ಗುರುವಾರ , ಡಿಸೆಂಬರ್ 5, 2019
19 °C

ಜಮ್ಮು ವಲಯದಲ್ಲಿ ಎನ್‌ಕೌಂಟರ್: ಉಗ್ರರ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಜಮ್ಮು ವಲಯದಲ್ಲಿ ಮನೆಯೊಂದಕ್ಕೆ ನುಗ್ಗಿ, ಒಳಗಿದ್ದವರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದ ಹಿಜ್ಬುಲ್ ಕಮಾಂಡರ್ ಸೇರಿ ಮೂವರು ಉಗ್ರರನ್ನು ಭದ್ರತಾಪಡೆಯ ಸಿಬ್ಬಂದಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ.

ಜಮ್ಮು–ಕಿಶ್ತ್‌ವಾರ್ ರಾಷ್ಟ್ರೀಯ ಹೆದ್ದಾರಿಯ ಬಟೋಟೆ ಪ್ರದೇಶದಲ್ಲಿ ಶನಿವಾರ ನಡೆದ ಈ ಘಟನೆಯಲ್ಲಿ ಒಬ್ಬ ಯೋಧ ಹುತಾತ್ಮರಾಗಿದ್ದು, ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.

ಗಾಂದರ್‌ಬಲ್ ಜಿಲ್ಲೆಯ ಕಂಗನ್ ಪ್ರದೇಶದಲ್ಲಿ ನಡೆದ ಇನ್ನೊಂದು ಎನ್‌ಕೌಂಟರ್‌ನಲ್ಲಿ ಒಬ್ಬ ಉಗ್ರನನ್ನು ಹತ್ಯೆ ಮಾಡಲಾಗಿದೆ. 

ಕಿಶ್ತ್‌ವಾರ್ ಜಿಲ್ಲೆಯ ಉಸ್ಮಾನ್, ಝಾಹಿದ್ ಮತ್ತು ಹರೋನ್ ಮೃತ ಉಗ್ರರು. ಇವರು ಭಯೋತ್ಪಾದನೆಗೆ ಸಂಬಂಧಿಸಿದ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಸೇನಾ ಮೂಲಗಳು ತಿಳಿಸಿವೆ. 

ರಾಮಬನ್ ಜಿಲ್ಲೆಯಲ್ಲಿ ಐವರು ಭಯೋತ್ಪಾದಕರು ಇದ್ದಾರೆ ಎಂದು ಸೇನಾ ವಕ್ತಾರರು ಶನಿವಾರ ಬೆಳಿಗ್ಗೆ ಮಾಹಿತಿ ನೀಡಿದ್ದರು. ಧರ್ಮುಂದ್ ಗ್ರಾಮದಲ್ಲಿ ಶೋಧ ನಡೆಸುತ್ತಿದ್ದ ಸೇನೆಯ ಕ್ಷಿಪ್ರ ಕಾರ್ಯಾಚರಣೆ ತಂಡದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ, ಗ್ರೆನೇಡ್‌ ಎಸೆದರು. ಸಣ್ಣ ಪ್ರಮಾಣದ ಎನ್‌ಕೌಂಟರ್ ಕೂಡ ನಡೆಯಿತು. 

ಸೇನೆಯಿಂದ ತಪ್ಪಿಸಿಕೊಂಡ ಉಗ್ರರು ಮಾರುಕಟ್ಟೆ ಪ್ರದೇಶದ ಮನೆಯೊಂದಕ್ಕೆ ನುಗ್ಗಿದರು. ಬಿಜೆಪಿ ಕಾರ್ಯ
ಕರ್ತ ವಿಜಯ್ ಕುಮಾರ್ ಅವರ ಮನೆಯ ಸದಸ್ಯರನ್ನು ಉಗ್ರರು ಒತ್ತೆಯಿರಿಸಿಕೊಂಡರು. ಮಧ್ಯಾಹ್ನ 1 ಗಂಟೆ ಹೊತ್ತಿಗೆ ಗುಂಡಿನ ಚಕಮಕಿ ಆರಂಭವಾಯಿತು ಎಂದು ಸೇನಾವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇಂದ್ರ ಆನಂದ್ ತಿಳಿಸಿದ್ದಾರೆ.  ಕಿಶ್ತ್‌ವಾರ್ ಕಡೆಯಿಂದ ಉಗ್ರರು ಬಂದಿರುವ ಶಂಕೆಯಿದ್ದು, ಹೆದ್ದಾರಿಯ ತಾತ್ಕಾಲಿಕ ಶೆಡ್‌ನಲ್ಲಿ ಅವರು ರಾತ್ರಿ ಕಳೆದಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಉಗ್ರ ಸಂಘಟನೆಗಳು ಸಕ್ರಿಯ?

l ಕಾಶ್ಮೀರದ ವಿಶೇಷಾಧಿಕಾರ ರದ್ದುಗೊಂಡ ಬಳಿಕ ಮೊದಲ ಬಾರಿಗೆ ಉಗ್ರರಿಂದ ಗ್ರೆನೇಡ್ ದಾಳಿ

l ಶ್ರೀನಗರದ ನವಾ ಕಡಲ್ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಯೋಧನನ್ನು ಗುರಿಯಾಗಿಸಿ ದಾಳಿ

l ಪಾಕಿಸ್ತಾನವು ಗಿಲ್ಗಿಟ್ ಬಾಲ್ಟಿಸ್ತಾನ್‌ ವಲಯದ ಉಗ್ರರ ಶಿಬಿರಗಳನ್ನು ಸಕ್ರಿಯಗೊಳಿಸಿರುವ ಸಾಧ್ಯತೆ 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು