಗೆ ಡಿಜಿಪಿಯನ್ನಾಗಿ ನೇಮಿಸಲಾಗಿದೆ. ಶರ್ಮಾ ಮತ್ತು ಕುಮಾರ್‌ ಅವರನ್ನು ಕ್ರಮವಾಗಿ ಮೊರಾದಾಬಾದ್‌ನ ಪೊಲೀಸ್‌ ತರಬೇತಿ ಕಾಲೇಜು ಹಾಗೂ ಲಲಿತ್‌ಪುರ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.

ಗಲಭೆ ಸಂದರ್ಭ ವಿವಿಧ ಸ್ಥಳಗಳಲ್ಲಿ ಸೆರೆಯಾಗಿರುವ ವಿಡಿಯೊ ದೃಶ್ಯಾವಳಿಗಳನ್ನು ಆಧಾರವಾಗಿಟ್ಟುಕೊಂಡು ಶುಕ್ರವಾರ ಐದು ಜನರನ್ನು ಬಂಧಿಸಲಾಗಿದೆ. ದನಗಳನ್ನು ಕೊಲ್ಲಲಾಗಿದೆ ಎಂದು ಆರೋಪಿಸಿ ಬುಲಂದ್‌ಶಹರ್‌ ಜಿಲ್ಲೆಯ ಚಿಂಗರ್‌ವಾಟಿ ಪೊಲೀಸ್‌ ಹೊರಠಾಣೆಯ ಮೇಲೆ 400ಕ್ಕೂ ಹೆಚ್ಚು ಜನರು ಡಿಸೆಂಬರ್‌ 3 ರಂದು ದಾಳಿ ನಡೆಸಿದ್ದರು.

ಇದನ್ನೂ ಓದಿ: ಗೋಹತ್ಯೆ ಆರೋಪ, ಗುಂಪು ಗಲಭೆ: ಪೊಲೀಸ್‌ ಅಧಿಕಾರಿ ಹತ್ಯೆ ಸಂಬಂಧ ನಾಲ್ವರ ಬಂಧನ

ಪೊಲೀಸರು ಜನರ ಗುಂಪನ್ನು ಚದುರಿಸಲು ಸಾಧ್ಯವಾಗದಿದ್ದಾಗ ಗುಂಡು ಹಾರಿಸಿದ್ದರು. ಆ ವೇಳೆ ಸುಮಿತ್‌ ಕುಮಾರ್‌ ಎಂಬ ಯುವಕ ಮೃತಪಟ್ಟಿದ್ದ. ಇದರಿಂದ ಕೆರಳಿದ್ದ ಗುಂಪು ಹತ್ತಾರು ವಾಹನಗಳಿಗೆ ಬೆಂಕಿ ಹಚ್ಚಿತ್ತು. ಸಯನಾ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಸುಬೋಧ್‌ ಸಿಂಗ್‌ ದಾಳಿಯ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ್ದರು.

ಕೆಲಹೊತ್ತಿನ ಬಳಿಕ ಸಿಂಗ್‌ ಅವರಿಗೂ ಗುಂಡು ತಗುಲಿ ಮೃತಪಟ್ಟಿದ್ದರು. ಇದೀಗ ಸಿಂಗ್‌ ಸಾವಿನ ಸಂಬಂಧ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಸಿಂಗ್ ಮೇಲಿನ ದಾಳಿ ಪೂರ್ವಯೋಜಿತ ಕೃತ್ಯ? ಎನ್ನಲಾಗಿದೆ.

ಆರೋಪಿ ಜೀತು ಫೌಜಿ ಬಂಧನ

ಶ್ರೀನಗರ: ಬುಲಂದ್‌ಶಹರ್‌ ಹಿಂಸಾಚಾರದ ವೇಳೆ ಇನ್‌ಸ್ಪೆಕ್ಟರ್‌ ಸುಬೋಧ ಕುಮಾರ್‌ ಸಿಂಗ್‌ ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ಶಂಕಿಸಲಾದ ಆರೋಪಿ ಜಿತೆಂದ್ರ ಮಲಿಕ್‌ ಅಲಿಯಾಸ್‌ ಜೀತು ಫೌಜಿಯನ್ನು ಸೊಪೊರ್‌ ಪಟ್ಟಣದಲ್ಲಿ ಬಂಧಿಸಲಾಗಿದೆ.

22 ರಾಷ್ಟ್ರೀಯ ರೈಫಲ್ಸ್‌ ಸಿಬ್ಬಂದಿ ಶುಕ್ರವಾರ ರಾತ್ರಿ ಜೀತು ಫೌಜಿಯನ್ನು ಬಂಧಿಸಿ, ಉತ್ತರ ಪ್ರದೇಶ ಪೊಲೀಸರ ವಿಶೇಷ ತನಿಖಾ ತಂಡದ ವಶಕ್ಕೆ ಒಪ್ಪಿಸಿದ್ದಾರೆ.

ಶ್ರೀನಗರದಲ್ಲಿ ಯೋಧನಾಗಿರುವ ಜೀತು ಫೌಜಿ ರಜೆಯ ಮೇಲೆ ಸ್ವಗ್ರಾಮ ಬುಲಂದ್‌ಶಹರ್‌ಗೆ ಬಂದಾಗ ಹಿಂಸಾಚಾರ ನಡೆದಿತ್ತು.

ಹಿಂಸಾಚಾರ ತಡೆಯಲು ಬಂದಿದ್ದ ಇನ್‌ಸ್ಪೆಕ್ಟರ್‌ ಸುಭೋದ ಕುಮಾರ್‌ ಸಿಂಗ್‌ ಮೇಲೆ ಜೀತು ಗುಂಡು ಹಾರಿಸುವ ವಿಡಿಯೊ ವೈರಲ್‌ ಆಗುತ್ತಿದ್ದಂತೆಯೇ ಸಂಜೆಯೇ ಸೊಪೊರ್‌ಗೆ ಪರಾರಿಯಾಗಿದ್ದ. ಆತನನನ್ನು ಬಂಧಿಸಲು ಉತ್ತರ ಪ್ರದೇಶದಿಂದ ವಿಶೇಷ ತನಿಖಾ ತಂಡ ಕಾಶ್ಮೀರಕ್ಕೆ ಬಂದಿತ್ತು.

ಸಿ.ಎಂ, ಡಿಜಿಪಿ ವಿಭಿನ್ನ ಹೇಳಿಕೆ

ಬುಲಂದ್‌ಶಹರ್‌ ಹಿಂಸಾಚಾರ ಘಟನೆ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಡಿಜಿಪಿ ವಿಭಿನ್ನ ಹೇಳಿಕೆ ನೀಡಿದ್ದಾರೆ.

ಜೀತು ಫೌಜಿ ಬಂದೂಕಿನಿಂದ ಗುಂಡು ಹಾರಿದ್ದು ಆಕಸ್ಮಿಕ ಎಂದು ಯೋಗಿ ಸಮರ್ಥಿಸಿಕೊಂಡಿದ್ದಾರೆ. ರಾಜ್ಯದ ಪೊಲೀಸ್‌ ಮುಖ್ಯಸ್ಥರಾಗಿರುವ ಡಿಜಿಪಿ ‘ಇದೊಂದು ಪೂರ್ವ ನಿಯೋಜಿತ ಕೃತ್ಯದಂತೆ ಕಾಣುತ್ತಿದೆ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !