ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಯಾವತಿಯನ್ನು ಕೀಳು ಭಾಷೆಯಲ್ಲಿ ಹೀಗಳೆದ ಉ.ಪ್ರ. ಬಿಜೆಪಿ ಶಾಸಕಿ: ವ್ಯಾಪಕ ಖಂಡನೆ

Last Updated 20 ಜನವರಿ 2019, 10:31 IST
ಅಕ್ಷರ ಗಾತ್ರ

ಲಖನೌ: ‘ಮಾಯಾವತಿ ಮಹಿಳಾ ಸಮುದಾಯಕ್ಕೆ ಕಪ್ಪುಚುಕ್ಕೆ. ಅಧಿಕಾರಕ್ಕಾಗಿ ತಮ್ಮ ಘನತೆಯನ್ನೇ ಮಾರಿಕೊಂಡಿದ್ದಾರೆ’ ಎಂದುಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ನಾಯಕಿ ಮಾಯಾವತಿ ಕುರಿತು ಉತ್ತರ ಪ್ರದೇಶದ ಆಡಳಿತಾರೂಢ ಬಿಜೆಪಿ ಸರ್ಕಾರದ ಶಾಸಕಿಯೊಬ್ಬರು ಮಾಡಿರುವ ಟೀಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

‘ಅವರಿಗೆ ಆತ್ಮಗೌರವದ ಪರಿಜ್ಞಾನವೇ ಇಲ್ಲ. ಅವರ ಮೇಲೆ ದೌರ್ಜನ್ಯ ನಡೆದದ್ದು ಸುಳ್ಳೇ? ತನ್ನ ಮೇಲೆ ದೌರ್ಜನ್ಯ ನಡೆದದ್ದಕ್ಕೆ ದ್ರೌಪದಿ ಪ್ರತೀಕಾರದ ಪ್ರತಿಜ್ಞೆ ಮಾಡಿದಳು. ಆದರೆ ಈ ಹೆಣ್ಣು(ಮಾಯಾವತಿ) ಅಧಿಕಾರಕ್ಕಾಗಿ ತನ್ನ ಘನತೆಯನ್ನೇ ಮಾರಿಕೊಂಡಿದ್ದಾರೆ. ಮಾಯಾವತಿ ಅವರ ನಡೆಯನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಅವರು ಮಹಿಳಾ ಸಮುದಾಯಕ್ಕೆ ಕಪ್ಪುಚುಕ್ಕೆ. ಸುಖ ಮತ್ತು ಅಧಿಕಾರಕ್ಕಾಗಿ ತಮ್ಮ ಮೇಲೆ ನಡೆದ ದೌರ್ಜನ್ಯವನ್ನೇ ಅವರು ನುಂಗಿಕೊಂಡಿದ್ದಾರೆ’ ಎಂದು ಶಾಸಕ ಸಾಧನಾ ಸಿಂಗ್ ಮೊಘಲ್‌ಸರಾಯ್‌ನಲ್ಲಿ ಶನಿವಾರ ನಡೆದ ರ‍್ಯಾಲಿಯಲ್ಲಿ ಹೇಳಿದ್ದರು.

1995ರಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತು ಲಖನೌ ನಗರದ ಅತಿಥಿಗೃಹದಲ್ಲಿದ್ದ ಮಾಯಾವತಿ ಅವರ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆಯು ಎಸ್‌ಪಿ–ಬಿಎಸ್‌ಪಿ ನಡುವೆ ದಶಕಗಳ ಕಾಲ ದ್ವೇಷಕ್ಕೆ ಕಾರಣವಾಗಿತ್ತು. ‘ಮುಂದಿನ ಲೋಕಸಭೆ ಚುನಾವಣೆಯನ್ನು ಎರಡೂ ಪಕ್ಷಗಳು ಒಗ್ಗೂಡಿ ಎದುರಿಸಲಿವೆ’ ಎಂದು ಇದೀಗ ಎಸ್‌ಪಿ–ಬಿಎಸ್‌ಪಿ ಘೋಷಿಸಿವೆ. ‘ನನ್ನ ಭೂತಕಾಲವನ್ನು ದೇಶದ ಹಿತಾಸಕ್ತಿಗಾಗಿ ಮರೆಗೆ ಸರಿಸುತ್ತಿದ್ದೇನೆ’ ಎಂದು ಮಾಯಾವತಿ ಹೇಳಿದ್ದರು.

ಸಾಧನಾ ಸಿಂಗ್ ತಮ್ಮ ಭಾಷಣದಲ್ಲಿ ನೇರವಾಗಿ 1995ರ ಘಟನೆಯನ್ನು ಪ್ರಸ್ತಾಪಿಸಿಲ್ಲ. ಆದರೆ ಈ ಘಟನೆಯನ್ನೇ ನೆಪವಾಗಿರಿಸಿಕೊಂಡು ಮಾಯಾವತಿ ವಿರುದ್ಧ ಹರಿಹಾಯ್ದಿರುವುದು ಎದ್ದು ಕಾಣುತ್ತದೆ.

ಸಾಧನಾ ಸಿಂಗ್ ಭಾಷಣಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ. ‘ಎಸ್‌ಪಿ–ಬಿಎಸ್‌ಪಿ ಮೈತ್ರಿಯಿಂದ ಬಿಜೆಪಿ ನಾಯಕರ ತಲೆ ಎಷ್ಟು ಕೆಟ್ಟಿದೆ ಎಂಬುದಕ್ಕೆ ಸಾಧನಾ ಅವರ ಭಾಷಣವೇ ಸಾಕ್ಷಿ. ಅವರು ಬಳಸಿರುವ ಭಾಷೆ ಅವರ ಮನಃಸ್ಥಿತಿಯನ್ನು ತೋರಿಸುತ್ತದೆ’ ಎಂದು ಬಿಎಸ್‌ಪಿ ನಾಯಕ ಸತೀಶ್ಚಂದ್ರ ಮಿಶ್ರಾ ಪ್ರತಿಕ್ರಿಯಿಸಿದ್ದಾರೆ.

‘ಮಾಯಾವತಿ ಅವರನ್ನು ಹೀಗಳೆದರೆ ನನಗೇ ಅವಮಾನವಾದಂತೆ. ಸಾಧನಾ ಅವರ ಭಾಷಣ ಈ ದೇಶದ ಮಹಿಳೆಯರ ಘಟನೆಗೆ ಧಕ್ಕೆ ತಂದಿದೆ. ಬಿಜೆಪಿ ಮನಃಸ್ಥಿತಿ ಎಷ್ಟು ಹದಗೆಟ್ಟಿದೆ ಮತ್ತು ಸೋಲಿನ ಭೀತಿ ಅವರನ್ನು ಎಷ್ಟು ಕಂಗೆಡಿಸಿದೆ ಎನ್ನುವುದಕ್ಕೆ ಈ ಭಾಷಣವೇ ಉದಾಹರಣೆ’ ಎಂದು ಎಸ್‌ಪಿ ನಾಯಕ ಅಖಿಲೇಶ್ ಯಾದವ್ಹೇಳಿದ್ದಾರೆ.

ಮಾಯಾವತಿ ಮತ್ತು ಅಖಿಲೇಶ್ ಮೈತ್ರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಸಹ ಸಾಧನಾ ಸಿಂಗ್ ಹೇಳಿಕೆಯನ್ನು ಖಂಡಿಸಿದೆ. ‘ನಮಗೆ ಯಾರಾದರೂ ಒಬ್ಬರ ಜೊತೆಗೆ ಭಿನ್ನಮತ ಇರುವುದು ತಪ್ಪಲ್ಲ. ಆದರೆ ಆಡಳಿತ ಪಕ್ಷ ಬಿಜೆಪಿಯ ಶಾಸಕಿಯಾಗಿರುವ ಈ ಮಹಿಳೆ ಬಳಸಿದ ಕೀಳು ಅಭಿರುಚಿಯ ಭಾಷೆಗೆ ಸಭಿಕರು ಚಪ್ಪಾಳೆ ತಟ್ಟಿದ್ದು ನೋಡಿ ಬೇಸರವಾಯಿತು’ ಎಂದು ಕಾಂಗ್ರೆಸ್ ವಕ್ತಾರೆ ಪ್ರಿಯಾಂಕ ಚತುರ್ವೇದಿ ಟ್ವಿಟ್ ಮಾಡಿದ್ದಾರೆ.

ಮಾಯಾವತಿ ವಿರುದ್ಧ ಬಿಜೆಪಿ ಇಂಥ ಭಾಷೆ ಬಳಸುತ್ತಿರುವುದು ಇದೇ ಮೊದಲಲ್ಲ. 2016ರ ಚುನಾವಣೆಯಲ್ಲಿ ಉತ್ತರ ಪ್ರದೇಶದ ಬಿಜೆಪಿ ನಾಯಕ ದಯಾಶಂಕರ್ ಸಿಂಗ್ ಅವರನ್ನು ಇದೇ ಕಾರಣಕ್ಕೆ ಪಕ್ಷದಿಂದ ಹೊರಗೆ ಹಾಕಲಾಗಿತ್ತು. ಆದರೆ ಇಂದು ಅವರ ಪತ್ನಿ ಸ್ವಾತಿ ಸಿಂಗ್ ಯೋಗಿ ಆದಿತ್ಯನಾಥ್ ಸಂಪುಟದಲ್ಲಿ ಸಚಿವೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT