ಭಾನುವಾರ, ಜೂಲೈ 5, 2020
27 °C
ಬುಡ್ಗಾಂನ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆಗೆ ಕಾರು ನಿಲ್ಲಿಸದ ಪರಿಣಾಮ

ನಿಲ್ಲಿಸದೇ ಹೋದ ಕಾರಿನ ಮೇಲೆ ಸಿಆರ್‌ಪಿಎಫ್‌ನಿಂದ ಗುಂಡಿನ ದಾಳಿ: ಯುವಕ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಮಧ್ಯ ಕಾಶ್ಮೀರದ ಬುಡ್ಗಾಂ ಜಿಲ್ಲೆಯ ಪೊಲೀಸ್‌ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆಗೆ ನಿಲ್ಲಿಸದೇ ಹೊರಟ ಕಾರಿನ ಮೇಲೆ ಸಿಆರ್‌ಪಿಎಫ್‌ ಪೊಲೀಸರು ಗುಂಡು ಹಾರಿಸಿದ ಪರಿಣಾಮ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ.

ಬುಡ್ಗಾಂನ ಬೀರ್ವಾ ಪ್ರದೇಶದ ನಿವಾಸಿ ಪೀರ್‌ ಮೆಹ್ರಾಜುದ್ದೀನ್‌ (26) ಮೃತಪಟ್ಟವರು.

ಬುಡ್ಗಾಂ ಜಿಲ್ಲೆಯ ಕವೂಸಾ ಹಾಗೂ ನರ್ಬಲ್‌ ಎಂಬ ಪೊಲೀಸ್‌ ಚೌಕಿ ಬಳಿ ನಿಲ್ಲಿಸದೆ ಹೊರಟ ಕಾರಿನ ಮೇಲೆ ಕೇಂದ್ರ ಮೀಸಲು ಪೊಲೀಸ್‌ ಪಡೆ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ಯುವಕನನ್ನು ಪೊಲೀಸರೇ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆತ ಮಾರ್ಗಮಧ್ಯೆ ಮೃತಪಟ್ಟ ಎಂದು ಪೊಲೀಸರು ತಿಳಿಸಿದರು.

ಸಿಆರ್‌ಪಿಎಫ್‌ ವಕ್ತಾರ ಪಂಕಜ್‌ ಸಿಂಗ್‌ ಅವರು, ಘಟನೆಯನ್ನು ಖಚಿತಪಡಿಸಿದ್ದು, ಘಟನೆಗೆ ಸಂಬಂಧಿಸಿದ ಮಾಹಿತಿಯನ್ನು ಕಲೆಹಾಕುತ್ತಿದ್ದೇವೆ ಎಂದರು.

ಮೃತ ವ್ಯಕ್ತಿಯ ಎದೆ ಭಾಗ ಹಾಗೂ ಬಲಭುಜದಲ್ಲಿ ಗುಂಡೇಟಿನ ಗಾಯಗಳಾಗಿದ್ದು, ಆಸ್ಪತ್ರೆಗೆ ಕರೆತರುವ ವೇಳೆಗೆ ಆತ ಮೃತಪಟ್ಟಿದ್ದ ಎಂದು ಶ್ರೀನಗರದ ಎಸ್‌ಎಂಎಚ್‌ಎಸ್‌ ಆಸ್ಪತ್ರೆಯ ವೈದ್ಯ ಡಾ.ನಜೀರ್‌ ಚೌಧರಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಜಮ್ಮು ಕಾಶ್ಮೀರ ಬ್ಯಾಂಕಿನ ಸೇವಾ ಕೇಂದ್ರವನ್ನು ನಡೆಸುತ್ತಿದ್ದ ಪೀರ್‌ ಮೆಹ್ರಾಜುದ್ದೀನ್‌, ಕೆಲಸದ ನಿಮಿತ್ತ ಶ್ರೀನಗರಕ್ಕೆ ತೆರಳುತ್ತಿದ್ದ. ಆತ ಚೆಕ್‌ಪೋಸ್ಟ್‌ನಲ್ಲಿ ವಾಹನ ನಿಲ್ಲಿಸದೇ ಹೊರಟಿದ್ದು ನಿಜವಾಗಿದ್ದರೆ ಆತನ ಕಾರಿನ ಟೈರ್‌ಗಳಿಗೆ ಗುಂಡು ಹಾರಿಸಬಹುದಿತ್ತು. ಆದರೆ ಆತನನ್ನು ಅಮಾನವೀಯವಾಗಿ ಗುಂಡಿಟ್ಟು ಕೊಲ್ಲಲಾಗಿದೆ ಎಂದು ಬೀರ್ವಾ ಪ್ರದೇಶದ ನಿವಾಸಿ ಮೊಹಮ್ಮದ್‌ ಆಶ್ರಫ್‌ ಆರೋಪಿಸಿದರು.

ಘಟನೆ ನಡೆದಿರುವುದು ದುರದುಷ್ಟಕರ. ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಯಲಿ ಎಂದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಒಮರ್‌ ಅಬ್ದುಲ್ಲಾ ಅವರು ಒತ್ತಾಯಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಇಲ್ಲಿನ ನಿವಾಸಿಗಳು ಕೃತ್ಯವನ್ನು ಖಂಡಿಸಿ ಪ್ರತಿಭಟನೆಯನ್ನು ನಡೆಸಿದರು. ಬುಡ್ಗಾಂ ಜಿಲ್ಲೆಯಲ್ಲಿ ಇಂಟರ್‌ನೆಟ್‌ ಹಾಗೂ ಮೊಬೈಲ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು