ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ: ಸಂಭ್ರಮವಿಲ್ಲದ ಶಾಂತ ಈದ್‌

Last Updated 12 ಆಗಸ್ಟ್ 2019, 20:22 IST
ಅಕ್ಷರ ಗಾತ್ರ

ಶ್ರೀನಗರ: ‘ಜಮ್ಮು ಕಾಶ್ಮೀರದ ವಿವಿಧ ಮಸೀದಿಗಳಲ್ಲಿ ಶಾಂತಿಯುತವಾಗಿ ಈದ್‌ ಸಾಮೂಹಿಕ ಪ್ರಾರ್ಥನೆ ನಡೆದಿದೆ’ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ. ಜಿಲ್ಲೆಯ ಹಲವೆಡೆ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಎಲ್ಲಿಯೂ ಹಬ್ಬದ ಸಂಭ್ರಮ ಕಂಡುಬರಲಿಲ್ಲ.

‘ಜನರುದೊಡ್ಡ ಸಂಖ್ಯೆಯಲ್ಲಿ ಮನೆಗಳಿಂದ ಹೊರಬಂದು ಪ್ರಮುಖ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಅನಂತನಾಗ್‌, ಬಾರಾಮುಲ್ಲಾ, ಬಡಗಾಂ, ಬಂಡಿಪೊರ ಮುಂತಾದೆಡೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳು ನಡೆದಿವೆ.

ಎಲ್ಲಿಯೂ ಅಹಿತಕರ ಘಟನೆ ನಡೆದಿರುವ ಬಗ್ಗೆ ವರದಿಯಾಗಿಲ್ಲ. ಬಾರಾಮುಲ್ಲಾ ಹಳೆಯ ಪಟ್ಟಣದಲ್ಲಿರುವ ಜಾಮಿಯಾ ಮಸೀದಿಯಲ್ಲಿ ಸುಮಾರು 10 ಸಾವಿರ ಮಂದಿ ಪ್ರಾರ್ಥನೆ ಸಲ್ಲಿಸಿದ್ದಾರೆ’ ಎಂದು ಕೇಂದ್ರದ ಗೃಹ ಇಲಾಖೆಯ ಅಧಿಕಾರಿಯೊಬ್ಬರು ಟ್ವೀಟ್‌ ಮಾಡಿದ್ದಾರೆ.

ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿಗಾಗಿ ಭಾನುವಾರ ಸಂಜೆ ನಿಷೇಧಾಜ್ಞೆಯನ್ನು ಸಡಿಲಿಸಲಾ
ಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಕೆಲವು ಮಸೀದಿಗಳಲ್ಲಿ ಸೋಮವಾರ ಅಧಿಕಾರಿಗಳೇ ಸಿಹಿ ಹಂಚುತ್ತಿದ್ದುದು ಕಂಡುಬಂದಿದೆ.

‘ಅನುಮಾನಾಸ್ಪದ ವಸ್ತು ಕಂಡರೆ ತಿಳಿಸಿ’: ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲು ಆಡಳಿತಕ್ಕೆ ನೆರವಾಗುವಂತೆ ಪೊಲೀಸರು ಜಮ್ಮು ಕಾಶ್ಮೀರದ ನಾಗರಿಕರಲ್ಲಿ ಮನವಿ ಮಾಡಿದ್ದಾರೆ. ಜೊತೆಗೆ ಜನರಿಗೆ
ಕೆಲವು ಸೂಚನೆಗಳನ್ನೂ ಅವರು ನೀಡಿದ್ದಾರೆ.

‘ಎಲ್ಲಾದರೂ ಶಂಕಾಸ್ಪದ ವ್ಯಕ್ತಿ ಅಥವಾ ವಸ್ತು ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು, ಜನರು ಆಯುಧ, ಹರಿತವಾದ ವಸ್ತುಗಳು, ಹ್ಯಾಂಡ್‌ ಬ್ಯಾಗ್‌, ಪ್ಲಾಸ್ಟಿಕ್‌ ಚೀಲ, ರೇಡಿಯೊ, ಸ್ಟಾಪ್‌ ವಾಚ್‌, ಯಾವುದೇ ರೀತಿಯ ಪುಡಿ, ಕಡ್ಡಿಪೆಟ್ಟಿಗೆ, ಲೈಟರ್‌, ಕ್ಯಾಮೆರಾ ಮುಂತಾದ ವಸ್ತುಗಳನ್ನು ಸಾಗಿಸಬಾರದು. ಭದ್ರತಾ ಸಿಬ್ಬಂದಿ ಕೇಳಿದಾಗಲೆಲ್ಲ ತಮ್ಮ ವಿವರಗಳನ್ನು ನೀಡುವ ಮೂಲಕ ಶಾಂತಿ ಕಾಪಾಡಲು ಸಹಕರಿಸಬೇಕು’ ಎಂದು ಇಲಾಖೆ ಸೂಚನೆ ನೀಡಿದೆ.

370ನೇ ವಿಧಿ ರದ್ದಿಗೆ ಧರ್ಮ ಕಾರಣ:ಪಿ. ಚಿದಂಬರಂ

ಚೆನ್ನೈ ವರದಿ: ‘ಕಾಶ್ಮೀರವು ಹಿಂದೂ ಬಹುಸಂಖ್ಯಾತರ ರಾಜ್ಯ ಆಗಿದ್ದಿದ್ದರೆ ಬಿಜೆಪಿಯವರು 370ನೇ ವಿಧಿ ರದ್ದು ಮಾಡುತ್ತಿರಲಿಲ್ಲ’ ಎಂದು ಕಾಂಗ್ರೆಸ್‌ ಮುಖಂಡಪಿ. ಚಿದಂಬರಂ ಹೇಳಿದ್ದಾರೆ.

ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ‘ಸರ್ಕಾರವು ಜಮ್ಮು ಕಾಶ್ಮೀರದ ಜನರ ಮೇಲೆ ಬಲಪ್ರಯೋಗ ಮಾಡಿದೆ’ ಎಂದು ಆರೋಪಿಸಿದ್ದಾರೆ. ‘ಅಲ್ಲಿನ ಸ್ಥಿತಿ ಈಗಲೂ ಅತ್ಯಂತ ಉದ್ವಿಗ್ನವಾಗಿದೆ. ಅಲ್ಲಿ ನಡೆಯುತ್ತಿರುವ ಗಲಭೆಗಳ ಬಗ್ಗೆ ಅಂತರ
ರಾಷ್ಟ್ರೀಯ ಮಾಧ್ಯಮಗಳು ಮಾತ್ರ ವರದಿ ಮಾಡುತ್ತಿವೆ. ಭಾರತೀಯ ಮಾಧ್ಯಮಗಳು ಮೌನವಾಗಿವೆ. ಜಮ್ಮು ಕಾಶ್ಮೀರ ಶಾಂತಿಯುತವಾಗಿದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಭಾರತೀಯ ಮಾಧ್ಯಮಗಳು ವರದಿ ಮಾಡಿಲ್ಲ ಎಂದ ಮಾತ್ರಕ್ಕೆ ಪರಿಸ್ಥಿತಿ ಶಾಂತವಾಗಿದೆ ಎಂದು ಅರ್ಥವೇ’ ಎಂದು ಅವರು ಪ್ರಶ್ನಿಸಿದರು.

‘ಸೌರಾದಲ್ಲಿ ಸುಮಾರು 10 ಸಾವಿರ ಮಂದಿ ಪ್ರತಿಭಟನೆ ನಡೆಸಿದ್ದು ಸತ್ಯ, ಪೊಲೀಸರು ಪ್ರತಿಭಟನಕಾರರತ್ತ ಗುಂಡು ಹಾರಿಸಿದ್ದು ಸಹ ಸತ್ಯ’ ಎಂದು ಚಿದಂಬರಂ ಹೇಳಿದರು.

ಯೆಚೂರಿ ಎಚ್ಚರಿಕೆ: ವಿಶೇಷಾಧಿಕಾರ ರದ್ದುಗೊಳಿಸಿದ್ದರ ಪರಿಣಾಮ ಇತರ ರಾಜ್ಯಗಳಲ್ಲೂ ಕಾಣಿಸಲಿದೆ’ ಎಂದು ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ ಎಚ್ಚರಿಕೆ ನೀಡಿದ್ದಾರೆ.

ಸಿಹಿ ವಿನಿಮಯವೂ ಇಲ್ಲ

ಈದ್‌, ದೀಪಾವಳಿ ಹಾಗೂ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಭಾರತ– ಪಾಕ್‌ ಗಡಿಯಲ್ಲಿ ಎರಡೂ ರಾಷ್ಟ್ರಗಳ ಸೈನಿಕರು ಸಿಹಿಯನ್ನು ವಿನಿಮಯ ಮಾಡುವ ಸಂಪ್ರದಾಯ ದಶಕಗಳಿಂದ ನಡೆದುಬಂದಿತ್ತು. ಆದರೆ ಈ ಬಾರಿ ಈದ್‌ ಸಂದರ್ಭದಲ್ಲಿ ಆ ಸಂಪ್ರದಾಯ ನಡೆಯಲಿಲ್ಲ.

370ನೇ ವಿಧಿ ರದ್ದುಗೊಳಿಸಿದ ನಂತರ ಭಾರತದ ಜೊತೆಗಿನ ರಾಜತಾಂತ್ರಿಕ ಸಂಬಂಧಗಳನ್ನು ಪಾಕಿಸ್ತಾನವು ಮೊಟಕುಗೊಳಿಸಿದೆ. ಈ ಕಾರಣದಿಂದಾಗಿ ಗಡಿಯಲ್ಲಿ ಹಬ್ಬದ ಸಂದರ್ಭದಲ್ಲಿ ಕಾಣಿಸುವ ಸಂಭ್ರಮ, ಸಿಹಿ ಹಂಚಿಕೆಯ ಸಂಪ್ರದಾಯ ಗೋಚರಿಸಲಿಲ್ಲ.

‘ನಮ್ಮ ಗಡಿರಕ್ಷಣಾ ಪಡೆಯ ಸಿಬ್ಬಂದಿ ತೋರಿದ ಸೌಜನ್ಯಕ್ಕೆ ಪಾಕಿಸ್ತಾನದ ಸೈನಿಕರು ಪ್ರತಿಕ್ರಿಯೆ ನೀಡಿಲ್ಲ. ಆದ್ದರಿಂದ ಈ ಬಾರಿ ಸಿಹಿಯ ವಿನಿಮಯ ನಡೆಯಲಿಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬಸ್‌ ಸೇವೆ ರದ್ದುಗೊಳಿಸಿದ ಭಾರತ

ಭಾರತ– ಪಾಕಿಸ್ತಾನ ನಡುವಿನ ಬಸ್‌ ಸೇವೆಯನ್ನು ರದ್ದುಗೊಳಿಸಲು ಪಾಕಿಸ್ತಾನ ತೀರ್ಮಾನಿಸಿದ್ದರಿಂದ ಭಾರತ ಸೋಮವಾರದಿಂದ ಈ ಸೇವೆ ರದ್ದುಗೊಳಿಸಿದೆ.

‘ಪಾಕಿಸ್ತಾನದ ನಿರ್ಧಾರದ ಪರಿಣಾಮವಾಗಿ ದೆಹಲಿಯಿಂದ ಲಾಹೋರ್‌ಗೆ ಬಸ್‌ ಕಳುಹಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸೋಮವಾರ ಬೆಳಿಗ್ಗೆ 6 ಗಂಟೆಗೆ ದೆಹಲಿಯಿಂದ ಹೊರಡಬೇಕಿದ್ದ ಬಸ್‌ ಅನ್ನು ರದ್ದುಪಡಿಸಲಾಗಿದೆ’ ಎಂದು ದೆಹಲಿ ಸಾರಿಗೆ ನಿಗಮದ (ಡಿಟಿಸಿ) ಪ್ರಕಟಣೆ ತಿಳಿಸಿದೆ.

ರಾಹುಲ್‌ಗೆ ವಿಮಾನ ಕಳುಹಿಸುವೆ: ಮಲಿಕ್‌

ಕಾಶ್ಮೀರದಲ್ಲಿ ಭಾರಿ ಹಿಂಸಾಚಾರ ನಡೆದಿದೆ ಎಂಬ ವರದಿಗಳಿವೆ ಎಂದು ಹೇಳಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ ಮಲಿಕ್‌ ಅವರು ತಿರುಗೇಟು ನೀಡಿದ್ದಾರೆ.

‘ರಾಹುಲ್‌ ಗಾಂಧಿಯನ್ನು ನಾನು ಇಲ್ಲಿಗೆ ಆಹ್ವಾನಿಸುತ್ತಿದ್ದೇನೆ. ನಿಮಗೆ ನಾನು ವಿಮಾನ ಕಳುಹಿಸುತ್ತೇನೆ. ಇಲ್ಲಿ ಬಂದು ಪರಿಸ್ಥಿತಿಯನ್ನು ಕಣ್ಣಾರೆ ನೋಡಿ. ನಿಮ್ಮಂತಹ ಜವಾಬ್ದಾರಿಯುತ ವ್ಯಕ್ತಿ ಹೀಗೆ ಮಾತನಾಡಬಾರದು’ ಎಂದು ಮಲಿಕ್‌, ರಾಹುಲ್‌ಗೆ ಹೇಳಿದ್ದಾರೆ.

ಅವರ ಪಕ್ಷದ ಮುಖಂಡರೊಬ್ಬರು ಸಂಸತ್ತಿನಲ್ಲಿ ‘ಮೂರ್ಖ’ರಂತೆ ಮಾತನಾಡಿದ್ದಾರೆ. ಅವರ ಆ ಮಾತಿನಿಂದ ರಾಹುಲ್‌ಗೆ ನಾಚಿಕೆಯಾಗಿಲ್ಲವೇ ಎಂದೂ ಮಲಿಕ್‌ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT