ಕಾಂಗ್ರೆಸ್‌ನಿಂದ ನಕಲಿ ದಾಖಲೆ: ‘ಸುಪ್ರೀಂ’ಗೆ ಚುನಾವಣಾ ಆಯೋಗ

7

ಕಾಂಗ್ರೆಸ್‌ನಿಂದ ನಕಲಿ ದಾಖಲೆ: ‘ಸುಪ್ರೀಂ’ಗೆ ಚುನಾವಣಾ ಆಯೋಗ

Published:
Updated:

ನವದೆಹಲಿ: ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಸಂಬಂಧಿಸಿ ನಕಲಿ ದಾಖಲೆಗಳನ್ನು ಸಲ್ಲಿಸಿ ಚುನಾವಣಾ ಆಯೋಗಕ್ಕೆ ಮಸಿ ಬಳಿದು ತನ್ನ ಪರವಾದ ತೀರ್ಪು ಪಡೆದುಕೊಳ್ಳಲು ಕಾಂಗ್ರೆಸ್‌ ಪಕ್ಷ ಯತ್ನಿಸಿದೆ ಎಂದು ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ಹೇಳಿದೆ. 

ಆದರೆ, ಆಯೋಗದ ಈ ಹೇಳಿಕೆಗೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಮತದಾರರ ಮಾಹಿತಿಯನ್ನು ಬಹಿರಂಗಪಡಿಸಿ, ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿರುವುದನ್ನು ಬಹಿರಂಗಪಡಿಸಿದ ಕಂಪನಿಯನ್ನು ನ್ಯಾಯಾಲಯಕ್ಕೆ ಕರೆಸಿಕೊಳ್ಳಬೇಕಾದೀತು ಎಂದು ಕೋರ್ಟ್‌ ಹೇಳಿದೆ. 

ನಕಲಿ ಮತದಾರರು ಮತದಾರರ ಪಟ್ಟಿ ಸೇರಿದ್ದಾರೆ ಎಂಬ ಮಾಹಿತಿಯನ್ನು ‘ಪಾಲಿಟಿಕ್ಸ್‌ ಡಾಟ್‌ ಇನ್‌’ ಎಂಬ ಖಾಸಗಿ ಕಂಪನಿ ಬಹಿರಂಗಪಡಿಸಿದೆ. ಈ ಮಾಹಿತಿಯನ್ನು ಮುಖ್ಯ ಚುನಾವಣಾ ಆಯುಕ್ತ ಒ.ಪಿ. ರಾವತ್‌ ಅವರಿಗೆ ಸಲ್ಲಿಸಲಾಗಿದೆ. ಇದರಲ್ಲಿ ಯಾವುದೇ ತಪ್ಪು ಇಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಕಾಂಗ್ರೆಸ್‌ ಪರವಾಗಿ ಅರ್ಜಿ ಸಲ್ಲಿಸಿರುವ ಮುಖಂಡ ಕಮಲ್‌ನಾಥ್‌ ಹೇಳಿದ್ದಾರೆ. 

ಈ ದಾಖಲೆಗಳನ್ನು ಮುಖ್ಯ ಚುನಾವಣಾ ಆಯುಕ್ತರಿಗೆ ಸಲ್ಲಿಸಿದ ಬಳಿಕ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆಯೇ ಎಂಬುದನ್ನು ತಿಳಿದುಕೊಳ್ಳಿ ಎಂದು ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ಪೀಠ ಆಯೋಗದ ಪರ ವಕೀಲರಿಗೆ ಹೇಳಿತು. 

ನ್ಯಾಯಾಲಯಕ್ಕೆ ಸಲ್ಲಿಸಲಾದ ನಕಲಿ ಮತದಾರರ ಬಗೆಗಿನ ಮಾಹಿತಿ ಜಾಲತಾಣದಲ್ಲಿ ಲಭ್ಯ ಇದೆ. ಅದನ್ನು ಯಾರು ಬೇಕಿದ್ದರೂ ಪರಿಶೀಲಿಸಬಹುದು ಎಂದು ಕಮಲ್‌ನಾಥ್‌ ಹೇಳಿದರು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !