ಶಿಸ್ತಿಗೆ ಕರೆಕೊಟ್ಟರೆ ಸರ್ವಾಧಿಕಾರಿ ಹಣೆಪಟ್ಟಿ: ಪ್ರಧಾನಿ ಮೋದಿ

7
ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿಯಾಗಿ ಒಂದು ವರ್ಷ: ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಆರೋಪ

ಶಿಸ್ತಿಗೆ ಕರೆಕೊಟ್ಟರೆ ಸರ್ವಾಧಿಕಾರಿ ಹಣೆಪಟ್ಟಿ: ಪ್ರಧಾನಿ ಮೋದಿ

Published:
Updated:

ನವದೆಹಲಿ: ಶಿಸ್ತು ಪಾಲಿಸುವಂತೆ ಕರೆ ಕೊಡುವವರಿಗೆ ಸರ್ವಾಧಿಕಾರಿ ಎಂಬ ಹಣೆಪಟ್ಟಿ ಕಟ್ಟಲಾಗುತ್ತದೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. 

ಉಪರಾಷ್ಟ್ರಪತಿಯಾಗಿ ಮತ್ತು ರಾಜ್ಯಸಭೆಯ ಸಭಾಪತಿಯಾಗಿ ವೆಂಕಯ್ಯ ನಾಯ್ಡು ಅವರು ಒಂದು ವರ್ಷ ಪೂರೈಸಿದ್ದಕ್ಕೆ ಸಂಬಂಧಿಸಿದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮೋದಿ ಮಾತನಾಡಿದರು. ವೆಂಕಯ್ಯ ಅವರು ಶಿಸ್ತಿನ ವ್ಯಕ್ತಿ ಎಂದು ಅವರು ಹೇಳಿದರು.

‘ಈಗ ದೇಶದ ಸ್ಥಿತಿ ಹೇಗಿದೆ ಎಂದರೆ ಶಿಸ್ತಿನಿಂದಿರಿ ಎಂದು ಹೇಳುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗುತ್ತದೆ. ಶಿಸ್ತಿನಿಂದ ಇರಬೇಕು ಎಂದು ಯಾರಾದರೂ ಕರೆ ಕೊಟ್ಟರೆ ಅವರಿಗೆ ಸರ್ವಾಧಿಕಾರಿ ಎಂಬ ಹಣೆಪಟ್ಟಿ ಕಟ್ಟಲಾಗುತ್ತದೆ’ ಎಂದು ಅವರು ಹೇಳಿದರು.

‘ವೆಂಕಯ್ಯ ಅವರ ಜತೆಗೆ ಪ್ರವಾಸ ಹೋಗುವಾಗ ಬಹಳ ಜಾಗರೂಕರಾಗಿರಬೇಕು. ಅವರು ವಾಚು ಕಟ್ಟುವುದಿಲ್ಲ, ಪೆನ್‌ ಇರಿಸಿಕೊಳ್ಳುವುದಿಲ್ಲ ಮತ್ತು ಹಣ ಇಟ್ಟುಕೊಳ್ಳುವುದಿಲ್ಲ. ಅವರು ವಾಚು ಕಟ್ಟದೇ ಇದ್ದರೂ ಸಮಾರಂಭಗಳಿಗೆ ಸರಿಯಾದ ಸಮಯಕ್ಕೆ ಹೋಗುತ್ತಾರೆ. ನಿಗದಿತ ಸಮಯಕ್ಕೆ ಸಮಾರಂಭ ಕೊನೆಗೊಳ್ಳದಿದ್ದರೆ ಅವರಿಗೆ ಇರಿಸುಮುರಿಸಾಗುತ್ತದೆ. ಶಿಸ್ತು ಅವರ ಸ್ವಭಾವದ ಭಾಗವೇ ಆಗಿಬಿಟ್ಟಿದೆ’ ಎಂದು ಮೋದಿ ಹೇಳಿದರು. 

ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ವೆಂಕಯ್ಯ ಅವರಿಗೆ ಪ್ರಮುಖ ಖಾತೆಯೊಂದನ್ನು ನೀಡಲು ಬಯಸಿದ್ದರು. ಆದರೆ, ತಮಗೆ ಗ್ರಾಮೀಣಾಭಿವೃದ್ಧಿ ಖಾತೆ ಕೊಡುವಂತೆ ವೆಂಕಯ್ಯ ವಿನಂತಿ ಮಾಡಿಕೊಂಡರು ಎಂಬುದನ್ನು ಮೋದಿ ನೆನಪಿಸಿಕೊಂಡರು. 

ವೆಂಕಯ್ಯ ಅವರು ಆರಂಭಿಸಿದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಭಾರಿ ಜನಪ್ರಿಯವಾಗಿದೆ. ಗ್ರಾಮೀಣ ರಸ್ತೆಗಳ ಮಹತ್ವದಿಂದಾಗಿ ಸಂಸದರಿಗೆ ಇದು ಅಚ್ಚುಮೆಚ್ಚಿನ ಯೋಜನೆ ಎಂದು ಅವರು ಹೇಳಿದರು. 

ಮಾಜಿ ಪ್ರಧಾನಿಗಳಾದ ಮನಮೋಹನ್‌ ಸಿಂಗ್‌ ಮತ್ತು ಎಚ್‌.ಡಿ.ದೇವೇಗೌಡ, ಲೋಕಸಭೆಯ ಸ್ಪೀಕರ್‌ ಸುಮಿತ್ರಾ ಮಹಾಜನ್‌, ಹಣಕಾಸು ಸಚಿವ ಅರುಣ್‌ ಜೇಟ್ಲಿ, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕ ಆನಂದ್‌ ಶರ್ಮಾ, ಕೇಂದ್ರದ ಕೆಲವು ಸಚಿವರು ಮತ್ತು ಸಂಸದರು ಕಾರ್ಯಕ್ರಮದಲ್ಲಿ ಇದ್ದರು. 

ಇತ್ತೀಚಿನ ದಿನಗಳಲ್ಲಿ ಸದನವನ್ನು ನಡೆಸುವುದು ಬಹಳ ಕಷ್ಟಕರವಾಗಿದೆ. ರಾಜ್ಯಸಭೆಯನ್ನು ಅತ್ಯುತ್ತಮವಾಗಿ ನಡೆಸಿಕೊಂಡು ಹೋಗಲು ವೆಂಕಯ್ಯ ಅವರು ತಮ್ಮಿಂದಾಗುವ ಎಲ್ಲ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಸದನದಲ್ಲಿ ಇರುವ ಎಲ್ಲ ವರ್ಗಗಳ ಹಿತಾಸಕ್ತಿಯನ್ನು ರಕ್ಷಿಸುತ್ತಿದ್ದಾರೆ ಎಂದು ದೇವೇಗೌಡ ಹೇಳಿದರು. 

ಪ್ರತಿ ರಾಜ್ಯದಲ್ಲಿಯೂ ವಿಧಾನ ಪರಿಷತ್‌ ಇರಬೇಕು ಎಂಬ ಬಗ್ಗೆ ರಾಷ್ಟ್ರೀಯ ನೀತಿಯನ್ನು ಸಿದ್ಧಪಡಿಸಬೇಕು. ಸದಸ್ಯರು ಯಾವ ರೀತಿ ನಡೆದುಕೊಳ್ಳಬೇಕು ಎಂಬ ಬಗ್ಗೆ ಸಂಹಿತೆಯನ್ನು ರೂಪಿಸಲು ಎಲ್ಲ ರಾಜಕೀಯ ಪಕ್ಷಗಳು ಒಮ್ಮತಕ್ಕೆ ಬರಬೇಕು ಎಂದು ವೆಂಕಯ್ಯ ನಾಯ್ಡು ಕರೆ ಕೊಟ್ಟರು. 

***

ಸದನ ಸರಿಯಾಗಿ ನಡೆಯುವಾಗ ಸಭಾಪತಿಯತ್ತ ಯಾರೂ ಗಮನ ಕೊಡುವುದಿಲ್ಲ. ಸದನ ಗದ್ದಲದ ಗೂಡಾದಾಗ ಎಲ್ಲರ ಗಮನ ಸಭಾಪತಿಯತ್ತ ಹರಿಯುತ್ತದೆ
‌ನರೇಂದ್ರ ಮೋದಿ, ಪ್ರಧಾನಿ

ಬರಹ ಇಷ್ಟವಾಯಿತೆ?

 • 10

  Happy
 • 3

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !