ವಿಚಾರಣೆ ಜತೆಗೇ ಶಿಸ್ತುಕ್ರಮ ಜರುಗಿಸಿ

7
ಅಧಿಕಾರಿಗಳ ಭ್ರಷ್ಟಾಚಾರ ಪ್ರಕರಣ: ಜಾಗೃತ ಆಯೋಗ ಸೂಚನೆ

ವಿಚಾರಣೆ ಜತೆಗೇ ಶಿಸ್ತುಕ್ರಮ ಜರುಗಿಸಿ

Published:
Updated:

ನವದೆಹಲಿ: ಸರ್ಕಾರದ ಭ್ರಷ್ಟ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಇಲಾಖಾ ಶಿಸ್ತು ಕ್ರಮ ಜರುಗಿಸಬಹುದು ಎಂದು ಕೇಂದ್ರ ಜಾಗೃತ ಆಯೋಗ (ಸಿವಿಸಿ) ಹೇಳಿದೆ. 

ಶಿಸ್ತುಕ್ರಮಕ್ಕೆ ಸಂಬಂಧಿಸಿ ಕೆಲವು ಪ್ರಕರಣಗಳನ್ನು ಆಯೋಗವು ಪರಿಶೀಲನೆ ನಡೆಸಿದೆ. ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂಬ ಕಾರಣಕ್ಕೆ ಶಿಸ್ತು ಕ್ರಮವನ್ನು ಇಲಾಖೆಗಳು ತೀರಾ ವಿಳಂಬ ಮಾಡಿರುವುದು ಆಯೋಗದ ಗಮನಕ್ಕೆ ಬಂದಿದೆ.

‘ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಇಂತಹ ಧೋರಣೆ ಸರಿಯಲ್ಲ. ಇದು ಗಂಭೀರವಾದ ವಿಚಾರ’ ಎಂದು ಆಯೋಗ ಹೇಳಿದೆ. ವಿಮಾ ಕಂಪನಿಗಳು, ಬ್ಯಾಂಕುಗಳು ಮತ್ತು ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳಿಗೆ ಈ ಬಗ್ಗೆ ನಿರ್ದೇಶನ ನೀಡಿದೆ. 

ಉದ್ಯೋಗಿಯು ನ್ಯಾಯಾಂಗದ ವಿಚಾರಣೆ ಎದುರಿಸುತ್ತಿರುವಾಗಲೇ ಇಲಾಖೆಯು ಶಿಸ್ತು ಕ್ರಮದ ಪ್ರಕ್ರಿಯೆ ಆರಂಭಿಸಬೇಕು. ಇದು ಏಕಕಾಲದಲ್ಲಿಯೇ ನಡೆಯಬೇಕು. ಇದಕ್ಕೆ ಕಾನೂನಿನ ಅಡ್ಡಿ ಇಲ್ಲ ಎಂದು ಆಯೋಗ ಹೇಳಿದೆ. ಇದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನ ತೀರ್ಪನ್ನೂ ಉಲ್ಲೇಖಿಸಿದೆ. 

ಉದ್ಯೋಗಿಯ ವಿರುದ್ಧ ನ್ಯಾಯಾಂಗದ ವಿಚಾರಣೆಗೆ ಅನುಮತಿ ಕೊಡುವಾಗಲೇ ಸಂಬಂಧಪಟ್ಟ ಪ್ರಾಧಿಕಾರವು ಏಕಕಾಲಕ್ಕೆ ಶಿಸ್ತು ಕ್ರಮ ಜರುಗಿಸುವ ಬಗ್ಗೆಯೂ ನಿರ್ಧಾರ ಕೈಗೊಳ್ಳಬೇಕು ಎಂದು ಸಿವಿಸಿ ಹೇಳಿದೆ. 

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಮತ್ತು ಕೇಂದ್ರ ಸರ್ಕಾರದ ಇಲಾಖೆಗಳಲ್ಲಿನ ಹಲವು ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಸ್ತು ಕ್ರಮದ ಪ್ರಕ್ರಿಯೆ ಆರಂಭಿಸುವಂತೆಯೂ ಶಿಫಾರಸು ಮಾಡಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !