ಶುಕ್ರವಾರ, ನವೆಂಬರ್ 22, 2019
23 °C

ಕನ್ನಡ ಪರ ಧ್ವನಿ ಎತ್ತಿದ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ

Published:
Updated:

ಬೆಂಗಳೂರು: ‘ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ’ ಎಂಬ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ, ‘ಭಾರತೀಯ ಸಂವಿಧಾನ ಅಂಗೀಕರಿಸಿದ ಭಾಷೆಗಳಲ್ಲಿ ಯಾವುದೇ ತಾರತಮ್ಯ ಸಲ್ಲದು. ರಾಜ್ಯ ದಲ್ಲಿ ಕನ್ನಡವೇ ಅಧಿಕೃತ ಭಾಷೆ’ ಎಂದು ಬಿಜೆಪಿಯವರೇ ಆದ ಮುಖ್ಯಮಂತ್ರಿ ಯಡಿಯೂರಪ್ಪ ಟ್ವೀಟ್ ಮಾಡಿರುವುದು ವಿಭಿನ್ನ ಚರ್ಚೆ ಹುಟ್ಟು ಹಾಕಿದೆ.

‘ಕನ್ನಡ ಭಾಷಾ ಸ್ವಾಭಿಮಾನಕ್ಕೆ ಧಕ್ಕೆ ತರುವ ಯಾವ ಪ್ರಯತ್ನವನ್ನೂ ನಮ್ಮ ಸರ್ಕಾರ ಸಹಿಸುವುದಿಲ್ಲ’ ಎನ್ನುವ ಮೂಲಕ ಯಡಿಯೂರಪ್ಪ ಪರೋಕ್ಷ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘ಹಿಂದಿ ದಿವಸ್‌’ ಆಚರಣೆಯ ಸಂದರ್ಭದಲ್ಲಿ ‘ಒಂದು ದೇಶ, ಒಂದು ಭಾಷೆ’ ಎಂದು ಪ್ರತಿಪಾದಿಸಿದ್ದರು.

ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗಿ ಆಂದೋಲನದ ರೂಪವನ್ನೂ ತಾಳಿತ್ತು. ಕರ್ನಾಟಕವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು, ರಾಜ್ಯ ಸರ್ಕಾರದ ಕೆಲವು ಸಚಿವರು ಅಮಿತ್ ಶಾ ನಿಲುವಿಗೆ ಬೆಂಬಲ ಸೂಚಿಸಿದ್ದರು. 

ಹಿಂದಿ ಹೇರಿಕೆಯನ್ನು ರಾಜ್ಯದ ಬಿಜೆಪಿ ಮುಖಂಡರು ಬೆಂಬಲಿಸುತ್ತಿದ್ದಾರೆ ಎಂಬ ಆಕ್ರೋಶ ಹೆಚ್ಚುತ್ತಿರುವ ಹೊತ್ತಿನಲ್ಲಿ, ರಾಷ್ಟ್ರೀಯ ಅಧ್ಯಕ್ಷರ ನಿಲುವಿಗೆ ಯಡಿಯೂರಪ್ಪ ಅವರು ಭಿನ್ನ ನಿಲುವು ತಳೆದಿರುವುದು ಪಕ್ಷದಲ್ಲಿ ಚರ್ಚೆಗೆ ಗ್ರಾಸವಾಗಿದೆ. 

 

ಪ್ರತಿಕ್ರಿಯಿಸಿ (+)