ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿ ಆಲೋಚನೆಗಳ ವಿರುದ್ಧ ನಡೆಯನ್ನು ಕಾಂಗ್ರೆಸ್‌ ಹೊಂದಿದೆ: ಮೋದಿ

ದಂಡಿ ಉಪ್ಪಿನ ಸತ್ಯಾಗ್ರಹದ ಕುರಿತ ಬ್ಲಾಗ್‌ ಬರಹ
Last Updated 12 ಮಾರ್ಚ್ 2019, 9:35 IST
ಅಕ್ಷರ ಗಾತ್ರ

ನವದೆಹಲಿ: ‘ಗಾಂಧೀಜಿ ವಿರೋಧಿಸಿದ್ದ ಜಾತಿಯತೆ, ಭ್ರಷ್ಟಾಚಾರ, ಕೋಮುವಾದ ಮತ್ತು ಕುಟುಂಬ ರಾಜಕಾರಣ.. ಇವೆಲ್ಲವನ್ನೂ ಕಾಂಗ್ರೆಸ್‌ ಮೈಗೂಡಿಸಿಕೊಂಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಟೀಕಿಸಿದರು.

ಮಹಾತ್ಮ ಗಾಂಧಿ ಆರಂಭಿಸಿದ ದಂಡಿ ಉಪ್ಪಿನ ಸತ್ಯಾಗ್ರಹದ 89ನೇವರ್ಷಾಚರಣೆ ನಿಮಿತ್ತ ತಮ್ಮ ಬ್ಲಾಗ್‌ನಲ್ಲಿ 'ಬೊಗಸೆ ತುಂಬಾ ಉಪ್ಪು ತುಂಬಿದ ಕೈಗಳು ಸಾಮ್ರಾಜ್ಯವನ್ನು ಪ್ರಕ್ಷುಬ್ಧಗೊಳಿಸಿದಾಗ’ ಶೀರ್ಷಿಕೆ ಅಡಿ ಮೋದಿ ಲೇಖನ ಬರೆದಿದ್ದಾರೆ.

‘ಈ ದೇಶದ ಅತ್ಯಂತ ಬಡ ವ್ಯಕ್ತಿಯಸ್ಥಿತಿಬಗ್ಗೆ ಯೋಚಿಸಬೇಕು ಮತ್ತು ನಮ್ಮ ಕೆಲಸ ಆ ವ್ಯಕ್ತಿಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಎನ್ನುವುದನ್ನು ಚಿಂತಿಸಬೇಕು ಎಂದು ಗಾಂಧೀಜಿ ನಮಗೆ ಹೇಳಿಕೊಟ್ಟಿದ್ದಾರೆ. ನಮ್ಮ ಸರ್ಕಾರದ ಕೆಲಸ ಎಲ್ಲಾ ರೀತಿಯಿಂದಲೂ ಮಾದರಿಯಾಗಿದೆ ಮತ್ತು ಗಾಂಧೀಜಿ ಚಿಂತನೆಯನ್ನೇ ಪ್ರತಿಬಿಂಬಿಸುತ್ತಿದೆ ಎಂದು ಹೇಳುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ. ನಮ್ಮ ಯೋಜನೆಗಳು ದೇಶದಲ್ಲಿನ ಬಡತನವನ್ನು ನಿರ್ಮೂಲನೆ ಮಾಡಿವೆ, ಸಂವೃದ್ಧಿಯನ್ನು ತಂದಿವೆ. ಆದರೆ, ದುಃಖದ ವಿಚಾರವೆಂದರೆ ಗಾಂಧೀಜಿ ಆಲೋಚನೆಗಳ ವಿರುದ್ಧ ನಡೆಯನ್ನು ಕಾಂಗ್ರೆಸ್‌ ಹೊಂದಿದೆ’ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಆಡಳಿತದಲ್ಲಿದ್ದಾಗ ಜಾತಿ ವರ್ಗೀಕರಣ ಮತ್ತು ಅಸಮಾನತೆಯನ್ನು ಪಾಲಿಸಿದೆಎಂದೂ ಮೋದಿ ಆರೋಪಿಸಿದ್ದಾರೆ.

‘ಭಾರತದ ಸ್ವಾತಂತ್ರ್ಯದ ನಂತರ ಸೋದರತ್ವವನ್ನು ಎಲ್ಲೆಡೆ ನೆಲೆಗೊಳ್ಳಲಿದೆ.ಅಸಮಾನತೆ, ಜಾತಿ ವರ್ಗೀಕರಣ ಸಮಾಜವನ್ನು ಒಡೆಯಲಿದೆ’ ಎಂದು ಬಾಪು ಹೇಳುತ್ತಿದ್ದರು. ಮತ್ತು ಅವರ ಬಹಳಷ್ಟು ಕೆಲಸಗಳಲ್ಲಿಇದನ್ನೇ ಪ್ರತಿಪಾದಿಸಿದರು. ಆದರೆ, ಕಾಂಗ್ರೆಸ್‌ ಪಕ್ಷ ಮಾತ್ರಸಮಾಜವನ್ನು ಒಡೆಯುವ ಬಗ್ಗೆ ಕಿಂಚಿತ್ತು ಹಿಂಜರಿಯಲಿಲ್ಲ ಎನ್ನುವುದೇ ಬೇಸರದ ಸಂಗತಿ. ಬಹಳ ಹೀನಾಯವಾದ ಜಾತಿ ನರಮೇಧ ಮತ್ತುದಲಿತರ ಭೀಕರ ಹತ್ಯಾಕಾಂಡ ಎರಡೂ ಕಾಂಗ್ರೆಸ್ ಅಧಿಕಾರಾವಧಿಯಲ್ಲಿಯೇ ನಡೆದಿದೆ’ ಎಂದು ಬರೆದುಕೊಂಡಿದ್ದಾರೆ.

‘ಭ್ರಷ್ಟಾಚಾರ ಮತ್ತು ಕಾಂಗ್ರೆಸ್‌ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಯಾವುದೇ ಕ್ಷೇತ್ರದ ಹೆಸರು ಹೇಳಿದರೂ ಅಲ್ಲಿ ಕಾಂಗ್ರೆಸ್‌ನ ಹಗರಣ ಕಾಣಸಿಗುತ್ತದೆ. ರಕ್ಷಣಾ ಇಲಾಖೆ, ಟೆಲಿಕಾಂ, ಕೃಷಿ, ಗ್ರಾಮೀಣಾಭಿವೃದ್ಧಿ.. ಹೀಗೆ ಇದು ಸಾಗುತ್ತದೆ’ ಎಂದು ಆರೋಪಿಸಿದ್ದಾರೆ.

‘ನಿರ್ಲಿಪ್ತತೆ ಮತ್ತು ಅಗತ್ಯಕ್ಕಿಂತ ಹೆಚ್ಚು ಹಣ ಹೊಂದಿರುವುದು ಭ್ರಷ್ಟಾಚಾರ ಎಂಬ ವಿಚಾರಗಳ ಬಗ್ಗೆ ಬಾಪು ಮಾತನಾಡಿದ್ದಾರೆ. ಆದರೆ, ಕಾಂಗ್ರೆಸ್‌ ಮಾಡಿದ್ದು ತನ್ನ ಬ್ಯಾಂಕ್‌ ಖಾತೆಯನ್ನು ತುಂಬಿಸಿಕೊಳ್ಳುವುದು ಮತ್ತುಬಡವರಿಗೆ ನೀಡಬೇಕಾದ ಸೌಲಭ್ಯದ ಹಣದಲ್ಲಿ ವಿಲಾಸಿ ಜೀವನವನ್ನು ನಡೆಸುವುದು ಮಾತ್ರ. ಇನ್ನೂ ವಂಶಪಾರಂಪರ್ಯ ಆಡಳಿತವನ್ನು ಗಾಂಧೀಜಿ ವಿರೋಧಿಸಿದ್ದರು. ಕಾಂಗ್ರೆಸ್ ಪಕ್ಷ ಇಲ್ಲಿಯವರೆಗೆ ಮಾಡುತ್ತಿರುವುದೇ ಅದು’ ಎಂದು ಕುಟುಕಿದ್ದಾರೆ.

ಪ್ರಬಲರಿಗೆ ಸಿಗುವ ಅವಕಾಶ ದುರ್ಬಲರಿಗೂ ಸಿಗುವಂತೆ ಮಾಡುವುದೇ ಪ್ರಜಾಪ್ರಭುತ್ವದ ವಿಶೇಷ ಎಂಬುದು ಬಾಪುಅಭಿಪ್ರಾಯವಾಗಿತ್ತು. ಆದರೆ 1975ರಲ್ಲಿ ದೇಶದಲ್ಲಿ ತುರ್ತುಪರಿಸ್ಥಿತಿಯನ್ನು ಹೇರುವ ಮೂಲಕ ಕಾಂಗ್ರೆಸ್‌ ಪಕ್ಷವು ಪ್ರಜಾಪ್ರಭುತ್ವದ ಆಶಯಗಳನ್ನೇ ಬಲಿಕೊಟ್ಟಿತ್ತು. 356ನೇ ವಿಧಿಯನ್ನು ಕಾಂಗ್ರೆಸ್‌ ದುರುಪಯೋಗ ಪಡಿಸಿಕೊಂಡಿದೆ ಎಂದು ಹೇಳಿದ್ದಾರೆ.

ಹೀಗೆ ಕಾಂಗ್ರೆಸ್‌ ವಿರುದ್ಧ ಸಾಲು ಸಾಲು ಆರೋಪ ಮಾಡಿರುವ ಮೋದಿ, ಲೇಖನದ ಕೊನೆಯಲ್ಲಿ ತಮ್ಮ ಸರ್ಕಾರ ಗಾಂಧೀಜಿಯ ಹಾದಿಯಲ್ಲಿ ಸಾಗುತ್ತಿರುವುದೇ ಖುಷಿಯ ವಿಚಾರ. ಕಾಂಗ್ರೆಸ್‌ ಮುಕ್ತ ಭಾರತ ನಿರ್ಮಿಸುವ ಮೂಲಕ ಈ ದೇಶದ ಜನ ಶಕ್ತಿ ಗಾಂಧೀಜಿಯ ಕನಸು ನನಸು ಮಾಡುತ್ತಿದ್ದಾರೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT