ಬುಧವಾರ, ಏಪ್ರಿಲ್ 21, 2021
25 °C

ಜಿಎಸ್‌ಟಿ ಶತಮಾನದ ಹುಚ್ಚುತನ: ಸುಬ್ರಮಣಿಯನ್ ಸ್ಮಾಮಿ ಟೀಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಎಂಬುದು 21ನೇ ಶತಮಾನದ ಅತ್ಯಂತ ದೊಡ್ಡ ಹುಚ್ಚುತನ’ ಎಂದು ಬಿಜೆಪಿ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದಾರೆ.

ಹೈದರಾಬಾದ್‌ನಲ್ಲಿ ಬುಧವಾರ ನಡೆದ ‘ಇಂಡಿಯಾ: ಎಕಾನಾಮಿಕ್ ಸೂಪರ್‌ಪವರ್ ಬೈ 2030’ ಶೃಂಗಸಭೆಯಲ್ಲಿ ಅವರು ಮಾತನಾಡಿದ್ದಾರೆ.

‘ಭಾರತವು ಆರ್ಥಿಕತೆಯಲ್ಲಿ ಮಹಾನ್ ಶಕ್ತಿಯಾಗಬೇಕು ಅಂದರೆ, ಹೂಡಿಕೆದಾರರು ಹೂಡಿಕೆ ಮಾಡಬೇಕು. ಹೂಡಿಕೆದಾರರನ್ನು ಆದಾಯ ತೆರಿಗೆ ಮತ್ತು ಜಿಎಸ್‌ಟಿ ಮೂಲಕ ಬೆದರಿಸಬಾರದು. ಜಿಎಸ್‌ಟಿ 21ನೇ ಶತಮಾನದ ಅತ್ಯಂತ ದೊಡ್ಡ ಹುಚ್ಚುತನ. ಜಿಎಸ್‌ಟಿ ಎಷ್ಟು ಸಂಕೀರ್ಣವಾಗಿದೆ ಅಂದರೆ, ಯಾವ ಅರ್ಜಿಯಲ್ಲಿ ಏನು ತುಂಬುವುದು ಎಂದೇ ಗೊತ್ತಾಗುವುದಿಲ್ಲ. ಅದು ಯಾರಿಗೂ ಅರ್ಥವಾಗುವುದಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಜಿಎಸ್‌ಟಿ ತುಂಬಿದ ಮೇಲೆ ಅದನ್ನು ಕಂಪ್ಯೂಟರ್‌ಗೆ ಬೇರೆ ಅಪ್‌ಲೋಡ್‌ ಮಾಡಬೇಕು. ರಾಜಸ್ಥಾನದ ಬರ್ಮರ್‌ನಿಂದ ಒಬ್ಬರು ಬಂದಿದ್ದರು. ನಮ್ಮಲ್ಲಿ ವಿದ್ಯುತ್ ಇಲ್ಲ. ನಾವು ಜಿಎಸ್‌ಟಿ ಅಪ್‌ಲೋಡ್‌ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು. ಅದನ್ನು ನಿಮ್ಮ ತಲೆಯಲ್ಲಿ ಅಪ್‌ಲೋಡ್‌ ಮಾಡಿಕೊಳ್ಳಿ. ಪ್ರಧಾನಿ ಬಳಿಗೆ ಹೋಗಿ, ಅದನ್ನು ವಿವರಿಸಿ ಎಂದು ಸಲಹೆ ನೀಡಿದೆ’ ಎಂದು ಅವರು ಲೇವಡಿ ಮಾಡಿದ್ದಾರೆ.

‘ಜನರ ಬಳಿ ದುಡ್ಡೇ ಇಲ್ಲ. ಹೀಗಾಗಿ ದೇಶದಲ್ಲಿ ಬೇಡಿಕೆ ಕುಸಿದಿದೆ. ಆದಾಯ ತೆರಿಗೆಯನ್ನು ತೆಗದುಹಾಕಿ, ಆರ್ಥಿಕ ಬೆಳವಣಿಗೆಗೆ ವೇಗ ಸಿಗುತ್ತದೆ. ನೀವು 2030ರಲ್ಲಿ ಆರ್ಥಿಕ ಮಹಾನ್ ಶಕ್ತಿಯಾಗಬೇಕು ಅಂದರೆ, ಜಿಡಿಪಿ ವೃದ್ಧಿ ದರ ಶೇ 10ರಷ್ಟು ಇರಬೇಕು. ಪಿ.ವಿ.ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ಅಂದಿನ ಹಣಕಾಸು ಸಚಿವ ಮನಮೋಹನ್ ಸಿಂಗ್ ಆರ್ಥಿಕ ನೀತಿಗಳನ್ನು ಬದಲಿಸಿದ್ದರು. ಆನಂತರ ನಮ್ಮ ಜಿಡಿಪಿ ವೃದ್ಧಿ ಶೇ 8ರಷ್ಟು ಇತ್ತು. ಆದರೆ, ಆನಂತರ ಅದನ್ನು ಮತ್ತಷ್ಟು ವೃದ್ಧಿಸಲು ನಾವು ಏನನ್ನೂ ಮಾಡಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು