ಸೋಮವಾರ, ಮಾರ್ಚ್ 1, 2021
30 °C

ಪೊಲೀಸ್ ಅಧಿಕಾರಿ ಸುಬೋಧ್ ಸಿಂಗ್ ಮೇಲೆ ದಾಳಿ ಪೂರ್ವಯೋಜಿತ ಕೃತ್ಯ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಗೋಹತ್ಯೆ ನಡೆದಿದೆ ಎಂದು ಆರೋಪಿಸಿದ ಗುಂಪೊಂದು ಉತ್ತರ ಪ್ರದೇಶದ ಬುಲಂದ್‌ಶಹರ್‌ ಜಿಲ್ಲೆಯ ಚಿಂಗರ್‌ವಾಟಿ ಪೊಲೀಸ್‌ ಹೊರಠಾಣೆ ಮೇಲೆ ಸೋಮವಾರ ನಡೆಸಿದ್ದ ದಾಳಿಯಲ್ಲಿ ಪೊಲೀಸ್‌ ಅಧಿಕಾರಿ ಸೇರಿ ಇಬ್ಬರು ಸಾವಿಗೀಡಾಗಿದ್ದರು.  ಈ ದಾಳಿಯಲ್ಲಿ ಸಾವಿಗೀಡಾದ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಈ ಹಿಂದೆ ದಾದ್ರಿ ಹತ್ಯಾ ಪ್ರಕರಣದ ತನಿಖೆ ನಡೆಸಿದ್ದವರಾಗಿದ್ದಾರೆ. ಆದ್ದರಿಂದ ಈ ಘಟನೆ ಪೂರ್ವಯೋಜಿತ ಕೃತ್ಯವೇ ಎಂಬ ಸಂದೇಹವೆದ್ದಿದೆ.

ಮನೆಯಲ್ಲಿ ಗೋಮಾಂಸ ಸಂಗ್ರಹಿಸಿ, ಸೇವನೆ ಮಾಡಿದ್ದಾರೆ ಎಂಬ ಆರೋಪದ  ಮೇಲೆ ಸೆಪ್ಟೆಂಬರ್ 28ರಂದು ದಾದ್ರಿಯಲ್ಲಿ ಜನರ ಗುಂಪೊಂದು ಇಖ್ಲಾಕ್ ಮೇಲೆ ಹಲ್ಲೆ ನಡೆಸಿತ್ತು. ಘಟನೆಯಲ್ಲಿ ಇಖ್ಲಾಕ್ ಮೃತಪಟ್ಟಿದ್ದರು. ಈ ಪ್ರಕರಣದ ತನಿಖೆ ನಡೆಸಿದ್ದು ಸುಬೋಧ್.  ಇಖ್ಲಾಕ್  ಮೇಲೆ ದಾಳಿ ನಡೆಸಿದವರನ್ನು ಬಂಧಿಸಲು ಕಾರಣವಾಗಿದ್ದು ಸುಭೋದ್ ಅವರ ತನಿಖೆ ಆಗಿತ್ತು. ಆದರೆ ತನಿಖೆಯನ್ನು ಪೂರ್ಣಗೊಳಿಸುವ ಮುನ್ನವೇ ಅವರನ್ನು ವಾರಣಾಸಿಗೆ ವರ್ಗ ಮಾಡಲಾಗಿತ್ತು,
 
ಉತ್ತರ ಪ್ರದೇಶದಲ್ಲಿ ಗುಂಪು ಗಲಭೆಗೆ ಕಾರಣ?
ಸಮೀಪದ ಕಬ್ಬಿನ ಗದ್ದೆವೊಂದರಲ್ಲಿ ಸಿಕ್ಕಿದೆ ಎನ್ನಲಾದ ಪ್ರಾಣಿಗಳ ಎಲುಬುಗಳು ಈ ಸಂಘರ್ಷಕ್ಕೆ ಕಾರಣ. ಇಲ್ಲಿ ದನಗಳ ಹತ್ಯೆ ನಡೆದಿದೆ, ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿದ ಗುಂಪು ಪೊಲೀಸ್‌ ಹೊರಠಾಣೆಗೆ ಮುತ್ತಿಗೆ ಹಾಕಿತು. ಹೊಲದಿಂದ ಸಂಗ್ರಹಿಸಿ ತಂದ ಎಲುಬುಗಳನ್ನು ಠಾಣೆಯ ಹೊರಗಿನ ರಸ್ತೆಯಲ್ಲಿ ಸುರಿಯಿತು.
ಹೊರಠಾಣೆಗೆ ಮುತ್ತಿಗೆ ಹಾಕಿದ ಗುಂಪಿನಲ್ಲಿ 400ಕ್ಕೂ ಹೆಚ್ಚು ಜನರಿದ್ದರು. ಕೆಲವೇ ಕೆಲವು ಪೊಲೀಸರು ಮಾತ್ರ ಆಗ ಅಲ್ಲಿ ಇದ್ದರು. ಜನರ ಗುಂಪನ್ನು ಬಲ ಪ‍್ರಯೋಗಿಸಿ ಚದುರಿಸಲು ಪೊಲೀಸರು ಯತ್ನಿಸಿದ್ದಾರೆ. ಸಾಧ್ಯವಾಗದಿದ್ದಾಗ ಗುಂಡು ಹಾರಿಸಿದ್ದಾರೆ. ಇದರಿಂದಾಗಿ ಸುಮಿತ್‌ ಕುಮಾರ್‌ ಎಂಬ ಯುವಕ ಮೃತಪಟ್ಟರು ಎಂದು ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಆನಂದ್‌ ಕುಮಾರ್‌ ತಿಳಿಸಿದ್ದಾರೆ. 
ಇದರಿಂದ ಗುಂಪು ಕೆರಳಿತು. ಹೊರಠಾಣೆಯ ಮೇಲೆ ದಾಳಿ ನಡೆಸಿತು. ಹತ್ತಾರು ವಾಹನಗಳಿಗೆ ಬೆಂಕಿ ಹಚ್ಚಿತು. ಪೊಲೀಸರತ್ತ ಗುಂಡು ಹಾರಾಟ ನಡೆಸಿತು.  ದಾಳಿಯ ಮಾಹಿತಿ ತಿಳಿದು ಸಯನಾ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಸುಬೋಧ್‌ ಸಿಂಗ್ ಸ್ಥಳಕ್ಕೆ ಧಾವಿಸಿದರು. ಅವರನ್ನು ಎಳೆದಾಡಿದ ಗುಂಪು ಮನಸೋಇಚ್ಛೆ ಥಳಿಸಿತು ಎಂದು ಮೂಲಗಳು ತಿಳಿಸಿವೆ. ತೀವ್ರ ಗಾಯಗೊಂಡ ಸುಬೋಧ್ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದರೂ, ಅಷ್ಟೊತ್ತಿಗೆ ಅವರು ಮೃತಪಟ್ಟಿದ್ದರು.
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು