ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರಿಗೆ ರಾಜಕೀಯ ಪಕ್ಷಗಳ ದೇಣಿಗೆ ಮೂಲ ತಿಳಿಯುವ ಹಕ್ಕಿಲ್ಲ–ಅಟಾರ್ನಿ ಜನರಲ್‌

ಚುನಾವಣಾ ಬಾಂಡ್‌ 
Last Updated 11 ಏಪ್ರಿಲ್ 2019, 14:39 IST
ಅಕ್ಷರ ಗಾತ್ರ

ನವದೆಹಲಿ:‘ರಾಜಕೀಯ ಪಕ್ಷಗಳಿಗೆ ಎಲ್ಲಿಂದ ದೇಣಿಗೆ ದೊರೆಯುತ್ತಿದೆ ಎಂಬುದನ್ನು ಮತದಾರರು ತಿಳಿಯುವ ಅಗತ್ಯವಿಲ್ಲ’ ಎಂದು ದೇಶದ ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಕೋರ್ಟ್‌ಗೆ ಸಲ್ಲಿಸಿರುವ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ವೇಣುಗೋಪಾಲ್‌ ಅವರು ಅರ್ಜಿದಾರರಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ‘ಮತದಾರರಿಗೆ ಯಾವುದನ್ನು ತಿಳಿಯುವ ಹಕ್ಕಿದೆ? ರಾಜಕೀಯ ಪಕ್ಷಗಳಿಗೆ ಎಲ್ಲಿಂದ ಹಣ ಬರುತ್ತದೆ ಎಂಬುದನ್ನು ತಿಳಿಯುವ ಅಗತ್ಯ ಮತದಾರರಿಗೆ ಇಲ್ಲ’ ಎಂದಿದ್ದಾರೆ. ‘ಮತದಾರರಿಗೆ ತಿಳಿಯುವ ಹಕ್ಕಿದೆ’ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.

ಚುನಾವಣೆಗೆ ದೇಣಿಗೆ ಸಂಗ್ರಹಕ್ಕೆ ರಾಜಕೀಯ ಪಕ್ಷಗಳು ’ಚುನಾವಣಾ ಬಾಂಡ್‌’ ಬಳಸುವುದರ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌, ಶುಕ್ರವಾರ ಆದೇಶ ಪ್ರಕಟಿಸಲಿದೆ. ಗುರುವಾರ ವಿಚಾರಣೆ ಪೂರ್ಣಗೊಂಡಿದ್ದು, ಕೋರ್ಟ್‌ ಆದೇಶ ಕಾಯ್ದಿರಿಸಿದೆ.

ಚುನಾವಣಾ ಬಾಂಡ್‌ಗಳನ್ನು ಹೆಸರು ಬಹಿರಂಗಪಡಿಸದೆಯೇ ನೀಡಲಾಗುತ್ತದೆ. ಯಾವ ಬಾಂಡ್‌ ಯಾವ ಖರೀದಿದಾರನನ್ನು ತಲುಪುತ್ತದೆ ಎಂಬುದು ಪಕ್ಷ ಇಲ್ಲವೇ ಬ್ಯಾಂಕ್‌ಗಳಿಗೆ ತಿಳಿಯುವುದಿಲ್ಲ ಎಂದು ಕೇಂದ್ರ ಸರ್ಕಾರ ಕೋರ್ಟ್‌ಗೆ ತಿಳಿಸಿದೆ.

ಎಕ್ಸ್ ಅಥವಾ ವೈವ್ಯಕ್ತಿಯ ಅರ್ಜಿ ಆಧಾರದ ಮೇಲೆ ಚುನಾವಣಾ ಬಾಂಡ್‌ ನೀಡುವ ಬ್ಯಾಂಕ್‌, ಯಾವ ಬಾಂಡ್‌ನ್ನು ಅರ್ಜಿದಾರ ಎಕ್ಸ್‌ಗೆ ಹಾಗೂ ಯಾವ ಬಾಂಡ್‌ ವೈವ್ಯಕ್ತಿಗೆ ನೀಡಲಾಗಿದೆ ಎಂಬ ಮಾಹಿತಿಯನ್ನು ಹೊಂದಿದೆಯೇ’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಸುಪ್ರೀಂ ಕೋರ್ಟ್‌ ನ್ಯಾಯಪೀಠವು ಅಟಾರ್ನಿ ಜನರಲ್‌ ಅವರನ್ನು ಕೇಳಿತು.

ಇಲ್ಲ ಎನ್ನುವಂತೆ ಅಟಾರ್ನಿ ಜನರಲ್‌ ವೇಣುಗೋಪಾಲ್‌ ಪ್ರತಿಕ್ರಿಯಿಸಿದರು.

‘ಹಾಗಾದರೆ, ಕಪ್ಪು ಹಣದ ವಿರುದ್ಧ ಹೋರಾಡಲು ನಡೆಸುತ್ತಿರುವ ನಿಮ್ಮ ಪ್ರಯತ್ನಗಳೆಲ್ಲ ನಿಷ್ಪ್ರಯೋಜಕವಾಗುತ್ತದೆ’ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ಎರಡು ವಿಚಾರಗಳ ಬಗ್ಗೆ ಅಟಾರ್ನಿ ಜನರಲ್‌ ಕೋರ್ಟ್‌ನಲ್ಲಿ ಒತ್ತಿ ಹೇಳಿದರು. ‘ಕಪ್ಪು ಹಣ ನಿರ್ಮೂಲನೆಗಾಗಿ ಚುನಾವಣಾ ಬಾಂಡ್‌ಗಳನ್ನು ಪರಿಚಯಿಸಲಾಗಿದೆ ಹಾಗೂ ಇದು ಕಾರ್ಯನೀತಿಗೆ ಸಂಬಂಧಿಸಿದ್ದಾಗಿದೆ. ಕಪ್ಪು ಹಣದ ಹರಿವನ್ನು ತಡೆಯಲು ಸರ್ಕಾರ ಪ್ರಯತ್ನಿಸಿದರೆ, ಕೋರ್ಟ್‌ ಅದನ್ನು ತಡೆಯಬಹುದೇ? ಇದೊಂದು ಪ್ರಯೋಗ ಮತ್ತು ಕೋರ್ಟ್‌ನಿಂದ ಇದಕ್ಕೆ ಬೆಂಬಲ ಸಿಗಬೇಕು’ ಎಂದು ಅಟಾರ್ನಿ ಜನರಲ್‌ ಹೇಳಿದರು.

‘ಸಾರ್ವತ್ರಿಕ ಚುನಾವಣೆ ಪೂರ್ಣಗೊಳ್ಳುವವರೆಗೂ ಕಾಯಬೇಕು, ಕೋರ್ಟ್‌ ಅಡ್ಡಿಪಡಿಸಬಾರದು’ ಎಂದು ಕೋರಿದರು. ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ, ಈ ಕಾರ್ಯಯೋಜನೆಯನ್ನು ಪರಿಶೀಲಿಸುತ್ತದೆ ಎಂದರು.

ಚುನಾವಣಾ ಬಾಂಡ್‌ಗಳ ಕುರಿತ ಇತ್ತೀಚಿನ ವಿಚಾರಣೆಯಲ್ಲಿ ಚುನಾವಣಾ ಆಯೋಗ, ‘ಚುನಾವಣಾ ಬಾಂಡ್‌ಗಳ ಅನಾಮಧೇಯತೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, 2017ರಲ್ಲಿ ಕಾನೂನು ಸಚಿವಾಲಯಕ್ಕೆ ಸಲ್ಲಿಸಿದ್ದ ಅಫಿಡವಿಟ್‌’ ಕುರಿತು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

‘ಚುನಾವಣಾ ಬಾಂಡ್‌ಗಳಲ್ಲಿ ಅನಾಮಧೇಯತೆ ಕಾಪಾಡುವುದರಿಂದ ವಿದೇಶಿ ಮೂಲಗಳು ಹಾಗೂ ಶೆಲ್‌ ಕಂಪನಿಗಳು ದೇಣಿಗೆ ನೀಡುವ ಮೂಲಕ ಭಾರತದ ರಾಜಕೀಯ ಪಕ್ಷಗಳು ಹಾಗೂ ಚುನಾವಣೆಗಳ ಮೇಲೆ ಪ್ರಭಾವ ಬೀರಬಹುದಾಗಿರುತ್ತದೆ’ ಎಂದು ದೇಣಿದಾರರ ಅನಾಮಧೇಯತೆ ಬಗ್ಗೆ ಚುನಾವಣಾ ಆಯೋಗ ಅಫಿಡವಿಟ್‌ನಲ್ಲಿ ಕಳವಳ ವ್ಯಕ್ತಪಡಿಸಿತ್ತು.

ಚುನಾವಾಣಾ ಬಾಂಡ್‌ ಕಾರ್ಯಯೋಜನೆಗೆ ತಡೆ ನೀಡುವಂತೆ ಅಥವಾ ರಾಜಕೀಯ ಪಕ್ಷಗಳಿಗೆ ಪಾರದರ್ಶಕವಾದ ಬೇರೊಂದು ಮಾರ್ಗದ ಮೂಲಕ ದೇಣಿಗೆ ಸಂಗ್ರಹ ನಡೆಸಲು ಅವಕಾಶ ನೀಡುವಂತೆ ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT