ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿರೋಧದ ದಮನ ಸಲ್ಲದು: ನ್ಯಾಯಮೂರ್ತಿ ದೀಪಕ್‌ ಗುಪ್ತಾ ಪ್ರತಿಪಾದನೆ

'ಸರ್ಕಾರವೇ ಸದಾ ಸರಿ ಎಂದು ಹೇಳಲಾಗದು'
Last Updated 24 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ಬಹುಸಂಖ್ಯಾತರೇ ಸರಿ ಎಂಬ ವಾದವು ಪ್ರಜಾಪ್ರಭುತ್ವದ ಆಶಯಕ್ಕೆ ತದ್ವಿರುದ್ಧವಾದುದು. ಒಂದು ಪಕ್ಷಕ್ಕೆ ಶೇ 51ರಷ್ಟು ಮತ ಸಿಕ್ಕಿದೆ ಎಂಬ ಕಾರಣಕ್ಕೆ ಉಳಿದ ಶೇ 49ರಷ್ಟು ಜನರು ಐದು ವರ್ಷ ಏನನ್ನೂ ಮಾತನಾಡುವಂತಿಲ್ಲ ಎಂದು ಹೇಳಲಾಗದು ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ದೀಪಕ್‌ ಗುಪ್ತಾ ಸೋಮವಾರ ಹೇಳಿದ್ದಾರೆ.

ಭಿನ್ನಾಭಿಪ್ರಾಯವು ಅತಿ ದೊಡ್ಡ ಹಕ್ಕು ಮತ್ತು ಸಂವಿಧಾನವು ನೀಡಿರುವ ಅತ್ಯಂತ ಮಹತ್ವದ ಹಕ್ಕು ಎಂದು ಗುಪ್ತಾ ವ್ಯಾಖ್ಯಾನಿಸಿದ್ದಾರೆ.

‘ಪ್ರತಿರೋಧವನ್ನು ದಮನ ಮಾಡಿದರೆ ಅಥವಾ ನಿರುತ್ಸಾಹಗೊಳಿಸಿದರೆ ಅದು ಪ್ರಜಾಪ್ರಭುತ್ವದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತದೆ. ನಾವೆಲ್ಲರೂ ತಪ್ಪು ಮಾಡುತ್ತೇವೆ. ಪ್ರತಿಭಟನೆಯು ಹಿಂಸಾಚಾರಕ್ಕೆ ಇಳಿದಿಲ್ಲ ಎಂದಾದರೆ, ಅದನ್ನು ಹತ್ತಿಕ್ಕುವ ಹಕ್ಕು ಸರ್ಕಾರಕ್ಕೆ ಇಲ್ಲ. ಪ್ರತಿಭಟನೆ ದಾಖಲಿಸಿದ ಜನರಿಗೆ ರಾಷ್ಟ್ರ ವಿರೋಧಿಗಳು ಎಂದು ಹಣೆಪಟ್ಟಿ ಕಟ್ಟುವ ಹಲವು ಪ್ರಯತ್ನಗಳು ಇತ್ತೀಚೆಗೆ ನಡೆದಿವೆ. ಹಳೆಯ ಕಾಲದ ಪದ್ಧತಿಗಳನ್ನು ಪ್ರಶ್ನಿಸದಿದ್ದರೆ ಹೊಸ ಚಿಂತನೆ ಹುಟ್ಟುವುದೇ ಇಲ್ಲ. ಹಳೆಯ ಚಿಂತನೆಗಳನ್ನು ಪ್ರಶ್ನಿಸಿದಾಗ ಮಾತ್ರ ಹೊಸ ಚಿಂತನೆ ಹುಟ್ಟುತ್ತದೆ’ ಎಂದು ಅವರು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ವಕೀಲರ ಸಂಘವು ಏರ್ಪಡಿಸಿದ್ದ ‘ಪ್ರಜಾಪ್ರಭುತ್ವ ಮತ್ತು ಪ್ರತಿರೋಧ’ ಎಂಬ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ‘ಪ್ರತಿರೋಧಕ್ಕೆ ಪ್ರೋತ್ಸಾಹ ನೀಡಬೇಕು. ಚರ್ಚೆಯ ಮೂಲಕ ಮಾತ್ರ ನಮ್ಮ ದೇಶವನ್ನು ಇನ್ನಷ್ಟು ಉತ್ತಮವಾಗಿ ಮುನ್ನಡೆಸಲು ಸಾಧ್ಯ. ಪ್ರಜಾಪ್ರಭುತ್ವ ಎಂಬುದು ಶೇಕಡಾ ನೂರು ಜನರಿಗಾಗಿ ಇರುವುದು. ಹಾಗೆಯೇ ಸರ್ಕಾರವು ಎಲ್ಲರಿಗಾಗಿಯೂ ಇರುವಂತಹುದು. ಆಡಳಿತ ಎಂಬುದು ಕೆಲವೇ ಜನರ ಇಚ್ಛೆಯನ್ನು ನಡೆಸುವುದಲ್ಲ. ಹಾಗಾಗಿ, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರೂ ಪಾತ್ರ ವಹಿಸಬೇಕು’ ಎಂದು ಅವರು ವಿವರಿಸಿದ್ದಾರೆ.

ಸರ್ಕಾರ ಮತ್ತು ದೇಶ ಎರಡು ಭಿನ್ನ ವಿಚಾರಗಳು. ವ್ಯಕ್ತಿಯು ಕಾನೂನು ಉಲ್ಲಂಘನೆ ಮಾಡುತ್ತಿಲ್ಲ ಎಂದಾದರೆ ಆತನಿಗೆ ಪ್ರತಿರೋಧ ತೋರುವ ಹಕ್ಕು ಸದಾ ಇರುತ್ತದೆ. ಯಾವುದೋ ಪ್ರಕರಣದಲ್ಲಿ ಆರೋಪಿಯ ಪರ ವಾದಿಸಬಾರದು ಎಂಬ ನಿರ್ಣಯಗಳನ್ನು ವಕೀಲರ ಸಂಘಗಳು ಅಂಗೀಕರಿಸುತ್ತಿರುವುದು ಇತ್ತೀಚೆಗೆ ಕಾಣಿಸುತ್ತಿದೆ. ಹಾಗೆ ಮಾಡಬಾರದು. ಕಾನೂನು ಸಹಾಯವನ್ನು ನಿರಾಕರಿಸಬಾರದು ಎಂದು ಅವರು ಪ್ರತಿಪಾದಿಸಿದರು.

ಪ್ರತಿರೋಧವನ್ನೇ ಕೇಂದ್ರವಾಗಿರಿಸಿಕೊಂಡು ಗಾಂಧೀಜಿಯವರು ಅಸಹಕಾರ ಚಳವಳಿ ನಡೆಸಿದ್ದರು ಎಂದು ಗುಪ್ತಾ ಹೇಳಿದರು. ಕಾನೂನಿನ ಆಡಳಿತವು ಮರೆಯಾದರೆ ಯಾರೋ ಕೆಲವರ ಇಚ್ಛೆಯಂತೆ ಆಡಳಿತ ನಡೆಯುತ್ತದೆ ಎಂದರು.

ಪ್ರತಿರೋಧವು ನ್ಯಾಯಮೂರ್ತಿಗಳ ಕೈಯಲ್ಲಿರುವ ಶಕ್ತಿಯುತ ಸಾಧನ

ಖರಕ್‌ ಸಿಂಗ್‌ ಪ್ರಕರಣದಲ್ಲಿ ನ್ಯಾಯಮೂರ್ತಿ ಸುಬ್ಬಾ ರಾವ್‌ ಅವರ ಪ್ರತಿರೋಧವನ್ನು ಗುಪ್ತಾ ಉಲ್ಲೇಖಿಸಿದರು. ಅದಾಗಿ, ಹಲವು ವರ್ಷಗಳ ಬಳಿಕ ಖಾಸಗಿತನವು ಮೂಲಭೂತ ಹಕ್ಕು ಎಂಬುದನ್ನು ಒಪ್ಪಿಕೊಳ್ಳಲಾಯಿತು. ಸುಬ್ಬಾರಾವ್‌ ಅವರ ಪ್ರತಿರೋಧವು ಕಾಲಕ್ಕಿಂತ ಬಹಳ ಮೊದಲೇ ಪ್ರಕಟವಾಗಿತ್ತು ಎಂದು ಗುಪ್ತಾ ಹೇಳಿದರು.

ಪ್ರತಿರೋಧವು ನ್ಯಾಯಮೂರ್ತಿಗಳ ಕೈಯಲ್ಲಿ ಅತ್ಯಂತ ಶಕ್ತಿಯುತಸಾಧನ. ಆದರೆ ಅದನ್ನು ಎಚ್ಚರಿಕೆಯಿಂದ ಬಳಸಬೇಕು ಎಂದೂ ಅವರು ಹೇಳಿದರು.

ಒಟ್ಟು ಸೇರುವ ಮತ್ತು ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಕ್ಕು ಪೌರರಿಗೆ ಇದೆ. ಸರ್ಕಾರ ಮಾಡುವುದು ಯಾವಾಗಲೂ ಸರಿ ಎನ್ನಲಾಗದು
-ದೀಪಕ್‌ ಗುಪ್ತಾ
ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT