ಶನಿವಾರ, ನವೆಂಬರ್ 16, 2019
21 °C
ಅತ್ಯಂತ ಅಪಾಯಕಾರಿ ಮಟ್ಟಕ್ಕೆ ಕುಸಿದ ಗಾಳಿಯ ಗುಣಮಟ್ಟ * ಆರೋಗ್ಯ ತುರ್ತುಸ್ಥಿತಿ ಘೋಷಣೆ

‘ದೆಹಲಿ ಗ್ಯಾಸ್‌ ಛೇಂಬರ್’

Published:
Updated:

ನವದೆಹಲಿ: ಉಸಿರಾಡುವುದಕ್ಕೇ ಕಷ್ಟವಾಗುವ ರೀತಿಯಲ್ಲಿ ರಾಜಧಾನಿ ದೆಹಲಿಯ ಗಾಳಿಯ ಗುಣಮಟ್ಟ ಕುಸಿದಿದೆ. ವಾಯುಮಾಲಿನ್ಯವು ಅತ್ಯಂತ ಅಪಾಯಕಾರಿ ಮಟ್ಟ ತಲುಪಿರುವ ಕಾರಣ ಆರೋಗ್ಯ ತುರ್ತುಸ್ಥಿತಿ ಘೋಷಿಸಲಾಗಿದೆ. ತೀವ್ರ ವಾಯುಮಾಲಿನ್ಯದ ಕಾರಣ ಅಲರ್ಜಿ, ಉಸಿರಾಟ ಮತ್ತು ಹೃದಯ ಸಂಬಂಧಿ ತೊಂದರೆಗಳಿಂದ ಆಸ್ಪತ್ರೆಗೆ ಬರುವವರ ಸಂಖ್ಯೆ ಕಳೆದ ಮೂರುದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

‘ದೆಹಲಿಯು ಗ್ಯಾಸ್‌ ಛೇಂಬರ್ ಆಗಿದೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕಳವಳ ವ್ಯಕ್ತಪಡಿಸಿದ್ದಾರೆ.

ದೆಹಲಿ ಮತ್ತು ಅದರ ಉಪನಗರಗಳಾದ ಗಾಜಿಯಾಬಾದ್, ಫರೀದಾಬಾದ್‌, ನೋಯ್ಡಾ ಮತ್ತು ಗುರುಗ್ರಾಮಗಳಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಅಪಾಯಕಾರಿ ಮಟ್ಟ ತಲುಪಿದೆ. ದೀಪಾವಳಿಯಲ್ಲಿ ಸಿಡಿಸಿದ ಪಟಾಕಿ, ನಿರ್ಮಾಣ ಚಟುವಟಿಕೆಗಳ ದೂಳು, ವಾಹನಗಳ ಹೊಗೆ, ನೆರೆಯ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯವನ್ನು ಸುಡುತ್ತಿರುವುದರ ಪರಿಣಾಮ ದೆಹಲಿಯಲ್ಲಿ ವಾಯುಮಾಲಿನ್ಯ ತೀವ್ರ ಸ್ವರೂಪ ಪಡೆದಿದೆ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ (ಇಪಿಸಿಎ) ಹೇಳಿದೆ.

ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಹಲವು ಅಗತ್ಯ ತುರ್ತುಕ್ರಮಗಳನ್ನು ಇಪಿಸಿಎ ಘೋಷಿಸಿದೆ. ಈ ಕ್ರಮಗಳನ್ನು ಪಾಲಿಸುವಂತೆ ದೆಹಲಿಯ ನೆರೆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಇಪಿಸಿಎ ಪತ್ರ ಬರೆದಿದೆ. ದೆಹಲಿಯ ಶಾಲಾ ಮಕ್ಕಳಿಗೆ 50 ಲಕ್ಷ ಮುಖಗವಸು ವಿತರಿಸಲು ದೆಹಲಿ ಸರ್ಕಾರ ಕ್ರಮ ತೆಗೆದುಕೊಂಡಿದೆ.

25–30 % - ಉಸಿರಾಟ ಮತ್ತು ಹೃದಯ ಸಂಬಂಧಿ ತೊಂದರೆಗಳ ಕಾರಣ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಮೂರು ದಿನಗಳಲ್ಲಿ ಆಗಿರುವ ಹೆಚ್ಚಳ

3–12 ವರ್ಷದ ಮಕ್ಕಳು ಆಸ್ಪತ್ರೆಗೆ ಬರುವುದು ಹೆಚ್ಚಳವಾಗಿದೆ

60 ವರ್ಷಕ್ಕಿಂತ ಹಿರಿಯರು ಆಸ್ಪತ್ರೆಗೆ ಬರುವುದು ಹೆಚ್ಚಳವಾಗಿದೆ

ತುರ್ತುಕ್ರಮಗಳು

* ದೆಹಲಿ ಮತ್ತು ಸುತ್ತಮುತ್ತಲಿನ ಉಪನಗರಗಳಲ್ಲಿ ನಿರ್ಮಾಣ ಚಟುವಟಿಕೆಗಳನ್ನು ನವೆಂಬರ್ 5ರವರೆಗೆ ನಿಷೇಧ

* ಪಟಾಕಿ ಸಿಡಿಸುವುದಕ್ಕೆ ನಿಷೇಧ

* ದೆಹಲಿಯಲ್ಲಿ ತ್ಯಾಜ್ಯ ಸುಡುವುದಕ್ಕೆ ನಿಷೇಧ

* ಸಿಮೆಂಟ್‌ ಮಿಶ್ರಣ ಘಟಕಗಳ ಕಾರ್ಯನಿರ್ವಹಣೆಗೆ ನಿರ್ಬಂಧ

* ಕಲ್ಲಿನ ಕ್ರಷರ್‌ ಘಟಕಗಳ ಕಾರ್ಯನಿರ್ವಹಣೆಗೆ ನಿರ್ಬಂಧ

* ಕಲ್ಲಿದ್ದಲು ಮತ್ತು ಡೀಸೆಲ್‌ ಅನ್ನು ಇಂಧನವಾಗಿ ಬಳಸುವ ಕಾರ್ಖಾನೆ ಮತ್ತು ಕೈಗಾರಿಕೆಗಳ ಕಾರ್ಯಚಟುವಟಿಕೆಗಳ ತಾತ್ಕಾಲಿಕ ನಿಷೇಧ

* ಕೃಷಿತ್ಯಾಜ್ಯ ಸುಡುವುದನ್ನು ನಿಯಂತ್ರಿಸುವಂತೆ ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಉತ್ತರಪ್ರದೇಶ ಸರ್ಕಾರಗಳಿಗೆ ಸೂಚನೆ

* ಗಾಳಿಯ ಗುಣಮಟ್ಟ ಇನ್ನೂ ಒಂದು ದಿನ ಸುಧಾರಿಸದೇ ಇದ್ದರೆ, ದೆಹಲಿಗೆ ವಾಣಿಜ್ಯ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗುತ್ತದೆ

ಕುಸಿದ ಗಾಳಿಯ ಗುಣಮಟ್ಟ...

ಪ್ರತಿ ಘನಮೀಟರ್‌ ಗಾಳಿಯಲ್ಲಿರುವ 2.5 ಮೈಕ್ರಾನ್‌ ಗಾತ್ರದ ಮಾಲಿನ್ಯಕಾರಕ ಕಣಗಳ (ಪಿ.ಎಂ) ಸಂಖ್ಯೆಯನ್ನು ಆಧರಿಸಿ ಗಾಳಿಯ ಗುಣಮಟ್ಟವನ್ನು ನಿರ್ಧರಿಸಲಾಗುತ್ತದೆ. ಇವುಗಳ ಆಧಾರದಲ್ಲಿ ಗಾಳಿಯ ಗುಣಮಟ್ಟವನ್ನು ಆರು ವರ್ಗಗಳಾಗಿ ವಿಂಗಡಿಸಲಾಗಿದೆ. ಗಾಳಿಯಲ್ಲಿ ಈ ಕಣಗಳ ಸಂಖ್ಯೆ ಕಡಿಮೆ ಆದಷ್ಟೂ ಗುಣಮಟ್ಟ ಉತ್ತಮವಾಗಿರುತ್ತದೆ

497 -ಶುಕ್ರವಾರ ಬೆಳಿಗ್ಗೆ ದೆಹಲಿಯ ಹಲವೆಡೆ ಕಂಡುಬಂದ ಪಿ.ಎಂ 2.5 ಕಣಗಳ ಸಂಖ್ಯೆ

480 - ಶುಕ್ರವಾರ ಮಧ್ಯಾಹ್ನ ದೆಹಲಿಯ ಹಲವೆಡೆ ಕಂಡುಬಂದ ಪಿ.ಎಂ 2.5 ಕಣಗಳ ಸಂಖ್ಯೆ

ಶಾಲೆಗಳಿಗೆ ರಜೆ

* ನವೆಂಬರ್ 5ರವೆರೆಗೆ ದೆಹಲಿಯ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ

* ಮಕ್ಕಳನ್ನು ಹೊರಗೆ ಬಿಡಬೇಡಿ ಎಂದು ಪೋಷಕರಿಗೆ ಸೂಚನೆ

* ಮಕ್ಕಳು, ವೃದ್ಧರು, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರ ಬಗ್ಗೆ ವಿಶೇಷ ಎಚ್ಚರಿಕೆಗೆ ಸೂಚನೆ

* ವಾಯುವಿಹಾರ ಮತ್ತು ಹೊರಾಂಗಣದಲ್ಲಿ ವ್ಯಾಯಾಮ ಮಾಡದಂತೆ ಸಲಹೆ

* ಮನೆಯಿಂದ ಹೊರಗೆ ಬಂದಾಗ ಉತ್ತಮ ಗುಣಮಟ್ಟದ ಮುಖಗವಸು ಬಳಕೆಗೆ ಸೂಚನೆ

ಪ್ರತಿಕ್ರಿಯಿಸಿ (+)