ಭಾನುವಾರ, ಜೂಲೈ 12, 2020
29 °C
ನೆಟ್ಟಿಗರ ಪ್ರಶ್ನೆ

‘ಮೈ ಲಾರ್ಡ್‌ ಹೆಲ್ಮಟ್ ಎಲ್ಲಿ': ಹಾರ್ಲೆ ಡೇವಿಡ್‌ಸನ್‌ ಬೈಕ್‌ ಏರಿದ ಸಿಜೆಐ ಬೊಬ್ಡೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಕಪ್ಪು ಗೌನ್‌ ಧರಿಸಿ ಗಂಭೀರವಾಗಿ ಸುಪ್ರೀಂ ಕೋರ್ಟ್‌ ಪೀಠದಲ್ಲಿ ಆಸೀನರಾಗಬೇಕಿದ್ದ ಮುಖ್ಯ ನ್ಯಾಯಮೂರ್ತಿ ಶರದ್‌ ಅರವಿಂದ್‌ ಬೋಬ್ಡೆ (ಎಸ್‌.ಎ. ಬೋಬ್ಡೆ) ಕಾಲೇಜು ವಿದ್ಯಾರ್ಥಿಯಂತೆ ಹಾರ್ಲೆ ಡೇವಿಡ್‌ಸನ್ ಬೈಕ್ ಏರಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಮಹಾರಾಷ್ಟ್ರದ ನಾಗಪುರದಲ್ಲಿರುವ ಜಸ್ಟೀಸ್‌ ಬೊಬ್ಡೆ ಭಾನುವಾರ್‌ ವೀಕೆಂಡ್‌ ಮೂಡ್‌ನಲ್ಲಿದ್ದರು. ಕಪ್ಪು ಪ್ಯಾಂಟ್,‌ ಟಿ–ಶರ್ಟ್‌ನಲ್ಲಿ ಸ್ಟೈಲಿಶ್‌ ಆಗಿ ಹಾರ್ಲೆ ಡೇವಿಡ್‌ಸನ್ ಸೂಪರ್‌ ಬೈಕ್‌ ಏರಿದರು. ಕಪ್ಪು ಬಣ್ಣದ ಲಿಮಿಟೆಡ್‌ ಎಡಿಶನ್‌ ಸಿವಿಒ 2020 ಬೈಕ್‌ ಏರಿರುವ ಬೋಬ್ಡೆ ಅವರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. 

ಮೊದಲಿನಿಂದಲೂ ಬೈಕ್‌ಗಳ ಬಗ್ಗೆ ಕ್ರೇಜ್ ಇರುವ ಬೊಬ್ಡೆ ಕಳೆದ ವರ್ಷ ಹಾರ್ಲೆ ಡೇವಿಡ್‌ಸನ್ ಬೈಕ್‌‌ ಓಡಿಸುವಾಗ ಬಿದ್ದು ಕಾಲಿನ ಮೂಳೆ ಮುರಿದುಕೊಂಡಿದ್ದರು. ಅಷ್ಟಾದರೂ ಅವರಿಗೆ ಬೈಕ್‌ ಮೋಹ ಕಡಿಮೆಯಾಗಿಲ್ಲ. ಬೊಬ್ಡೆ ಅವರಿಗೆ ಕೇವಲ ಬೈಕ್‌ಗಳಲ್ಲ ದುಬಾರಿ ಕಾರು ಮತ್ತು ನಾಯಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಫೋಟೊಗ್ರಫಿ ಕೂಡ ಅವರ ಮೆಚ್ಚಿನ ಹವ್ಯಾಸಗಳಲ್ಲಿ ಒಂದು. 

ಈ ಹೈ ಎಂಡ್‌ ಸೂಪರ್‌ ಬೈಕ್ ಬೊಬ್ಡೆ ಅವರದ್ದಲ್ಲ. ನಾಗಪುರ ಬಿಜೆಪಿ ನಾಯಕ ಸೊನ್ಬಾ ಮುಸಳೆ ಅವರ ಪುತ್ರ ರೋಹಿತ್‌ ಮುಸಳೆ ಎಂಬುವವರಿಗೆ ಸೇರಿದ್ದು. ಸೊನ್ಬಾ ಮುಸಳೆ 2014ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಈ ವಿಷಯವನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸ್ತಾಪಿಸಿದ್ದಾರೆ. ಬೈಕ್‌ ನೋಂದಣಿ ಸಂಖ್ಯೆ ಮತ್ತು ಮಾಲೀಕರ ಹೆಸರಿನ ದಾಖಲೆಗಳನ್ನು ಪೋಸ್ಟ್‌ ಮಾಡಿದ್ದಾರೆ. 

ಬೊಬ್ಡೆ ಅವರು ಮಾಸ್ಕ್‌ ಮತ್ತು ಹೆಲ್ಮೆಟ್‌ ಧರಿಸದ ಬಗ್ಗೆ ಕೆಲವರು ಆಕ್ಷೇಪ ಎತ್ತಿದ್ದಾರೆ. ಇನ್ನೂ ಕೆಲವರು ಸಾಮಾಜಿಕ ಅಂತರ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ. ‘ಮಾಸ್ಕ್, ಹೆಲ್ಮೆಟ್‌ ಎಲ್ಲಿವೆ ಮೈ ಲಾರ್ಡ್! ಕಾನೂನು ರಕ್ಷಕರಿಂದಲೇ ಕಾನೂನು ಉಲ್ಲಂಘನೆ. ನೋ ಹೆಲ್ಮೆಟ್‌, ನೋ ಮಾಸ್ಕ್’‌ ಎಂದು ಕೃಷ್ಣ ಮತ್ತು ತರುಣ್‌ ಎಂಬುವರು ಟ್ವೀಟ್‌ ಮಾಡಿದ್ದಾರೆ. 

‘ಅಧಿಕಾರ, ಹುದ್ದೆ, ಸ್ಥಾನಮಾನಗಳು ಇಂದು ಬರುತ್ತವೇ, ನಾಳೆ ಹೋಗುತ್ತವೆ. ಅವು ಶಾಶ್ವತವಲ್ಲ.ಜೀವನ ಪ್ರೀತಿ ದೊಡ್ಡದು.  ಹವ್ಯಾಸಗಳು ಮುಖ್ಯ. ಇರುವ ಒಂದು ಜೀವನವನ್ನು ಚೆನ್ನಾಗಿ ಆಸ್ವಾದಿಸಬೇಕು’ ಎಂದು ವಿವೇಕ್‌ ಟಾಂಕಾ ಅಭಿಪ್ರಾಯಪಟ್ಟಿದ್ದಾರೆ. ಮುಖ್ಯ ನ್ಯಾಯಮೂರ್ತಿ ವರ್ತನೆಯನ್ನು ಅನೇಕರು ನೇರವಾಗಿ ಪ್ರಶ್ನಿಸಿದರೆ, ಇನ್ನೂ ಕೆಲವರು, ‘ಇದೊಂದು ಒಳ್ಳೆಯ ಅಭಿರುಚಿ. ಕೀಪ್‌ ಇಟ್‌ ಅಪ್‌’ ಎಂದು ಹುರುದುಂಬಿಸಿದ್ದಾರೆ.    

ವಿವಾದಿತ ರಾಮ ಜನ್ಮಭೂಮಿ ತೀರ್ಪು ನೀಡಿದ ಐವರು‌ ನ್ಯಾಯಮೂರ್ತಿಗಳ ಪೀಠದಲ್ಲಿ ನ್ಯಾ. ಬೊಬ್ಡೆ ಕೂಡ ಒಬ್ಬರು. ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ನ್ಯಾಯಾಲಯ ಕಲಾಪಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಮೂಲತಃ ಮಹಾರಾಷ್ಟ್ರದವರಾದ ನ್ಯಾ.ಬೊಬ್ಡೆ ಅವರು 2013 ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ನೇಮಕವಾದರು. ಕಳೆದ ನವೆಂಬರ್‌ನಲ್ಲಿ ನ್ಯಾ.ರಂಜನ್‌ ಗೊಗೋಯ್‌ ನಿವೃತ್ತಿ ನಂತರ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಬೊಬ್ಡೆ ಅಧಿಕಾರ ವಹಿಸಿಕೊಂಡಿದ್ದಾರೆ. 

 
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು