ಭಾನುವಾರ, ನವೆಂಬರ್ 17, 2019
20 °C

ಮಹಾರಾಷ್ಟ್ರ-ಹರಿಯಾಣ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಭಿನ್ನಮತ ಬಿಜೆಪಿಗೆ ‘ಲಾಭ’

Published:
Updated:
Prajavani

ಚಂಡೀಗಡ: ಹರಿಯಾಣದಲ್ಲಿ ಆಂತರಿಕ ಕಲಹ ಮತ್ತು ಪಕ್ಷಾಂತರದಿಂದ ಜರ್ಜರಿತವಾಗಿರುವ ಪ್ರತಿಪಕ್ಷ ಪಾಳಯವನ್ನು ಸಲೀಸಾಗಿ ಹಿಂದೆ ಸರಿಸಿ ಮತ್ತೆ ಅಧಿಕಾರ ಗದ್ದುಗೆ ಹಿಡಿಯುವ ಆತ್ಮವಿಶ್ವಾಸದಲ್ಲಿ ಆಡಳಿತಾರೂಢ ಬಿಜೆಪಿ ಇದೆ. 

ಜಾಟ್ ಸಮುದಾಯದ ಪ್ರಾಬಲ್ಯದ ಮಧ್ಯೆಯೂ, ಜಾಟರನ್ನು ಹೊರತುಪಡಿಸಿದ ಜನಸಮುದಾಯಗಳನ್ನು ಒಟ್ಟುಗೂಡಿಸುವಲ್ಲಿ ಬಿಜೆಪಿ ಸಫಲವಾಗಿದೆ. ಇದು ಕಳೆದ ಲೋಕಸಭಾ ಚುನಾವಣೆಯಲ್ಲಿ ಸಾಬೀತಾಗಿದ್ದು, ರಾಜ್ಯದ ಎಲ್ಲ 10 ಸ್ಥಾನಗಳನ್ನು ಪಕ್ಷ ಗೆದ್ದುಕೊಂಡಿತ್ತು.

90 ಸದಸ್ಯಬಲದ ಹರಿಯಾಣ ವಿಧಾನಸಭೆಗೆ 2014ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 47 ಕ್ಷೇತ್ರಗಳಲ್ಲಿ ವಿಜಯ ಪತಾಕೆ ಹಾರಿಸಿತ್ತು. ಭಾರತೀಯ ರಾಷ್ಟ್ರೀಯ ಲೋಕದಳದ (ಐಎನ್‌ಎಲ್‌ಡಿ) ಸ್ಥಾನಗಳು 19ಕ್ಕೆ ಕುಸಿತವಾದವು. ದಶಕದ ಕಾಲ ರಾಜ್ಯದಲ್ಲಿ ಅಧಿಕಾರ ನಡೆಸಿ ಆಡಳಿತ ಕೊನೆಗೊಳಿಸಿದ್ದ ಕಾಂಗ್ರೆಸ್ 15 ಕ್ಷೇತ್ರಗಳಿಗೆ ಸೀಮಿತವಾಗಿತ್ತು.

ಕಳೆಗುಂದಿದ ಐಎನ್‌ಎಲ್‌ಡಿ: ಚೌಟಾಲಾ ಕುಟುಂಬದಲ್ಲಿ ಅಜಯ್ ಮತ್ತು ಅಭಯ್ ಸಹೋದರರ ನಡುವೆ ಅಸ್ತಿತ್ವಕ್ಕಾಗಿ ನಡೆದ ಹೋರಾಟ ಪಕ್ಷವನ್ನೇ ನೆಲಕಚ್ಚುವಂತೆ ಮಾಡಿದೆ. ಇದು ಯಾವ ಹಂತಕ್ಕೆ ಎಂದರೆ, ಪಕ್ಷದ ಮತ ಪ್ರಮಾಣ ಶೇ 1.89ಕ್ಕೆ ಕುಸಿತ ಕಂಡಿದೆ. ನಂಬಿಕಸ್ಥರೂ ಸೇರಿದಂತೆ ಹಲವರು ಪಕ್ಷ ಬಿಟ್ಟು ಹೊರನಡೆದರು. ಈ ಪೈಕಿ ಬಹುತೇಕರು ಬಿಜೆಪಿಯನ್ನು ಆರಿಸಿಕೊಂಡರೆ, ಕೆಲವರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದರು. ಜನತಾ ಜನನಾಯಕ ಪಕ್ಷವಂತೂ (ಜೆಜೆಪಿ) ಜಾಟ್ ಸಮುದಾಯದ ಮತಗಳನ್ನು ವಿಭಜಿಸಿ, ಐಎನ್‌ಎಲ್‌ಡಿಗೆ ದೊಡ್ಡ ಹೊಡೆತ ನೀಡಿತು. 

ಕಾಂಗ್ರೆಸ್‌ ಸ್ಥಿತಿ: ರಾಜ್ಯದಲ್ಲಿ ಕಾಂಗ್ರೆಸ್ ಗಂಭೀರ ಆಂತರಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಪಕ್ಷದ ಆತ್ಮಸ್ಥೈರ್ಯವನ್ನೇ ಕುಗ್ಗಿಸಿದೆ. ಜೊತೆಗೆ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ 5 ವರ್ಷಗಳಿಂದ ಸಿಬಿಐ ಪ್ರಕರಣಎದುರಿಸುತ್ತಿದ್ದಾರೆ.  

ಪಕ್ಷದಲ್ಲಿ ನಾಯಕತ್ವ ಬದಲಾವಣೆಯೂ ತುಂಬ ತಡವಾಗಿ ಆಯಿತು. ರಾಜ್ಯದಲ್ಲಿ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ಕುಮಾರಿ ಶೆಲ್ಜಾ ಅವರನ್ನು ಇತ್ತೀಚೆಗಷ್ಟೇ ನೇಮಕ ಮಾಡಲಾಗಿದೆ. ಪ್ರಮುಖ ನಾಯಕರಾದ ಭೂಪಿಂದರ್ ಹೂಡಾ, ಅವರ ಪುತ್ರ ನಾಲ್ಕು ಬಾರಿ ಸಂಸದರಾಗಿದ್ದ ದೀಪಿಂದರ್, ಕುಮಾರಿ ಶೆಲ್ಜಾ, ಅಶೋಕ್ ತನ್ವಾರ್ ಅವರು ಲೋಕಸಭಾ ಚುನಾವಣೆಯ ಸೋಲಿನಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದು, ಈಗ ವಿಧಾನಸಭಾ ಚುನಾವಣೆಗೆ ಸಜ್ಜಾಗಬೇಕಿದೆ.

**

* ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ 10 ಕ್ಷೇತ್ರಗಳಲ್ಲಿ ಗೆದ್ದಿರುವುದು ಬಿಜೆಪಿಯ ವಿಶ್ವಾಸ ಹೆಚ್ಚಿಸಿದೆ

* ಪ್ರತಿಪಕ್ಷಗಳಲ್ಲಿ ಒಡಕು ಇದ್ದರೂ, ಬಿಜೆಪಿಯ ‘ಮಿಷನ್ 75 ಪ್ಲಸ್’ ಗುರಿ ಅಂದುಕೊಂಡಷ್ಟು ಸುಲಭವಿಲ್ಲ

* ಎಲ್ಲ ಪಕ್ಷಗಳಿಂದ ಬಿಜೆಪಿಗೆ ಬಂದಿರುವವರ ಸಂಖ್ಯೆ ಅಧಿಕವಿದ್ದು, ಟಿಕೆಟ್ ನೀಡಿಕೆ ಪಕ್ಷಕ್ಕೆ ಸವಾಲಾಗಿದೆ

* ಮೇಲ್ನೋಟಕ್ಕೆ ಕಾಂಗ್ರೆಸ್‌, ಬಿಜೆಪಿ ಹಣಾಹಣಿಯಿದೆ

* ಐಎನ್‌ಎಲ್‌ಡಿ, ಬಿಎಸ್‌ಪಿ, ಎಎಪಿ, ಸ್ವರಾಜ್ ಇಂಡಿಯಾ ಪಕ್ಷಗಳು ಒಡೆದು, ನೂತನವಾಗಿ ಉದಯಿಸಿದ ‘ಜನನಾಯಕ ಪಕ್ಷ’ ಸವಾಲು ಒಡ್ಡಲಿದೆ

* ಪ್ರತಿಪಕ್ಷಗಳು ಅಸ್ತವ್ಯಸ್ತ ಸ್ಥಿತಿಯಲ್ಲಿರುವಾಗಲೇ ಚುನಾವಣೆ ಘೋಷಣೆಯಾಗಿದೆ

* 2009ರಲ್ಲಿ ಕೇವಲ 4 ಸ್ಥಾನಗಳಿಸಿದ್ದ ಬಿಜೆಪಿ ‘ಮೋದಿ ಅಲೆ‘ಯಿಂದ 2014ರಲ್ಲಿ 47 ಸ್ಥಾನ ಬಾಚಿಕೊಂಡಿತ್ತು
**

ಪ್ರತಿಪಕ್ಷಗಳು ಒಡೆದ ಮನೆಯಾಗಿವೆ. ಈ ಬಾರಿ 75 ಸ್ಥಾನಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ. ನನಗೆ ಭರವಸೆ ಇದೆ
- ಮನೋಹರ ಲಾಲ್ ಖಟ್ಟರ್, ಹರಿಯಾಣ ಮುಖ್ಯಮಂತ್ರಿ

**

ಅಂಕಿ–ಅಂಶ

ಹರಿಯಾಣ

1.89 ಕೋಟಿ ಮತದಾರರು

19 ಸಾವಿರ ಮತಗಟ್ಟೆ

 **

ಮಹಾರಾಷ್ಟ್ರ

8.9 ಕೋಟಿ ಮತದಾರರು

95 ಸಾವಿರ ಮತಗಟ್ಟೆ

ಪ್ರತಿಕ್ರಿಯಿಸಿ (+)