ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಬಾರಿಗೆ ಕೋವಿಡ್‌! ಸಿಎಸ್‌ಐಆರ್‌ ಮಹಾನಿರ್ದೇಶಕ ಎಚ್ಚರಿಕೆ

Last Updated 1 ಜೂನ್ 2020, 1:58 IST
ಅಕ್ಷರ ಗಾತ್ರ

ನವದೆಹಲಿ: ‘ಕೋವಿಡ್‌–19 ಪ್ರಕರಣಗಳು ಕ್ರಮೇಣ ಕಡಿಮೆಯಾಗುತ್ತವೆ. ಆದರೆ, ಮತ್ತೆ ಎರಡನೇ ಬಾರಿ ಹಬ್ಬುವ ಸಾಧ್ಯತೆ ಇದೆ’ ಎಂದು ವೈಜ್ಞಾನಿಕ ಮತ್ತು ಕೈಗಾರಿಕೆ ಸಂಶೋಧನಾ ಸಂಸ್ಥೆಯ(ಸಿಎಸ್‌ಐಆರ್‌) ಮಹಾನಿರ್ದೇಶಕ ಶೇಖರ್‌ ಮಂಡೆ ಎಚ್ಚರಿಕೆ ನೀಡಿದ್ದಾರೆ.

‘ಸೋಂಕು ಹಬ್ಬುವ ಬಗ್ಗೆ ಜಗತ್ತಿನಾದ್ಯಂತ ಮತ್ತು ಭಾರತದಲ್ಲಿ ವಿವಿಧ ರೀತಿಯ ಸಂಶೋಧನೆಗಳು ನಡೆದಿವೆ. ನಾಗರಿಕರು ವೈರಸ್ ಸೋಂಕಿಗೆ ಒಳಗಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ನಿರಂತರವಾಗಿ ಕೈಗೊಳ್ಳಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.

‘ಲಸಿಕೆ ಅಭಿವೃದ್ಧಿಪಡಿಸಲು ಮೂರು ಹಂತದ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಭಾರತದ ಕಂಪನಿಗಳೇ ಲಸಿಕೆ ಅಭಿವೃದ್ಧಿಯಲ್ಲಿ ಅತಿ ಹೆಚ್ಚು ಕ್ರಿಯಾಶೀಲವಾಗಿ ಪಾಲ್ಗೊಂಡಿವೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಲಸಿಕೆಯನ್ನು ಸಿಎಸ್‌ಐಆರ್‌ ಅಭಿವೃದ್ಧಿಪಡಿಸುತ್ತಿದೆ. ದೇಶದ ಮೂರು ಸ್ಥಳಗಳಲ್ಲಿ ಈ ಬಗ್ಗೆ ಪ್ರಯೋಗ ಕೈಗೊಳ್ಳಲಾಗುತ್ತಿದೆ. ಮುಂದಿನ 15 ದಿನಗಳಲ್ಲಿ ಈ ಲಸಿಕೆಯ ಫಲಿತಾಂಶ ದೊರೆಯುತ್ತದೆ’ ಎಂದು ತಿಳಿಸಿದ್ದಾರೆ.

‘ಮೊನೊಕ್ಲೊನಾಲ್‌ ಎನ್ನುವ ಲಸಿಕೆ ಅಭಿವೃದ್ಧಿಗೆ ಸಿಎಸ್‌ಐಆರ್‌ ಅನುದಾನ ನೀಡಿದೆ. ಪುಣೆಯಲ್ಲಿರುವ ರಾಷ್ಟ್ರೀಯ ಕೋಶ ವಿಜ್ಞಾನ ಕೇಂದ್ರ (ಎನ್‌ಸಿಸಿಎಸ್‌), ಐಐಟಿ ಇಂದೋರ್‌ ಮತ್ತು ಭಾರತ್‌ ಬಯೊಟೆಕ್‌ ಕಂಪನಿ ಜಂಟಿಯಾಗಿ ಈ ಲಸಿಕೆ ಅಭಿವೃದ್ದಿಪಡಿಸುತ್ತಿವೆ. ಪ್ಲಾಸ್ಮಾ ಚಿಕಿತ್ಸೆ ಕುರಿತ ಪ್ರಯೋಗವೂ ಕೊಲ್ಕತ್ತದಲ್ಲಿ ನಡೆಯುತ್ತಿದೆ’ ಎಂದು ವಿವರಿಸಿದ್ದಾರೆ.

ಕೊರೊನಾ ವೈರಸ್‌ ವಿರುದ್ಧ ಹೋರಾಟ ನಡೆಸಲು ಏಕಾಏಕಿ ಸಾಮೂಹಿಕ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಾರ್ಯಗಳನ್ನು ಕೈಗೊಳ್ಳುವುದು ಯಾವುದೇ ದೇಶಕ್ಕೆ ಅಪಾಯಕಾರಿ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಆದ್ದರಿಂದ, ಸಕಾಲಕ್ಕೆ ಪರಿಸ್ಥಿತಿಗೆ ಅನುಗುಣವಾಗಿ ಕೈಗೊಳ್ಳಬಹುದಾದ ಕ್ರಮಗಳ ಮೂಲಕವೇ ಕೋವಿಡ್‌–19 ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.

*
ಡಬ್ಲುಎಚ್‌ಒ ಮೌಲ್ಯಯುತ ಸಂಸ್ಥೆ. ಪೋಲಿಯೊ ವೈರಸ್‌ ನಿರ್ಮೂಲನೆ ಸೇರಿದಂತೆ ಹಲವು ಸಂದರ್ಭಗಳಲ್ಲಿ ಮಹತ್ವದ ಪಾತ್ರ ವಹಿಸಿದೆ.
–ಶೇಖರ್‌ ಮಂಡೆ, ಸಿಎಸ್‌ಐಆರ್‌ ಮಹಾನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT