ಸೋಮವಾರ, ಏಪ್ರಿಲ್ 19, 2021
23 °C
ಎಲ್ಲ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚನೆ

ಒಳಚರಂಡಿ ಸ್ವಚ್ಚತೆ ಅವಘಡ ತಪ್ಪಿಸಲು ತುರ್ತು ಘಟಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಒಳಚರಂಡಿ, ಶೌಚಗುಂಡಿ ಶುಚಿಗೊಳಿಸುವ ಕೆಲಸಗಳಲ್ಲಿ ಸಂಭವಿಸುವ ಅವಘಡಗಳನ್ನು ತಪ್ಪಿಸಲು ಅಗ್ನಿಶಾಮಕ ಸೇವೆಯ ರೀತಿಯಲ್ಲಿ ‘ತುರ್ತು ಸ್ಪಂದನೆ ನೈರ್ಮಲ್ಯ ಘಟಕ’ಗಳನ್ನು (ಇಆರ್‌ಎಸ್‌ಯು) ರಚಿಸುವಂತೆ ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ. 

ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ವ್ಯವಹಾರ ಸಚಿವಾಲಯದ ಕಾರ್ಯದರ್ಶಿ ದುರ್ಗಾಶಂಕರ್ ಮಿಶ್ರಾ ಅವರು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾರ್ಯದರ್ಶಿಗಳಿಗೆ ಈ ಸಂಬಂಧ ಪತ್ರ ಬರೆದಿದ್ದಾರೆ. 

ನೈರ್ಮಲ್ಯಕ್ಕೆ ಸಂಬಂಧಿಸಿದ ಯಾವುದೇ ತುರ್ತು ಕರೆಗಳಿಗೆ ಸ್ಪಂದಿಸುವುದು ಈ ಘಟಕದ ಹೊಣೆಗಾರಿಕೆಯಾಗಿರುತ್ತದೆ. 75 ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಅವಘಡ ಸಂಭವಿಸಿದರೂ, ಅದನ್ನು ನಿಭಾಯಿಸುವ ಜವಾಬ್ದಾರಿ ನೀಡಲಾಗಿದೆ. 

ಶೌಚಗುಂಡಿ, ಒಳಚರಂಡಿ ಹಾಗೂ  ಸ್ವಚ್ಛತೆಗೆ ಸಂಬಂಧಿಸಿದ ಕೆಲಸಗಳಲ್ಲಿ ಸಂಭವಿಸುವ ಅನಾಹುತ ಕುರಿತ ವರದಿಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಈ ಸೂಚನೆ ನೀಡಿದೆ. 

ಗುಂಡಿ ಸ್ವಚ್ಛಗೊಳಿಸುವ ಅಪಾಯಕಾರಿ ಕೆಲಸವನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿರುವ ಕಾರ್ಮಿಕರಿಗೆ ನಿಗದಿತ ತರಬೇತಿ, ಅಗತ್ಯ ಸಲಕರಣೆ ಹಾಗೂ ಚರಂಡಿ ಶುಚಿಗೊಳಿಸುವ ವೃತ್ತಿಪರರು ಎಂಬ ಪ್ರಮಾಣಪತ್ರ ಕಡ್ಡಾಯ ಎಂಬುದನ್ನು ಕಾರ್ಯದರ್ಶಿ ಒತ್ತಿ ಹೇಳಿದ್ದಾರೆ. 

ತರಬೇತಿ ಪಡೆದ ಕೆಲಸಗಾರನ್ನು ಬಿಟ್ಟು ಬೇರೆ ವ್ಯಕ್ತಿಗಳು ಚರಂಡಿ ಸ್ವಚ್ಚಗೊಳಿಸುವ ಕೆಲಸ ಮಾಡುವುದನ್ನು ನಿರ್ಬಂಧಿಸಲಾಗಿದೆ. ಇದನ್ನು ಉಲ್ಲಂಘಿಸಿದರೆ ಎಫ್‌ಐಆರ್ ದಾಖಲಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ. ಸ್ಥಳೀಯ ನಗರಾಡಳಿತಗಳಿಗೆ ರಾಜ್ಯ ಸರ್ಕಾರಗಳು ಈ ಸಂಬಂಧ ಕಟ್ಟುನಿಟ್ಟಿನ ಸೂಚನೆ ರವಾನಿಸಬೇಕು ಎಂದು ಕೇಂದ್ರ ಸೂಚಿಸಿದೆ. 

***

ರಾಜಧಾನಿ ಸೇರಿದಂತೆ ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಎ‌ಲ್ಲ ನಗರಗಳಲ್ಲಿ ತುರ್ತು ನಿರ್ವಹಣಾ ಘಟಕ ಸ್ಥಾಪಿಸುವುದು ಕಡ್ಡಾಯ 

ದುರ್ಗಾಶಂಕರ್ ಮಿಶ್ರಾ, ವಸತಿ ಹಾಗೂ ನಗರಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.