ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಯಾಣ ವಿಧಾನಸಭೆ ಫಲಿತಾಂಶ; ಸಮೀಕ್ಷೆಗಳು ತಪ್ಪಾಗಿದ್ದು ಏಕೆ? 

ಅತಂತ್ರ ಸ್ಥಿತಿ
Last Updated 24 ಅಕ್ಟೋಬರ್ 2019, 10:40 IST
ಅಕ್ಷರ ಗಾತ್ರ

ನವದೆಹಲಿ:ಇಂಡಿಯಾ ಟುಡೇ–ಆಕ್ಸಿಸ್‌ ಒನ್‌ ಹೊರತು ಪಡಿಸಿ ಬಹುತೇಕ ಎಲ್ಲ ಚುನಾವಣೋತ್ತರ ಸಮೀಕ್ಷೆಗಳೂ ಹರಿಯಾಣದ 90 ಸ್ಥಾನಗಳ ಪೈಕಿ ಬಿಜೆಪಿಗೆ 70ಕ್ಕೂ ಹೆಚ್ಚು ಸ್ಥಾನಗಳನ್ನು ನೀಡಿದ್ದವು.2019ರ ಲೋಕಸಭಾ ಚುನಾವಣೆಯಲ್ಲಿ ಹರಿಯಾಣದ ಎಲ್ಲ 10 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ, ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಸರಳ ಬಹುಮತದಿಂದಲೂ ದೂರ ಉಳಿದಿದೆ.

36–40 ಸ್ಥಾನಗಳಲ್ಲಿ ಗಿರಕಿ ಹೊಡೆಯುತ್ತಿರುವ ಬಿಜೆಪಿ ಸ್ವತಂತ್ರವಾಗಿ ಸರ್ಕಾರ ರಚಿಸಲು ಸಾಧ್ಯವಿಲ್ಲ. ಕಾಂಗ್ರೆಸ್‌ 30–35 ಸ್ಥಾನಗಳೊಂದಿಗೆ ಬಿಜೆಪಿಗೆ ಸಮೀಪದ ಸ್ಪರ್ಧಿಯಾಗಿದ್ದು, ಜೆಜೆಪಿ, ಸ್ವತಂತ್ರ ಅಭ್ಯರ್ಥಿಗಳೊಂದಿಗೆ ಸೇರಿ ಮೈತ್ರಿ ಸರ್ಕಾರ ರೂಪಿಸಲು ಸಿದ್ಧತೆ ನಡೆಸಿದೆ. ಈ ಮೂಲಕ ಬಹುತೇಕ ಎಲ್ಲ ಸಮೀಕ್ಷೆಗಳ ಲೆಕ್ಕಾಚಾರವೂ ತಪ್ಪಾಗಿದೆ.

ಹರಿಯಾಣದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬುದನ್ನು ಸಮೀಕ್ಷೆಗಳು ಊಹಿಸಿಯೂ ಇರಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಾಧಿಸಿದ ಬಹುದೊಡ್ಡ ಗೆಲುವು ಮುಂದುವರಿಯುವುದು ಎಂದೇ ವಿಶ್ಲೇಷಿಸಲಾಗಿತ್ತು.

2019ರ ಲೋಕಸಭಾ ಚುನಾವಣೆಯಲ್ಲಿ ಹರಿಯಾಣದಲ್ಲಿ ಬಿಜೆಪಿ ಶೇ 58ರಷ್ಟು ಮತ ಗಳಿಕೆ ಪ್ರಮಾಣ ಹೊಂದಿತ್ತು. ವಿಧಾನಸಭೆ ಚುನಾವಣೆಯಲ್ಲಿ ಈ ಪ್ರಮಾಣ ಶೇ 36ಕ್ಕೆ ಇಳಿಕೆಯಾಗಿದೆ. ಈಗಿನ ಫಲಿತಾಂಶ ಮುಂದುವರಿದರೆ, ಲೋಕಸಭೆ ಮತದಾನ ಪ್ರಮಾಣಕ್ಕಿಂತ ಶೇ 20ರಷ್ಟು ಕಡಿಮೆಯಾಗಿರುವುದು ಸ್ಪಷ್ಟವಾಗಲಿದೆ.

2019ರ ಲೋಕಸಭಾ ಚುನಾವಣೆಗೂ ಮುನ್ನಗುಜರಾತ್‌, ಮಧ್ಯ ಪ್ರದೇಶ, ಚತ್ತೀಸ್‌ಗಢ ಹಾಗೂ ರಾಜಸ್ಥಾನದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಇಂಥದ್ದೇ ಪರಿಸ್ಥಿತಿ ಎದುರಾಗಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಮಾಡಿದ್ದ ಸಾಧನೆಗಿಂತಲೂ ವಿಧಾನಸಭೆಯಲ್ಲಿ ಮತ ಪ್ರಮಾಣ ಬಿಜೆಪಿ ಪಾಲಿಗೆ ಇಳಿಕೆಯಾಗಿತ್ತು. ಆದರೆ, 2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಪ್ರಭುತ್ವ ಸಾಧಿಸಿತು.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವೇ ಮುಂದುವರಿದರೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಮುಂದುವರಿಯಲಿದೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂಬುದು ಸಮೀಕ್ಷೆ ಮತ್ತು ಅಂತಿಮ ಫಲಿತಾಂಶದಿಂದ ತಿಳಿದು ಬಂದಿದೆ.

ಕಾಂಗ್ರೆಸ್‌ 2014ರ ವಿಧಾನಸಭೆಯಲ್ಲಿ ಪಡೆದಿದ್ದ ಮತಕ್ಕಿಂತಲೂ ಶೇ 9ರಷ್ಟು ಹೆಚ್ಚಳ ಕಂಡಿದ್ದು, ಮತ ಪ್ರಮಾಣ ಶೇ 29 ತಲುಪಿದೆ. ಜೆಜೆಪಿ ಮತ್ತು ಐಎನ್‌ಎಲ್‌ಡಿ ಪಕ್ಷಗಳ ಮತ ಗಳಿಕೆ ಪ್ರಮಾಣ ಶೇ 7ರಷ್ಟು ಕಡಿಮೆಯಾಗಿದೆ. 2018ರಲ್ಲಿ ಐಎನ್‌ಎಲ್‌ಡಿಯಿಂದ ಹೊರಬಂದು ಜೆಜೆಪಿ ಪ್ರತ್ಯೇಕವಾಗಿ ಸ್ಪರ್ಧಿಸಿದೆ.

ಜಾಟ್‌ ಸಮುದಾಯದ ಪ್ರಾಬಲ್ಯ ಹೊಂದಿರುವ ಹರಿಯಾಣದಲ್ಲಿ ಜಾಟ್‌ ಸಮುದಾಯದವರಲ್ಲದ ಮನೋಹರ್‌ ಲಾಲ್‌ ಖಟ್ಟರ್‌ ಅವರನ್ನು ಬಿಜೆಪಿ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿತು. ಇದು ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆಯಾಗಿಯೂ ಪ್ರಭಾವ ಬೀರಿರಬಹುದು.

ಹರಿಯಾಣ ವಿಧಾನಸಭಾ ಚುನಾವಣೆ: ಚುನಾವಣೋತ್ತರ ಸಮೀಕ್ಷೆ

ಟೈಮ್ಸ್ ನೌ

ಬಿಜೆಪಿ -71
ಕಾಂಗ್ರೆಸ್-11
ಐಎನ್‌ಎಲ್‌ಡಿ+ಅಕಾಲಿದಳ -0
ಸ್ವತಂತ್ರ ಅಭ್ಯರ್ಥಿಗಳು-8

ಇಂಡಿಯಾ ನ್ಯೂಸ್- ಪೋಲ್‌‌ಸ್ಟ್ರಾಟ್

ಬಿಜೆಪಿ-75-80
ಕಾಂಗ್ರೆಸ್-9-12
ಐಎನ್‌ಎಲ್‌ಡಿ+ಅಕಾಲಿದಳ-0-1
ಸ್ವತಂತ್ರ ಅಭ್ಯರ್ಥಿಗಳು-1-3

ನ್ಯೂಸ್ ಎಕ್ಸ್- ಪೋಲ್‌‌ಸ್ಟ್ರಾಟ್

ಬಿಜೆಪಿ-75-80
ಕಾಂಗ್ರೆಸ್-9-12
ಐಎನ್‌ಎಲ್‌ಡಿ+ಅಕಾಲಿದಳ-0-1
ಸ್ವತಂತ್ರ ಅಭ್ಯರ್ಥಿಗಳು-1-3

ಎಬಿಪಿ ನ್ಯೂಸ್- ಸಿ ವೋಟರ್

ಬಿಜೆಪಿ- 72
ಕಾಂಗ್ರೆಸ್- 8
ಸ್ವತಂತ್ರ ಅಭ್ಯರ್ಥಿಗಳು - 10

ಟಿವಿ9- ಭಾರತ್‌ವರ್ಷ್

ಬಿಜೆಪಿ- 47
ಕಾಂಗ್ರೆಸ್- 23
ಸ್ವತಂತ್ರ ಅಭ್ಯರ್ಥಿಗಳು- 20

ರಿಪಬ್ಲಿಕ್ - ಜನ್‌ ಕೀ ಬಾತ್

ಬಿಜೆಪಿ- 52-63
ಕಾಂಗ್ರೆಸ್- 15-19
ಸ್ವತಂತ್ರ ಅಭ್ಯರ್ಥಿಗಳು- 12-18

ಇಂಡಿಯಾ ಟುಡೇ–ಆಕ್ಸಿಸ್‌

ಬಿಜೆಪಿ– 32-44

ಕಾಂಗ್ರೆಸ್‌– 30-42

ಜೆಜೆಪಿ–6-10

ಇತರೆ–6-10

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT