ಸೋಮವಾರ, ಆಗಸ್ಟ್ 3, 2020
24 °C

’ಇವಿಎಂ ಹ್ಯಾಕಿಂಗ್‌ ಸಾಧ್ಯ’ ಇದೊಂದು ಅಸಂಬದ್ಧ ಹೇಳಿಕೆ– ಚುನಾವಣಾ ಆಯೋಗ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದ ಚುನಾವಣೆಗಳಲ್ಲಿ ಬಳಸಲಾಗಿರುವ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳನ್ನು ಹ್ಯಾಕ್‌ ಮಾಡಬಹುದೆಂದು ಘೋಷಿಸಿರುವ ಲಂಡನ್‌ ಮೂಲದ ಹ್ಯಾಕರ್‌ ಮಾತನ್ನು ಭಾರತೀಯ ಚುನಾವಣಾ ಆಯೋಗ ಸಾರಾಸಗಟಾಗಿ ತಳ್ಳಿಹಾಕಿದೆ. 

ಸೋಮವಾರ ಲಂಡನ್‌ನಲ್ಲಿ ನಡೆದಿರುವ ಹ್ಯಾಕಥಾನ್‌ ಕಾರ್ಯಕ್ರಮದಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿರುವ ಸೈಬರ್‌ ತಜ್ಞ ಎಂದು ಹೇಳಿಕೊಳ್ಳುವ ಸಯೀದ್ ಶುಜಾ, ’ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಗುಜರಾತ್ ಚುನಾವಣೆಯಲ್ಲಿ 'ಇವಿಎಂ ದುರ್ಬಳಕೆ' ನಡೆದಿದೆ. ಭಾರತದ ಚುನಾವಣೆಗಳಲ್ಲಿ ಬಳಸಿರುವ ಇವಿಎಂಗಳನ್ನು ನಾನು ಹ್ಯಾಕ್‌ ಮಾಡಬಲ್ಲೆ’ ಎಂದು ಹೇಳಿಕೊಂಡಿದ್ದರು. ಇವಿಎಂ ಬಳಕೆ ನಿಲ್ಲಿಸಿ, ಬ್ಯಾಲೆಟ್‌ ಪೇಪರ್‌ ಬಳಕೆ ಪುನಃ ಆರಂಭಿಸುವಂತೆ ವಿರೋಧ ಪಕ್ಷಗಳು ಒತ್ತಡ ಹೇರುತ್ತಿರುವ ಬೆನ್ನಲೇ, ಶುಜಾ ನೀಡಿರುವ ಹೇಳಿಕೆಯು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಇದನ್ನೂ ಓದಿ: 2014ರ ಲೋಕಸಭಾ ಚುನಾವಣೆಯಲ್ಲಿ ಇವಿಎಂ ದುರ್ಬಳಕೆಯಾಗಿತ್ತು: ಅಮೆರಿಕದ ಸೈಬರ್ ತಜ್ಞ

ಇವಿಎಂ ’ದುರ್ಬಳಕೆ ರಹಿತ’ ಸಾಧನ ಎಂದು ಐಐಟಿ ಭಿಲ್ಲಾಯ್‌ನ ನಿರ್ದೇಶಕ ಹಾಗೂ ಚುನಾವಣಾ ಆಯೋಗದ ಉನ್ನತ ತಾಂತ್ರಿಕ ತಜ್ಞರಾದ ಡಾ.ರಜತ್‌ ಮೂನಾ ಹೇಳಿದ್ದಾರೆ. ’ವೈರ್‌ಲೆಸ್‌ ಸಂಪರ್ಕದ ಮುಖೇನ ದತ್ತಾಂಶವನ್ನು ಪ್ರಸಾರ ಅಥವಾ ವರ್ಗಾವಣೆ ಮಾಡುವಂತಹ ಯಾವುದೇ ಸಾಧ್ಯತೆಗಳು ಇವಿಎಂ ಯಂತ್ರಗಳಲ್ಲಿಲ್ಲ. ಹಾಗಾಗಿ, ಇವುಗಳನ್ನು ದುರ್ಬಳಕೆ ಮಾಡಿಕೊಳ್ಳುವುದು ಅಸಾಧ್ಯ’ ಎಂದು ಅಭಿಪ್ರಾಯ ಪಟ್ಟಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. 

ಹ್ಯಾಕರ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗ, ’ಇದೊಂದು ಪ್ರಚೋದಕಾರಿ, ಆಕ್ಷೇಪಾರ್ಹ ಬೆಳವಣಿಗೆಯಾಗಿದ್ದು, ಈ ಬಗ್ಗೆ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವುದು ಖಚಿತ’ ಎಂದಿದೆ. ಇವಿಎಂಗಳ ದುರ್ಬಳಕೆ ಅಸಾಧ್ಯ ಎಂಬ ಧೋರಣೆಗೆ ಚುನಾವಣಾ ಆಯೋಗ ಬದ್ಧವಾಗಿದೆ ಎಂದು ಪುನರುಚ್ಛರಿಸಿದೆ.

ಹ್ಯಾಕರ್‌ ಸಯೀದ್ ಶಾಜು ಪ್ರಕಾರ, ’ವೈ–ಫೈ ಅಥವಾ ಬ್ಲೂಟೂತ್‌ ತಂತ್ರಜ್ಞಾನ ಪ್ರಬುದ್ಧತೆ ಬಂದಿರದ ಕಾಲದಲ್ಲಿ ರೂಪಿಸಲಾಗಿರುವ ಹಳೆಯ ಚಿಪ್‌ಗಳನ್ನು ಇವಿಎಂಗಳು ಹೊಂದಿವೆ. ಹಾಗಾಗಿ, ಪ್ರತ್ಯೇಕವಾಗಿ ಈ ಯಂತ್ರಗಳನ್ನು ಹ್ಯಾಕ್‌ ಮಾಡಲು ಸಾಧ್ಯವಿಲ್ಲ. ಆದರೆ, ಯಂತ್ರಗಳಲ್ಲಿ ಸಣ್ಣ ಬದಲಾವಣೆ ಮಾಡಲು ಖಂಡಿತ ಸಾಧ್ಯ’ ಎಂದಿದ್ದಾರೆ. 

’ಅತ್ಯಂತ ಕಡಿಮೆ ಕಂಪನಾಂಕಗಳನ್ನು ಹೊಮ್ಮಿಸುವ ಯಂತ್ರಗಳನ್ನು ಹೊಂದಿದ್ದರೆ ಸಾಕು...ಇವಿಎಂಗಳಲ್ಲಿ ಬದಲಾವಣೆ ಸಾಧ್ಯ’ ಎಂದು ಹ್ಯಾಕರ್‌ ಹೇಳಿಕೊಂಡಿದ್ದಾರೆ. 

ಹಲವು ರಾಜಕೀಯ ಘಟನೆಗಳನ್ನು ಪ್ರಸ್ತಾಪಿಸಿರುವ ಹ್ಯಾಕರ್‌ನ ಮಾತುಗಳನ್ನು ಒಳಗೊಂಡ ಹ್ಯಾಕಥಾನ್‌ ಕಾರ್ಯಕ್ರಮ ಫೇಸ್ ಬುಕ್‌ನಲ್ಲಿ ನೇರ ಪ್ರಸಾರವಾಗಿದೆ. ಈ ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್‌ ಮುಖಂಡ ಕಪಿಲ್‌ ಸಿಬಲ್‌ ಸಹ ಭಾಗಿಯಾಗಿದ್ದರು. 

ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ಸಚಿವ ಅರುಣ್‌ ಜೇಟ್ಲಿ, ಸರಣಿ ಟ್ವೀಟ್‌ಗಳ ಮೂಲಕ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ. ’ರಫೇಲ್‌, 15 ಕೈಗಾರಿಕೋದ್ಯಮಿಗಳಿಗೆ ಯಾವತ್ತಿಗೂ ಇರದ ಸಾಲಮನ್ನಾ,..ಈಗ ಮುಂದಿನ ಮಹಾನ್‌ ಸುಳ್ಳು– ಇವಿಎಂ ಹ್ಯಾಕಿಂಗ್‌’,..ಎಂದು ಟ್ವೀಟಿಸಿದ್ದಾರೆ. 

‘ಕಾಂಗ್ರೆಸ್ ಅನೇಕ ಗುತ್ತಿಗೆದಾರರನ್ನು ಹೊಂದಿದ್ದು, ಅಗತ್ಯಬಿದ್ದಾಗ ಅವರು ಪಾಕಿಸ್ತಾನವನ್ನು ಸಂಪರ್ಕಿಸಿ ಮೋದಿ ಅವರನ್ನು ಸ್ಥಾನದಿಂದ ಇಳಿಸಲು ಪ್ರಯತ್ನಿಸುತ್ತಾರೆ. ಮುಂಬರುವ ಚುನಾವಣೆಯಲ್ಲಿ ಸೋಲುವ ಭಯದಿಂದಾಗಿ ಅವರು ಹ್ಯಾಕಿಂಗ್‌ ಹಾರರ್‌ ಶೋ ಏರ್ಪಡಿಸಿದ್ದಾರೆ’ ಎಂದು ಬಿಜೆಪಿಯ ಮುಕ್ತರ್‌ ಅಬ್ಬಾಸ್‌ ನಖ್ವಿ ವ್ಯಂಗ್ಯವಾಡಿದ್ದಾರೆ. 

‘ಪ್ರತಿಯೊಂದು ಮತವೂ ಅಮೂಲ್ಯ’ ಎಂದು ಟ್ವೀಟಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಿದೆ. ನಿಮ್ಮ ಪ್ರತಿಯೊಂದು ಮತವೂ ಅಮೂಲ್ಯವಾದುದು. ಇವಿಎಂ ಕುರಿತಾಗಿ ಎಲ್ಲ ಪಕ್ಷಗಳೂ ಯುನೈಟೆಡ್‌ ಇಂಡಿಯಾ ರ‍್ಯಾಲಿಯಲ್ಲಿ ಚರ್ಚಿಸಿದ್ದೇವೆ. ಜ.19ರಂದೇ ನಿರ್ಧರಿಸುವಂತೆ ಈ ವಿಚಾರವನ್ನು ಚುನಾವಣಾ ಆಯೋಗಕ್ಕೆ ಕೊಂಡೊಯ್ಯುತ್ತೇವೆ.’ ಎಂದಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು