ಶಿಫಾರಸು ಮುಚ್ಚಿಟ್ಟು ಇಂಗ್ಲಿಷ್‌ ಮಾಧ್ಯಮಕ್ಕೆ ಮಣೆ!

7
ಭಾಷೆಯಾಗಿ ಇಂಗ್ಲಿಷ್‌ ಕಲಿಸಿ, ಮಾಧ್ಯಮವಾಗಿ ಬೇಡ ಎಂದಿದ್ದ ಪ್ರಾದೇಶಿಕ ಇಂಗ್ಲಿಷ್‌ ಸಂಸ್ಥೆ

ಶಿಫಾರಸು ಮುಚ್ಚಿಟ್ಟು ಇಂಗ್ಲಿಷ್‌ ಮಾಧ್ಯಮಕ್ಕೆ ಮಣೆ!

Published:
Updated:

ಬೆಂಗಳೂರು: ‘ಮಾತೃ ಭಾಷೆಯನ್ನು (ಕನ್ನಡ) ಮಾಧ್ಯಮವಾಗಿ ಉಳಿಸಿಕೊಂಡು, ನಿಗದಿತ ವಿದ್ಯಾರ್ಹತೆ ಮತ್ತು ಸಮರ್ಥ ಶಿಕ್ಷಕರಿಂದ ಇಂಗ್ಲಿಷ್‌ ಅನ್ನು ಒಂದು ಭಾಷೆಯಾಗಿ ಪರಿಣಾಮಕಾರಿಯಾಗಿ ಕಲಿಸಬಹುದು’ ಎಂದು ರಾಜ್ಯ ಸರ್ಕಾರಕ್ಕೆ ದಕ್ಷಿಣ ಭಾರತೀಯ ಇಂಗ್ಲಿಷ್‌ ಪ್ರಾದೇಶಿಕ ಸಂಸ್ಥೆ ಶಿಫಾರಸು ಮಾಡಿದೆ.

ಆದರೆ, ಸರ್ಕಾರ ಈ ಸಂಸ್ಥೆ ಸಲ್ಲಿಸಿದ ವರದಿಯಲ್ಲಿರುವ ಅಂಶಗಳನ್ನು ಕತ್ತಲೆಯಲ್ಲಿಟ್ಟು, ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ತರಗತಿ ಆರಂಭಿಸಲು ನಿರ್ಧರಿಸಿರುವುದು ವಿವಾದಕ್ಕೆ ಕಾರಣವಾಗಿದೆ.

‘ಮಕ್ಕಳಲ್ಲಿ ಮನೆ ಭಾಷೆ (ಮಾತೃಭಾಷೆ) ಮತ್ತು ರಾಜ್ಯ ಭಾಷೆಯ ಜೊತೆಗೆ ಇಂಗ್ಲಿಷ್‌ ಭಾಷಾ ಕೌಶಲ ವೃದ್ಧಿಗೆ ನಮ್ಮ ಪೂರ್ಣ ಬೆಂಬಲವಿದೆ’ ಎಂದು ಪ್ರತಿಪಾದಿಸಿರುವ ಈ ಸಂಸ್ಥೆ, ‘ಆರನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮವಾಗಿ ಮುಂದುವರಿಸಬಹುದು. ಒಂದೊಮ್ಮೆ ಇಂಗ್ಲಿಷ್‌ ಮಾಧ್ಯಮ ಅತೀ ಅಗತ್ಯ ಎಂದಾದರೆ ನಾಲ್ಕನೇ ತರಗತಿಯಿಂದ ಆರಂಭಿಸಬಹುದು’ ಎಂದೂ ಸಲಹೆ ನೀಡಿದೆ.

ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಅಳವಡಿಸಿಕೊಂಡ ವಿವಿಧ ರಾಜ್ಯಗಳಲ್ಲಿನ ವಸ್ತುಸ್ಥಿತಿ ಅಧ್ಯಯನ ನಡೆಸಿ, ಸೆ. 15ರಂದು ಸಂಸ್ಥೆ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

‘1,000 ಶಾಲೆಗಳಲ್ಲಿ ಇಂಗ್ಲಿಷ್‌ ತರಗತಿ ಆರಂಭಿಸಿದರೆ, ಆ ವಿದ್ಯಾರ್ಥಿಗಳಲ್ಲಿ ಅಭದ್ರತೆ ಕಾಡುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ‘ಇಂಗ್ಲಿಷ್‌ ಮಾತ್ರ’ ಎಂಬ ಸ್ಥಿತಿ ಶಿಕ್ಷಕ ಕೇಂದ್ರಿತ ತರಗತಿಗಳಾಗಿ ಬದಲಾಗುವ ಸಾಧ್ಯತೆಯೂ ಇದೆ’ ಎಂದೂ ವರದಿ ಹೇಳಿದೆ.

1968ರ ಶಿಕ್ಷಣ ನೀತಿಯ ಅನ್ವಯ ಪ್ರಾಥಮಿಕ ಹಂತದಲ್ಲಿ ಮಕ್ಕಳ ಕಲಿಕಾ ಮಾಧ್ಯಮ ಮಾತೃ ಭಾಷೆಯಲ್ಲಿರಬೇಕು. ಸರ್ಕಾರ ‘ತ್ರಿಭಾಷಾ ಸೂತ್ರ’ ಅಳವಡಿಸಿಕೊಳ್ಳಬೇಕು. 1986ರಲ್ಲಿ ಎನ್‌ಸಿಇಆರ್‌ಟಿ ಸಲ್ಲಿಸಿದ ಶಿಫಾರಸಿನಲ್ಲೂ ಪ್ರಾಥಮಿಕ ಹಂತದ ಶಿಕ್ಷಣ ಮಾತೃಭಾಷೆಯಲ್ಲಿರಬೇಕು ಎಂದಿದೆ. ಈ ಎಲ್ಲ ಕಾರಣಗಳಿಗೆ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಅನುಷ್ಠಾನಗೊಳಿಸಬಾರದು ಎಂದು ವರದಿ ಸ್ಪಷ್ಟಪಡಿಸಿದೆ.

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಿದರೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. 2008ರಲ್ಲಿ ಇಂಗ್ಲಿಷ್‌ ಅನ್ನು ಒಂದು ವಿಷಯವಾಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಅಳವಡಿಸಲಾಗಿತ್ತು. ಈ ಉದ್ದೇಶದಿಂದ ಚಟುವಟಿಕೆ ಪುಸ್ತಕ, ಪಠ್ಯಪುಸ್ತಕಗಳನ್ನು ಸಿದ್ಧಪಡಿಸಲಾಗಿತ್ತು. ಆದರೆ, ಅನೇಕ ಶಾಲೆಗಳಲ್ಲಿ ಈಗ ಇಂಗ್ಲಿಷ್‌ ವಿಷಯ ಮಾಯವಾಗಿದೆ.

ಇಂಗ್ಲಿಷ್‌ ಕಲಿಸುವ ದಕ್ಷಿಣ ಭಾರತದ ರಾಜ್ಯಗಳ ಶಿಕ್ಷಕರ ಜೊತೆ ಸಂವಾದ ನಡೆಸಿದಾಗ, ಇಂಗ್ಲಿಷ್‌ ಬೋಧಿಸಲು ಶಿಕ್ಷಕರು ಕಷ್ಟಪಡುತ್ತಿರುವ ಅಂಶ ಗೊತ್ತಾಗಿದೆ. ಈ ಕಾರಣಕ್ಕೆ, ವಿದ್ಯಾರ್ಥಿಗಳು ಇಂಗ್ಲಿಷ್‌ ಕಲಿತು ನಿರೀಕ್ಷಿತ ಗುರಿ ಸಾಧಿಸಲು ಸಾಧ್ಯವಾಗಿಲ್ಲ. ಮನೆ ಭಾಷೆ ಮಾಧ್ಯಮವಾಗಿದ್ದರೆ ವಿದ್ಯಾರ್ಥಿಗಳು ವಿಷಯ ಗ್ರಹಿಸಲು ಸುಲಭ ಎಂಬ ಅಂಶವೂ ಅನೇಕ ಸಂಶೋಧನೆಗಳಿಂದ ಗೊತ್ತಾಗಿದೆ.

ಪ್ರಾಥಮಿಕ ಹಂತದಲ್ಲಿ ಇಂಗ್ಲಿಷ್‌ ಭಾಷೆಯನ್ನು ಬೋಧನಾ ಮಾಧ್ಯಮ ಮಾಡಿದರೆ, ಈ ಭಾಷೆ ಕಲಿಯುವ ಸಾಮರ್ಥ್ಯದ ಕೊರತೆಯಿಂದ ವಿದ್ಯಾರ್ಥಿಗಳಲ್ಲಿ ಆತಂಕ ಉಂಟಾಗಬಹುದು. ಮಕ್ಕಳು ತಮ್ಮದೇ (ಮನೆ) ಭಾಷೆಯಲ್ಲಿ ಶಿಕ್ಷಕರ ಜೊತೆ ವ್ಯವಹರಿಸಲು ಇಷ್ಟಪಡುತ್ತಾರೆ. ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳು ತರಗತಿಯ ಚಟುವಟಿಕೆಯಲ್ಲಿ ಭಾಗವಹಿಸದೇ ದೂರ ಉಳಿಯುವ ಸ್ಥಿತಿಯೂ ನಿರ್ಮಾಣ ಆಗಬಹುದು ಎಂದೂ ವರದಿಯಲ್ಲಿದೆ.

ರಾಜ್ಯ ಸರ್ಕಾರ 1,000 ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮವನ್ನು ಪ್ರಾಯೋಗಿವಾಗಿ ಆರಂಭಿಸುವುದಾದರೆ, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಂಸ್ಥೆ ಕೆಲವು ಸಲಹೆಗಳನ್ನೂ ನೀಡಿದೆ. ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಸುವ ಶಿಕ್ಷಕ ಸಾಮರ್ಥ್ಯ ವೃದ್ಧಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಇಂಗ್ಲಿಷ್‌ ಬೋಧಿಸುವ ಶಿಕ್ಷಕರನ್ನು 15ರಿಂದ 20 ದಿನ ಮುಖಾಮುಖಿಯಾಗಿಸಿ ಸಬಲೀಕರಿಸುವ ಅಗತ್ಯವಿದೆ. ಪಠ್ಯಪುಸ್ತಕಗಳನ್ನು ದ್ವಿಭಾಷೆಯಲ್ಲಿ, ಸಂಯೋಜಿತ ಮತ್ತು ತಾಂತ್ರಿಕವಾಗಿರಬೇಕು ಎಂದೂ ಈ ವರದಿಯಲ್ಲಿದೆ.

ಇತರ ರಾಜ್ಯಗಳಲ್ಲಿ ‘ಇಂಗ್ಲಿಷ್‌ ಮಾಧ್ಯಮ’

* ಜಮ್ಮು ಕಾಶ್ಮೀರದ ಎಲ್ಲ ಸರ್ಕಾರಿ ಶಾಲೆಗಳಲ್ಲಿ 2003ರಿಂದ ಕಲಿಕಾ ಮಾಧ್ಯಮ ಇಂಗ್ಲಿಷ್‌

* ಪಂಜಾಬ್‌ ರಾಜ್ಯ 1,886 ಶಾಲೆಗಳಲ್ಲಿ ಪ್ರಸಕ್ತ ಸಾಲಿನಿಂದ ಇಂಗ್ಲಿಷ್‌ ಮಾಧ್ಯಮ ವಿಭಾಗ ಆರಂಭಿಸಿದೆ

* ಉತ್ತರ ಪ್ರದೇಶದಲ್ಲಿ 2018ರ ಏಪ್ರಿಲ್‌ನಿಂದ 5,000 ಸರ್ಕಾರಿ ಪ್ರಾಥಮಿಕ ಶಾಲೆಗಳು ಇಂಗ್ಲಿಷ್‌ ಮಾಧ್ಯಮ ಶಾಲೆಗಳಾಗಿ ಬದಲಾಗಿವೆ

* ಹರಿಯಾಣದಲ್ಲಿ 418 ಸರ್ಕಾರಿ ಶಾಲೆಗಳಲ್ಲಿ ಈ ವರ್ಷದಿಂದ ಇಂಗ್ಲಿಷ್‌ ಮಾಧ್ಯಮ ಆರಂಭಗೊಂಡಿದೆ.

* ಉತ್ತರಾಖಂಡ ಸರ್ಕಾರ ಈ ವರ್ಷದಿಂದ 15 ಸಾವಿರ ಪ್ರಾಥಮಿಕ ಶಾಲೆಗಳಲ್ಲಿ 3ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಜ್ಞಾನ ಪುಸ್ತಕವನ್ನು ಇಂಗ್ಲಿಷ್‌ನಲ್ಲಿ ಪರಿಚಯಿಸಿದೆ.

* ತೆಲಂಗಾಣದಲ್ಲಿ ಸ್ಥಳೀಯ ಭಾಷೆ ತೆಲುಗು ಕಲಿಸುವ ವಿಷಯದಲ್ಲಿ ರಾಜಿ ಮಾಡಿಕೊಳ್ಳದೆ ಕೆಲವು ಶಾಲೆಗಳಲ್ಲಿ ಈ ವರ್ಷದಿಂದ ಇಂಗ್ಲಿಷ್‌ ಮಾಧ್ಯಮ ಆರಂಭಿಸಲಾಗಿದೆ

* ಆಂಧ್ರ ಪ್ರದೇಶದಲ್ಲಿರುವ 9,356 ಪ್ರಾಥಮಿಕ ಶಾಲೆಗಳ ಪೈಕಿ ಶೇ 90ರಲ್ಲಿ ಇಂಗ್ಲಿಷ್‌ ಮಾಧ್ಯಮ ಪರಿಚಯಿಸಲಾಗಿದೆ

* ಬೇಡಿಕೆ ಬಂದ ಕಾರಣ ಮೂರು ವರ್ಷಗಳ ಹಿಂದೆಯೇ ಮಧ್ಯಪ್ರದೇಶ ಸರ್ಕಾರ ಬ್ಲಾಕ್‌ ಮಟ್ಟದಲ್ಲಿ ತಲಾ ಒಂದು ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭಿಸಿದೆ

* ದೆಹಲಿ ಸರ್ಕಾರ ಈ ವರ್ಷ ‘ಸ್ಕೂಲ್ಸ್‌ ಆಫ್‌ ಎಕ್ಸೆಲೆನ್ಸ್‌’ ಹೆಸರಿನಲ್ಲಿ 5 ಇಂಗ್ಲಿಷ್‌ ಮಾಧ್ಯಮ ಶಾಲೆ ತೆರೆದಿದೆ.

* ಕೇರಳದಲ್ಲಿ ಇಂಗ್ಲಿಷ್‌ ಮಾಧ್ಯಮ ಸರ್ಕಾರಿ ಶಾಲೆಗಳೇ ಇಲ್ಲ

* ಮಹಾರಾಷ್ಟ್ರದಲ್ಲೂ ಸರ್ಕಾರ ನಡೆಸುವ ಇಂಗ್ಲಿಷ್‌ ಮಾಧ್ಯಮ ಶಾಲೆಗಳು ಇಲ್ಲ. ಆದರೆ, ಗಣಿತ ಮತ್ತು ವಿಜ್ಞಾನವನ್ನು ಇಂಗ್ಲಿಷ್‌ನಲ್ಲಿ ಕಲಿಸುವ ‘ಸೆಮಿ– ಇಂಗ್ಲಿಷ್‌ ಮಾಧ್ಯಮ’ ಶಾಲೆಗಳಿವೆ.

* ದುರ್ಬಲ ವರ್ಗದ ಜನರ ಬೇಡಿಕೆ ಮತ್ತು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯಲ್ಲಿ ಕುಸಿತ ಉಂಟಾದ ಪರಿಣಾಮ, ತಮಿಳುನಾಡು ಸರ್ಕಾರ 2012–13ರಲ್ಲೇ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !