ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಪೊ ದರ ಹೆಚ್ಚಳದ ಪರಿಣಾಮ...

Last Updated 8 ಜೂನ್ 2018, 19:30 IST
ಅಕ್ಷರ ಗಾತ್ರ

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸಿದೆ. ರೆಪೊ (ಶೇ 6.25) ಮತ್ತು ರಿವರ್ಸ್‌ ರೆಪೊ (ಶೇ 6) ದರವನ್ನು ಶೇ  0.25ರಷ್ಟು ಹೆಚ್ಚಿಸಿ ಹಣಕಾಸು ಮಾರುಕಟ್ಟೆಯಲ್ಲಿ ಅಚ್ಚರಿ ಮೂಡಿಸಿದೆ. ಬ್ಯಾಂಕ್‌ ದರ ಶೇ 6.25ರಿಂದ ಶೇ 6.50ಕ್ಕೆ ಏರಿಕೆಯಾಗಿದೆ. 2014ರ ಜನವರಿಯಿಂದ ಈಚೆಗೆ ಇದೇ ಮೊದಲ ಬಾರಿಗೆ ಈ ಏರಿಕೆ ದಾಖಲಾಗಿದೆ.

2018–19ನೇ ಹಣಕಾಸು ವರ್ಷದ ಉಳಿದ ಭಾಗದಲ್ಲಿ ಇನ್ನೂ ಒಂದೆರಡು ಬಾರಿ ದರ ಹೆಚ್ಚಳಗೊಳ್ಳುವ ನಿರೀಕ್ಷೆ ಇದೆ. ಇದರಿಂದ ಮುಂಬರುವ ದಿನಗಳಲ್ಲಿ ಬ್ಯಾಂಕ್‌ ಸಾಲಗಳು ಇನ್ನಷ್ಟು ತುಟ್ಟಿಯಾಗಲಿವೆ.

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ನಾಲ್ಕು ವರ್ಷ ಪೂರ್ಣಗೊಳಿಸಿದ್ದಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಇದೊಂದು ಸಂಪೂರ್ಣವಾಗಿ ಹಣಕಾಸಿಗೆ ಸಂಬಂಧಿಸಿದ ವಿಚಾರವಾಗಿದೆ.

ಈ ನಿರ್ಧಾರದಿಂದ ಗೃಹ, ವಾಹನ ಖರೀದಿ ಮತ್ತು ಉದ್ದಿಮೆ ಸಾಲಗಳ ಬಡ್ಡಿ ದರ ಏರುಗತಿಯಲ್ಲಿ ಸಾಗಲಿದೆ. ತಿಂಗಳ ಸಮಾನ ಕಂತುಗಳ (ಇಎಂಐ) ಮೊತ್ತದಲ್ಲಿಯೂ ಏರಿಕೆಯಾಗಲಿದೆ. ಇದು ಸಾಲಗಾರರಿಗೆ ಹೊರೆಯಾಗಿ ಪರಿಣಮಿಸಲಿದೆ.

ಪ್ರಭಾವ ಬೀರಿದ ವಿದ್ಯಮಾನಗಳು

ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿನ ಅನಿಶ್ಚಿತತೆ, ದುಬಾರಿ ಕಚ್ಚಾ ತೈಲ ಮತ್ತು ನಿಯಂತ್ರಣಕ್ಕೆ ಬಾರದ ಹಣದುಬ್ಬರವೇ ಈ ನಿರ್ಧಾರಕ್ಕೆ ಪ್ರಮುಖ ಕಾರಣಗಳಾಗಿವೆ. ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 66 ಡಾಲರ್‌ನಿಂದ 74 ಡಾಲರ್‌ಗೆ ಏರಿಕೆಯಾಗಿದೆ. ಇದು ಒಂದು ವರ್ಷದಲ್ಲಿ ಶೇ 32ರಷ್ಟು ಹೆಚ್ಚಳಗೊಂಡಿದೆ. ಆಹಾರ ಮತ್ತು ಕಚ್ಚಾ ತೈಲ ಹೊರತುಪಡಿಸಿದ ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಹಣದುಬ್ಬರವು ಹಠಾತ್‌ ಏರಿಕೆ ಕಂಡಿದೆ.

ಈ ವರ್ಷದ ಏಪ್ರಿಲ್‌ನಲ್ಲಿ ಸಿಪಿಐ, 3 ತಿಂಗಳ ಗರಿಷ್ಠ ಮಟ್ಟಕ್ಕೆ (ಶೇ 4.6) ಏರಿಕೆಯಾಗಿದೆ. ಸಗಟು ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರವೂ (ಡಬ್ಲ್ಯುಪಿಐ) 4 ತಿಂಗಳ ಗರಿಷ್ಠ ಮಟ್ಟಕ್ಕೆ (ಶೇ 4.2) ಹೆಚ್ಚಳಗೊಂಡಿದೆ.

ಉದರಿ ನೀತಿಯ ಪಾತ್ರ

ಗೃಹ ಸಾಲಗಳೂ ಸೇರಿದಂತೆ ಬ್ಯಾಂಕ್‌ಗಳ ವಿವಿಧ ಸಾಲಗಳ ಬಡ್ಡಿ ದರ ನಿಗದಿಪಡಿಸುವಲ್ಲಿ ಕೇಂದ್ರೀಯ ಬ್ಯಾಂಕ್‌ನ ಉದರಿ ನೀತಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಬ್ಯಾಂಕ್‌ಗಳು ತಮ್ಮ ಬಡ್ಡಿ ದರಗಳನ್ನು ನಿರ್ಧರಿಸಲು ಇದೊಂದೇ ಕಾರಣವಾಗಿರುವುದಿಲ್ಲ. ಬ್ಯಾಂಕ್‌ಗಳಲ್ಲಿನ ನಗದು ಲಭ್ಯತೆಯ ಕೊಡುಗೆಯೂ ಮುಖ್ಯವಾಗಿರುತ್ತದೆ.

ಬ್ಯಾಂಕ್‌ಗಳಲ್ಲಿನ ನಗದು ಪರಿಸ್ಥಿತಿಯು ರೆಪೊ, ರಿವರ್ಸ್‌ ರೆಪೊ, ನಗದು ಮೀಸಲು ಅನುಪಾತ (ಸಿಆರ್‌ಆರ್‌), ಶಾಸನಬದ್ಧ ನಗದು ಅನುಪಾತ (ಎಸ್‌ಸಿಆರ್‌) ಅವಲಂಬಿಸಿರುತ್ತದೆ.

ಆರ್‌ಬಿಐ ಬಳಿ ಇರುವ ಆಯ್ಕೆಗಳು

ಮಾರುಕಟ್ಟೆಯಲ್ಲಿ ನಗದು ಹರಿವಿನ ಪ್ರಮಾಣ ನಿಯಂತ್ರಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಬಳಿ ಹಲವಾರು ಸಾಧನಗಳಿವೆ. ಅವುಗಳ ಪೈಕಿ ರೆಪೊ ದರಗಳು ಪ್ರಮುಖವಾಗಿವೆ.

ರೆಪೊ ಮತ್ತು ರಿವರ್ಸ್‌ ರೆಪೊ

ಅಲ್ಪಾವಧಿಯಲ್ಲಿ ಬ್ಯಾಂಕ್‌ಗಳಿಗೆ ಹಣದ ಕೊರತೆ ಎದುರಾದಾಗ ಆ ನಷ್ಟ ಭರ್ತಿ ಮಾಡಿಕೊಡಲು ಬ್ಯಾಂಕ್‌ಗಳಿಗೆ ಆರ್‌ಬಿಐ ಸಾಲ ನೀಡುತ್ತದೆ. ಈ ಸಾಲಕ್ಕೆ ವಿಧಿಸುವ ಬಡ್ಡಿ ದರವನ್ನೇ ‘ರೆಪೊ ದರ’ ಎಂದು ಕರೆಯಲಾಗುತ್ತದೆ. ರೆಪೊ ಎಂದರೆ ರೀಪರ್ಚೇಜ್‌ (ಮರು ಖರೀದಿ) ದರ ಎಂದೂ ಅರ್ಥ.

ಆರ್‌ಬಿಐ, ಹಣಕಾಸು ವ್ಯವಸ್ಥೆಯಲ್ಲಿನ ಹೆಚ್ಚುವರಿ ಹಣದ ಹರಿವಿಗೆ ಕಡಿವಾಣ ಹಾಕುವ ಉದ್ದೇಶದಿಂದ ವಾಣಿಜ್ಯ ಬ್ಯಾಂಕ್‌ಗಳಿಂದ ಪಡೆಯುವ ಸಾಲಕ್ಕೆ ಪಾವತಿಸುವ ಬಡ್ಡಿ ದರ ‘ರಿವರ್ಸ್‌ ರೆಪೊ’ ಆಗಿರುತ್ತದೆ.

ಹಣದುಬ್ಬರ ಏರುಗತಿಯಲ್ಲಿ ಇರುವಾಗ, ಬ್ಯಾಂಕ್‌ಗಳು ಆರ್‌ಬಿಐನಿಂದ ಪಡೆಯುವ ಸಾಲ ದುಬಾರಿಯಾಗಲು ರೆಪೊ ದರ ಹೆಚ್ಚಿಸಲಾಗುತ್ತಿದೆ. ಇದರಿಂದ ಆರ್ಥಿಕತೆಯಲ್ಲಿ ಹಣದ ಪೂರೈಕೆ ಕಡಿಮೆಯಾಗುತ್ತದೆ. ಹಣದುಬ್ಬರ ನಿಯಂತ್ರಿಸಲು ಸಾಧ್ಯವಾಗುತ್ತದೆ. ರೆಪೊ ಮತ್ತು ರಿವರ್ಸ್‌ ರೆಪೊ ದರಗಳು, ನಗದು ಹಣದ ಹರಿವು ಹೊಂದಾಣಿಕೆ ಮಾಡುವ ವಿಧಾನಗಳಾಗಿವೆ.

ಬಡ್ಡಿ ದರಕ್ಕೂ ರೆಪೊಗೆ ಇರುವ ಸಂಬಂಧ

ಸಾಲಗಾರರು ಬ್ಯಾಂಕ್‌ಗಳಿಂದ ಪಡೆಯುವ ಸಾಲಕ್ಕೆ ಪಾವತಿಸುವ ಬಡ್ಡಿ ದರಕ್ಕೂ ರೆಪೊ ದರಕ್ಕೂ ನೇರ ಸಂಬಂಧ ಇರುತ್ತದೆ.  ಬ್ಯಾಂಕ್‌ಗಳು ರೆಪೊ ದರಕ್ಕಿಂತಲೂ ಹೆಚ್ಚಿನ ದರದಲ್ಲಿ ಸಾಲಗಾರರಿಂದ ಬಡ್ಡಿ ವಸೂಲಿ ಮಾಡುತ್ತವೆ.

ರೆಪೊ ದರ ಕಡಿಮೆ ಮಟ್ಟದಲ್ಲಿ ಇದ್ದರೆ, ಬ್ಯಾಂಕ್‌ಗಳು ಸಾಲಗಾರರಿಗೆ ವಿಧಿಸುವ ಬಡ್ಡಿ ದರಗಳನ್ನು ಕಡಿಮೆ ಮಾಡಲು ಉತ್ತೇಜನ ನೀಡುತ್ತವೆ. ಇದರಿಂದ ಸಾಲಗಳು ಕೈಗೆಟುಕುವ ಮಟ್ಟದಲ್ಲಿ ಇರುತ್ತವೆ.

ರೆಪೊ ದರ ಏರುಗತಿಯಲ್ಲಿ ಇದ್ದರೆ, ಸಾಲಗಳ ಬಡ್ಡಿ ದರಗಳೂ ಅದೇ ಹಾದಿಯಲ್ಲಿ ಸಾಗುತ್ತವೆ. ಗ್ರಾಹಕರ ಪಾಲಿಗೆ ಬಡ್ಡಿ ದರಗಳು ದುಬಾರಿಯಾಗಿ ಪರಿಣಮಿಸುತ್ತವೆ.

ನಗದು ಮೀಸಲು ಅನುಪಾತ

ಬ್ಯಾಂಕ್‌ಗಳು ಆರ್‌ಬಿಐನಲ್ಲಿ ಇರಿಸಬೇಕಾದ ಠೇವಣಿಗಳ ಅನುಪಾತ (ಸಿಆರ್‌ಆರ್‌) ಇದಾಗಿದೆ. ಉದಾಹರಣೆಗೆ ವ್ಯಕ್ತಿಯೊಬ್ಬ ಬ್ಯಾಂಕ್‌ವೊಂದರಲ್ಲಿ ₹ 1,000 ಠೇವಣಿ ಇರಿಸಿದರೆ, ಇತರರಿಗೆ ಸಾಲ ನೀಡಲು ಬ್ಯಾಂಕ್‌ ಈ ಮೊತ್ತವನ್ನು ಬಳಸಿಕೊಳ್ಳುತ್ತದೆ. ಅದಕ್ಕೂ ಮುನ್ನ, ಈ ಠೇವಣಿಯ ನಿರ್ದಿಷ್ಟ ಮೊತ್ತವನ್ನು ಆರ್‌ಬಿಐನಲ್ಲಿ ಠೇವಣಿ ಇರಿಸಬೇಕಾಗುತ್ತದೆ. ಸಿಆರ್‌ಆರ್‌ ಶೇ 5ರಷ್ಟು ನಿಗದಿಯಾಗಿದ್ದರೆ, ಬ್ಯಾಂಕ್‌ ₹ 50 ಆರ್‌ಬಿಐನಲ್ಲಿ ಠೇವಣಿ ಇರಿಸಿ, ಉಳಿದ ಮೊತ್ತವನ್ನು (ಅಂದರೆ ₹ 950) ಸಾಲ ನೀಡಿಕೆಗೆ ಬಳಸಬಹುದು.

ಈ ಮೊತ್ತ (₹ 950) ಮರುಪಾವತಿಯಾದಾಗ, ಬ್ಯಾಂಕ್‌ ಇದರಶೇ 5ರಷ್ಟನ್ನು (₹ 47.50) ಠೇವಣಿ ಇರಿಸಿ ಇನ್ನೊಬ್ಬರಿಗೆ ಸಾಲ ನೀಡುತ್ತದೆ. ಹೀಗೆ ಪ್ರತಿ ಬಾರಿ ಹಣ ಕೈ ಬದಲಾಯಿಸಿದಾಗೊಮ್ಮೆ ಆರ್ಥಿಕತೆಯಲ್ಲಿ ಹಣದ ಮೊತ್ತವು ಪರೋಕ್ಷವಾಗಿ ಹೆಚ್ಚುತ್ತ ಹೋಗುತ್ತದೆ. ಹೀಗಾಗಿ ಸಿಆರ್‌ಆರ್‌ ಶೇ 1ರಷ್ಟು ಹೆಚ್ಚಾದರೂ, ಆರ್ಥಿಕತೆಯಲ್ಲಿ ಚಲಾವಣೆಯಲ್ಲಿ ಇರುವ ಹಣ ಗಮನಾರ್ಹವಾಗಿ ಕಡಿಮೆಯಾಗುತ್ತದೆ.

ಶಾಸನಬದ್ಧ ನಗದು ಅನುಪಾತ

ಪ್ರತಿಯೊಂದು ಬ್ಯಾಂಕ್‌ ನಗದು, ಚಿನ್ನ ಮತ್ತು ಸರ್ಕಾರಿ ಬಾಂಡ್‌ಗಳ ರೂಪದಲ್ಲಿ ಇರಿಸುವ ಶಾಸನಬದ್ಧ ನಿರ್ದಿಷ್ಟ ಮೊತ್ತ (ಎಸ್‌ಸಿಆರ್‌) ಇದಾಗಿರುತ್ತದೆ. ಬ್ಯಾಂಕ್‌ಗಳ ಸಾಲ ನೀತಿ ಮೇಲೆ ನಿಯಂತ್ರಣ ಸಾಧಿಸಲು ಇದರಿಂದ ಆರ್‌ಬಿಐಗೆ ಸಾಧ್ಯವಾಗುತ್ತದೆ.

ಈ ಎಲ್ಲ ಕ್ರಮಗಳ ಒಟ್ಟಾರೆ ಪರಿಣಾಮದಿಂದ, ಹಣಕಾಸು ಮಾರುಕಟ್ಟೆಯಲ್ಲಿನ ನಗದು ಹರಿವಿನ ಮಟ್ಟ ನಿಗದಿಪಡಿಸಲು ಆರ್‌ಬಿಐಗೆ ಸಾಧ್ಯವಾಗುತ್ತದೆ. ವಿವಿಧ ಸಾಲಗಳ ಬಡ್ಡಿ ದರ ಹೆಚ್ಚಿಸಲು ಅಥವಾ ಇಳಿಸಲು ನೆರವಾಗುತ್ತದೆ.

ದುಬಾರಿ ರೆ‍ಪೊ ಬೀರುವ ಪರಿಣಾಮ ಏನು?

ರೆಪೊ ದರ ಹೆಚ್ಚಳಗೊಂಡಾಗ, ಬ್ಯಾಂಕ್‌ಗಳು ಆರ್‌ಬಿಐಗೆ ಪಾವತಿಸುವ ಬಡ್ಡಿ ದರ ಹೆಚ್ಚಾಗುತ್ತದೆ. ಈ ಕಾರಣಕ್ಕೆ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ನೀಡುವ ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಿಸುತ್ತವೆ. ದುಬಾರಿ ಬಡ್ಡಿ ದರದ ಕಾರಣಕ್ಕೆ ಗ್ರಾಹಕರು ಬ್ಯಾಂಕ್‌ಗಳಿಂದ ಸಾಲ ಪಡೆಯಲು ಹಿಂದೇಟು ಹಾಕುತ್ತಾರೆ. ಇದರಿಂದ ಆರ್ಥಿಕತೆಯಲ್ಲಿ ಹಣದ ಅಭಾವ ಸೃಷ್ಟಿಯಾಗುತ್ತದೆ. ವೆಚ್ಚ ಮಾಡಲು ಗ್ರಾಹಕರ ಬಳಿ ಕಡಿಮೆ ಹಣ ಲಭ್ಯ ಇರುತ್ತದೆ. ಇದರಿಂದ ಹಣದುಬ್ಬರ ನಿಯಂತ್ರಣಕ್ಕೆ ಬರುತ್ತದೆ.

ಪ್ರತಿಕೂಲ ಪರಿಣಾಮ

ಗರಿಷ್ಠ ಬಡ್ಡಿ ದರಕ್ಕೆ ಸಾಲ ಪಡೆಯಲು ಉದ್ದಿಮೆ ಸಂಸ್ಥೆಗಳು ಹಿಂದೇಟು ಹಾಕಿದಾಗ, ಉತ್ಪಾದನಾ ಚಟುವಟಿಕೆ ಕಡಿಮೆಯಾಗಿ ಆರ್ಥಿಕ ವೃದ್ಧಿ ದರವೂ ಕುಂಠಿತಗೊಳ್ಳುತ್ತದೆ.

ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ

ಆರ್‌ಬಿಐ, ಇದಕ್ಕೂ ಮೊದಲು ಪ್ರತಿ ಮೂರು ತಿಂಗಳಿಗೊಮ್ಮೆ ಹಣಕಾಸು ನೀತಿ ಪರಾಮರ್ಶಿಸುತ್ತಿತ್ತು. ಆನಂತರ ಅದನ್ನು ಪ್ರತಿ ಎರಡು ತಿಂಗಳಿಗೊಮ್ಮೆ ಬದಲಾಯಿಸಲಾಗಿದೆ. ದ್ವೈಮಾಸಿಕ ಉದರಿ ನೀತಿ ಪರಾಮರ್ಶೆಯಲ್ಲಿ ಬಡ್ಡಿ ದರಗಳನ್ನು ಪರಿಷ್ಕರಿಸಲಾಗುತ್ತದೆ.

ಹಣದುಬ್ಬರ ಭೂತ ಎದುರಿಸಲು ಅಲ್ಪಾವಧಿ ಬಡ್ಡಿ ದರಗಳು ನೆರವಿಗೆ ಬರುತ್ತವೆ. ಬೆಲೆ ಏರಿಕೆಗೆ ಕಡಿವಾಣ ಹಾಕಲು ಆಕ್ರಮಣಕಾರಿ ಧೋರಣೆ ಅನುಸರಿಸಿ ಬಡ್ಡಿ ದರ ಹೆಚ್ಚಿಸುತ್ತದೆ. ಆರ್ಥಿಕ ಬೆಳವಣಿಗೆಗೆ ತೀವ್ರ ಸ್ವರೂಪದ ಧಕ್ಕೆ ತಟ್ಟಿದಾಗ ಈ ದರಗಳನ್ನು ತಗ್ಗಿಸಲು ಮುಂದಾಗುತ್ತದೆ. ಆಗ ಆರ್ಥಿಕತೆ ಚೇತರಿಕೆ ಹಾದಿಗೆ ಮರಳಲಿದೆ.

ಏನಿದು ಎಂಸಿಎಲ್‌ಆರ್‌?

ಈ ಮೊದಲು, ಬ್ಯಾಂಕ್‌ಗಳು ಠೇವಣಿಗಳ ಮೇಲಿನ ಬಡ್ಡಿ ದರಗಳ ಸರಾಸರಿ ವೆಚ್ಚ ಆಧರಿಸಿ ಮೂಲ ದರ ನಿಗದಿಪಡಿಸುತ್ತಿದ್ದವು. ಈಗ ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿ (ಎಂಸಿಎಲ್‌ಆರ್‌) ಸಾಲಗಳ ಬಡ್ಡಿ ದರ ನಿಗದಿ ಮಾಡಲಾಗುತ್ತಿದೆ.ಅಂದರೆ, ಬ್ಯಾಂಕ್‌ಗಳು ಠೇವಣಿಗಳು ಮತ್ತು ಆರ್‌ಬಿಐನಿಂದ ಪಡೆಯುವ ಸಾಲಕ್ಕೆ ನೀಡುವ ಬಡ್ಡಿ ದರ ಆಧರಿಸಿ ತಮ್ಮ ಸಾಲಗಳ ಮೇಲಿನ ಬಡ್ಡಿ ದರ ನಿಗದಿ ಮಾಡುತ್ತವೆ. ಎಂಸಿಎಲ್‌ಆರ್‌– ಬ್ಯಾಂಕ್‌ಗಳ ಕನಿಷ್ಠ ಬಡ್ಡಿ ದರವಾಗಿದೆ. ಇದಕ್ಕಿಂತ ಕಡಿಮೆ ಮೊತ್ತಕ್ಕೆ ಬಡ್ಡಿದರ ನಿಗದಿ ಮಾಡಲು ಬರುವುದಿಲ್ಲ. ಎಂಸಿಎಲ್‌ಆರ್‌ ಏರಿಳಿತ ಆಧರಿಸಿ ಗೃಹ, ವಾಹನ ಖರೀದಿ ಮತ್ತಿತರ ಸಾಲಗಳ ಬಡ್ಡಿ ದರಗಳೂ ಬದಲಾಗುತ್ತವೆ.

ಎಂಸಿಎಲ್‌ಆರ್‌ ಹೆಚ್ಚಿಸಿದ ಬ್ಯಾಂಕ್‌ಗಳು

ಎಸ್‌ಬಿಐ, ಪಿಎನ್‌ಬಿ ಮತ್ತು ಐಸಿಐಸಿಐ ಬ್ಯಾಂಕ್‌ಗಳು ಈಗಾಗಲೇ ಎಂಸಿಎಲ್‌ಆರ್‌ ಅನ್ನು ಶೇ 0.1 ರವರೆಗೆ ಏರಿಕೆ ಮಾಡಿವೆ. ಇತರ ಬ್ಯಾಂಕ್‌ಗಳೂ ಇದೇ ಹಾದಿ ತುಳಿಯುತ್ತಿವೆ. ಎಸ್‌ಬಿಐನ ಗ್ರಾಹಕರಿಗೆ ಬಡ್ಡಿದರವು ಶೇ 7.8 ರಿಂದ ಶೇ 7.9ಕ್ಕೆ ಏರಿಕೆಯಾಗಿದೆ.

ಬಡ್ಡಿದರ ನಿಗದಿಗೆ ಹಣಕಾಸು ನೀತಿ ಸಮಿತಿ

ಬಡ್ಡಿದರ ನಿಗದಿ ಮತ್ತು ಹಣದುಬ್ಬರ ನಿಯಂತ್ರಣದಂಥ ಮಹತ್ವದ ನಿರ್ಧಾರವನ್ನು ‘ಹಣಕಾಸು ನೀತಿ ಸಮಿತಿ’ (ಎಂಪಿಸಿ) ಕೈಗೊಳ್ಳುತ್ತದೆ. ಆರ್‌ಬಿಐ ಗವರ್ನರ್ ಉರ್ಜಿತ್‌ ಪಟೇಲ್‌ ನೇತೃತ್ವದ ಆರು ಸದಸ್ಯರ ಸಮಿತಿ ಇದಾಗಿದೆ. ಬಡ್ಡಿದರ ನಿಗದಿ ಮಾಡುತ್ತಿದ್ದ  ಗವರ್ನರ್‌ ಅಧಿಕಾರವು ಸಮಿತಿ ಅಸ್ತಿತ್ವಕ್ಕೆ ಬಂದ ನಂತರ ಮೊಟಕುಗೊಂಡಿದೆ.

ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ ತಲಾ ಮೂವರು ಸದಸ್ಯರನ್ನು ಸಮಿತಿಗೆ ನಾಮನಿರ್ದೇಶನ ಮಾಡಿರುತ್ತವೆ. ಬಹುಮತದ ಆಧಾರದ ಮೇಲೆ ಸಮಿತಿಯು ಹಣಕಾಸು ನೀತಿಗಳಿಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳಲಿದೆ. ಒಂದು ವೇಳೆ ಸಮ ಪ್ರಮಾಣದಲ್ಲಿ ಮತ ಚಲಾವಣೆಯಾದ ಇಕ್ಕಟ್ಟಿನ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರಾಗಿರುವ   ಗವರ್ನರ್‌  ನಿರ್ಣಾಯಕ  ಮತ  ಚಲಾಯಿಸುವ ಹಕ್ಕು ಹೊಂದಿರುತ್ತಾರೆ.

ರೆಪೊ ದರ ಹೆಚ್ಚಳದ ಪರಿಣಾಮ...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT