ಭಾನುವಾರ, ನವೆಂಬರ್ 17, 2019
24 °C

ಫೆ.15ರಿಂದ ಸಿಬಿಎಸ್ಇ 10ನೇ ತರಗತಿ ಪರೀಕ್ಷೆ?

Published:
Updated:

ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ (ಸಿಬಿಎಸ್‌ಇ) 10 ಮತ್ತು 12ನೇ ತರಗತಿಯ ಪರೀಕ್ಷೆಗಳು 2020ರ ಫೆಬ್ರುವರಿ 15ರಿಂದ ಆರಂಭವಾಗುವ ಸಂಭವವಿದೆ.

ಮೊದಲಿಗೆ ಲಿಖಿತ ಮತ್ತು ಕೌಶಲ ವಿಷಯಗಳ ಪರೀಕ್ಷೆ ನಡೆಯಲಿದೆ. ಮಾನ್ಯತೆ ಪಡೆದ ಶಾಲೆಗಳಿಗೆ ಈಚೆಗೆ ಕಳುಹಿಸಿದ ಸುತ್ತೋಲೆಯಲ್ಲಿ ಸಿಬಿಎಸ್‌ಇ, ‘ಪ್ರಾಯೋಗಿಕ ಪರೀಕ್ಷೆ ಮತ್ತು ವಿದ್ಯಾರ್ಥಿಗಳ  ಪ್ರಾಜೆಕ್ಟ್‌ ಮೌಲ್ಯಮಾಪನವನ್ನು ಜನವರಿ 1ರಿಂದ ಆರಂಭಿಸಿ, ಫೆಬ್ರುವರಿ 7ರ ಒಳಗೆ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದೆ.

ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಪ್ರಾಯೋಗಿಕ ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ನಡೆಸಲಾಗಿದೆ ಎಂಬುದಕ್ಕೆ ಆಧಾರವನ್ನು ಒದಗಿಸಬೇಕು ಎಂದು ಮಂಡಳಿಯು ಸೂಚಿಸಿದೆ. ಆಧಾರವಾಗಿ ಶಾಲೆಗಳ ಆಡಳಿತ ಮಂಡಳಿಗಳು, ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಿರುವ ವಿದ್ಯಾರ್ಥಿಗಳ ತಂಡ ಪರೀಕ್ಷಾ ಮೇಲ್ವಿಚಾರಕರು, ವೀಕ್ಷಕರ ಜೊತೆಗೆ ಇರುವ ಛಾಯಾಚಿತ್ರಗಳನ್ನು ಕಳುಹಿಸಬೇಕಾಗಿದೆ.

ಶಾಲೆಗಳು ಈ ಛಾಯಾಚಿತ್ರಗಳು,ವಿವರಗಳನ್ನು ಅಪ್‌ಲೋಡ್ ಮಾಡಲು ಅನುವಾಗುವಂತೆ ಮೊಬೈಲ್‌ ಅಪ್ಲಿಕೇಷನ್‌ ಅನ್ನೂ ಸಿಬಿಎಸ್‌ಇ ರೂಪಿಸಿದೆ. ಅದೇ ರೀತಿ ಆಂತರಿಕ ಮೌಲ್ಯಮಾಪನದ ಅಂಕಗಳನ್ನು ಜನವರಿ 1 ರಿಂದ ಫೆಬ್ರುವರಿ 7ರ ಅವಧಿಯಲ್ಲಿ ಅಪ್‌ಲೋಡ್‌ ಮಾಡಬೇಕಿದೆ. ಅಪ್‌ಲೋಡ್‌ ಮಾಡಲು ಇರುವ ಗಡುವು ಸೇರಿದಂತೆ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮಂಡಳಿಯು ಸುತ್ತೋಲೆಯಲ್ಲಿ ತಿಳಿಸಿದೆ.

 

ಪ್ರತಿಕ್ರಿಯಿಸಿ (+)