ಬಾಬಾ ರಾಮ್‌ದೇವ್‌ರ ಪತಂಜಲಿ ಎದುರು ಆರು ಸವಾಲುಗಳು

7

ಬಾಬಾ ರಾಮ್‌ದೇವ್‌ರ ಪತಂಜಲಿ ಎದುರು ಆರು ಸವಾಲುಗಳು

Published:
Updated:

‘ಸ್ವದೇಶಿ’ ಮಂತ್ರ ಪಠಿಸುತ್ತಾ ಮಾರುಕಟ್ಟೆಯಲ್ಲಿ ಮೇಲೆದ್ದು ಬಂದ ಕಂಪನಿ ಪತಂಜಲಿ. ಆಯುರ್ವೇದದ ಬಗ್ಗೆ ಜನರಿಗಿದ್ದ ಶ್ರದ್ಧೆಯ ಜೊತೆಗೆ ದೇಶಾಭಿಮಾನವನ್ನೂ ಮಾರುಕಟ್ಟೆ ತಂತ್ರವಾಗಿಸಿಕೊಂಡ ಯೋಗಗುರು ಬಾಬಾ ರಾಮ್‌ದೇವ್‌ ಸ್ಥಾಪಿಸಿದ ಪತಂಜಲಿ ಕಂಪನಿಯ ಉತ್ಪನ್ನಗಳು ಬಹುಬೇಗ ದೇಶದ ಕೋಟ್ಯಂತರ ಮನೆಗಳನ್ನು ತಲುಪಿದವು.

ದಿನಬಳಕೆ ಉತ್ಪನ್ನಗಳ (ಎಫ್‌ಎಂಸಿಜಿ– ಫಾಸ್ಟ್‌ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್) ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಪತಂಜಲಿಯ ಸಾಧನೆಯನ್ನು ನಮ್ಮ ದೇಶದಲ್ಲಿ ಅನೇಕ ವರ್ಷಗಳಿಂದ ಬೇರು ಬಿಟ್ಟಿದ್ದ ಬಹುರಾಷ್ಟ್ರೀಯ ಕಂಪನಿಗಳಾದ ಹಿಂದೂಸ್ತಾನ್ ಯುನಿಲಿವರ್, ಕೋಲ್‌ಗೇಟ್, ನೆಸ್ಲೆ ಮೂಗಿನ ಮೇಲೆ ಬೆರಳಿಟ್ಟು ನೋಡಿದ್ದವು.

ಕೆಲ ಉತ್ಪನ್ನಗಳು ಜನಪ್ರಿಯವಾದ ನಂತರ ರಾಮ್‌ದೇವ್ ಅವರಲ್ಲಿ ಮಾರುಕಟ್ಟೆ ವಿಸ್ತರಣೆಯ ಮಹತ್ವಾಕಾಂಕ್ಷೆಯೂ ಮನೆಮಾಡಿತು. ‘ಮುಂದಿನ ಮೂರರಿಂದ ಐದು ವರ್ಷಗಳ ಅವಧಿಯಲ್ಲಿ ₹20ರಿಂದ ₹25 ಸಾವಿರ ಕೋಟಿ ರೂಪಾಯಿಗಳ ವಹಿವಾಟು ನಡೆಸುವುದು ನಮ್ಮ ಗುರಿ’ ಎಂದು ರಾಮದೇವ್ ಕಳೆದ ಏಪ್ರಿಲ್‌ನಲ್ಲಿ ಘೋಷಿಸಿದ್ದರು. ಆದರೆ ಸದ್ಯದ ಮಾರುಕಟ್ಟೆ ಪರಿಸ್ಥಿತಿ ನೋಡಿದರೆ ಈ ಗುರಿಯ ಸನಿಹಕ್ಕೆ ಬರುವುದೂ ಪತಂಜಲಿ ಕಂಪನಿಗೆ ಕಷ್ಟ ಎನಿಸುತ್ತದೆ. ಕಳೆದ ಆರ್ಥಿಕ ವರ್ಷದಲ್ಲಿ ಪತಂಜಲಿಯ ಒಟ್ಟು ವಹಿವಾಟು 10 ಸಾವಿರ ಕೋಟಿಯ ಆಸುಪಾಸಿನಲ್ಲಿತ್ತು.

‘ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಪತಂಜಲಿಯ ಬೆಳವಣಿಗೆ ದುಪ್ಪಟ್ಟಾಗಿದೆ. ಆದರೆ ಕಳೆದ ವರ್ಷಕ್ಕೂ ಈ ವರ್ಷಕ್ಕೂ ಹೋಲಿಸಿ ನೋಡಿದರೆ ಬೇಡಿಕೆ ಹೆಚ್ಚಾಗಿರುವುದು ಗೋಚರಿಸುತ್ತಿಲ್ಲ. ಕೆಲ ಉತ್ಪನ್ನಗಳ ಮಾರಾಟ ಪ್ರಮಾಣ ಕಡಿಮೆಯಾಗುತ್ತಿದೆ. ಜೇನುತುಪ್ಪ ಮತ್ತು ಕೇಶಸಂರಕ್ಷಣೆ ಉತ್ಪನ್ನಗಳು ಇದರಲ್ಲಿ ಪ್ರಮುಖವಾದವು. ಟೂತ್‌ಪೇಸ್ಟ್‌ ಮಾರಾಟದ ಮಾರುಕಟ್ಟೆ ಪಾಲು ಸಹ ಕುಸಿದಿದೆ" ಎನ್ನುತ್ತದೆ ಕ್ರೆಡಿಟ್ ಸುಸೆ ವರದಿ.

ಆವಿಷ್ಕಾರಗಳ ಕೊರತೆ

2017ರಲ್ಲಿ ಪತಂಜಲಿ ಉತ್ಪನ್ನಗಳನ್ನು ಗ್ರಾಹಕರು ಆಸಕ್ತಿಯಿಂದ ಖರೀದಿಸುತ್ತಿದ್ದರು. ಮಾರಾಟ ಪ್ರಮಾಣ ಶೇ 27ರಿಂದ 45ರಷ್ಟು ಹೆಚ್ಚಾಯಿತು. ಆದರೆ ಪತಂಜಲಿ ಉತ್ಪನ್ನಗಳನ್ನು ಖರೀದಿಸುತ್ತಿದ್ದವರು ನಿಷ್ಠ ಗ್ರಾಹಕರೇನೂ ಆಗಿರಲಿಲ್ಲ. ‘ಇದೇನೋ ಹೊಸದಾಗಿದೆ. ಹೇಗಿದೆಯೋ ಒಮ್ಮೆ ನೋಡೋಣ’ ಎನ್ನುವ ಮನಸ್ಥಿತಿಯಿಂದ ಪತಂಜಲಿ ಉತ್ಪನ್ನಗಳನ್ನು ಖರೀದಿಸುತ್ತಿದ್ದರು. ಆದರೆ ಪತಂಜಲಿ ಉತ್ಪನ್ನಗಳಿಗೆ ಸಿಗುತ್ತಿದ್ದ ಪ್ರಚಾರ ಕಡಿಮೆಯಾದ ನಂತರ ಈ ಗ್ರಾಹಕರು ಆಸಕ್ತಿ ಕಳೆದುಕೊಂಡರು. ಇದೇ ವೇಳೆಗೆ ಇತರ ಕಂಪನಿಗಳೂ ಪತಂಜಲಿ ಉತ್ಪನ್ನಗಳನ್ನು ಹೋಲುವ ಬಗೆಬಗೆ ಆಯುರ್ವೇದ ಉತ್ಪನ್ನಗಳನ್ನು ಪರಿಚಯಿಸಿದವು.

ವಿತರಣೆ ವ್ಯವಸ್ಥೆ ಸೃಷ್ಟಿಯಲ್ಲಿ ವೈಫಲ್ಯ

ಪತಂಜಲಿ ತನ್ನ ಉತ್ಪನ್ನಗಳ ಮಾರಾಟವನ್ನು ತನ್ನ ಸ್ವಂತ ಚಿಕಿತ್ಸಾಲಯಗಳ ಮೂಲಕ ಆರಂಭಿಸಿತು. ನಂತರದ ದಿನಗಳಲ್ಲಿ ಸಾಮಾನ್ಯ ವಿತರಣಾ ಜಾಲಕ್ಕೆ ಹೊರಳಿಕೊಂಡಿತು.ಹೀಗೆ ಹೊರಳಿಕೊಂಡ ನಂತರವೇ ಪತಂಜಲಿಗೆ ಹಿಂದೂಸ್ತಾನ್ ಯುನಿಲಿವರ್ (ಎಚ್‌ಯುಎಲ್), ಕೋಲ್‌ಗೇಟ್ ಮತ್ತು ನೆಸ್ಟ್ಲೆಯಂಥ ಬೃಹತ್ ಕಂಪನಿಗಳ ಎದುರು ಸ್ಪರ್ಧಿಸುವ ಸವಾಲುಗಳು ಅರ್ಥವಾಗಿದ್ದು.

'ಎಕನಾಮಿಕ್ ಟೈಮ್ಸ್‌' ವರದಿಯ ಪ್ರಕಾರ, 2016ರಲ್ಲಿ ಪತಂಜಲಿ ಉತ್ಪನ್ನಗಳು ದೇಶದ ಎರಡು ಲಕ್ಷ ಕಿರಾಣಿ ಅಂಗಡಿಗಳಲ್ಲಿ ಸಿಗುತ್ತಿದ್ದವು. ಅದೇ ವೇಳೆಯಲ್ಲಿ ಎಚ್‌ಯುಎಲ್‌ನ ಉತ್ಪನ್ನಗಳು 60 ಲಕ್ಷ, ನೆಸ್ಟ್ಲೆ ಉತ್ಪನ್ನಗಳು 35 ಲಕ್ಷ ಮತ್ತು ಕೋಲ್‌ಗೇಟ್ ಉತ್ಪನ್ನಗಳು 47 ಲಕ್ಷ ಕಿರಾಣಿ ಅಂಗಡಿಗಳಲ್ಲಿ ಸಿಗುತ್ತಿದ್ದವು.

ತನ್ನ ಸಾಂಪ್ರದಾಯಿಕ ಮಾರಾಟ ಮಾದರಿಯ ಜೊತೆಜೊತೆಗೆ ಸಾಮಾನ್ಯ ವಿತರಣ ವ್ಯವಸ್ಥೆಯಲ್ಲಿಯೂ ಉತ್ಪನ್ನಗಳ ಮಾರಾಟಕ್ಕೆ ಮುಂದಾದ ಕಾರಣ ಪತಂಜಲಿಯ ಚಿಕಿತ್ಸಾಲಯಗಳ ಜಾಲದ ಮೇಲೆ ಒತ್ತಡ ಹೆಚ್ಚಾಯಿತು. ಹೊಸ ವಿತರಕರ ಹುಡುಕಾಟ ಮತ್ತು ಹೊಸ ಮಾರಾಟ ಜಾಲಕ್ಕಾಗಿ ನಡೆಸಿದ ತೀವ್ರ ಪ್ರಯತ್ನದಿಂದಾಗಿ ಒಂದಿಷ್ಟು ನಿಷ್ಠ ವಿತರಕರನ್ನು ಕಳೆದುಕೊಳ್ಳಬೇಕಾಯಿತು. ಇಷ್ಟೆಲ್ಲ ಆದ ನಂತರವೂ ಪತಂಜಲಿಗೆ ಕಿರಾಣಿ ಅಂಗಡಿಗಳಿಗೆ ಉತ್ಪನ್ನಗಳನ್ನು ತಲುಪಿಸುವುದು ದೊಡ್ಡ ಸವಾಲಾಗಿಯೇ ಉಳಿಯಿತು.

ಅಲುಗಾಡಿತು ಆಯುರ್ವೇದಿಕ್ ತಳಪಾಯ

ಆಯುರ್ವೇದಿಕ್ ಉತ್ಪನ್ನಗಳಿಂದ ಗ್ರಾಹಕರಿಗೆ ಪತಂಜಲಿಯ ಪರಿಚಯವಾಯಿತು. ಕ್ರಮೇಣ ಗಿಡಮೂಲಿಕೆಗಳಿಂದ ತಯಾರಿಸಿದ ದಿನಬಳಕೆ ಉತ್ಪನ್ನಗಳು ಮತ್ತು ಸಾವಯವ ಆಹಾರ ಉತ್ಪನ್ನಗಳ ಮಾರಾಟಕ್ಕೂ ಪತಂಜಲಿ ಮುಂದಾಯಿತು. ಬಿಸ್ಕೀಟ್, ನೂಡಲ್ಸ್‌ ಮತ್ತು ಟೂತ್‌ಬ್ರಷ್‌ನಂಥ ಉತ್ಪನ್ನಗಳ ಜನಪ್ರಿಯತೆ ಹೆಚ್ಚಾದಂತೆ ಜನರ ಮನಸ್ಸಿನಲ್ಲಿ ಪತಂಜಲಿ ಎನ್ನುವುದು ಪ್ರತಿಷ್ಠಿತ ಆಯುರ್ವೇದಿಕ್ ಫಾರ್ಮಾ ಕಂಪನಿಯೆಂಬ ಅಭಿಪ್ರಾಯ ದೂರವಾಗಲು ಆರಂಭಿಸಿತು. ಇದೀಗ ಪತಂಜಲಿ ಬಟ್ಟೆ ಮತ್ತು ಶೀತಲೀಕರಿಸಿದ ತರಕಾರಿಗಳ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವ ಉತ್ಸಾಹದಲ್ಲಿದೆ. ಇದರಿಂದಾಗಿ ಪತಂಜಲಿ ಬ್ರಾಂಡ್ ಇಮೇಜ್‌ಗೆ ಮತ್ತಷ್ಟು ಧಕ್ಕೆ ಒದಗುವ ಸಾಧ್ಯತೆ ಇದೆ.

ದೊಡ್ಡ ಕಂಪನಿಗಳಿಂದ ಪೈಪೋಟಿ

ಎಫ್‌ಎಂಸಿಜಿ ವಲಯದ ದೈತ್ಯ ಕಂಪನಿಗಳಾದ ಕೋಲ್‌ಗೇಟ್ ಮತ್ತು ಎಚ್‌ಯುಎಲ್ ತಮ್ಮ ಗ್ರಾಹಕರನ್ನು ಮರಳಿ ಸೆಳೆದುಕೊಳ್ಳಲು ಆಯುರ್ವೇದಿಕ್ ಉತ್ಪನ್ನಗಳ ಅಭಿವೃದ್ಧಿ ಮತ್ತು ಬಿಡುಗಡೆಗಾಗಿ ಭಾರಿ ಮೊತ್ತದ ಹಣವನ್ನು ಹೂಡಿಕೆ ಮಾಡಿದವು. ಡಾಬರ್ ತನ್ನ ಉತ್ಪನ್ನಗಳ ಬೆಲೆಯನ್ನು ಸ್ಪರ್ಧೆಗೆ ಅನುಗುಣವಾಗಿ ಕಡಿಮೆ ಮಾಡಿದರೆ ಎಚ್‌ಯುಎಲ್ ದೇಶವ್ಯಾಪಿ ಹೊಸ ಶ್ರೇಣಿಯ ಆಯುರ್ವೇದಿಕ್ ಉತ್ಪನ್ನಗಳನ್ನು ಬಿಡುಗಡೆ ಮಾಡಿತು. ಕೋಲ್‌ಗೇಟ್ ಒಂದಷ್ಟು ಆಯುರ್ವೇದಿಕ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿತು. ಆಯ್ಕೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಗ್ರಾಹಕರು ತಾತ್ಕಾಲಿಕವಾಗಿ ಪತಂಜಲಿಯಿಂದ ದೂರ ಸರಿದಿರುವ ಸಾಧ್ಯತೆಗಳಿವೆ ಎಂದು ವರದಿ ಉಲ್ಲೇಖಿಸಿದೆ.

ಜಾಹೀರಾತು ವೆಚ್ಚದಲ್ಲಿ ಕಡಿತ

ಕಳೆದ ವರ್ಷ ಮೇ ತಿಂಗಳಲ್ಲಿ ಪ್ರಕಟವಾದ ಎಕ್ಸ್‌ಚೇಂಜ್ ಫಾರ್ ಮೀಡಿಯಾ ಜಾಲತಾಣದ ವರದಿಯ ಪ್ರಕಾರ ಈ ವರ್ಷದ ಮೊದಲ 16 ವಾರಗಳ ಪೈಕಿ ಆರು ವಾರ ಪತಂಜಲಿಯು ಬಾರ್ಕ್‌ನ (BARC) ಮೊದಲ ಹತ್ತು 10 ಜಾಹೀರಾತುದಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿಲ್ಲ.
ಇತರ ಒಂಬತ್ತು ವಾರಗಳಲ್ಲಿ ಪತಂಜಲಿಯು ಐದರಿಂದ 10ನೇ ಸ್ಥಾನದಲ್ಲಿತ್ತು. 16ನೇ ವಾರದಲ್ಲಿ (ಏ.14-20) ಪತಂಜಲಿಯು ಕೇವಲ 16,539 ಜಾಹೀರಾತು ತುಣುಕುಗಳೊಂದಿಗೆ ಕೊನೆಯ ಸ್ಥಾನದಲ್ಲಿತ್ತು.

ಮಾಧ್ಯಮ ವರದಿಗಳೂ ಕಡಿಮೆಯಾದವು

ಪತಂಜಲಿಯು ಒಂದು ಬ್ರಾಂಡ್ ಆಗಿ ದೊಡ್ಡಮಟ್ಟದಲ್ಲಿ ಬೆಳೆದುನಿಂತಿದ್ದ ಕಂಪನಿ. ಕಂಪನಿಯನ್ನು ಹುಟ್ಟುಹಾಕಿದ ಬಾಬಾ ರಾಮ್‌ದೇವ್ ಹತ್ತುಹಲವು ಕಾರಣಗಳಿಂದ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ವ್ಯಕ್ತಿ. ಈಗ ಮಾಧ್ಯಮಗಳಲ್ಲಿ ಏಕಾಏಕಿ ಪ್ರಚಾರ ಪ್ರಚಾರ ಕಡಿಮೆಯಾಗಿರುವುದು ಸಹ ಜನರಿಗೆ ಪತಂಜಲಿ ಉತ್ಪನ್ನಗಳಲ್ಲಿ ಆಸಕ್ತಿ ಕಡಿಮೆಯಾಗಲು ಕಾರಣವಾಗಿರಬಹುದು.

ಬರಹ ಇಷ್ಟವಾಯಿತೆ?

 • 45

  Happy
 • 4

  Amused
 • 4

  Sad
 • 2

  Frustrated
 • 2

  Angry

Comments:

0 comments

Write the first review for this !