ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಎಸ್‌ಇ ಪರೀಕ್ಷೆ: ನಿಲುವು ಸ್ಪಷ್ಟಪಡಿಸಲು ಸರ್ಕಾರಕ್ಕೆ ಸೂಚನೆ

Last Updated 22 ಜೂನ್ 2020, 11:29 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಬಾಂಬೆ ಹೈಕೋರ್ಟ್, ಬಾಕಿ ಉಳಿದಿರುವ ಐಸಿಎಸ್‌ಇ 10 ಹಾಗೂ 12ನೇ ತರಗತಿ ಪರೀಕ್ಷೆಗಳನ್ನು ನಡೆಸುವ ಬಗ್ಗೆ ನಿಲುವು ಸ್ಪಷ್ಟಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಪರೀಕ್ಷೆಗೆ ಅನುಮತಿ ನೀಡುವ ಬಗ್ಗೆ ಸರ್ಕಾರ ಇನ್ನೂ ದ್ವಂದ್ವ ನಿಲುವಿನಲ್ಲೇ ಇರುವುದು ಸರಿಯಲ್ಲ ಎಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಎಸ್‌ಎಸ್‌ ಶಿಂಧೆ ಅವರನ್ನು ಒಳಗೊಂಡ ಪೀಠ ಹೇಳಿತು. ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಒಂದು ವೇಳೆ ಕಡಿಮೆ ಇದ್ದರೆ, ಪರೀಕ್ಷೆಗೆ ಅನುಮತಿ ನೀಡುವ ಬಗ್ಗೆ ಆಲೋಚಿಸಿ ಎಂದು ಕೋರ್ಟ್ ತಿಳಿಸಿತು.

ಐಸಿಎಸ್‌ಸಿಯು ರಾಜ್ಯದಲ್ಲಿ ಬಾಕಿ ಉಳಿದಿರುವ ಪರೀಕ್ಷೆಗಳನ್ನು ಜುಲೈ 2ರಿಂದ 12ರವರೆಗೆ ನಡೆಸಲು ನಿರ್ಧರಿಸಿದೆ. ಆದರೆ ಪರೀಕ್ಷೆಗಳನ್ನು ನಡೆಸುವ ಮಂಡಳಿಯ ನಿರ್ಧಾರ ಪ್ರಶ್ನಿಸಿ ಮುಂಬೈ ನಿವಾಸಿ ಅರವಿಂದ ತಿವಾರಿ ಎಂಬುವರು ಕೋರ್ಟ್ ಮೊರೆ ಹೋಗಿದ್ದರು. ಮುಂಬೈನಲ್ಲಿ ಕೋವಿಡ್ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ವಿದ್ಯಾರ್ಥಿಗಳ ಹಿಂದಿನ ಪರೀಕ್ಷಾ ಫಲಿತಾಂಶ ಆಧರಿಸಿ ತೇರ್ಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪರೀಕ್ಷೆಗೆ ಹಾಜರಾಗಲು ಒಪ್ಪದ ವಿದ್ಯಾರ್ಥಿಗಳಿಗೆ ಪರ್ಯಾಯವಾಗಿ ನೀಡಲಿರುವ ಗ್ರೇಡಿಂಗ್ ವಿಧಾನವನ್ನು ವಿವರಿಸುವಂತೆ ಮಂಡಳಿಗೆ ಕೋರ್ಟ್ ನಿರ್ದೇಶಿಸಿತ್ತು. ಇದಕ್ಕೆ ಇನ್ನಷ್ಟು ಕಾಲಾವಕಾಶ ನೀಡುವಂತೆ ಮಂಡಳಿ ಸೋಮವಾರ ಕೋರಿತು. ಈ ಬಗ್ಗೆ ಸರ್ಕಾರದ ನಿಲುವು ಏನೆಂದು ಕೋರ್ಟ್ ತಿಳಿಯಬಯಸಿದೆ. ಸರ್ಕಾರವು ಕಾದುನೋಡುವ ವಿಧಾನ ಅನುಸರಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟ ಕೋರ್ಟ್, ನಿಲುವು ಸ್ಪಷ್ಟಪಡಿಸುವ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT