ಚಿಕೂನ್‌ಗುನ್ಯಾಕ್ಕೆ ಹುಣಸೆ ಬೀಜ ಮದ್ದು

7
ಐಐಟಿ ರೂರ್ಕಿ ಸಂಶೋಧಕರ ಸಾಧನೆ

ಚಿಕೂನ್‌ಗುನ್ಯಾಕ್ಕೆ ಹುಣಸೆ ಬೀಜ ಮದ್ದು

Published:
Updated:
Deccan Herald

ನವದೆಹಲಿ: ರೋಗಿಯನ್ನು ಹಣ್ಣುಗಾಯಿ, ನೀರುಗಾಯಿ ಮಾಡುವ ಚಿಕೂನ್‌ಗುನ್ಯಾ ರೋಗಕ್ಕೆ ರೂರ್ಕಿ ಐಐಟಿ ‍ಪ್ರಾಧ್ಯಾಪಕರು ಔಷಧಿ ಪತ್ತೆ ಹಚ್ಚಿದ್ದಾರೆ.

ಹುಣಸೆ ಬೀಜ ಚಿಕೂನ್‌ಗುನ್ಯಾಕ್ಕೆ ದಿವ್ಯ ಔಷಧಿಯಂತೆ ಕೆಲಸ ಮಾಡುತ್ತದೆ ಎಂದು ಸಂಶೋಧಕರು ಹೇಳಿಕೊಂಡಿದ್ದಾರೆ. 

ಹುಣಸೆ ಬೀಜದಲ್ಲಿ ಹೇರಳವಾಗಿರುವ ಪ್ರೊಟೀನ್‌ನಲ್ಲಿ ಚಿಕೂನ್‌ಗುನ್ಯಾ ವೈರಾಣುವನ್ನು ನಿಯಂತ್ರಿಸುವ ನಿರೋಧಕ ಶಕ್ತಿ ಇರುವುದನ್ನು ಕಂಡುಕೊಂಡಿದ್ದಾಗಿ ಸಂಶೋಧಕರು ಹೇಳಿದ್ದಾರೆ.

ಹುಣಸೆ ಬೀಜದ ಪ್ರೊಟೀನಲ್ಲಿರುವ ಲೆಕ್ಟಿನ್‌ ಎಂಬ ನೈಸರ್ಗಿಕ ರಾಸಾಯನಿಕ ಬಳಸಿ ವೈರಾಣು ನಿರೋಧಕ ಔಷಧವನ್ನು ಸಂಶೋಧಕರು ಅಭಿವೃದ್ಧಿಪಡಿಸುತ್ತಿದ್ದಾರೆ. ಅದರ ಪೇಟೆಂಟ್‌ಗಾಗಿ ಈಗಾಗಲೇ ಅರ್ಜಿಯನ್ನೂ ಸಲ್ಲಿಸಿದ್ದಾರೆ.

ಭಾರತದ ಅಡುಗೆಯಲ್ಲಿ ಸಾಮಾನ್ಯವಾಗಿ ಬಳಸುವ ಹುಣಸೆಯಲ್ಲಿ ವೈದ್ಯಕೀಯ ಗುಣಗಳಿದ್ದು, ಚಿಕೂನ್‌ಗುನ್ಯಾ ಸೇರಿದಂತೆ ಅನೇಕ ರೋಗಗಳನ್ನು ಸಂಪೂರ್ಣವಾಗಿ ವಾಸಿ ಮಾಡುತ್ತದೆ. ವಾಂತಿ–ಭೇದಿ, ಅತಿಸಾರ, ಹೊಟ್ಟೆ ನೋವು, ಬ್ಯಾಕ್ಟೀರಿಯಾ ಸೋಂಕು, ಗಾಯ, ಮಲಬದ್ಧತೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಗ್ರಾಮೀಣ ಭಾಗಗಳಲ್ಲಿ ಹುಣಸೆ ಮರದ ತೊಗಟೆ, ಬೀಜ, ಬೇರು ಮತ್ತು ಎಲೆಯನ್ನು ಮನೆ ಔಷಧದಂತೆ ಬಳಸಲಾಗುತ್ತದೆ ಎನ್ನುತ್ತಾರೆ ರೂರ್ಕಿ ಐಐಟಿ ಪ್ರಾಧ್ಯಾಪಕ ಶೈಲಿ ತೋಮರ್‌.

ಚಿಕೂನ್‌ಗುನ್ಯಾ ‘ಆಲ್ಫಾ ವೈರಾಣು’ ಸೋಂಕಿನಿಂದ ಬರುವ ರೋಗ. ಚಿಕೂನ್‌ಗುನ್ಯಾ ಸೇರಿದಂತೆ ಆಲ್ಫಾ ವೈರಾಣುಗಳಿಂದ ಉಂಟಾಗುವ ಅನೇಕ ರೋಗಗಳಿಗೆ ಸಿದ್ಧ ಮತ್ತು ನಿರ್ದಿಷ್ಟ ಔಷಧಗಳು ಸದ್ಯಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. 

ರೋಗ ಲಕ್ಷಣಗಳಿಗೆ ಚಿಕಿತ್ಸೆ ನೀಡಿ ರೋಗವನ್ನು ಹದ್ದುಬಸ್ತಿನಲ್ಲಿ ಇಡಲಾಗುತ್ತಿದೆ ಎನ್ನುತ್ತಾರೆ ಸಂಶೋಧಕರಲ್ಲಿ ಒಬ್ಬರಾಗಿರುವ ಪ್ರಾಧ್ಯಾಪಕ ಪ್ರವೀಂದ್ರ ಕುಮಾರ್‌.

ಔಷಧಿ ಹೇಗೆ ಕೆಲಸ ಮಾಡುತ್ತದೆ?
ನೈಸರ್ಗಿಕವಾಗಿ ಸಸ್ಯಗಳಲ್ಲಿ ದೊರೆಯುವ ಲೆಕ್ಟಿನ್‌ ಪ್ರೊಟೀನ್‌ಗಳಲ್ಲಿರುವ ಗ್ಲೈಕಾನ್‌ ಶುಗರ್ಸ್‌ (ನೈಸರ್ಗಿಕ ಸಕ್ಕರೆ ಅಂಶ) ಅಂಶವನ್ನು ಎಚ್‌ಐವಿ, ಎಚ್‌ಪಿವಿ ಸೇರಿದಂತೆ ಎಲ್ಲ ಬಗೆಯ ವೈರಾಣು ರೋಗಗಳ ಚಿಕಿತ್ಸೆಗೆ ಬಳಸಲಾಗುತ್ತದೆ.

ಹುಣಸೆ ಬೀಜದಲ್ಲಿ ಹೇರಳವಾಗಿರುವ ಲೆಕ್ಟಿನ್‌ ಪ್ರೊಟೀನ್‌ನಲ್ಲಿರುವ ಎನ್‌–ಅಸಿಟೈಲ್‌ಗ್ಲುಕೋಸಮೈನ್‌ (ಎನ್‌ಎಜಿ) ಗ್ಲೈಕಾನ್‌ ಅಂಶವು ವೈರಾಣುಗಳು ದೇಹದೊಳಗೆ ಪ್ರವೇಶಿಸದಂತೆ ತಡೆಯುತ್ತವೆ. ಒಂದು ವೇಳೆ ಪ್ರವೇಶಿಸಿದರೂ ಅವು ಬೆಳೆಯದಂತೆ ನೋಡಿಕೊಳ್ಳುತ್ತವೆ.

ಕ್ರೋಮಾಟೋಗ್ರಫಿ ವಿಧಾನದಿಂದ ಹುಣಸೆ ಬೀಜದಿಂದ ಲೆಕ್ಟಿನ್‌ ಪ್ರೊಟೀನ್‌ ಬೇರ್ಪಡಿಸಲಾಗುತ್ತದೆ.

ಎಂಜೈಮ್‌ ಲಿಂಕ್ಡ್‌ ಇಮ್ಯೂನ್ಯೂ ಸಾರ್ಬೆಂಟ್‌ ಅಸ್ಸೆ (ಎಲಿಸಾ) ವಿಧಾನದ ಮೂಲಕ ಗ್ಲೈಕಾನ್‌ ಮತ್ತು ಲ್ಯಾಕ್ಟಿನ್‌ ಪ್ರೊಟೀನ್‌ ಬೆರಸಿ ಮಾತ್ರೆ ತಯಾರಿಸುವ ಯತ್ನದಲ್ಲಿ ಸಂಶೋಧಕರಿದ್ದಾರೆ.
**
ಲೆಕ್ಟಿನ್‌ ಚಿಕಿತ್ಸೆಯಿಂದ ಚಿಕುನ್‌ ಗುನ್ಯಾ ವೈರಾಣು ಶೇ 64ರಷ್ಟು ಶಕ್ತಿ ಕಳೆದುಕೊಳ್ಳುತ್ತದೆ. ವೈರಾಣುವಿನ ಆರ್‌ಎನ್‌ಎ ಅಂಗರಚನೆ ಕೂಡ ಅರ್ಧದಷ್ಟು ನಾಶವಾಗುತ್ತದೆ
- ಶೈಲಿ ತೋಮರ್‌, ರೂರ್ಕಿ ಐಐಟಿ ಪ್ರಾಧ್ಯಾಪಕ

ಬರಹ ಇಷ್ಟವಾಯಿತೆ?

 • 22

  Happy
 • 4

  Amused
 • 2

  Sad
 • 0

  Frustrated
 • 3

  Angry

Comments:

0 comments

Write the first review for this !