ಚುನಾವಣಾ ಬಾಂಡ್‌: ’ದೇಣಿಗೆ ವಿವರ ನೀಡಿ’– ರಾಜಕೀಯ ಪಕ್ಷಗಳಿಗೆ ಸುಪ್ರೀಂ ಸೂಚನೆ

ಬುಧವಾರ, ಏಪ್ರಿಲ್ 24, 2019
28 °C
ಲೋಕಸಭಾ ಚುನಾವಣೆ

ಚುನಾವಣಾ ಬಾಂಡ್‌: ’ದೇಣಿಗೆ ವಿವರ ನೀಡಿ’– ರಾಜಕೀಯ ಪಕ್ಷಗಳಿಗೆ ಸುಪ್ರೀಂ ಸೂಚನೆ

Published:
Updated:

ನವದೆಹಲಿ: ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಪಡೆದಿರುವ ರಾಜಕೀಯ ಪಕ್ಷಗಳು ಹಣದ ವಿವರವನ್ನು ಮುಚ್ಚಿದ ಲಕೋಟೆಯಲ್ಲಿ ಕೂಡಲೇ ಚುನಾವಣಾ ಆಯೋಗಕ್ಕೆ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಬಗ್ಗೆ ಶುಕ್ರವಾರ ಎಲ್ಲ ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಿದೆ. 

ಚುನಾವಣಾ ಬಾಂಡ್‌ಗಳ ಬಳಕೆಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ಅಸಮ್ಮತಿಸಿದೆ. ಹಣಕಾಸು ಕಾಯ್ದೆ, 2016–17ರ ಮೂಲಕ ಚುನಾವಣಾ ಬಾಂಡ್‌ಗಳನ್ನು ಕಾರ್ಯರೂಪಕ್ಕೆ ತರಲಾಗಿದೆ. 

ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‌ಗಳ ಮೂಲಕ ಪಡೆದಿರುವ ಹಣದ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡುವಂತೆ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ, ನ್ಯಾಯಮೂರ್ತಿ ದೀಪಕ್‌ ಗುಪ್ತಾ ಹಾಗೂ ಸಂಜೀವ್‌ ಖನ್ನಾ ಅವರನ್ನು ಒಳಗೊಂಡ ನ್ಯಾಯಪೀಠ ಮಧ್ಯಂತರ ಆದೇಶ ನೀಡಿದೆ. 

ಚುನಾವಣೆಗೆ ದೇಣಿಗೆ ಸಂಗ್ರಹಕ್ಕೆ ರಾಜಕೀಯ ಪಕ್ಷಗಳು ’ಚುನಾವಣಾ ಬಾಂಡ್‌’ ಬಳಸುವುದರ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ಗುರುವಾರ ಪೂರ್ಣಗೊಂಡಿತ್ತು. ಕೋರ್ಟ್‌ ಆದೇಶವನ್ನು ಕಾಯ್ದಿರಿಸಿತ್ತು. 

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಅವರು ‘ಮತದಾರರಿಗೆ ಯಾವುದನ್ನು ತಿಳಿಯುವ ಹಕ್ಕಿದೆ? ರಾಜಕೀಯ ಪಕ್ಷಗಳಿಗೆ ಎಲ್ಲಿಂದ ಹಣ ಬರುತ್ತದೆ ಎಂಬುದನ್ನು ತಿಳಿಯುವ ಅಗತ್ಯ ಮತದಾರರಿಗೆ ಇಲ್ಲ’ ಎಂದು ಕೋರ್ಟ್‌ಗೆ ಪ್ರತಿಕ್ರಿಯಿಸಿದ್ದರು. 

ಇದನ್ನೂ ಓದಿ: ಮತದಾರರಿಗೆ ರಾಜಕೀಯ ಪಕ್ಷಗಳ ದೇಣಿಗೆ ಮೂಲ ತಿಳಿಯುವ ಹಕ್ಕಿಲ್ಲ–ಅಟಾರ್ನಿ ಜನರಲ್‌

ಚುನಾವಣಾ ಬಾಂಡ್‌ ವಿಷಯದಲ್ಲಿ ಹೊರಬಂದಿರುವ ವಿಚಾರಗಳು ’ಘನವಾದುದಾಗಿವೆ ಹಾಗೂ ಚುನಾವಣಾ ಪ್ರಕ್ರಿಯಿಯೆಯ ಪಾವಿತ್ರ್ಯತೆಯ ಮೇಲೆ ಪರಿಣಾಮ ಬೀರಬಹುದಾಗಿದೆ’. ಅಲ್ಪಾವಧಿ ವಿಚಾರಣೆಯಿಂದ ನಿರ್ಧರಿಸುವುದು ಸಾಧ್ಯವಿಲ್ಲ ಎಂದು ಕೋರ್ಟ್‌ ಹೇಳಿದೆ.

ಎನ್‌ಜಿಒ ’ಅಸೋಸಿಯೇಷನ್‌ ಆಫ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌’ ಮತ್ತು ಸಿಪಿಐ(ಎಂ) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಕೂಲಂಕಷ ವಿಚಾರಣೆ ನಡೆಸುವುದಾಗಿ ಕೋರ್ಟ್‌ ಹೇಳಿದೆ. 

ರಾಜಕೀಯ ಪಕ್ಷಗಳತ್ತ ಹರಿಯುವ ಸಾವಿರಾರು ಕೋಟಿ ರೂಪಾಯಿ ಕಪ್ಪು ಹಣದ ನಿಗಾವಹಿಸಲು ಚುನಾವಣಾ ಬಾಂಡ್‌ ಸಹಕಾರಿ ಎಂದು ಈ ಹಿಂದೆ ಕೇಂದ್ರ ಸರ್ಕಾರ ಹೇಳಿತ್ತು. 

ಎನ್‌ಜಿಒ ಪರವಾಗಿ ವಾದ ಮಂಡಿಸಿರುವ ಅಡ್ವೊಕೇಟ್‌ ಪ್ರಶಾಂತ್‌ ಭೂಷಣ್‌, ಶೇ 95ರಷ್ಟು ಚುನಾವಣಾ ಬಾಂಡ್‌ಗಳು ಆಡಳಿತಾರೂಢ ಬಿಜೆಪಿಗೆ ಸೇರಿರುವುದು ಆರ್‌ಟಿಐ ಪ್ರಶ್ನೆಗಳಿಂದ ಹೊರಬಂದಿರುವುದಾಗಿ ಪ್ರಸ್ತಾಪಿಸಿದ್ದಾರೆ. 

ಸಾವಿರಾರು ಕೋಟಿ ರೂಪಾಯಿ ಕಪ್ಪು ಹಣ ರಾಜಕೀಯ ಪಕ್ಷಗಳಿಗೆ ಸೇರುವುದನ್ನು ಚುನಾವಣಾ ಬಾಂಡ್‌ಗಳು ತಡೆಯುವಂತಾಗಿದೆ ಎಂದು ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಹೇಳಿದ್ದರು.  

ಆರ್‌ಬಿಐ ಕಾಯ್ಡೆ, ಜನಪ್ರತಿನಿಧಿ ಕಾಯ್ದೆ, ಆದಾಯ ತೆರಿಗೆ ಕಾಯ್ದೆ ಹಾಗೂ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ಡೆಗಳಿಗೆ 2016 ಮತ್ತು 2017ರ ಹಣಕಾಸು ಕಾಯ್ದೆಗಳ ಮೂಲಕ ತಿದ್ದುಪಡಿ ತಂದು ಕಾರ್ಯಗತಗೊಳಿಸಿರುವ ಚುನಾವಣಾ ಬಾಂಡ್‌ಗಳ ಸಿಂಧುತ್ವದ ಪ್ರಶ್ನೆ ಮಾಡಿ ಅರ್ಜಿ ಸಲ್ಲಿಸಲಾಗಿದೆ. 

ಚುನಾವಣಾ ಬಾಂಡ್‌ಗಳ ಕುರಿತ ಇತ್ತೀಚಿನ ವಿಚಾರಣೆಯಲ್ಲಿ ಚುನಾವಣಾ ಆಯೋಗ, ‘ಚುನಾವಣಾ ಬಾಂಡ್‌ಗಳ ಅನಾಮಧೇಯತೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, 2017ರಲ್ಲಿ ಕಾನೂನು ಸಚಿವಾಲಯಕ್ಕೆ ಸಲ್ಲಿಸಿದ್ದ ಅಫಿಡವಿಟ್‌’ ಕುರಿತು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

‘ಚುನಾವಣಾ ಬಾಂಡ್‌ಗಳಲ್ಲಿ ಅನಾಮಧೇಯತೆ ಕಾಪಾಡುವುದರಿಂದ ವಿದೇಶಿ ಮೂಲಗಳು ಹಾಗೂ ಶೆಲ್‌ ಕಂಪನಿಗಳು ದೇಣಿಗೆ ನೀಡುವ ಮೂಲಕ ಭಾರತದ ರಾಜಕೀಯ ಪಕ್ಷಗಳು ಹಾಗೂ ಚುನಾವಣೆಗಳ ಮೇಲೆ ಪ್ರಭಾವ ಬೀರಬಹುದಾಗಿರುತ್ತದೆ’ ಎಂದು ದೇಣಿದಾರರ ಅನಾಮಧೇಯತೆ ಬಗ್ಗೆ ಚುನಾವಣಾ ಆಯೋಗ ಅಫಿಡವಿಟ್‌ನಲ್ಲಿ ಕಳವಳ ವ್ಯಕ್ತಪಡಿಸಿತ್ತು.

ನಗದು ದೇಣಿಗೆ ಮಿತಿಯನ್ನು ₹20,000ದಿಂದ ₹2000ಕ್ಕೆ ಇಳಿಸಲಾಗಿದ್ದು, ಹೆಸರು, ಪಾನ್‌ ಸಂಖ್ಯೆ ಸೇರಿದಂತೆ ಇತರೆ ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳಲಾಗಿಲ್ಲ. 

ಬರಹ ಇಷ್ಟವಾಯಿತೆ?

 • 9

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !