ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರದಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ಭರದ ಸಿದ್ಧತೆ:ಹಂತ ಹಂತವಾಗಿ ನಿರ್ಬಂಧ ಸಡಿಲ

ಮುಫ್ತಿ, ಫಾರೂಕ್‌, ಒಮರ್‌ ಅಬ್ದುಲ್ಲಾ ಬಿಡುಗಡೆ ಸದ್ಯಕ್ಕಿಲ್ಲ
Last Updated 13 ಆಗಸ್ಟ್ 2019, 19:23 IST
ಅಕ್ಷರ ಗಾತ್ರ

ಶ್ರೀನಗರ: ‘ಸ್ವಾತಂತ್ರ್ಯ ದಿನಾಚರಣೆಯ ಸಿದ್ಧತೆಗಳು ಪುರ್ಣ ಗೊಂಡ ಬಳಿಕ ಜಮ್ಮು ಕಾಶ್ಮೀರದಲ್ಲಿ ಹಂತಹಂತವಾಗಿ ನಿಷೇಧಾಜ್ಞೆ ಸಡಿಲಗೊಳಿಸಲಾಗುವುದು’ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ರೋಹಿತ್‌ ಕನ್ಸಲ್‌ ಮಂಗಳವಾರ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಗಳ ತಾಲೀಮು ಪೂರ್ಣಗೊಂಡ ಬಳಿಕ ಕಾಶ್ಮೀರದಲ್ಲೂ ನಿಷೇಧಾಜ್ಞೆ ಸಡಿಲಗೊಳ್ಳಲಿದೆ. ಆದರೆ ಕೆಲವು ಭಾಗಗಳಲ್ಲಿ ಮಾತ್ರ ಇನ್ನೂ ಕೆಲ ದಿನಗಳ ಮಟ್ಟಿಗೆ ಮುಂದುವರಿಯುವುದು. ಜಮ್ಮು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಈ ಬಾರಿ ಅತ್ಯಂತ ಸಂಭ್ರಮದಿಂದ ಸ್ವಾತಂತ್ರ್ಯೋತ್ಸವ ಆಚರಿಸಲಾಗುವುದು ಎಂದರು.

‘ಜನರಿಗೆ ತೊಂದರೆ ಆಗಬಾರದು ಎಂಬುದು ಸರ್ಕಾರದ ಉದ್ದೇಶ. ಸಂವಹನ ಮಾಧ್ಯಮಗಳನ್ನು ರದ್ದುಗೊಳಿಸಿದ್ದರಿಂದ ಆಗುತ್ತಿರುವ ಸಮಸ್ಯೆ ನಿವಾರಣೆಗಾಗಿ 300 ಸಾರ್ವಜನಿಕ ದೂರವಾಣಿ ಕೇಂದ್ರಗಳನ್ನು ತೆರೆಯ ಲಾಗಿದೆ. ಈ ಕೇಂದ್ರಗಳಿಂದ ಒಂದು ದಿನದಲ್ಲಿ ಐದು ಸಾವಿರಕ್ಕೂ ಹೆಚ್ಚು ಕರೆಗಳನ್ನು ಮಾಡಲಾಗಿದೆ ಎಂದು ಕನ್ಸಲ್‌ ತಿಳಿಸಿದರು.

ದೂರವಾಣಿಗಾಗಿ ಉದ್ದ ಸಾಲು:ಸಂಪರ್ಕ ಸಾಧನಗಳೇ ಇಲ್ಲದೆ ಹಲವು ದಿನಗಳಿಂದ ರಾಜ್ಯದ ಜನರು ತೀರ ಸಂಕಷ್ಟಕ್ಕೆ ಒಳಗಾಗಿದ್ದರು. ಸರ್ಕಾರ ತೆರೆದಿರುವ ಸಾರ್ವಜನಿಕ ದೂರವಾಣಿ ಕೇಂದ್ರಗಳಲ್ಲಿ ಉದ್ದನೆಯ ಸಾಲುಗಳು ಕಂಡುಬಂದವು. ಗಂಟೆಗಟ್ಟಲೆ ಕಾಯ್ದ ನಂತರ 2–3 ನಿಮಿಷಗಳ ಕಾಲ ಮಾತನಾಡಲಷ್ಟೇ ಅವಕಾಶ ಲಭಿಸುತ್ತಿದೆ.

‘ಗಲಭೆ ನಡೆಯದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಸಂಪರ್ಕ ವ್ಯವಸ್ಥೆಯನ್ನು ರದ್ದುಪಡಿಸುವುದು ಅನಿವಾರ್ಯವಾಗಿದೆ. ಸುಳ್ಳು ಸುದ್ದಿಗಳು ಹರಡುವುದನ್ನು ತಡೆಯಲು ಇರುವ ಪರಿಣಾಮಕಾರಿ ಮಾರ್ಗ ಇದೊಂದೇ’ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಸದ್ಯ ಬಿಡುಗಡೆ ಇಲ್ಲ: ಗೃಹಬಂಧನದಲ್ಲಿರುವ ರಾಜಕೀಯ ನಾಯಕರಾದ ಮೆಹಬೂಬಾ ಮುಫ್ತಿ, ಫಾರೂಕ್‌ ಅಬ್ದುಲ್ಲಾ, ಒಮರ್‌ ಅಬ್ದುಲ್ಲಾ ಮುಂತಾದವರನ್ನು ಜಮ್ಮು ಕಾಶ್ಮೀರದ ಸ್ಥಿತಿಯು ಪೂರ್ಣವಾಗಿ ಶಾಂತವಾಗಿದೆ ಎಂಬ ಭರವಸೆ ಮೂಡುವವರೆಗೂ ಬಿಡುಗಡೆ ಮಾಡುವುದಿಲ್ಲ. ನಿರ್ಬಂಧಗಳು ಇನ್ನೂ ಕೆಲವು ದಿನಗಳ ಮಟ್ಟಿಗೆ ಮುಂದುವರಿಯಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜನರಿಗೆ ಆಗುತ್ತಿರುವ ಅನನುಕೂಲಗಳ ಬಗ್ಗೆ ನಮಗೆ ಅರಿವಿದೆ. ಆದರೆ, ಅನನುಕೂಲ ಹಾಗೂ ಪ್ರಾಣಹಾನಿಯ ಮಧ್ಯೆ ನಾವು ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆತಂಕ ಬೇಡ: ರಾವತ್‌

ಗಡಿನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನವು ಹೆಚ್ಚುವರಿ ಸೇನೆ ಜಮಾವಣೆ ಮಾಡುತ್ತಿದೆ ಎಂಬ ವರದಿಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌, ಅದು ಸಾಮಾನ್ಯ ಪ್ರಕ್ರಿಯೆ ಎಂದಿದ್ದಾರೆ.

‘ಪ್ರತಿಯೊಂದು ರಾಷ್ಟ್ರವೂಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತದೆ. ಅದರಲ್ಲೇನೂ ವಿಶೇಷವಿಲ್ಲ. ಅಂಥ ವಿಚಾರಗಳ ಬಗ್ಗೆ ನಾವು ತುಂಬಾ ತಲೆಕೆಡಿಸಿಕೊಳ್ಳಬಾರದು. ಗಡಿಯಲ್ಲಿ ಗದ್ದಲ ಸೃಷ್ಟಿಸಲೇಬೇಕು ಎಂದು ಪಾಕಿಸ್ತಾನವು ಬಯಸಿದರೆ ಅದು ಅವರ ನಿರ್ಧಾರ. ನಾವು ಎಲ್ಲದಕ್ಕೂ ಸಿದ್ಧವಾಗಿದ್ದೇವೆ’ ಎಂದರು.

ಮೂರ್ಖರ ಸ್ವರ್ಗದಲ್ಲಿ ಇರಬೇಡಿ

ಇಸ್ಲಾಮಾಬಾದ್‌ (ಪಿಟಿಐ): ‘ಜಮ್ಮು ಕಾಶ್ಮೀರದ ವಿಶೇಷಾಧಿಕಾರ ರದ್ದು ಮಾಡಿರುವ ಭಾರತದ ಕ್ರಮದ ವಿರುದ್ಧ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಹಾಗೂ ಮುಸ್ಲಿಂ ರಾಷ್ಟ್ರಗಳ ಬೆಂಬಲ ಪಡೆಯುವುದು ಪಾಕಿಸ್ತಾನಕ್ಕೆ ಅಷ್ಟು ಸುಲಭವಾಗದು. ಮೂರ್ಖರ ಸ್ವರ್ಗದಲ್ಲಿ ಇರಬೇಡಿ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್‌ ಖುರೇಷಿ ಹೇಳಿದ್ದಾರೆ.

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿ ನಡೆಸಿದ ಅವರು, ‘ನೀವು ಮೂರ್ಖರ ಸ್ವರ್ಗದಲ್ಲಿ ಇರಬಾರದು. ಅಲ್ಲಿ (ವಿಶ್ವಸಂಸ್ಥೆ) ಕೈಯಲ್ಲಿ ಮಾಲೆಗಳನ್ನು ಹಿಡಿದುಕೊಂಡು ನಿಮಗಾಗಿ ಯಾರೂ ಕಾಯುತ್ತಾ ಕುಳಿತಿರುವುದಿಲ್ಲ. ‘ಮುಸ್ಲಿಂ ಸಮುದಾಯದ ರಕ್ಷಕರು’ ಎನ್ನಿಸಿಕೊಂಡವರು ಸಹ ತಮ್ಮ ಆರ್ಥಿಕ ಲಾಭ–ನಷ್ಟಗಳನ್ನು ನೋಡುವರೇ ವಿನಾ ಈ ವಿಚಾರದಲ್ಲಿ ಪಾಕಿಸ್ತಾನವನ್ನು ಬೆಂಬಲಿಸಲಾರರು ಎಂದರು.

ಭಾರತ ಶತಕೋಟಿ ಜನಸಂಖ್ಯೆಯ ದೊಡ್ಡಮಾರುಕಟ್ಟೆ. ಮುಸ್ಲಿಂ ಸಮುದಾಯದ ರಕ್ಷಕರು
ಸೇರಿದಂತೆ ಅನೇಕ ರಾಷ್ಟ್ರಗಳು ಅಲ್ಲಿ ಹೂಡಿಕೆ ಮಾಡಿವೆ. ಅವರಿಗೆ ತಮ್ಮ ಹಿತಾಸಕ್ತಿಯೇ ಮುಖ್ಯವಾಗುತ್ತದೆ’ ಎಂದು ಖುರೇಷಿ ಹೇಳಿದರು.

ಮುಕ್ತ ಭೇಟಿಗೆ ಅವಕಾಶ ಕೊಡಿ ರಾಜ್ಯಪಾಲರಿಗೆ ರಾಹುಲ್‌ ತಿರುಗೇಟು

ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡುವಂತೆ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅವರು ನೀಡಿರುವ ಆಹ್ವಾನವನ್ನು ಸ್ವೀಕರಿಸಿರುವುದಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಆದರೆ ತಮಗಾಗಿ ವಿಮಾನ ಕಳುಹಿಸಿಕೊಡುವ ಅಗತ್ಯವಿಲ್ಲ ಎಂದಿದ್ದಾರೆ.

‘ಮಾನ್ಯ ರಾಜ್ಯಪಾಲರೇ, ನಿಮ್ಮ ಆಹ್ವಾನವನ್ನು ಮಾನ್ಯಮಾಡಿ, ನಾನು ಮತ್ತು ವಿರೋಧಪಕ್ಷಗಳ ನಿಯೋಗವೊಂದು ಜಮ್ಮು ಕಾಶ್ಮೀರ ಮತ್ತು ಲಡಾಖ್‌ಗೆ ಭೇಟಿನೀಡಲು ಬರುತ್ತೇವೆ. ನಮಗೆ ಪ್ರತ್ಯೇಕ ವಿಮಾನ ಬೇಕಾಗಿಲ್ಲ. ಆದರೆ ರಾಜ್ಯದಲ್ಲಿ ಪ್ರಯಾಣಿಸಲು ಮತ್ತು ಅಲ್ಲಿನ ಜನರು, ನಾಯಕರು ಹಾಗೂ ಸೇನಾ ಸಿಬ್ಬಂದಿಯ ಜೊತೆ ಬೆರೆಯಲು ಸಂಪೂರ್ಣ ಸ್ವಾತಂತ್ರ್ಯದ ಭರವಸೆಯನ್ನು ನೀಡಬೇಕು’ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

‘ಕಾಶ್ಮೀರ:ಟ್ರಂಪ್‌ ಮಧ್ಯಸ್ಥಿಕೆ ಇಲ್ಲ’

ವಾಷಿಂಗ್ಟನ್‌ (ಪಿಟಿಐ): ಕಾಶ್ಮೀರ ವಿವಾದ ಕುರಿತು ಮಧ್ಯಸ್ಥಿಕೆ ವಹಿಸುವ ಪ್ರಸ್ತಾವ ತಮ್ಮ ಮುಂದೆ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸ್ಪಷ್ಟಪಡಿಸಿದ್ದಾರೆ ಎಂದು ಭಾರತದ ರಾಯಭಾರಿ ಹರ್ಷ ವರ್ಧನ್‌ ಶೃಂಗಲಾ ಸೋಮವಾರ ಹೇಳಿದ್ದಾರೆ. ‘ಕಾಶ್ಮೀರ ವಿಷಯ ಕುರಿತು ಮಧ್ಯಸ್ಥಿಕೆ ವಹಿಸುವ ಬಗೆಗಿನ ತನ್ನ ಹಳೆಯ ನೀತಿಯನ್ನು ಅಮೆರಿಕ ಬದಲಾಯಿಸಿಕೊಂಡಿದ್ದು, ಭಾರತ ಮತ್ತು ಪಾಕಿಸ್ತಾನಕ್ಕೆ ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ದ್ವಿಪಕ್ಷೀಯ ಮಾತುಕತೆಗೆ ಪ್ರೋತ್ಸಾಹ ನೀಡಲಿದೆ’ ಎಂದು ಅವರು ತಿಳಿಸಿದ್ದಾರೆ.

ಕಾಶ್ಮೀರ ಭಾರತದ ಕೈತಪ್ಪಲಿದೆ: ವೈಕೊ

ಚೆನ್ನೈ: ‘ಭಾರತವು ತನ್ನ 100ನೇ ಸ್ವಾತಂತ್ರ್ಯ ದಿನವನ್ನು ಆಚರಿಸುವ ಸಂದರ್ಭದಲ್ಲಿ ಕಾಶ್ಮೀರವು ದೇಶದ ಭಾಗವಾಗಿರುವುದಿಲ್ಲ’ ಎನ್ನುವ ಮೂಲಕ ಎಂಡಿಎಂಕೆ ನಾಯಕ ವೈಕೊ ವಿವಾದ ಸೃಷ್ಟಿಸಿದ್ದಾರೆ.

ದೇಶದ್ರೋಹದ ಹೇಳಿಕೆಗಾಗಿ ವೈಕೊ ಅವರು ಇತ್ತೀಚೆಗೆ ಒಂದು ವರ್ಷದ ಜೈಲು ಶಿಕ್ಷೆಗೆ ಒಳಗಾಗಿದ್ದರು. ಆದರೆ, ಆನಂತರ ಮದ್ರಾಸ್‌ ಹೈಕೋರ್ಟ್‌ ಆ ಶಿಕ್ಷೆಯನ್ನು ರದ್ದುಪಡಿಸಿತ್ತು. ಈಗ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿರುವ ಅವರು, ‘ಕೇಂದ್ರ ಸರ್ಕಾರ ಬೆಂಕಿಯ ಜೊತೆ ಸರಸವಾಡಿದೆ. ದೇಶದ ನೂರನೇ ಸ್ವಾತಂತ್ರ್ಯೋತ್ಸವದ ವೇಳೆಗೆ ಕಾಶ್ಮೀರವು ಭಾರತದ ಭಾಗವಲ್ಲ ಎಂಬುದು ಇತಿಹಾಸದಲ್ಲಿ ದಾಖಲಾಗಲಿದೆ. ಜಮ್ಮು ಕಾಶ್ಮೀರದ ಇಂದಿನ ಸ್ಥಿತಿಗೆ ಕಾಂಗ್ರೆಸ್‌ ಶೇ 30ರಷ್ಟು ಮತ್ತು ಬಿಜೆಪಿ ಶೇ 70ರಷ್ಟು ಹೊಣೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT