ಭಾನುವಾರ, ನವೆಂಬರ್ 17, 2019
29 °C
ಸಚಿವರ ರಾಜೀನಾಮೆ ಪಡೆದು ಹೊಸಬರಿಗೆ ಸ್ಥಾನ, ಮೈತ್ರಿಪಕ್ಷ ಜಿಎಫ್‌ಪಿಯ ಸಚಿವರನ್ನು ಕೈಬಿಟ್ಟ ಸಾವಂತ್

ಗೋವಾ: ಬಿಜೆಪಿಗೆ ಬಂದ ನಾಲ್ವರಿಗೆ ಮಂತ್ರಿಗಿರಿ

Published:
Updated:
Prajavani

ಪಣಜಿ: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಶಾಸಕರಿಗೆ ಗೋವಾ ಸಚಿವ ಸಂಪುಟದಲ್ಲಿ ಮಂತ್ರಿಭಾಗ್ಯ ಸಿಕ್ಕಿದೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಶನಿವಾರ ಸಚಿವ ಸಂಪುಟ ಪುನರ್‌ರಚನೆ ಮಾಡಿದ್ದು, ನಾಲ್ವರು ಸಚಿವರನ್ನು  ಕೈಬಿಟ್ಟು, ಹೊಸಬರಿಗೆ ಸ್ಥಾನ ಕಲ್ಪಿಸಿದ್ದಾರೆ. 

ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ 10 ಶಾಸಕರ ಪೈಕಿ ಮೂವರು ಸಂಪುಟ ಸಚಿವರಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸಿದರು.

ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಮೃದುಲಾ ಸಿನ್ಹಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು. 

ಅತೃಪ್ತ ಕಾಂಗ್ರೆಸ್‌ ಬಣದ ಮುಖಂಡ ಹಾಗೂ ವಿರೋಧಪಕ್ಷದ ಮಾಜಿ ನಾಯಕ ಚಂದ್ರಕಾಂತ ಕವಳೇಕರ್, ಜನಿಫರ್ ಮೊನಸೆರಾತ್, ಫಿಲಿಪ್ ನೇರಿ ರೋಡ್ರಿಗಸ್ ಹಾಗೂ ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಹುದ್ದೆಗೆ ರಾಜೀನಾಮೆ ನೀಡಿದ್ದ ಮೈಕೆಲ್ ಲೋಬೊ ಅವರು ನೂತನ ಸಚಿವರಾಗಿ ಪದಗ್ರಹಣ ಮಾಡಿದರು. ಸಾವಂತ್ ಅಧಿಕಾರ ವಹಿಸಿಕೊಂಡ ಬಳಿಕ ಎರಡನೇ ಬಾರಿ ಸಂಪುಟ ಪುನರ್‌ರಚನೆ ಮಾಡಿದ್ದಾರೆ. 

ಪ್ರಾದೇಶಿಕ್ಷ ಪಕ್ಷಕ್ಕೆ ಕೊಕ್: ಗೋವಾದಲ್ಲಿ ಬಿಜೆಪಿ ಮಿತ್ರಪಕ್ಷವಾಗಿರುವ ಗೋವಾ ಫಾರ್ವರ್ಡ್‌ ಪಾರ್ಟಿಯ (ಜಿಎಫ್‌ಪಿ) ಮೂವರು ಹಾಗೂ ಒಬ್ಬ ಪಕ್ಷೇತರ ಶಾಸಕರನ್ನು  ಮಂತ್ರಿ ಮಂಡಲದಿಂದ ಕೈಬಿಡಲಾಗಿದೆ.

ಉಪಮುಖ್ಯಮಂತ್ರಿ ವಿಜಯ್ ಸರ್ದೇಸಾಯಿ, ಜಲಸಂಪನ್ಮೂಲ ಸಚಿವ ವಿನೋದ್ ಪಾಲ್ಯೇಕರ್, ಗ್ರಾಮೀಣಾಭಿವೃದ್ಧಿ ಸಚಿವ ಜಯೇಶ್ ಸಲಗಾಂವ್‌ಕರ್ ಮತ್ತು ಪಕ್ಷೇತರ ಶಾಸಕ ಮತ್ತು ಕಂದಾಯ ಸಚಿವ ರೋಹನ್ ಖಾವುಂಟೆ ಅವರು ಸ್ಥಾನ ಕಳೆದುಕೊಂಡಿದ್ದಾರೆ. 

ಸಂಪುಟದಲ್ಲಿ ಇರುವ ಬಿಜೆಪಿಯೇತರ ಸಚಿವ ಎಂದರೆ ಸಂಸ್ಕೃತಿ ಖಾತೆ ನಿಭಾಯಿಸುತ್ತಿರುವ ಗೋವಿಂದ ಗಾವಡೆ.  ಕಳೆದ ಬುಧವಾರ 10 ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆ ಯಾಗುವ ಮೂಲಕ ಪಕ್ಷದ ಸಂಖ್ಯಾಬಲ 27ಕ್ಕೆ ಏರಿಕೆಯಾಗಿತ್ತು. ಮನೋಹರ್ ಪರಿಕ್ಕರ್ ನೇತೃತ್ವದ ಸರ್ಕಾರ 2017ರಲ್ಲಿ ಅಧಿಕಾರ ಹಿಡಿಯುವಲ್ಲಿ ಪ್ರಾದೇಶಿಕ ಪಕ್ಷ ಜಿಎಫ್‌ಪಿ ನಿರ್ಣಾಯಕವಾಗಿತ್ತು.

ಪ್ರತಿಭಟನೆ

ಸಂಪುಟದಿಂದ ವಜಾಗೊಂಡ ನಾಲ್ವರು ಸಚಿವರು ಗೋವಾ ಮಾಜಿ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರ ಸ್ಮಾರಕಕ್ಕಾಗಿ ಮೀಸಲಿಟ್ಟ ಜಾಗದಲ್ಲಿ ಪ್ರತಿಭಟನೆ ನಡೆಸಿದರು.

ತಮ್ಮ ವಿರುದ್ಧ ಕ್ರಮ ತೆಗೆದುಕೊಂಡ ಬಿಜೆಪಿ ನಡೆಯನ್ನು ದೂರಿದ್ದಾರೆ. ಮುಖ್ಯಮಂತ್ರಿ ಸಾವಂತ್ ಹಾಗೂ ಕೇಂದ್ರೀಯ ಬಿಜೆಪಿ ನಾಯಕತ್ವವು ಪರ್ರೀಕರ್ ಅವರ ಘನತೆಯನ್ನು ಹಾಳುಮಾಡಲು ಮುಂದಾಗಿದೆ ಎಂದು ಅವರು ಆರೋಪಿಸಿದ್ದಾರೆ.

107 ಶಾಸಕರು ಶೀಘ್ರದಲ್ಲಿಯೇ ಬಿಜೆಪಿಗೆ

ಕೋಲ್ಕತ್ತ: ‘ತೃಣಮೂಲ ಕಾಂಗ್ರೆಸ್‌ (ಟಿಎಂಸಿ), ಸಿಪಿಎಂ ಮತ್ತು ಕಾಂಗ್ರೆಸ್‌ ಪಕ್ಷಗಳ ಒಟ್ಟು 107 ಶಾಸಕರು ಶೀಘ್ರದಲ್ಲಿಯೇ ಬಿಜೆಪಿ ಸೇರಲಿದ್ದಾರೆ’ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ ಮುಕುಲ್‌ ರಾಯ್ ಶನಿವಾರ ಹೇಳಿದ್ದಾರೆ.

‘ಬಿಜೆಪಿ ಸೇರಲಿರುವ ಶಾಸಕರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ. ಆ ಶಾಸಕರ ಜೊತೆಗೆ ಪಕ್ಷ ನಿರಂತರವಾಗಿ ಸಂಪರ್ಕದಲ್ಲಿದೆ’ ಎಂದು ಹೇಳಿದರು.

ಬಿಜೆಪಿ ಸೇರುವ ಮೊದಲು ರಾಯ್‌ ಅವರು ಟಿಎಂಸಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು.

ಲೋಕಸಭೆ ಚುನಾವಣೆಗೂ ಕೆಲವೇ ದಿನಗಳ ಮುನ್ನ ಆಡಳಿತಪಕ್ಷ ಟಿಎಂಸಿಯ ಕೆಲ ಮುಖಂಡರು, ಶಾಸಕರು ಬಿಜೆಪಿಗೆ ಸೇರ್ಪಡೆ ಆಗುವುದರೊಂದಿಗೆ ರಾಜ್ಯದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿತ್ತು. ಚುನಾವಣೆಗೆ ಪಕ್ಷದ ಟಿಕೆಟ್‌ ಸಿಗಲಿಲ್ಲ ಎಂಬ ಕಾರಣದಿಂದಲೂ ಅನೇಕರು ಪಕ್ಷಾಂತರ ಮಾಡಿದ್ದರು.

ಏಪ್ರಿಲ್‌ ತಿಂಗಳಲ್ಲಿ ಲೋಕಸಭೆ ಚುನಾವಣೆಯ ರ‍್ಯಾಲಿಯೊಂದರಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರೇ, ‘40 ಶಾಸಕರು ನಮ್ಮ ಜೊತೆಗೆ ಸಂಪರ್ಕದಲ್ಲಿದ್ದಾರೆ. ಚುನಾವಣೆ ಬಳಿಕ ಟಿಎಂಸಿ ತ್ಯಜಿಸಲಿದ್ದಾರೆ’ ಎಂದು ಹೇಳಿದ್ದರು.

ನಿರಾಕರಣೆ: ಆದರೆ, ರಾಯ್‌ ಅವರ ಹೇಳಿಕೆಯನ್ನು ಟಿಎಂಸಿ ನಾಯಕರು ತಳ್ಳಿಹಾಕಿದ್ದಾರೆ. ‘ಬಿಜೆಪಿಗೆ ಸೇರ್ಪಡೆಯಾಗಿದ್ದ ಉತ್ತರ 24 ಪರಗಣ ಜಿಲ್ಲೆಯ ಕಾಂಚರಪರ ನಗರಸಭೆಯ 14 ಮಂದಿ ಟಿಎಂಸಿ ಸದಸ್ಯರು ಮತ್ತೆ ಟಿಎಂಸಿಗೆ ಮರಳಿದ್ದಾರೆ’ ಎಂದೂ ಅವರು ಹೇಳಿದ್ದಾರೆ.

ಕೆಲವು ಮಾಧ್ಯಮಗಳು ರಾಯ್‌ ಅವರನ್ನು ‘ಚಾಣಕ್ಯ’ ಎಂದು ಬಿಂಬಿಸುತ್ತಿವೆ. ಅವರು ‘ಮೇಡ್‌ ಇನ್‌ ಚೀನಾ’ ಚಾಣಕ್ಯ ಇರಬೇಕು’ ಎಂದು ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ಟೀಕಿಸಿದ್ದಾರೆ.

* ಪೂರ್ಣ ಬಹುಮತದ ಸ್ಥಿರ ಸರ್ಕಾರ ಸ್ಥಾಪನೆ ನಿಟ್ಟಿನಲ್ಲಿ ಸಚಿವರನ್ನು ಕೈಬಿಟ್ಟು ಹೊಸಬರನ್ನು ಸೇರಿಸಿಕೊಳ್ಳಲಾಗಿದೆ. ಕೇಂದ್ರೀಯ ನಾಯಕತ್ವ ಈ ನಿರ್ಧಾರ ತೆಗೆದುಕೊಂಡಿದೆ
–ಪ್ರಮೋದ್ ಸಾವಂತ್, ಗೋವಾ ಮುಖ್ಯಮಂತ್ರಿ 

ಪ್ರತಿಕ್ರಿಯಿಸಿ (+)