ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಚುನಾವಣೆ: ಮತದಾನಕ್ಕೆ ಸಿದ್ಧತೆ

Last Updated 31 ಅಕ್ಟೋಬರ್ 2018, 19:54 IST
ಅಕ್ಷರ ಗಾತ್ರ

ಬೆಂಗಳೂರು: ಮೂರು ಲೋಕಸಭೆ, ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನಕ್ಕೆ ಅಂತಿಮ ಸಿದ್ಧತೆ ನಡೆದಿದ್ದು, ಐದು ಕ್ಷೇತ್ರಗಳಲ್ಲಿ 6,453 ಮತಗಟ್ಟೆಗಳನ್ನು ಸ್ಥಾಪಿಸಲು ಸಿದ್ಧತೆ ನಡೆದಿದೆ.

ಶನಿವಾರ ಬೆಳಿಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ, ಇದೇ 6ರಂದು ಮತ ಎಣಿಕೆ ನಡೆಯಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಕ್ಷೇತ್ರಗಳಲ್ಲಿ ಒಟ್ಟು 1,502 ಸೂಕ್ಷ್ಮ ಮತಗಟ್ಟೆ, ಮಹಿಳೆಯರಿಗಾಗಿ 57 ಪಿಂಕ್‌ ಹಾಗೂ ವಿಕಲಚೇತನರಿಗಾಗಿ 26 ಮತಗಟ್ಟೆಗಳನ್ನು ತೆರೆಯಲಾಗುವುದು ಎಂದರು.

ಈ ಕ್ಷೇತ್ರಗಳಲ್ಲಿ ಒಟ್ಟು 1,502 ಸೂಕ್ಷ್ಮ ಮತಗಟ್ಟೆಗಳಿದ್ದು, ಛಾಯಾಗ್ರಾಹಕರು, ಅಂತರ್ಜಾಲ ಪ್ರಸಾರ ವ್ಯವಸ್ಥೆ ಮತ್ತು ಕಣ್ಗಾವಲು ವೀಕ್ಷಕರನ್ನು ನೇಮಿಸಲಾಗುತ್ತಿದೆ. ಬಂದೋಬಸ್ತ್‌ಗಾಗಿ ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ (ಸಿಎಪಿಎಫ್‌) 39 ತುಕಡಿ ನಿಯೋಜಿಸಲಾಗುತ್ತಿದೆ. ಮತದಾರರಿಗೆ ಹಂಚಲು ಅಕ್ರಮವಾಗಿ ಸಾಗಿಸುತ್ತಿದ್ದ ₹ 55 ಲಕ್ಷ ಹಣ, 60 ಸಾವಿರ ಲೀಟರ್‌ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗಳ ಗೋಡೆ ಮೇಲಿದ್ದ ಬರಹ ಮತ್ತು ಪೋಸ್ಟರ್‌ಗಳನ್ನು ತೆಗೆಯಲಾಗಿದೆ. ಈ ಕ್ಷೇತ್ರಗಳಲ್ಲಿ ಒಟ್ಟು 9,822 ಬ್ಯಾಲೆಟ್‌ ಯುನಿಟ್‌ಗಳು, 8,438 ಕಂಟ್ರೋಲ್‌ ಯುನಿಟ್‌ ಹಾಗೂ 8,922 ವಿವಿಪ್ಯಾಟ್‌ಗಳನ್ನು ಬಳಸಲಾಗುತ್ತಿದೆ. ಇದುವರೆಗೆ ಚುನಾವಣೆ ಸಂಬಂಧಿತ 12 ದೂರುಗಳು ಬಂದಿದ್ದು, ಎಲ್ಲವನ್ನೂ ವಿಲೇವಾರಿ ಮಾಡಲಾಗಿದೆ ಎಂದೂ ಸಂಜೀವ್‌ ಕುಮಾರ್‌ ವಿವರಿಸಿದರು.

ಅಭ್ಯರ್ಥಿಗಳ ಕ್ರಿಮಿನಲ್‌ ಹಿನ್ನೆಲೆ ಪ್ರಚಾರ

ಚುನಾವಣಾ ಕಣದಲ್ಲಿರುವ, ಕ್ರಿಮಿನಲ್‌ ಮೊಕದ್ದಮೆ ಎದುರಿಸುತ್ತಿರುವ ಮತ್ತು ಶಿಕ್ಷೆಗೆ ಒಳಗಾಗಿರುವ ಅಭ್ಯರ್ಥಿಗಳ ಹೆಸರು ಸಹಿತ ವಿವರವನ್ನು ಮಾಧ್ಯಮಗಳಲ್ಲಿ ಪ್ರಚಾರ ಮಾಡಲು ಆಯೋಗ ಸಿದ್ಧತೆ ನಡೆಸಿದೆ.

ಸುಪ್ರೀಂ ಕೋರ್ಟ್‌ ತೀರ್ಪಿನಂತೆ, ಚುನಾವಣಾ ಆಯೋಗ ನಿಗದಿಪಡಿಸಿರುವ ಸಿ1 ನಮೂನೆಯಲ್ಲಿ ಘೋಷಿಸಬೇಕು. ಆ ಚುನಾವಣಾ ಕ್ಷೇತ್ರದಲ್ಲಿ ಹೆಚ್ಚು ಪ್ರಸಾರ ಹೊಂದಿರುವ ದಿನಪತ್ರಿಕೆ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮತದಾನಕ್ಕೆ ಎರಡು ದಿನದ ಮೊದಲು ಪ್ರಕಟಿಸಬೇಕು ಎಂದು ಚುನಾವಣಾಧಿಕಾರಿಗಳಿಗೆ ಸೂಚಿಸಲಾಗಿದೆ.

ಈ ಬಗ್ಗೆ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳಿಗೂ ತಿಳಿವಳಿಕೆ ನೀಡಲಾಗಿದೆ. ಕೆಲವು ರಾಜಕೀಯ ಪಕ್ಷಗಳು ಇಂಥ ಅಭ್ಯರ್ಥಿಗಳ ಮಾಹಿತಿ ನೀಡಿವೆ. ಇನ್ನೂ ಕೆಲವು ಪಕ್ಷಗಳು ನೀಡಿಲ್ಲ ಎಂದು ಸಂಜೀವ್‌ ಕುಮಾರ್‌ ತಿಳಿಸಿದರು.


31

ಒಟ್ಟು ಅಭ್ಯರ್ಥಿಗಳು

54,54,275

ಒಟ್ಟು ಮತದಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT