ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃದು ಹಿಂದುತ್ವ ಕಾಂಗ್ರೆಸ್‌ ಪಕ್ಷವನ್ನು ಸೊನ್ನೆಗಿಳಿಸಬಹುದು: ಶಶಿ ತರೂರ್‌

ಬಹುಸಂಖ್ಯಾತರ ಓಲೈಕೆ ಮೂಲಕ ಪಕ್ಷ ಬಲಗೊಳ್ಳದು ಎಂದ ಹಿರಿಯ ನಾಯಕ
Last Updated 8 ಸೆಪ್ಟೆಂಬರ್ 2019, 14:44 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಜಾತ್ಯತೀತ ಸ್ವರೂಪವನ್ನು ಉಳಿಸಿಕೊಳ್ಳುವ ಕರ್ತವ್ಯ ಕಾಂಗ್ರೆಸ್‌ ಪಕ್ಷಕ್ಕೆ ಇದೆ ಎಂದು ಆ ಪಕ್ಷದ ಮುಖಂಡ ಶಶಿ ತರೂರ್‌ಹೇಳಿದ್ದಾರೆ.

ಬಹುಸಂಖ್ಯಾತರನ್ನು ಓಲೈಸುವ ಮೂಲಕ ಹಿಂದಿ ಭಾಷಿಕ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಪುನಶ್ಚೇತನಗೊಳಿಸುವುದು ಸಾಧ್ಯವಿಲ್ಲ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. ‘ಕೋಕ್‌ ಲೈಟ್‌’ (ಸಕ್ಕರೆರಹಿತ ಕೋಕಾ ಕೋಲಾ) ಇದ್ದ ಹಾಗೆ ‘ಹಿಂದುತ್ವ ಲೈಟ್‌’ (ಮೃದು ಹಿಂದುತ್ವ) ಎಂಬ ಧೋರಣೆಯನ್ನು ಅನುಸರಿಸಿದರೆ ಅದು ಕೊನೆಗೆ ಕಾಂಗ್ರೆಸ್‌ ಪಕ್ಷವನ್ನು ಸೊನ್ನೆಗೆ ಇಳಿಸಬಹುದು ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ದಿ ಹಿಂದೂ ವೇ: ಆ್ಯನ್‌ ಇಂಟ್ರಡಕ್ಷನ್‌ ಟು ಹಿಂದೂಯಿಸಂ’ ಎಂಬ ಕೃತಿಯ ಬಿಡುಗಡೆಗೆ ಮುನ್ನ ತರೂರ್‌ ಅವರು ಸಂದರ್ಶನ ನೀಡಿದ್ದಾರೆ.

ಈಗ ಅಧಿಕಾರದಲ್ಲಿ ಇರುವವರು ಪ್ರತಿಪಾದಿಸುತ್ತಿರುವ ಹಿಂದೂ ಧರ್ಮವು ನಿಜ ಅರ್ಥದ ಹಿಂದೂ ಧರ್ಮ ಅಲ್ಲವೇ ಅಲ್ಲ. ಬದಲಿಗೆ, ಭವ್ಯವಾದ ಧರ್ಮವೊಂದರ ಅತಿಘೋರ ವಿಕೃತಿ. ಇದು ರಾಜಕೀಯ ಮತ್ತು ಚುನಾವಣಾ ಲಾಭದ ಸಾಧನ ಮತ್ತು ಸಂಕುಚಿತ ಮನಸ್ಥಿತಿ ಎಂದು ಅವರು ಆರೋಪಿಸಿದ್ದಾರೆ.

ಸಮಾನ ಮನಸ್ಕ ಭಾರತೀಯರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಯುವ ಜನರಲ್ಲೂ ಬಹಳಷ್ಟು ಮಂದಿ ಇಂಥವರು ಇದ್ದಾರೆ. ಇತ್ತೀಚೆಗೆ ತೀವ್ರಗೊಳ್ಳುತ್ತಿರುವ ‘ದುರಭಿಮಾನದ ಪ್ರವೃತ್ತಿ’ಯನ್ನು ವಿರೋಧಿಸಲು ಇವರು ಕಟಿಬದ್ಧರಾಗಿದ್ದಾರೆ. ಭಾರತ ಎಂಬ ಚಿಂತನೆಯನ್ನು ವಿರೂಪಗೊಳಿಸುವುದನ್ನು ಅವರು ಖಂಡಿತ ತಡೆಯುತ್ತಾರೆ ಎಂಬ ಆಶಾಭಾವವನ್ನು ಅವರು ವ್ಯಕ್ತಪಡಿಸಿದ್ದಾರೆ.

‘ಬಿಜೆಪಿಯ ರೀತಿಯಲ್ಲಿ ಬಹುಸಂಖ್ಯಾತರನ್ನು ಓಲೈಸುವುದೇ ಹಿಂದಿ ಭಾಷಿಕ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಸಮಸ್ಯೆಗಳಿಗೆ ಉತ್ತರ ಎಂದು ಹೇಳುತ್ತಿರುವವರು ಪ್ರಮಾದ ಎಸಗುತ್ತಿದ್ದಾರೆ. ಮೂಲ ಮತ್ತು ಅದರ ಪೇಲವವಾದ ಅನುಕರಣೆಯ ನಡುವಣ ಆಯ್ಕೆಯನ್ನು ಮತದಾರರ ಮುಂದಿಟ್ಟರೆ ಅವರು ಪ್ರತಿಬಾರಿಯೂ ಮೂಲವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ’ ಎಂದು ಅವರು ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಹಿಂದಿ ಭಾಷಿಕ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷವು ಭಾರಿ ಹಿನ್ನಡೆ ಅನುಭವಿಸಿದೆ. ಇಲ್ಲಿ ಪಕ್ಷವನ್ನು ಪುನಶ್ಚೇತನಗೊಳಿಸಲು ಮೃದು ಹಿಂದುತ್ವದ ಮೊರೆ ಹೋಗಬೇಕು ಎಂದು ಪಕ್ಷದ ಒಳಗೆ ಮತ್ತು ಹೊರಗಿನಿಂದ ಸಲಹೆಗಳು ಬಂದಿದ್ದವು. ಅದಕ್ಕೆ ತರೂರ್‌ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT