ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವ ಮಸೂದೆ: ಆತಂಕ ಬೇಡವೆಂದ ಪ್ರಧಾನಿ ಮೋದಿ

ಈಶಾನ್ಯ ರಾಜ್ಯಗಳಲ್ಲಿ ಪ್ರಧಾನಿಗೆ ಕಪ್ಪು ಬಾವುಟ ಪ್ರದರ್ಶನ
Last Updated 10 ಫೆಬ್ರುವರಿ 2019, 3:43 IST
ಅಕ್ಷರ ಗಾತ್ರ

ಚಾಂಗ್ಸರಿ (ಅಸ್ಸಾಂ): ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳ ಹಿತಾಸಕ್ತಿಗೆ ಪೌರತ್ವ ಮಸೂದೆಯಿಂದ ಖಂಡಿತ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ.

ಶನಿವಾರ ಇಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಿದರು.

ಪೌರತ್ವ ಮಸೂದೆ ಜಾರಿಗೆ ಎನ್‌ಡಿಎ ಸರ್ಕಾರ ಬದ್ಧವಾಗಿದೆ. ಅದೇ ರೀತಿ ಈಶಾನ್ಯ ರಾಜ್ಯಗಳ ಭಾಷೆ, ಸಂಸ್ಕೃತಿ, ಸಂಪನ್ಮೂಲ, ನಿರೀಕ್ಷೆ ಮತ್ತು ಆಕಾಂಕ್ಷೆಗಳ ರಕ್ಷಣೆಗೂ ಕಟಿಬದ್ಧವಾಗಿದೆ ಎಂದು ವಾಗ್ದಾನ ನೀಡಿದರು.

ರಾಜ್ಯಗಳ ಜತೆ ಸಮಾಲೋಚನೆ ನಡೆಸಿದ ನಂತರವಷ್ಟೇ ಪೌರತ್ವ ನೀಡಲಾಗುವುದು. ಜನರನ್ನು ದಾರಿ ತಪ್ಪಿಸಲು ಪೌರತ್ವ ಮಸೂದೆ ಬಗ್ಗೆ ಹವಾನಿಯಂತ್ರಿತ ಕೋಠಡಿಗಳಲ್ಲಿ ಕುಳಿತ ಜನರು ಇಲ್ಲಸಲ್ಲದ ವದಂತಿ ಹರಡುತ್ತಿದ್ದಾರೆ ಎಂದು ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

ತ್ರಿಪುರಾದ ರಾಜಧಾನಿ ಅಗರ್ತಲಾದಲ್ಲಿ ಮಾತನಾಡಿದ ಮೋದಿ, ತಮ್ಮನ್ನು ಅಪಹಾಸ್ಯ ಮಾಡಲು ಮಹಾಘಟಬಂಧನ್‌ ನಾಯಕರ ಮಧ್ಯೆ ಒಲಿಂಪಿಕ್ಸ್‌ ಸ್ಪರ್ಧೆ ಏರ್ಪಟ್ಟಿದೆ ಎಂದು ಲೇವಡಿ ಮಾಡಿದರು.

ವಿರೋಧ ಪಕ್ಷಗಳ ಮಹಾಘಟಬಂಧನ್‌ ಅನ್ನು ‘ಮಹಾಮಿಲಾವಟ್‌’ (ದೊಡ್ಡ ಕಲಬೆರಕೆ ಕೂಟ) ಎಂದು ಹಂಗಿಸಿದರು. ಛಾಯಾಚಿತ್ರಗಳಿಗಾಗಿ ಎಲ್ಲ ನಾಯಕರು ಪರಸ್ಪರ ಕೈ–ಕೈ ಹಿಡಿದು ನಿಲ್ಲುತ್ತಾರೆಯೇ ಹೊರತು ಅವರಲ್ಲಿ ನಿಜವಾದ ಒಗ್ಗಟ್ಟು ಇಲ್ಲ ಎಂದರು.

ಪ್ರತಿಭಟನೆ ಬಿಸಿ

ಗುವಾಹಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಕೃತಿಗೆ ಬೆಂಕಿ ಹಚ್ಚಲಾಯಿತು –ಪಿಟಿಐ ಚಿತ್ರ
ಗುವಾಹಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಕೃತಿಗೆ ಬೆಂಕಿ ಹಚ್ಚಲಾಯಿತು –ಪಿಟಿಐ ಚಿತ್ರ

ಎರಡು ದಿನಗಳ ಪ್ರವಾಸಕ್ಕಾಗಿ ಈಶಾನ್ಯ ರಾಜ್ಯಗಳಿಗೆ ತೆರಳಿದ ಪ್ರಧಾನಿ ನರೇಂದ್ರ ಅವರು ಪ್ರತಿಭಟನೆಯ ಬಿಸಿ ಎದುರಿಸಬೇಕಾಯಿತು.

ಪೌರತ್ವ ಮಸೂದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಬೀದಿಗಿಳಿದ ಜನರು ಪ್ರಧಾನಿಗೆ ಕಪ್ಪು ಬಾವುಟ ತೋರಿಸಿದರು.

ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ತ್ರಿಪುರಾಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ, ಯೋಜನೆಗಳಿಗೆ ಚಾಲನೆ ನೀಡಲಿರುವ ಮೋದಿ ವಿರುದ್ಧ ಅನೇಕ ಸಂಘ, ಸಂಸ್ಥೆಗಳು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿವೆ.

ಇಂದು ದಕ್ಷಿಣ ರಾಜ್ಯಗಳಲ್ಲಿ ಪ್ರವಾಸ

ಈಶಾನ್ಯ ರಾಜ್ಯಗಳ ಎರಡು ದಿನಗಳ ಪ್ರವಾಸದ ನಂತರ ಪ್ರಧಾನಿ ಮೋದಿ ಭಾನುವಾರ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.

ಪ್ರಧಾನಿ ಭೇಟಿಗೂ ಒಂದು ದಿನ ಮೊದಲೇ ಆಂಧ್ರ ಪ್ರದೇಶದಲ್ಲಿ ಧರಣಿ, ಪ್ರತಿಭಟನೆ, ಕಪ್ಪು ಬಾವುಟ ಪ್ರದರ್ಶನ ಆರಂಭವಾಗಿವೆ. ‘ಮೋದಿ ಗೋ ಬ್ಯಾಕ್‌’ ಎಂಬ ಫಲಕಗಳು ರಾಜಾಜಿಸುತ್ತಿವೆ.

ಎನ್‌ಡಿಎಗೆ ವಿದಾಯ: ಸಂಗ್ಮಾ ಬೆದರಿಕೆ

ಪೌರತ್ವ ಮಸೂದೆ ಜಾರಿಯಾದರೆ ಬಿಜೆಪಿ ನೇತೃತ್ವದ ಎನ್‌ಡಿಎ ತೊರೆಯುವುದಾಗಿ ನ್ಯಾಷನಲ್‌ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಅಧ್ಯಕ್ಷ ಮತ್ತು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್‌ ಕೆ. ಸಂಗ್ಮಾ ಶನಿವಾರ ಬೆದರಿಕೆ ಹಾಕಿದ್ದಾರೆ.

****

ಕೇವಲ ಇಬ್ಬರ ಕೈಯಲ್ಲಿ ದೇಶದ ಆಡಳಿತ ಚುಕ್ಕಾಣಿ ನೀಡಲು ಮಹಾಘಟಬಂಧನ್‌ ಅವಕಾಶ ನೀಡುವುದಿಲ್ಲ.

-ಅಖಿಲೇಶ್‌ ಯಾದವ್‌, ಸಮಾಜವಾದಿ ಪಕ್ಷದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT