ಗುರುವಾರ , ಜೂನ್ 24, 2021
21 °C
‘ಚಲೊ ಆತ್ಮಕೂರು’ ಪ್ರತಿಭಟನೆ ತಡೆಯಲು ಸರ್ಕಾರದ ಕ್ರಮ

ಆಂಧ್ರಪ್ರದೇಶ| ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಗೆ ಗೃಹಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮರಾವತಿ: ‘ಚಲೊ ಆತ್ಮಕೂರು’ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದ್ದ ತೆಲುಗುದೇಶಂ ಪಾರ್ಟಿಯ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು ಹಾಗೂ ಇತರ ಹಲವು ಮುಖಂಡರನ್ನು ಆಂಧ್ರಪ್ರದೇಶ ಸರ್ಕಾರ ಬುಧವಾರ ಗೃಹಬಂಧನದಲ್ಲಿಟ್ಟಿದೆ. ಪರಿಣಾಮವಾಗಿ ಪಕ್ಷವು ಕಾರ್ಯಕ್ರಮವನ್ನೇ ಸೆ. 18ಕ್ಕೆ ಮುಂದೂಡಿದೆ.

ಪಲ್ನಾಡು ಪ್ರದೇಶದ ಆತ್ಮಕೂರುನಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ನವರು ನಡೆಸಿದ್ದರು ಎನ್ನಲಾದ ದಾಳಿಯಿಂದ ಮನೆಗಳನ್ನು ಕಳೆದುಕೊಂಡು, ನಿರಾಶ್ರಿತ ಶಿಬಿರಗಳಲ್ಲಿ ವಾಸಿಸುತ್ತಿರುವ 127 ಕುಟುಂಬದವರಿಗೆ ಬೆಂಬಲ ನೀಡಲು ಟಿಡಿಪಿ ನೇತೃತ್ವದಲ್ಲಿ ಈ ರ್‍ಯಾಲಿಯನ್ನು ಆಯೋಜಿಸಲಾಗಿತ್ತು. ಅದರಲ್ಲಿ ಪಾಲ್ಗೊಳ್ಳಲು ನಾಯ್ಡು ಮತ್ತು ಅವರ ಪುತ್ರ ಎನ್‌. ಲೋಕೇಶ್‌ ಅವರು ಬುಧವಾರ ಮುಂಜಾನೆ ತೆರಳ
ಬೇಕಾಗಿತ್ತು. ಆದರೆ ಅಷ್ಟರೊಳಗೆ ಅವರ ಮನೆಯನ್ನು ಸುತ್ತುವರಿದ ಪೊಲೀಸರು ಇಬ್ಬರೂ ಮನೆಯಿಂದ ಹೊರಬರುವುದನ್ನು ತಡೆದರು.

ಪೊಲೀಸರು ನಾಯ್ಡು ಅವರು ಮನೆಯ ಆವರಣದ ಗೇಟನ್ನು ಮುಚ್ಚಿ ಅವರು ಹೊರಬರುವುದನ್ನು ತಡೆದರು. ಕೃಷ್ಣಾ, ಗುಂಟೂರು ಹಾಗೂ ಪ್ರಕಾಶಂ ಜಿಲ್ಲೆಯಲ್ಲಿರುವ ಟಿಡಿಪಿಯ ನಾಯ ಕರನ್ನೂ ಗೃಹಬಂಧನದಲ್ಲಿ ಇಡಲಾಗಿದೆ. ಕೆಲವು ನಾಯಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ನಮ್ಮನ್ನು ತಡೆಯಲಾಗದು: ‘ಇಂಥ ಕ್ರಮಗಳಿಂದ ನಮ್ಮನ್ನು ತಡೆಯಲು ಸಾಧ್ಯವಿಲ್ಲ, ಸರ್ಕಾರ ಈ ರೀತಿಯ ಕೀಳು ರಾಜಕೀಯಕ್ಕೆ ಇಳಿಯಬಾರದು’ ಎಂದು ಚಂದ್ರಬಾಬು ನಾಯ್ಡು ಪ್ರತಿಕ್ರಿಯೆ ನೀಡಿದ್ದಾರೆ.

‘100 ದಿನಗಳಲ್ಲಿ ಆತ್ಮಕೂರುನಲ್ಲಿ ದಾಳಿಯ 565ಕ್ಕೂ ಹೆಚ್ಚು ಘಟನೆಗಳು ನಡೆದಿವೆ. 545 ಕುಟುಂಬಗಳನ್ನು ಓಡಿಸಲಾಗಿದೆ. ಅವರಲ್ಲಿ ಹೆಚ್ಚಿನವರು ಪರಿಶಿಷ್ಟ ಜಾತಿಯವರು. ನಾವು ಇದರ ವಿರುದ್ಧ ಹೋರಾಡುತ್ತೇವೆ’ ಎಂದರು.

ಸಂತ್ರಸ್ಥರ ಸ್ಥಳಾಂತರ

ಈ ಬೆಳವಣಿಗೆಗಳ ಮಧ್ಯೆಯೇ ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿದ್ದ ಜನರನ್ನು ಪೊಲೀಸರು ಒತ್ತಾಯಪೂರ್ವಕವಾಗಿ ಅವರ ಮನೆಗೆ ಕರೆದೊಯ್ದಿದ್ದಾರೆ. ಪೊಲೀಸರ ಬಿಗಿ ಭದ್ರತೆಯಲ್ಲಿ ಇವರನ್ನು ಐದು ಬಸ್‌ಗಳಲ್ಲಿ ಶಿಬಿರದಿಂದ ಕಳುಹಿಸಿಕೊಡಲಾಯಿತು.

‘ಆಡಳಿತವು ಜನಸಾಮಾನ್ಯರ ಹಿತಾಸಕ್ತಿಯನ್ನು ಕಾಯುತ್ತದೆಯೇ ಎಂಬುದನ್ನು ನಾವು ಕಾಯ್ದು ನೋಡುತ್ತೇವೆ’ ಎಂದು ಟಿಡಿಪಿಯ ರಾಜ್ಯ ಘಟಕದ ಅಧ್ಯಕ್ಷ ಕೆ. ವೆಂಕಟರಾವ್‌ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು