ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವೂದ್ ಇಬ್ರಾಹಿಂ ಹತ್ಯೆಗೆ 1998ರಲ್ಲೇ ಸಂಚು: ಪೊಲೀಸರಿಗೆ ಲಕಡವಾಲಾ ಮಾಹಿತಿ

Last Updated 24 ಫೆಬ್ರುವರಿ 2020, 12:28 IST
ಅಕ್ಷರ ಗಾತ್ರ

ಮುಂಬೈ: ಛೋಟಾ ರಾಜನ್ ಹಾಗೂ ಆತನ ಸಹಚರರು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹತ್ಯೆಗೆ 1998ರಲ್ಲಿ ಸಂಚು ರೂಪಿಸಿದ್ದರು. ಆದರೆ ಅದು ವಿಫಲವಾಯಿತು ಎಂದು ಮತ್ತೊಬ್ಬ ಪಾತಕಿ ಎಜಾಜ್ ಲಕಡವಾಲಾ ಹೇಳಿದ್ದಾನೆ.

ಒಂದು ಕಾಲದಲ್ಲಿ ದಾವೂದ್ ಸಹಚರನಾಗಿದ್ದ ಲಕಡವಾಲಾ, ಮುಂಬೈ ಅಪರಾಧ ವಿಭಾಗದ ಪೊಲೀಸರ ಬಳಿ ಈ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ. ಹತ್ಯೆ ಹಾಗೂ ಸುಲಿಗೆ ಪ್ರಕರಣಗಳಲ್ಲಿ ಕಳೆದ ತಿಂಗಳು ಲಕಡವಾಲಾನನ್ನು ಪೊಲೀಸರು ಬಂಧಿಸಿದ್ದರು.

‘ದಾವೂದ್ ಹತ್ಯೆ ವಿಫಲವಾದ ಬಳಿಕ ಛೋಟಾ ಶಕೀಲ್‌ನ ಸಹಚರರು ಛೋಟಾ ರಾಜನ್ ಹಾಗೂ ನನ್ನ ಮೇಲೆ ದಾಳಿ ನಡೆಸಿದ್ದರು’ ಎಂದು ಲಕಡವಾಲಾ ಹೇಳಿದ್ದಾನೆ.

ಛೋಟಾ ರಾಜನ್‌ನ ಸಹಚರರು ಹಾಗೂ ಭಾರತೀಯ ಸಂಸ್ಥೆಗಳ ಅಧಿಕಾರಿಗಳು 1998ರಲ್ಲಿ ಕರಾಚಿಯಲ್ಲಿ ದಾವೂದ್‌ನನ್ನು ಮುಗಿಸಲು ಯೋಜನೆ ರೂಪಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವಿಕ್ಕಿ ಮಲ್ಹೋತ್ರಾ, ಫರೀದ್ ತನಾಶಾ, ಬಾಲು ಡೋಕ್ರೆ, ಲಕಡವಾಲಾ, ವಿನೋದ್ ಮತ್ಕರ್, ಸಂಜಯ್ ಘಾಟೆ ಮತ್ತು ಬಾಬಾ ರೆಡ್ಡಿ ಅವರನ್ನೊಳಗೊಂಡ ತಂಡವು ದಾವೂದ್‌ನನ್ನು ಕೊಲ್ಲಲು ಕರಾಚಿಗೆ ತೆರಳಿತ್ತು.

‘ಮಗಳು ಮರಿಯಾ ಸಾವಿನ ಬಳಿಕ ದಾವೂದ್‌ ಕರಾಚಿಯ ದರ್ಗಾಕ್ಕೆ ಭೇಟಿ ನೀಡುವ ಮಾಹಿತಿ ತಂಡಕ್ಕೆ ಸಿಕ್ಕಿತ್ತು. ನೇಪಾಳದ ಸಂಸದರೊಬ್ಬರು ಸುಳಿವು ನೀಡಿದ್ದರಿಂದ ದಾವೂದ್ ಭಾರಿ ಬಿಗಿಭದ್ರತೆಯಲ್ಲಿ ಬಂದು ಹೋಗಿದ್ದ. ಕಾರ್ಯಾಚರಣೆಯ ಮಾಹಿತಿ ದಾವೂದ್‌ಗೆ ಸಿಕ್ಕಿದ್ದು, ತಕ್ಷಣ ಹೊರಡಿಎಂದು ವಿಕ್ಕಿ ಮಲ್ಹೋತ್ರಾ ಅವರ ತಂಡಕ್ಕೆ ಛೋಟಾ ರಾಜನ್ ಸೂಚಿಸಿದ್ದ. ಕಾರ್ಯಾಚರಣೆಗೆ ತೆರಳಿದ್ದ ತಂಡ ಉಳಿದುಕೊಂಡಿದ್ದ ಫ್ಲಾಟ್ ಮೇಲೆ ಪಾಕಿಸ್ತಾನ ಪೊಲೀಸರು ದಾಳಿ ನಡೆಸಿ, ದಾವೂದ್ ಹತ್ಯೆಗೆ ಬಳಸಲು ತಂದಿದ್ದ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಿದ್ದರು’ ಎಂದು ಲಕಡವಾಲಾ ಮಾಹಿತಿ ನೀಡಿದ್ದಾನೆ.

ದಾವೂದ್ ಬಂಟನಾಗಿದ್ದ ಲಕಡವಾಲಾ, ಬಳಿಕ ಛೋಟಾ ರಾಜನ್ ಜತೆ ಗುರುತಿಸಿಕೊಂಡಿದ್ದ. 2008ರಲ್ಲಿ ಹೊರಬಂದು, ತನ್ನದೇ ಗ್ಯಾಂಗ್ ಕಟ್ಟಿಕೊಂಡಿದ್ದ. ನಕಲಿ ವೀಸಾ ಇಟ್ಟುಕೊಂಡು ಕೆಲ ವರ್ಷಗಳಿಂದ ನೇಪಾಳದಲ್ಲಿದ್ದ ಎಂದು ಪೊಲೀಸರು ಹೇಳಿದ್ದಾರೆ. ಜನವರಿ 9ರಂದು ಈತನನ್ನು ಮುಂಬೈ ಪೊಲೀಸರು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT