ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರಿಗಳಿಗೆ ಭದ್ರತೆ ಒದಗಿಸಲು ಸೂಚನೆ

Last Updated 16 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳಿಗೆ ಹಾಗೂ ಜನರಿಗೆ ಆಯಾ ರಾಜ್ಯ ಸರ್ಕಾರಗಳು ಸುರಕ್ಷತೆ ಹಾಗೂ ಸೂಕ್ತ ಭದ್ರತೆ ಒದಗಿಸಬೇಕು ಎಂದು ಕೇಂದ್ರ ಸರ್ಕಾರ ಶನಿವಾರ ಸೂಚಿಸಿದೆ.

ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ಉಗ್ರರು ದಾಳಿ ನಡೆಸಿದ್ದರಿಂದ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಮತ್ತು ಜನರಿಗೆ ಬೆದರಿಕೆ ಹಾಕಲಾಗುತ್ತಿದೆ. ಅದಕ್ಕಾಗಿ ಸೂಕ್ತ ಭದ್ರತೆ ಒದಗಿಸಬೇಕು ಎಂಬ ಅಭಿಪ್ರಾಯವು, ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ವ್ಯಕ್ತವಾಯಿತು. ನಂತರ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಈ ಸೂಚನೆ ನೀಡಲಾಯಿತು.

ಉತ್ತರಾಖಂಡ್‌ದ ಡೆಹ್ರಾಡೂನ್‌ನಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿ, ಮನೆಗಳನ್ನು ಖಾಲಿ ಮಾಡುವಂತೆ ಮಾಲೀಕರು ಒತ್ತಾಯಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಮನೆ ಖಾಲಿ ಮಾಡಿಸಿ’

ಅಂಬಾಲಾ (ಪಿಟಿಐ): ಉಗ್ರರ ದಾಳಿ ಹಿನ್ನೆಲೆಯಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳನ್ನು 24 ತಾಸಿನೊಳಗೆ ಮನೆ ಖಾಲಿ ಮಾಡಿಸಬೇಕು ಎಂದು ಗ್ರಾಮ ಪಂಚಾಯಿತಿಯು ಗ್ರಾಮಸ್ಥರಿಗೆ ನಿರ್ದೇಶನ ನೀಡಿದ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ.

ವಿಡಿಯೊ ತುಣುಕು ಹರಿದಾಡುತ್ತಿದ್ದಂತೆ ಆರು ಕಾಶ್ಮೀರಿ ವಿದ್ಯಾರ್ಥಿಗಳು ಎಂ.ಎಂ.ವಿಶ್ವವಿದ್ಯಾಲಯದ ಹಾಸ್ಟೇಲ್‌ಗೆ ಸ್ಥಳಾಂತರಗೊಂಡಿದ್ದಾರೆ.

ಮುಲಾನಾ ಗ್ರಾಮದ ಮುಖ್ಯಸ್ಥ ನರೇಶ್‌ ರಾಣಾ ಅವರು ಬಾಡಿಗೆಗೆ ಇರುವ ಕಾಶ್ಮೀರಿ ವಿದ್ಯಾರ್ಥಿಗಳನ್ನು ಖಾಲಿ ಮಾಡಿಸಬೇಕು ಎಂದು ಮನೆ ಮಾಲೀಕರಿಗೆ ಹೇಳಿರುವ ವಿಡಿಯೊ ಹರಿದಾಡುತ್ತಿದೆ.

‘ಸಂಶಯಾಸ್ಪದ ಚಟುವಟಿಕೆಗಳಲ್ಲಿ ಕೆಲವು ಕಾಶ್ಮೀರಿ ವಿದ್ಯಾರ್ಥಿಗಳು ತೊಡಗಿದ್ದಾರೆ. ವಿದ್ಯಾರ್ಥಿಗಳನ್ನು ಹೊರಗೆ ಹಾಕದಿದ್ದರೆ ಮನೆ ಮಾಲೀಕನನ್ನು ದೇಶದ್ರೋಹಿ ಎಂದು ಹೇಳಬೇಕಾಗುತ್ತದೆ’ ಎಂದು ರಾಣಾ ಹೇಳಿದ್ದಾರೆ.

‘ಕಾಶ್ಮೀರಿ ವಿದ್ಯಾರ್ಥಿಗಳಿಗೆ ಹಾಸ್ಟೇಲ್‌ನಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ’ ಎಂದು ಎಂ.ಎಂ.ವಿಶ್ವವಿದ್ಯಾಲಯದ ಟ್ರಸ್ಟಿ ವಿಶಾಲ್‌ ಗರ್ಗ್‌ ತಿಳಿಸಿದ್ದಾರೆ.

ಈ ವಿಷಯ ಕುರಿತು ತನಿಖೆ ನಡೆಸಲಾಗುವುದು ಎಂದು ಪೊಲೀಸ್‌ ವರಿಷ್ಠಾಧಿಕಾರಿ ಆಸ್ಥಾ ಮೋದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT