ಬುಧವಾರ, ಜುಲೈ 28, 2021
29 °C
ಆಮದು ವಸ್ತುಗಳ ಮೇಲೆ ನಿರ್ಬಂಧ, ಸುಂಕ ಹೇರಲು ಚಿಂತನೆ

ಗಡಿ ಸಂಘರ್ಷದ ಪರಿಣಾಮ: ಚೀನಾದ ಸರಕಿಗೆ ಅಂಕುಶ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಗಾಲ್ವನ್‌ ಕಣಿವೆಯಲ್ಲಿ ಭಾರತ–ಚೀನಾ ಸೈನಿಕರ ನಡುವಣ ಹಿಂಸಾತ್ಮಕ ಬಡಿದಾಟವು ಆರ್ಥಿಕವಾಗಿ ಚೀನಾಕ್ಕೆ ಹೊಡೆತ ನೀಡುವ ಸಾಧ್ಯತೆ ದಟ್ಟವಾಗಿದೆ. ಚೀನಾದ ಸರಕುಗಳಿಗೆ ಪರ್ಯಾಯದ ಹುಡುಕಾಟದಿಂದ ಹಿಡಿದು ಆಮದು ಸುಂಕ ಹೆಚ್ಚಳದವರೆಗಿನ ಹಲವು ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರವು ಚಿಂತನೆ ನಡೆಸುತ್ತಿದೆ.

ಚೀನಾದ ಯಾವೆಲ್ಲ ಸರಕುಗಳ ಆಮದು ನಿಲ್ಲಿಸಬಹುದು ಎಂಬ ಪಟ್ಟಿ ಸಿದ್ಧವಾಗುತ್ತಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಚೀನಾ ಆಟಿಕೆಗಳು, ಎಲೆಕ್ಟ್ರಾನಿಕ್‌ ಉಪಕರಣಗಳು, ಗ್ರಾಹಕ ಬಳಕೆ ಸರಕುಗಳಿಗೆ ಭಾರತದ ಬಾಗಿಲು ಮುಚ್ಚಬಹುದು. 

‘ಸ್ವಾವಲಂಬನೆಯ ದೊಡ್ಡ ನೀತಿಯ ಭಾಗವಾಗಿ ಇಂತಹ ನಿರ್ಧಾರಕ್ಕೆ ಬರಲಾಗುತ್ತಿದೆ. ಆಮದು ಕಡಿತದ ನಿರ್ಧಾರವು ಯಾವುದೇ ಒಂದು ದೇಶವನ್ನು ಗಮನದಲ್ಲಿ ಇರಿಸಿಕೊಂಡಿಲ್ಲ. ಸಾಧ್ಯ ಇದ್ದಲ್ಲೆಲ್ಲ ಆಮದು ಕಡಿತವು ಭಾರತದ ನೀತಿಯಾಗಲಿದೆ’ ಎಂದು ಅಧಿಕೃತ ಮೂಲಗಳು ಹೇಳಿವೆ. 

ಆಮದಾಗುವ 350ಕ್ಕೂ ಹೆಚ್ಚು ಸರಕುಗಳ ಮೇಲೆ ಸದ್ಯದಲ್ಲೇ ನಿರ್ಬಂಧ ಹೇರಲಾಗುವುದು. ಇದು ಜಗತ್ತಿನ ಯಾವುದೇ ದೇಶದಿಂದ ಆಮದು ಮಾಡುವ ಸರಕು ಆಗಿರಬಹುದು ಎಂದು ಹೇಳಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಚೀನಾವು ಭಾರತಕ್ಕೆ ಬಹಳಷ್ಟು ಸರಕುಗಳನ್ನು ರಫ್ತು ಮಾಡುತ್ತಿದೆ. 

ಚೀನಾ ಮತ್ತು ಇತರ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿರುವ ನೂರು ಸರಕುಗಳ ಮೇಲಿನ ಸುಂಕ ಹೆಚ್ಚಳದ ಪ್ರಸ್ತಾವವೂ ಇದೆ. 

ಎಲೆಕ್ಟ್ರಿಕಲ್ ಯಂತ್ರ, ಅಣು ರಿಯಾಕ್ಟರ್‌, ರಾಸಾಯನಿಕ, ರಸಗೊಬ್ಬರ, ವಾಹನ ಬಿಡಿ ಭಾಗಗಳು, ಕಬ್ಬಿಣ, ಉಕ್ಕಿನ ವಸ್ತುಗಳು ಚೀನಾದಿಂದ ಭಾರತ ಆಮದು ಮಾಡಿಕೊಳ್ಳುತ್ತಿರುವ ಪ್ರಮುಖ ಸರಕುಗಳು. ಮೊಬೈಲ್‌, ಹವಾ ನಿಯಂತ್ರಕ, ಜವಳಿ ಮತ್ತು ಚರ್ಮದ ವಸ್ತುಗಳು ಕೂಡ ದೊಡ್ಡ ಪ್ರಮಾಣದಲ್ಲಿ ಆಮದಾಗುತ್ತಿವೆ. ಜನರಿಕ್‌ ಔಷಧಗಳಲ್ಲಿ ಚೀನಾದ ಪಾಲು ಶೇ 70ಕ್ಕೂ ಹೆಚ್ಚು. ಪ್ಲಾಸ್ಟಿಕ್‌ ವಸ್ತುಗಳ ಪ್ರಮಾಣ ಶೇ 82ರಷ್ಟಿದೆ. ಎಲೆಕ್ಟ್ರಿಕಲ್‌ ಯಂತ್ರಗಳ ಆಮದು ಪ್ರಮಾಣವು ಶೇ 60ರಷ್ಟಿದೆ.

ಗಾಲ್ವನ್‌: ಚೀನಾ ಪ್ರತಿಪಾದನೆ ಅರ್ಥಹೀನ

ಗಾಲ್ವನ್‌ ಕಣಿವೆ ತನ್ನದು ಎಂಬ ಚೀನಾದ ಪ್ರತಿಪಾದನೆಯನ್ನು ಭಾರತ ತಿರಸ್ಕರಿಸಿದೆ. 

ಗಾಲ್ವನ್‌ ಕಣಿವೆಯ ಮೇಲೆ ಚೀನಾದ ಹಕ್ಕು ಮಂಡನೆಯು ‘ಉತ್ಪ್ರೇಕ್ಷಿತ ಮತ್ತು ಅಸಮರ್ಥನೀಯ’. ಎರಡೂ ದೇಶಗಳ ವಿದೇಶಾಂಗ ಸಚಿವರಾದ ಎಸ್‌. ಜೈಶಂಕರ್‌ ಮತ್ತು ವಾಂಗ್‌ ಯಿ ನಡುವೆ ಬುಧವಾರ ನಡೆದ ದೂರವಾಣಿ ಸಂಭಾಷಣೆಯಲ್ಲಿ ಒಪ್ಪಿತವಾದ ವಿಚಾರಗಳಿಗೆ ಚೀನಾದ ಈಗಿನ ಹೇಳಿಕೆಯು ವ್ಯತಿರಿಕ್ತವಾಗಿದೆ ಎಂದು ಭಾರತ ಹೇಳಿದೆ. 

ಕಳೆದ ಆರು ದಶಕಗಳಿಂದ ಭಾರತದ ವಶದಲ್ಲಿಯೇ ಇದ್ದ ಗಾಲ್ವನ್‌ ಕಣಿವೆಯ ಮೇಲೆ ಹಕ್ಕು ಸಾಧಿಸಲು ಚೀನಾ ಆರಂಭಿಸಿದ್ದು ಕಳೆದ ತಿಂಗಳು. ಸೋಮವಾರ ರಾತ್ರಿಯ ಸಂಘರ್ಷದ ನಂತರ ಚೀನಾ ಸೇನೆಯ ವಕ್ತಾರ ಮತ್ತು ಅಲ್ಲಿನ ವಿದೇಶಾಂಗ ಸಚಿವಾಲಯವು ಗಾಲ್ವನ್‌ ಕಣಿವೆ ತಮ್ಮದು ಎಂದು ಹೇಳಿವೆ. ಭಾರತದ ಯೋಧರು ಗಡಿಯನ್ನು ದಾಟಿ ಆ ಪ್ರದೇಶಕ್ಕೆ ಹೋಗಿದ್ದಾರೆ ಎಂದಿವೆ.

ವಿವಾದಾತ್ಮಕ ಗಡಿಯಲ್ಲಿ ಆಗಾಗ ಮುಖಾಮುಖಿ ನಡೆಯುತ್ತಿದ್ದರೂ ಗಾಲ್ವನ್‌ ಕಣಿವೆಯ ವಿಚಾರದಲ್ಲಿ ಈವರೆಗೆ ವಿವಾದ ಉಂಟಾಗಿರಲಿಲ್ಲ. ಇಲ್ಲಿ ಇದ್ದ ಭಾರತದ ಗಸ್ತು ಠಾಣೆಯೊಂದನ್ನು 1962ರಲ್ಲಿ ಒಮ್ಮೆ ಮಾತ್ರ ಚೀನಾದ ಸೈನಿಕರು ನೆಲಸಮ ಮಾಡಿದ್ದರು. 

ಭಾರತದ ಕೆಲವು ಸೈನಿಕರನ್ನು ಚೀನಾ ಸೆರೆಹಿಡಿದಿದೆ ಎಂಬುದು ಸುಳ್ಳು ಸುದ್ದಿ ಎಂದು ಜೈಶಂಕರ್‌ ಹೇಳಿದ್ದಾರೆ. ಕೆಲವು ಯೋಧರು ಚೀನಾದ ವಶದಲ್ಲಿದ್ದಾರೆ ಎಂದು ಕೆಲವು ವಿದೇಶಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. 

ಚೀನಾ ಕಂಪನಿಯ ಗುತ್ತಿಗೆ ರದ್ದು?

ರೈಲ್ವೆ ಸಿಗ್ನಲ್‌ ಅಳವಡಿಕೆ ಮತ್ತು ದೂರಸಂಪರ್ಕ ಮೂಲಸೌಕರ್ಯ ನಿರ್ಮಿಸಲು ಚೀನಾದ ಕಂಪನಿಯೊಂದಕ್ಕೆ ನೀಡಿರುವ ಗುತ್ತಿಗೆಯನ್ನು ರದ್ದು ಮಾಡಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಚೀನಾದ ಕಂಪನಿಗಳು ತಯಾರಿಸುವ ಉಪಕರಣಗಳನ್ನು ಬಳಸದಂತೆ ಸರ್ಕಾರಿ ಸ್ವಾಮ್ಯದ ದೂರ ಸಂಪರ್ಕ ಸೇವಾ ಸಂಸ್ಥೆ ಬಿಎಸ್‌ಎನ್‌ಎಲ್‌ಗೆ ಸರ್ಕಾರವು ಬುಧವಾರವಷ್ಟೇ ಸೂಚಿಸಿತ್ತು.

ರೈಲ್ವೆಯು ನೀಡಿದ ಗುತ್ತಿಗೆ ಕಾಮಗಾರಿಯ ಪ್ರಗತಿ ಬಹಳ ಮಂದಗತಿಯಲ್ಲಿದೆ. ಯೋಜನೆಯನ್ನು ಗಡುವಿನೊಳಗೆ ಪೂರ್ಣಗೊಳಿಸಲು ಚೀನಾದ ಕಂಪನಿಗೆ ಸಾಧ್ಯವಾಗುವಂತೆ ಕಾಣುತ್ತಿಲ್ಲ ಎಂಬ ಕಾರಣಕ್ಕೆ ಗುತ್ತಿಗೆ ರದ್ದು ಮಾಡಲು ರೈಲ್ವೆ ನಿರ್ಧರಿಸಿದೆ. ಆದರೆ, ಗಾಲ್ವನ್‌ ಕಣಿವೆಯಲ್ಲಿನ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. 

ಕಾನ್ಪುರದಿಂದ ದೀನ ದಯಾಳ್‌ ಉಪಾಧ್ಯಾಯ (ಹಿಂದಿನ ಮೊಗಲ್‌ಸರಾಯ್‌) ನಿಲ್ದಾಣದವರೆಗಿನ 417 ಕಿ.ಮೀ. ಉದ್ದದ ಸರಕು ಸಾಗಣೆ ಮಾರ್ಗಕ್ಕೆ ಸಿಗ್ನಲ್‌ ಮತ್ತು ದೂರಸಂಪರ್ಕ ಮೂಲ ಸೌಕರ್ಯ ನಿರ್ಮಾಣದ ಯೋಜನೆಯನ್ನು ಚೀನಾದ ಬೀಜಿಂಗ್‌ ನ್ಯಾಷನಲ್‌ ರೈಲ್ವೆ ರಿಸರ್ಚ್‌ ಎಂಡ್‌ ಡಿಸೈನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸಿಗ್ನಲ್‌ ಎಂಡ್‌ ಕಮ್ಯುನಿಕೇಷನ್‌ ಗ್ರೂಪ್‌ ಲಿ.ಗೆ ನೀಡಲಾಗಿತ್ತು.ಇದು ₹471 ಕೋಟಿ ಮೊತ್ತದ ಯೋಜನೆ. 

ಇದು ವಿಶ್ವ ಬ್ಯಾಂಕ್‌ ಅನುದಾನದ ಯೋಜನೆ. ಹಾಗಾಗಿ, ಗುತ್ತಿಗೆ ರದ್ದು ಪಡಿಸಲು ವಿಶ್ವಬ್ಯಾಂಕ್‌ ಅನ್ನು ಕೋರಲಾಗಿದೆ. ಈ ಕೋರಿಕೆಗೆ ಒಪ್ಪಿಗೆ ದೊರೆಯದಿದ್ದರೆ, ರೈಲ್ವೆಯೇ ಈ ಯೋಜನೆಗೆ ಹಣ ನೀಡಿ, ಹೊಸ ಕಂಪನಿಗೆ ಗುತ್ತಿಗೆ ನೀಡಬಹುದಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಗುತ್ತಿಗೆಗೆ ಆಕ್ಷೇಪ

ದೆಹಲಿ–ಮೀರಠ್‌ ಸೆಮಿ ಹೈಸ್ಪೀಡ್‌ ರೈಲು ಮಾರ್ಗ ನಿರ್ಮಾಣದ ಗುತ್ತಿಗೆಯನ್ನು ಚೀನಾದ ಕಂಪನಿಗೆ ನೀಡಲು ಮುಂದಾಗಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. 

₹1,126 ಕೋಟಿ ಮೊತ್ತದ ಈ ಕಾಮಗಾರಿಗೆ ಹಣಕಾಸು ಟೆಂಡರ್‌ ಸಲ್ಲಿಸಲು ಟಾಟಾ ಸಹಭಾಗಿತ್ವದ ಎಸ್‌ಕೆಇಸಿ (ಕೊರಿಯಾ),  ಎಸ್‌ಟಿಇಸಿ (ಚೀನಾ), ಎಲ್‌ ಎಂಡ್‌ ಟಿ (ಭಾರತ), ಗುಲೇರ್‌ಮಾಕಗಿರ್‌ (ಟರ್ಕಿ) ಆಯ್ಕೆಯಾಗಿದ್ದವು. ಅತಿ ಕಡಿಮೆ ಮೊತ್ತ ನಮೂದಿಸಿದ್ದ ಎಸ್‌ಟಿಇಸಿಗೆ ಗುತ್ತಿಗೆ ನೀಡಲಾಗುವುದು ಎಂದು ಹೇಳಲಾಗಿದೆ. 

ವಿಶ್ವ ಬ್ಯಾಂಕ್‌, ಏಷ್ಯಾ ಅಭಿವೃದ್ಧಿ ಬ್ಯಾಂಕ್‌ಗಳಂತಹ ಅಂತರರಾಷ್ಟ್ರೀಯ ಸಂಸ್ಥೆಗಳ ನೆರವಿನ ಯೋಜನೆಗಳನ್ನು ವಿದೇಶಿ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದ್ದರೆ ಅದನ್ನು ಭಾರತ ಸರ್ಕಾರ ರದ್ದುಪಡಿಸುವುದು ಸಾಧ್ಯವಿಲ್ಲ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ವಿಳಂಬ ಅಥವಾ ಗುಣಮಟ್ಟ ಕಳಪೆ ಎಂಬ ಕಾರಣಕ್ಕೆ ಗುತ್ತಿಗೆ ರದ್ದುಪಡಿಸುವಂತೆ ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಸರ್ಕಾರ ಕೋರಬಹುದು. ಆದರೆ, ಅಂತಿಮ ನಿರ್ಧಾರವು ನೆರವು ನೀಡುವ ಸಂಸ್ಥೆಗಳದ್ದೇ ಆಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಚೀನಾದ ಕಂಪನಿಗಳಿಗೆ ಗುತ್ತಿಗೆ ನೀಡುವುದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ಷೇಪ ವ್ಯಕ್ತವಾದ ಬಳಿಕ,  ಸ್ಪಷ್ಪನೆ ನೀಡಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು