ಭಾನುವಾರ, ಮೇ 16, 2021
22 °C

ಹರಿಯಾಣ ಫಲಿತಾಂಶ ವಿಶ್ಲೇಷಣೆ | ಜಾಟ್ ಸಮುದಾಯ ನಿರ್ಲಕ್ಷ್ಯಕ್ಕೆ ಬೆಲೆತೆತ್ತ ಬಿಜೆಪಿ

ಗೌತಮ್ ಧೀರ್ Updated:

ಅಕ್ಷರ ಗಾತ್ರ : | |

Prajavani

ಚಂಡೀಗಡ: ಹರಿಯಾಣದಲ್ಲಿ 40 ಸ್ಥಾನಗಳನ್ನು ಪಡೆದಿರುವ ಬಿಜೆಪಿಯು ರಾಜ್ಯದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸ್ವತಂತ್ರವಾಗಿ ಸರ್ಕಾರ ರಚಿಸಲಾಗದ ಸ್ಥಿತಿಯಲ್ಲಿದೆ. ಜಾಟರ ಈ ನಾಡಿನಲ್ಲಿ 30 ಸ್ಥಾನಗಳನ್ನು ಪಡೆಯುವ ಮೂಲಕ ಕಾಂಗ್ರೆಸ್‌ ಪಕ್ಷವು ಅನಿರೀಕ್ಷಿತ ಎಂಬಂತೆ ಪುಟಿದೆದ್ದಿದೆ.

ಈ ಚುನಾವಣೆಯ ಅಚ್ಚರಿಯ ಅಂಶವೆಂದರೆ, ಇತ್ತೀಚೆಗಷ್ಟೇ ಜನ್ಮ ತಳೆದಿರುವ, ಮೊದಲಬಾರಿ ಚುನಾವಣೆ ಎದುರಿಸಿದ ಜನನಾಯಕ ಜನತಾ ಪಕ್ಷವು (ಜೆಜೆಪಿ) 10 ಸ್ಥಾನಗಳನ್ನು ಗೆಲ್ಲುವ ಮೂಲಕ ‘ಕಿಂಗ್‌ ಮೇಕರ್‌’ ಆಗಿ ರೂಪುಗೊಂಡಿರುವುದಾಗಿದೆ. ರಾಜ್ಯದಲ್ಲಿ ಸರ್ಕಾರ ರಚನೆಯಲ್ಲಿ ಈ ಪಕ್ಷ ಮತ್ತು ಪಕ್ಷೇತರ ಅಭ್ಯರ್ಥಿಗಳು ಮಹತ್ವದ ಪಾತ್ರ ವಹಿಸಲಿದ್ದಾರೆ.

ಕೆಲವೇ ತಿಂಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಹತ್ತು ಲೋಕಸಭಾ ಕ್ಷೇತ್ರಗಳನ್ನು ಗೆದ್ದುಕೊಂಡಿದ್ದ ಬಿಜೆಪಿಗೆ ಈ ಫಲಿತಾಂಶ ಸ್ವಲ್ಪ ಇರುಸುಮುರುಸು ಉಂಟುಮಾಡಿದ್ದು ಸ್ಪಷ್ಟವಾಗಿ ಗೋಚರಿ ಸುತ್ತಿದೆ. ಆದರೂ, ಒಂದಲ್ಲ ಒಂದು ರೀತಿಯಿಂದ ಬಿಜೆಪಿಯೇ ರಾಜ್ಯದಲ್ಲಿ ಸರ್ಕಾರ ರಚಿಸುವ ಸಾಧ್ಯತೆ ದಟ್ಟವಾಗಿದೆ.

ರಾಜ್ಯದಲ್ಲಿ 75 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಹುಮ್ಮಸ್ಸಿನಿಂದ ಹೋರಾಡಿದ್ದ ಬಿಜೆಪಿಗೆ ಗುರಿ ಸಾಧಿಸಲು ಸಾಧ್ಯವಾಗಲಿಲ್ಲ. ಬದಲಿಗೆ ಕಳೆದ ಚುನಾವಣೆಗಿಂತ ಏಳು ಕ್ಷೇತ್ರಗಳ ಕುಸಿತ ಕಾಣಬೇಕಾಯಿತು. ಮನೋಹರ ಲಾಲ್‌ ಖಟ್ಟರ್‌ ಸಂಪುಟದಲ್ಲಿದ್ದ ಇಬ್ಬರು ಸಚಿವರನ್ನುಳಿದು ಉಳಿದವರೆಲ್ಲರೂ ಸೋಲನುಭವಿಸಿದರು. ಬಿಜೆಪಿಯ ರಾಜ್ಯಘಟಕದ ಅಧ್ಯಕ್ಷರೇ ಸೋತು, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸುವ ಬಿಜೆಪಿಯ ಮೊದಲ ಪ್ರಯತ್ನವೂ ವಿಫಲವಾಯಿತು.

2014ರ ಚುನಾವಣೆಯಲ್ಲಿ 19 ಸ್ಥಾನಗಳನ್ನು ಗೆದ್ದಿದ್ದ ಇಂಡಿ ಯನ್‌ ನ್ಯಾಷನಲ್‌ ಲೋಕದಳ (ಐಎನ್‌ ಎಲ್‌ಡಿ) ಈ ಬಾರಿ ಒಂದೇ ಒಂದು ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ವಿಧಾನ ಸಭೆಯ ಚುನಾವಣೆಯಲ್ಲಿ ಸ್ಥಳೀಯ ವಿಚಾರಗಳು ಎಷ್ಟು ಮುಖ್ಯವಾಗುತ್ತವೆ ಎಂಬುದಕ್ಕೆ ಐಎನ್‌ಎಲ್‌ಡಿಯ ಹೀನಾಯ ಸೋಲೇ ಉದಾಹರಣೆ.

ರಾಜ್ಯದಲ್ಲಿ ಜಾಟ್‌ ಸಮುದಾಯದ ಪ್ರಮಾಣ ಶೇ 25ರಷ್ಟಿದೆ. ಬಿಜೆಪಿಯು ಈ ಬಾರಿ ಈ ಸಮುದಾಯವನ್ನು ದೂರವಿಟ್ಟು ಚುನಾವಣೆ ಎದು ರಿಸಲು ನಿರ್ಧರಿಸಿತ್ತು. ಅದೇ ಪಕ್ಷಕ್ಕೆ ಮುಳುವಾಯಿತು. ಇತರ ಸಮುದಾ ಯದವರ ಮತಗಳನ್ನು ಸೆಳೆಯಲು ಬಿಜೆಪಿ ಮುಂದಾದ ಪರಿಣಾಮ ಜಾಟ್‌ ಮತಗಳೆಲ್ಲವೂ ಧ್ರುವೀಕರಣಗೊಂಡು ಕಾಂಗ್ರೆಸ್‌ ಹಾಗೂ ಜೆಜೆಪಿಗೆ ಲಾಭವಾಯಿತು.

ಜಾಟ್‌– ದಲಿತ ಸಮೀಕರಣವು ಕಾಂಗ್ರೆಸ್‌ಗೆ ಒಳ್ಳೆಯ ಲಾಭವನ್ನು ತಂದುಕೊಟ್ಟಿತು. ಜಾಟ್‌ ಸಮುದಾಯದ ನಾಯಕ, ಕಾಂಗ್ರೆಸ್‌ನ ‘ಹಳೆಯ ಕುದುರೆ’ ಭೂಪಿಂದರ್‌ ಸಿಂಗ್‌ ಹೂಡ ಈ ಬಾರಿ ಕಾಂಗ್ರೆಸ್‌ನ  ‘ಪಂದ್ಯಶ್ರೇಷ್ಠ’ ಪುರಸ್ಕಾರ ಪಡೆದರು. ಐಎನ್‌ಎಲ್‌ಡಿಯ ಭವಿಷ್ಯ ಮಸುಕಾಗಿರುವುದನ್ನು ಜನರು ಮೊದಲೇ ಗುರುತಿಸಿದ್ದರಿಂದ ಆ ಪಕ್ಷದ ಜಾಟ್‌ ಮತಗಳು ಕಾಂಗ್ರೆಸ್‌ ಹಾಗೂ ಜೆಜೆಪಿಯತ್ತ ವಾಲಿದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು