ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ದುಸ್ಸಾಹಸ: ಹಿಮ್ಮೆಟ್ಟಿಸಿದ ಸೇನೆ

ದಟ್ಟವಾಗಿ ಕವಿದ ಆತಂಕದ ಕಾರ್ಮೋಡ
Last Updated 28 ಫೆಬ್ರುವರಿ 2019, 1:21 IST
ಅಕ್ಷರ ಗಾತ್ರ

ನವದೆಹಲಿ: ಏಷ್ಯಾದ ಎರಡು ಅಣ್ವಸ್ತ್ರಶಕ್ತ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನದ ನಡುವಣ ಸಂಬಂಧ ಅತ್ಯಂತ ವಿಷಮ ಸ್ಥಿತಿ ತಲುಪಿದೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ಜೈಷ್‌ ಎ ಮೊಹಮ್ಮದ್‌ ಸಂಘಟ
ನೆಯು ನಡೆಸಿದ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಬಾಲಾಕೋಟ್‌ನ ಉಗ್ರರ ತರಬೇತಿ ಶಿಬಿರದ ಮೇಲೆ ಭಾರತ ಮಂಗಳವಾರ ನಡೆಸಿದ ವಾಯುದಾಳಿಯ ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಯುದ್ಧದ ಭೀತಿ ದಟ್ಟವಾಗಿದೆ.

ಇಬ್ಬರು ಪೈಲಟ್‌ಗಳನ್ನು ಬಂಧಿಸಲಾಗಿದೆ ಎಂದು ಬುಧವಾರ ಮಧ್ಯಾಹ್ನ ಹೇಳಿದ್ದ ಪಾಕಿಸ್ತಾನ ಸಂಜೆಯ ಹೊತ್ತಿಗೆ ಮಾತು ಬದಲಿಸಿದೆ.

ತನ್ನ ಬಳಿ ಒಬ್ಬ ಪೈಲಟ್‌ ಮಾತ್ರ ಇದ್ದಾರೆ. ಸೆರೆಯಾಳು ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರಿಗೆ ಸೇನಾ ನೀತಿಯ ಪ್ರಕಾರ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪಾಕಿಸ್ತಾನ ಹೇಳಿದೆ. ಬುಧವಾರ ಬೆಳಿಗ್ಗೆಯಿಂದ ಆತಂಕಕಾರಿ ಬೆಳವಣಿಗೆಗಳು ತ್ವರಿತಗತಿಯಲ್ಲಿ ನಡೆದವು.

ಪರಿಸ್ಥಿತಿಯು ವಿಷಮಗೊಳ್ಳುತ್ತಿದ್ದಂತೆ ಉತ್ತರ ದೆಹಲಿಯ ವಾಯುಪ್ರದೇಶದಲ್ಲಿ ಎಲ್ಲ ವಿಮಾನ ಹಾರಾಟಗಳನ್ನು ಸ್ವಲ್ಪ ಹೊತ್ತು ಸ್ಥಗಿತಗೊಳಿಸಲಾಗಿತ್ತು. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಪಂಜಾಬ್‌ನ ಒಂಬತ್ತು ನಾಗರಿಕ ವಿಮಾನ ನಿಲ್ದಾಣಗಳನ್ನು ಸ್ಥಗಿತಗೊಳಿಸಲಾಯಿತು. ಸಂಜೆಯ ಹೊತ್ತಿಗೆ ಈ ವಿಮಾನ ನಿಲ್ದಾಣಗಳು ಮತ್ತೆ ಕಾರ್ಯನಿರ್ವಹಿಸಲು ಆರಂಭಿಸಿವೆ.

‘ಭಾರತದಲ್ಲಿನ ಸೇನಾ ನೆಲೆಗಳ ಮೇಲೆ ಪಾಕಿಸ್ತಾನದ ವಾಯುಪಡೆಯು ಬುಧವಾರ ಬೆಳಿಗ್ಗೆ ದಾಳಿ ನಡೆಸಲು ಯತ್ನಿಸಿದೆ. ಇದನ್ನು ಭಾರತದ ವಾಯುಪಡೆಯುತಕ್ಷಣವೇ ಗುರುತಿಸಿದೆ. ಭಾರತದ ಮಿಗ್‌ 21 ಬೈಸನ್‌ ವಿಮಾನವು ಪಾಕಿಸ್ತಾನದ ಒಂದು ಯುದ್ಧ ವಿಮಾನವನ್ನು (ಎಫ್‌ 16) ಹೊಡೆದುರುಳಿಸಿದೆ. ಪಾಕಿಸ್ತಾನದ ವಿಮಾನವು ಆ ದೇಶದ ಭೂಪ್ರದೇಶದಲ್ಲಿ ಬಿದ್ದಿದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ತಿಳಿಸಿದ್ದಾರೆ. ಅವರು ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ವಾಯುಪಡೆಯ ಉಪಮುಖ್ಯಸ್ಥ ಆರ್‌.ಜಿ.ಕೆ. ಕಪೂರ್‌ ಉಪಸ್ಥಿತರಿದ್ದರು.

ಈ ಕಾರ್ಯಾಚರಣೆಯಲ್ಲಿ ಭಾರತದ ಒಂದು ಮಿಗ್‌ 21 ಯುದ್ಧ ವಿಮಾನ ಪತನವಾಗಿದೆ. ಕರ್ತವ್ಯದಲ್ಲಿದ್ದ ಒಬ್ಬರು ಪೈಲಟ್‌ ನಾಪತ್ತೆಯಾಗಿದ್ದಾರೆ. ಅವರು ತನ್ನ ವಶದಲ್ಲಿ ಇದ್ದಾರೆ ಎಂದು ಪಾಕಿಸ್ತಾನ ಹೇಳಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ತನ್ನ ವಾಯುಪ್ರದೇಶದ ಮೇಲೆ ಹಾರಾಟ ನಡೆಸಿದ ಭಾರತದ ಎರಡು ವಿಮಾನಗಳನ್ನು ಉರುಳಿಸಲಾಗಿದೆ. ಇಬ್ಬರು ಪೈಲಟ್‌ಗಳನ್ನು ಬಂಧಿಸಲಾಗಿದೆ. ಅವರಲ್ಲಿ ಒಬ್ಬರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಬ್ಬರು ಆರೋಗ್ಯವಾಗಿದ್ದಾರೆ ಎಂದು ಪಾಕಿಸ್ತಾನ ಸೇನೆಯ ವಕ್ತಾರ ಮೇ. ಜ. ಆಸಿಫ್‌ ಗಫೂರ್‌ ಬುಧವಾರ ಬೆಳಿಗ್ಗೆ ಹೇಳಿದ್ದರು.

ಬಂಧಿತ ಪೈಲಟ್‌ನಿಂದ ವಶಪಡಿಸಿಕೊಂಡದ್ದು ಎನ್ನಲಾದ ದಾಖಲೆಗಳನ್ನು ಅವರು ಪ್ರದರ್ಶಿಸಿದ್ದಾರೆ. ಪಾಕಿಸ್ತಾನ ಸೇನೆಯು 46 ಸೆಕೆಂಡ್‌ನ ವಿಡಿಯೊವನ್ನು ಕೂಡ ಬಿಡುಗಡೆ ಮಾಡಿದೆ.

ಮಾತುಕತೆಗೆ ಇಮ್ರಾನ್‌ ಆಹ್ವಾನ

ಭಾರತದ ಜತೆಗೆ ಮಾತುಕತೆಗೆ ಸಿದ್ಧ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ. ಎರಡು ಅಣ್ವಸ್ತ್ರಶಕ್ತ ರಾಷ್ಟ್ರಗಳ ನಡುವೆ ಪರಿಸ್ಥಿತಿ ವಿಷಮಗೊಳ್ಳುತ್ತಲೇ ಹೋದರೆ ಪರಿಣಾಮ ಗಂಭೀರವಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

‘ಪರಿಸ್ಥಿತಿ ಕೈಬಿಟ್ಟು ಹೋದರೆ ಅದು ಮತ್ತೆ ನನ್ನ ಅಥವಾ ಮೋದಿ ಅವರ ನಿಯಂತ್ರಣಕ್ಕೆ ಸಿಗದು.ನಮ್ಮಲ್ಲಿ ಇರುವಂತಹ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡು ಯಾವುದೇ ತಪ್ಪು ಹೆಜ್ಜೆಯನ್ನು ಅರಗಿಸಿಕೊಳ್ಳಲು ಸಾಧ್ಯವೇ?‘ ಇಮ್ರಾನ್‌ ಪ್ರಶ್ನಿಸಿದ್ದಾರೆ.

‘ಮಾತುಕತೆಗೆ ಬರುವಂತೆ ನಾನು ಭಾರತವನ್ನು ಮತ್ತೊಮ್ಮೆ ಆಹ್ವಾನಿಸುತ್ತಿದ್ದೇನೆ. ಸಮಚಿತ್ತ ಉಳಿಯಲಿ’ ಎಂದು ಅವರು ಹೇಳಿದ್ದಾರೆ. ಈ ಹಿಂದೆಯೂ ಅವರು ಮಾತುಕತೆಗೆ ಭಾರತವನ್ನು ಆಹ್ವಾನಿಸಿದ್ದರು. ‘ಪರಿಸ್ಥಿತಿ ಇನ್ನಷ್ಟು ಹದಗೆಟ್ಟರೆ ಅದು ಎಲ್ಲಿ ಹೋಗಿ ತಲುಪುತ್ತದೆ’ ಎಂದೂ ಇಮ್ರಾನ್‌ ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲೂ ಕಟ್ಟೆಚ್ಚರ

ದೇಶದ ಗಡಿ ಭಾಗದಲ್ಲಿ ಯುದ್ಧ ಭೀತಿ ಆವರಿಸಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ಎಚ್‌ಎಎಲ್, ಎನ್‌ಎಎಲ್, ಡಿಆರ್‌ಡಿಒ, ಎಡಿಎ, ಬಿಇಎಂಎಲ್, ಇಸ್ರೊ ಬೆಂಗಳೂರು ಕೇಂದ್ರ ಕಚೇರಿ, ಹಾಸನ ಮತ್ತು ಬೆಂಗಳೂರು ಹೊರವಲಯದ ಬ್ಯಾಲಾಳುವಿನಲ್ಲಿರುವ ‘ಇಸ್ರೊ’ ಕೇಂದ್ರಗಳು, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್), ಕಲಬುರ್ಗಿಯಲ್ಲಿರುವ ಬುದ್ಧ ವಿಹಾರ, ಬೀದರ್‌ನಲ್ಲಿರುವ ಸಿಖ್ ಸಮುದಾಯದ ಧಾರ್ಮಿಕ ಕೇಂದ್ರ, ಮಡಿಕೇರಿಯ ಟಿಬೆಟನ್ ನಿರಾಶ್ರಿತರ ಕೇಂದ್ರ, ಕೆಆರ್‌ಎಸ್ ಅಣೆಕಟ್ಟು, ಬಸ್ ಹಾಗೂ ರೈಲು ನಿಲ್ದಾಣಗಳು ಹಾಗೂ ಕೆಲ ಐಟಿ ಕಂಪನಿಗಳ ಬಳಿ ಪೊಲೀಸರು ಹಾಗೂ ಸೇನಾ ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದ್ದಾರೆ.

ರಾಜ್ಯದಲ್ಲಿರುವ ಬಸ್, ರೈಲು ನಿಲ್ದಾಣಗಳು, ಮಾಲ್‌ಗಳು ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ಸ್ಥಳೀಯರ ಮೇಲೂ ನಿಗಾ ಇಡುವಂತೆಯೂ ಸೂಚಿಸಲಾಗಿದೆ.

***

ಪರಿಸ್ಥಿತಿ ಇನ್ನಷ್ಟು ತೀವ್ರಗೊಳ್ಳುವುದನ್ನು ಭಾರತ ಬಯಸುವುದಿಲ್ಲ. ಜವಾಬ್ದಾರಿ ಹಾಗೂ ಸಂಯಮದ ವರ್ತನೆಯನ್ನು ಭಾರತ ಮುಂದುವರಿಸಲಿದೆ.

-ಸುಷ್ಮಾ ಸ್ವರಾಜ್‌, ವಿದೇಶಾಂಗ ಸಚಿವೆ

ಭಾರತ ಮತ್ತು ಪಾಕಿಸ್ತಾನ ಸಂಯಮ ಪಾಲಿಸಬೇಕು. ಪರಿಸ್ಥಿತಿ ಇನ್ನಷ್ಟು ತೀವ್ರಗೊಳ್ಳುವುದನ್ನು ಎರಡೂ ದೇಶಗಳು ತಡೆಯಲೇಬೇಕು.

-ಮೈಕ್‌ ಪಾಂಪಿಯೊ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ

ನೀವು ನಮ್ಮ ದೇಶಕ್ಕೆ ಬರುತ್ತೀರಿ ಎಂದಾದರೆ ನಾವು ನಿಮ್ಮಲ್ಲಿಗೂ ಬರುತ್ತೇವೆ ಎಂಬುದನ್ನು ತೋರಿಸುವುದಷ್ಟೇ ಬುಧವಾರದ ನಮ್ಮ ಕಾರ್ಯಾಚರಣೆಯ ಏಕೈಕ ಉದ್ದೇಶ

- ಇಮ್ರಾನ್‌ ಖಾನ್‌, ಪಾಕಿಸ್ತಾನ ಪ್ರಧಾನಿ

ಇನ್ನಷ್ಟು ಓದು

*ಬಲಾಕೋಟ್‍ನಲ್ಲಿ ವೈಮಾನಿಕ ದಾಳಿ ನಡೆಸಿ ಪಾಕ್‍ಗೆ ಪ್ರತ್ಯುತ್ತರ ನೀಡಿದ ಭಾರತ
*ವೈಮಾನಿಕ ದಾಳಿಯಲ್ಲಿ ಹತರಾಗಿದ್ದು 200 ಉಗ್ರರು!
*ಪಾಕ್‍ ವಿರುದ್ಧ ವೈಮಾನಿಕ ದಾಳಿ ನಡೆಸಿದ ಐಎಎಫ್‍ಗೆ ಟ್ವೀಟ್ ಪ್ರಶಂಸೆ
*ಪಾಕ್ ಉಗ್ರರ ನೆಲೆಗಳ ಮೇಲೆ ದಾಳಿ: ಸೀಬರ್ಡ್ ನೌಕಾನೆಲೆಯಲ್ಲಿ ಭದ್ರತೆ ಹೆಚ್ಚಳ
*ಇಂದಿನ ದಾಳಿ ನವ ಭಾರತದ ಸಂಕಲ್ಪದ ಮುನ್ನುಡಿ: ಅಮಿತ್‌ ಶಾ
*ಪಾಕಿಸ್ತಾನ ಇನ್ನಾದರೂ ತೆಪ್ಪಗಿರಲಿ: ಪ್ರಹ್ಲಾದ ಜೋಶಿ
*ಮೋದಿ ನುಡಿದಂತೆ ನಡೆದಿದ್ದಾರೆ; ಇದು ಪಾಕಿಸ್ತಾನಕ್ಕೆ ಎಚ್ಚರಿಕೆ ಗಂಟೆ -ಸದಾನಂದ ಗೌಡ
*ಉಗ್ರರ ಶಿಬಿರಗಳನ್ನೇ ಗುರಿಯಾಗಿರಿಸಿ ಕಾರ್ಯಾಚರಣೆ ಮಾಡಲಾಗಿದೆ: ವಿಜಯ್ ಗೋಖಲೆ
*ಪುಲ್ವಾಮಾ ದಾಳಿಗೆ ಪ್ರತೀಕಾರ: ಉಗ್ರರ ವಿರುದ್ಧ ಭಾರತ ‘ಯುದ್ಧ’
*ಸಾರ್ವತ್ರಿಕ ಚುನಾವಣೆ ಗಮನದಲ್ಲಿರಿಸಿ ವಾಯುದಾಳಿ ನಡೆಸಿದ ಭಾರತ: ಪಾಕಿಸ್ತಾನ ಆರೋಪ
*ವಾಯುದಾಳಿ: ಮುಂಬೈ ಕಟ್ಟೆಚ್ಚರ, ಬಿಗಿ ಭದ್ರತೆ ಕೈಗೊಳ್ಳುವಂತೆ ಶಾಲೆಗಳಿಗೆ ಸೂಚನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT