ಮಂಗಳವಾರ, ಮಾರ್ಚ್ 2, 2021
31 °C
3 ವರ್ಷದಿಂದ ಹಣಕಾಸು ಸ್ಥಿರತೆ ಕಾಯ್ದುಕೊಳ್ಳಲು ಪರದಾಟ: ಅಂತರರಾಷ್ಟ್ರೀಯ ವಾಯು ಸಂಚಾರ ಸಂಸ್ಥೆ ವರದಿ

ಲಾಭ ಕಾಣದ ವಿಮಾನಯಾನ ಸಂಸ್ಥೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ನವದೆಹಲಿ: ಜಾಗತಿಕ ವಿಮಾನಯಾನ ಕ್ಷೇತ್ರ ನಾಗಾಲೋಟದಲ್ಲಿ ದಾಪುಗಾಲು ಹಾಕುತ್ತಿದ್ದರೆ, ಹಣಕಾಸು ಅಸ್ಥಿರತೆಯಿಂದಾಗಿ ಭಾರತದ ವೈಮಾನಿಕ ಕ್ಷೇತ್ರದ ವಹಿವಾಟು ಇನ್ನೂ ಚೇತರಿಸಿಕೊಳ್ಳಲು ಹೆಣಗಾಡುತ್ತಿದೆ ಎಂದು ಅಂತರರಾಷ್ಟ್ರೀಯ ವಾಯು ಸಂಚಾರ ಸಂಸ್ಥೆ (ಐಎಟಿಎ) ಹೇಳಿದೆ.

ಗೋಏರ್‌ ಮತ್ತು ಇಂಡಿಗೊ ಹೊರತುಪಡಿಸಿ ಭಾರತದ ಬಹುತೇಕ ವಿಮಾನಯಾನ ಸಂಸ್ಥೆಗಳು ಕಳೆದ ಮೂರು ವರ್ಷದಿಂದ ನಿವ್ವಳ ಲಾಭ ಗಳಿಸಲು ಪರದಾಡುತ್ತಿವೆ ಎಂದು ಐಎಟಿಎ ಆತಂಕ ವ್ಯಕ್ತಪಡಿಸಿದೆ.

ಅಂತರರಾಷ್ಟ್ರೀಯ ವೈಮಾನಿಕ ಶೃಂಗಸಭೆಯಲ್ಲಿ ಐಎಟಿಎ ಬಿಡುಗಡೆ ಮಾಡಿದ ‘ಭಾರತದ ವೈಮಾನಿಕ ಕ್ಷೇತ್ರದ ಸವಾಲುಗಳು ಮತ್ತು ಭವಿಷ್ಯ’ ವರದಿಯಲ್ಲಿ ಈ ಎಲ್ಲ ಅಂಶಗಳಿವೆ.

ಜಾಗತಿಕ ವಿಮಾನಯಾನ ಕ್ಷೇತ್ರ ಲಾಭದಲ್ಲಿ ಸಾಗಿದ್ದು, ಭಾರತದ ವೈಮಾನಿಕ ಕ್ಷೇತ್ರ ಸ್ಥಿರತೆ ಸಾಧಿಸಲು ಮೂರು ವರ್ಷಗಳಿಂದ ಹೋರಾಟ ನಡೆಸಿದೆ. ಇದರ ಹೊರತಾಗಿಯೂ ಗೋಏರ್‌ ಮತ್ತು ಇಂಡಿಗೊ ವಿಮಾನಯಾನ ಸಂಸ್ಥೆಗಳು ಮಾತ್ರ ಲಾಭದಲ್ಲಿವೆ ಎಂದು ತಿಳಿಸಿದೆ.

‘ಜಾಗತಿಕ ವಿಮಾನಯಾನದ ಕ್ಷೇತ್ರದ ಹಣಕಾಸು ಸ್ಥಿತಿ ಆಗಸದಲ್ಲಿದ್ದರೆ, ಭಾರತದ ವೈಮಾನಿಕ ಕ್ಷೇತ್ರ ಇನ್ನೂ ನೆಲವನ್ನೇ ಬಿಟ್ಟು ಮೇಲೆರಿಲ್ಲ’ ಎಂದು ವರದಿ ಹೇಳಿದೆ.

 20 ವರ್ಷಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ವಿಮಾನ ಪ್ರಯಾಣಿಕರ ಪ್ರಮಾಣ ಎಂಟು ಪಟ್ಟು ಹೆಚ್ಚಾಗಿದೆ. ಏಳು ವರ್ಷಗಳಿಗೆ ಹೋಲಿಸಿದರೆ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದೆ. ಆದರೂ, ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳಲು ದೇಶೀಯ ವೈಮಾನಿಕ ಕ್ಷೇತ್ರ ವಿಫಲವಾಗಿದೆ.

ಬಂಡವಾಳ ಹೂಡಿಕೆ, ವೈಮಾನಿಕ ಸ್ನೇಹಿ ನೀತಿ, ಜಾಗತಿಕ ಹಣಕಾಸು ಬಿಕ್ಕಟ್ಟು, ಇಂಧನ ಬೆಲೆ ಹೆಚ್ಚಳದಂತಹ ಸವಾಲುಗಳನ್ನು ಮೆಟ್ಟಿ ನಿಂತು ಭಾರತದ ವೈಮಾನಿಕ ಕ್ಷೇತ್ರ ಆರ್ಥಿಕ ಸ್ಥಿರತೆ ಕಾಪಾಡಿಕೊಂಡರೆ ಉಜ್ವಲ ಭವಿಷ್ಯವಿದೆ.

ಜಾಗತಿಕ ವೈಮಾನಿಕ ಕ್ಷೇತ್ದ ಮಟ್ಟವನ್ನು ತಲುಪಲು ಭಾರತದ ವಿಮಾನಯಾನ ಸಂಸ್ಥೆಗಳು ಇನ್ನೂ ದೂರದ ಹಾದಿಯನ್ನು ಕ್ರಮಿಸಬೇಕಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.

 ಲಘು ಉಪಾಹಾರಗಳಿಗೆ ಪ್ರಯಾಣಿಕರು ದುಬಾರಿ ಬೆಲೆ ತೆರಬೇಕಿಲ್ಲ

ನವದೆಹಲಿ (ಪಿಟಿಐ): ಸರ್ಕಾರದ ನಿರ್ವಹಣೆಯಲ್ಲಿರುವ ವಿಮಾನ ನಿಲ್ದಾಣಗಳಲ್ಲಿ ಇನ್ನು ಮುಂದೆ ಚಹಾ, ಲಘು ಉಪಾಹಾರಗಳಿಗೆ ಪ್ರಯಾಣಿಕರು ದುಬಾರಿ ಬೆಲೆ ತೆರಬೇಕಿಲ್ಲ. 

ವಿಮಾನ ನಿಲ್ದಾಣಗಳಲ್ಲಿ ಇವುಗಳಿಗೆ ಭಾರಿ ಮೊತ್ತ ತೆರಬೇಕಾಗಿರುವ ಕುರಿತು ಪ್ರಯಾಣಿಕರಿಂದ ನಿರಂತರವಾಗಿ ದೂರು ಬರುತ್ತಿದ್ದವು. ಸಂಸತ್ತಿನಲ್ಲಿ ಸಂಸದರು ಸಹ ಆಗಾಗ ಈ ವಿಷಯ ಪ್ರಸ್ತಾಪಿಸುತ್ತಿದ್ದರು. 

ಈ ಹಿನ್ನೆಲೆಯಲ್ಲಿ, ಸರ್ಕಾರಿ ವಿಮಾನ ನಿಲ್ದಾಣಗಳ ಕೆಲವು ಪ್ರತ್ಯೇಕ ಕೌಂಟರ್‌ಗಳಲ್ಲಿ ಕೈಗೆಟಕುವ ದರಗಳಲ್ಲಿ ಚಹಾ ಹಾಗೂ ಆಯ್ದ ಲಘು ಉಪಾಹಾರಗಳು ದೊರಕುವಂತೆ ಮಾಡಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಮುಂದಾಗಿದೆ.

ಪ್ರತ್ಯೇಕ ಕೌಂಟರ್‌ಗಳನ್ನು ಸ್ಥಾಪಿಸಲು ವಿಮಾನ ನಿಲ್ದಾಣಗಳ ನಿರ್ದೇಶಕರಿಗೆ ಕಳೆದ ತಿಂಗಳೇ ನಿರ್ದೇಶನ ನೀಡಲಾಗಿದ್ದು, ಆಹಾರ ಕೌಂಟರ್‌ ನಡೆಸುತ್ತಿರುವ ಕಂಪನಿಗಳಿಗೂ ಈ ಕುರಿತು ಸೂಚಿಸಲಾಗಿದೆ. 

ಖಾಸಗಿ ಕಂಪನಿಗಳ ನಿರ್ವಹಣೆಯಲ್ಲಿರುವ ಬೆಂಗಳೂರು, ದೆಹಲಿ ಹಾಗೂ ಮುಂಬೈನಂತಹ ವಿಮಾನ ನಿಲ್ದಾಣಗಳನ್ನು ಹೊರತುಪಡಿಸಿ ದೇಶದಾದ್ಯಂತ ಉಳಿದ 90 ವಿಮಾನ ನಿಲ್ದಾಣಗಳಲ್ಲಿ ಈ ಸೌಲಭ್ಯ ದೊರಕಲಿದೆ ಎಂದು ಎಎಐ ಶನಿವಾರ ತಿಳಿಸಿದೆ. 

‘ಪ್ರಯಾಣಿಕರಿಗಾಗಿ ಕ್ರಮ’

‘ಪ್ರಯಾಣಿಕರಿಗೆ ನೆರವಾಗುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಿನ ದಿನಗಳಲ್ಲಿ, ನಿರ್ದಿಷ್ಟವಾಗಿ ಪ್ರಾದೇಶಿಕ ವಾಯುಮಾರ್ಗ ಸಂಪರ್ಕ ಯೋಜನೆ (ಉಡಾನ್) ಜಾರಿಯಾದ ಬಳಿಕವಂತೂ ಸಮಾಜದ ಎಲ್ಲ ವರ್ಗದವರೂ ವಿಮಾನ ಪ್ರಯಾಣ ಕೈಗೊಳ್ಳುತ್ತಾರೆ. ಆದರೆ ನಿಲ್ದಾಣಗಳಲ್ಲಿ ಪೇಯ, ಲಘು ಉಪಾಹಾರಗಳಿಗೆ ಭಾರಿ ಮೊತ್ತ ತೆರಬೇಕಾಗುತ್ತಿತ್ತು. ಈ ಕೌಂಟರ್‌ಗಳು ಅಂತಹವರಿಗೆ ನಿರಾಳತೆ ನೀಡುತ್ತವೆ’ ಎಂದು ಎಎಐ ಅಧಿಕಾರಿ ತಿಳಿಸಿದ್ದಾರೆ. 

ಈ ಮಾರ್ಚ್‌ನಲ್ಲಿ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಚೆನ್ನೈ ವಿಮಾನ ನಿಲ್ದಾಣದಲ್ಲಿ ಚಹಾ ಕುಡಿಯಲು ಮುಂದಾದಾಗ, ದುಬಾರಿ ದರ ತಿಳಿದು ಅದನ್ನು ನಿರಾಕರಿಸಿದ್ದರು. ಈ ಕುರಿತು ಅವರು ಟ್ವೀಟ್ ಮಾಡಿದ್ದರು. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.