ಮಂಗಳವಾರ, ಆಗಸ್ಟ್ 20, 2019
27 °C
ಶೇರ್‌ ಎ– ಕಾಶ್ಮೀರ್‌ ಮೈದಾನದಲ್ಲಿ ರಾಜ್ಯಪಾಲರಿಂದ ಧ್ವಜಾರೋಹಣ

‘ಸ್ವಾತಂತ್ರ್ಯ ದಿನಾಚರಣೆಗೆ ಕಾಶ್ಮೀರ ಸಿದ್ಧ‌’

Published:
Updated:

ಶ್ರೀನಗರ: ‘ಜಮ್ಮು ಕಾಶ್ಮೀರದಲ್ಲಿ ಸ್ವಾತಂತ್ರ್ಯದಿನವನ್ನು ಸಂಭ್ರಮದಿಂದ ಆಚರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಗುರುವಾರ (ಆ. 15) ಕಾಶ್ಮೀರದ ಶೇರ್–ಎ–ಪಂಜಾಬ್‌ ಮೈದಾನದಲ್ಲಿ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅವರು ಧ್ವಜಾರೋಹಣ ಮಾಡುವರು’ ಎಂದು ಮುಖ್ಯ ಕಾರ್ಯದರ್ಶಿ ರೋಹಿತ್‌ ಕನ್ಸಲ್‌ ತಿಳಿಸಿದರು.

ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಈ ವಿವರ ನೀಡಿದ ಅವರು, ರಾಜ್ಯದಲ್ಲಿ ಅಗತ್ಯವಸ್ತುಗಳ ಪೂರೈಕೆಗೆ ಯಾವುದೇ ಕೊರತೆ ಇಲ್ಲ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಜಿಲ್ಲಾಡಳಿತವು ಜನರಿಗೆ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದ್ದು, ಅಗತ್ಯವೆನಿಸಿದರೆ ನಿಷೇಧಾಜ್ಞೆಯನ್ನು ಸಡಿಲಗೊಳಿಸುತ್ತಿದೆ ಎಂದು ಕನ್ಸಲ್‌ ತಿಳಿಸಿದರು.

ಅಲ್ಲಲ್ಲಿ ಗಲಭೆ: ‘ಕಳೆದ ಒಂದು ವಾರದಲ್ಲಿ ಜಮ್ಮು ಕಾಶ್ಮೀರದ ಅಲ್ಲಲ್ಲಿ ಸಣ್ಣಪುಟ್ಟ ಗಲಭೆಗಳು ಸಂಭವಿಸಿ, ಕೆಲವೆಡೆ ಕಲ್ಲು ತೂರಾಟ ನಡೆದಿದೆ. ಆದರೆ ಅವುಗಳನ್ನು ಸಮರ್ಥವಾಗಿ ನಿಯಂತ್ರಿಸಲಾಗಿದೆ. ಈ ಸಂದರ್ಭದಲ್ಲಿ ಪೆಲೆಟ್‌ ಗನ್‌ ಬಳಸಿದ್ದರಿಂದ ಕೆಲವರಿಗೆ ಗಾಯಗಳಾಗಿವೆ’ ಎಂದು ಜಮ್ಮು ಕಾಶ್ಮೀರದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಮುನೀರ್ ಖಾನ್‌ ಬುಧವಾರ ತಿಳಿಸಿದರು.

ಜಿಲ್ಲೆಯಲ್ಲಿ ಎಷ್ಟು ಜನರನ್ನು ಬಂಧಿಸಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ ಖಾನ್‌, ‘ಇಂಥ ಸಂದರ್ಭಗಳಲ್ಲಿ ಬೇರೆಬೇರೆ ಕಾರಣಕ್ಕೆ ಬಂಧನ ನಡೆಸಲಾಗುತ್ತದೆ. ಶಾಂತಿ ಸುವ್ಯವಸ್ಥೆಗೆ ಧಕ್ಕೆ ಆಗಬಾರದೆಂಬ ಉದ್ದೇಶದಿಂದ ಮುನ್ನೆಚ್ಚರಿಕೆಯ ರೂಪದಲ್ಲಿ ಇಂಥ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ’ ಎಂದರು.

ಫೈಸಲ್‌ ಗೃಹಬಂಧನ
ಜಮ್ಮು ಕಾಶ್ಮೀರದ ಮಾಜಿ ಐಎಎಸ್‌ ಅಧಿಕಾರಿ ಶಾ ಫೈಸಲ್‌ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿ ಮರಳಿ ಶ್ರೀನಗರಕ್ಕೆ ಕರೆದೊಯ್ದು ಗೃಹಬಂಧನದಲ್ಲಿಡಲಾಗಿದೆ. ಅವರು ಬುಧವಾರ ಇಸ್ತಾಂಬುಲ್‌ಗೆ ಹೋಗಲು ಸಜ್ಜಾಗಿದ್ದರು.

ವಿಶೇಷಾಧಿಕಾರ ರದ್ದು ಮಾಡಿದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದ್ದ ಫೈಸಲ್‌, ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾರದ ವಿರುದ್ಧ ಹಲವು ಟೀಕೆಗಳನ್ನು ಮಾಡಿದ್ದರು. ಮಂಗಳವಾರ ಈ ಬಗ್ಗೆ ಟ್ವೀಟ್‌ ಮಾಡಿದ್ದ ಅವರು, ‘ಜಮ್ಮು ಕಾಶ್ಮೀರದಲ್ಲಿ ರಾಜಕೀಯ ಹಕ್ಕುಗಳನ್ನು ಪಡೆಯಲು ಸಾಮೂಹಿಕವಾಗಿ ಅಹಿಂಸಾತ್ಮಕವಾದ ರಾಜಕೀಯ ಚಳವಳಿಯನ್ನು ಆರಂಭಿಸಬೇಕಾಗಿದೆ. 370ನೇ ವಿಧಿಯ ರದ್ದತಿಯು ಮುಖ್ಯವಾಹಿನಿಯನ್ನು ನಾಶಮಾಡಿದೆ. ಸಂವಿಧಾನವಾದಿಗಳು ಇಲ್ಲವಾಗಿದ್ದಾರೆ. ಈಗ ಗುಲಾಮರಾಗುವುದು ಮತ್ತು ಪ್ರತ್ಯೇಕತಾವಾದಿಯಾಗುವುದು ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲೇಬೇಕು’ ಎಂದಿದ್ದರು.

ಇನ್ನೊಂದು ಟ್ವೀಟ್‌ನಲ್ಲಿ, ‘ಕಾಶ್ಮೀರದಲ್ಲಿ ಈದ್‌ ಇರಲಿಲ್ಲ. ತಮ್ಮ ಭೂಮಿಯನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿರುವುದಕ್ಕೆ ವಿಶ್ವದಾದ್ಯಂತ ಇರುವ ಕಾಶ್ಮೀರಿಗಳು ಶೋಕ ಆಚರಿಸುತ್ತಿದ್ದಾರೆ. 1947ರಿಂದೀಚೆಗೆ ನಮ್ಮಿಂದ ಸ್ವಾಧೀನಪಡಿಸಿಕೊಂಡಿದ್ದ ಎಲ್ಲವನ್ನೂ ಮರಳಿಸುವವರೆಗೆ, ನಮಗೆ ಮಾಡಿರುವ ಪ್ರತಿಯೊಂದು ಅವಮಾನಕ್ಕೂ ಪ್ರತೀಕಾರ ತೀರಿಸುವವರೆಗೆ ಕಾಶ್ಮೀರದಲ್ಲಿ ಈದ್‌ ಆಚರಣೆ ಇರುವುದಿಲ್ಲ’ ಎಂದಿದ್ದರು.

ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಅವರನ್ನು ದೆಹಲಿಯಲ್ಲಿ ಬುಧವಾರ ಬಂಧಿಸಲಾಯಿತು. ಅಲ್ಲಿಂದ ಶ್ರೀನಗರಕ್ಕೆ ಕರೆತಂದು ಗೃಹಬಂಧನದಲ್ಲಿ ಇಡಲಾಗಿದೆ.

Post Comments (+)