ಯೋಧರ ಪ್ರಾಣ ರಕ್ಷಣೆಗಾಗಿ ಡಿಆರ್‌ಡಿಒ ಔಷಧಿ ಅಭಿವೃದ್ಧಿ – ಇದು ‘ಹೋರಾಟದ ಮದ್ದು’!

ಶನಿವಾರ, ಮಾರ್ಚ್ 23, 2019
21 °C

ಯೋಧರ ಪ್ರಾಣ ರಕ್ಷಣೆಗಾಗಿ ಡಿಆರ್‌ಡಿಒ ಔಷಧಿ ಅಭಿವೃದ್ಧಿ – ಇದು ‘ಹೋರಾಟದ ಮದ್ದು’!

Published:
Updated:

ನವದೆಹಲಿ: ಗಾಯಾಳು ಪ್ರಾಣಾಪಾಯದ ವಿರುದ್ಧ ಹೋರಾಡಲು ಸಹಕಾರಿಯಾಗುವ ಔಷಧಿಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ(ಡಿಆರ್‌ಡಿಒ) ಅಭಿವೃದ್ಧಿ ಪಡಿಸಿದೆ.

ಆತ್ಮಾಹುತಿ ದಾಳಿ, ಬಾಂಬ್‌ ಸ್ಫೋಟ ಅಥವಾ ಇನ್ನಾವುದೇ ದಾಳಿಗಳಿಂದ ತೀವ್ರವಾಗಿ ಗಾಯಗೊಳ್ಳುವ ಯೋಧರಿಗೆ ಸೂಕ್ತ ಚಿಕಿತ್ಸೆ ದೊರೆಯುವ ಹೊತ್ತಿಗೆ ನಿತ್ರಾಣರಾಗಿ ಸಾವಿಗೀಡಾಗುವ ಸಂಭವ ಹೆಚ್ಚು. ಜೀವ ರಕ್ಷಣೆಗೆ ಇರುವ ಅತ್ಯಮೂಲ್ಯ ಸಮಯವನ್ನು ಇನ್ನಷ್ಟು ವಿಸ್ತರಿಸುವ ಮೂಲಕ ಭದ್ರತಾ ಸಿಬ್ಬಂದಿಯನ್ನು ಪ್ರಾಣಾಪಾಯದಿಂದ ಪಾರು ಮಾಡುವ ವಿಶೇಷವಾದ ಮದ್ದು ಅಭಿವೃದ್ಧಿ ಪಡಿಸಲಾಗಿದೆ.

ತೀವ್ರವಾಗಿ ಗಾಯಗೊಂಡ ಭದ್ರತಾ ಸಿಬ್ಬಂದಿ ಆಸ್ಪತ್ರೆ ತಲುಪುವ ಮುನ್ನವೇ ಮೃತಪಡುವ ಪ್ರಮಾಣ ಅತಿ ಹೆಚ್ಚು. ಗಾಯಾಳುವಿನ ದೇಹದಿಂದ ರಕ್ತಸ್ರಾವ ತಡೆಯಲು ಔಷಧಿ ಮಿಶ್ರಣ(ಸೀಲಂಟ್‌), ರಕ್ತಗಾಯ ಶಮನಗೊಳಿಸಲು ಕ್ಷಿಪ್ರವಾಗಿ ವರ್ತಿಸುವ ಚಿಕಿತ್ಸಕ ಪಟ್ಟಿ(ಡ್ರೆಸ್ಸಿಂಗ್‌) ಹಾಗೂ ಗ್ಲಿಸೆರೇಟೆಡ್‌ ಲವಣಯುಕ್ತ ನೀರು(ಸಲೈನ್‌) ಯೋಧರನ್ನು ಪ್ರಾಣಾಪಾಯದಿಂದ ತಪ್ಪಿಸಬಹುದಾಗಿವೆ.

ಯೋಧರ ಮೇಲೆ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿ, ನಕ್ಸಲರು ನಡೆಸುವ ಸ್ಫೋಟ, ಅರಣ್ಯದೊಳಗೆ ಅಥವಾ ಎತ್ತರದ ಪರ್ವತ ಪ್ರದೇಶಗಳಲ್ಲಿ ನಡೆಯುವ ಅವಘಡ ಇಲ್ಲವೇ ಯುದ್ಧ ಸಂದರ್ಭಗಳಲ್ಲಿ ಭದ್ರತಾ ಸಿಬ್ಬಂದಿಗೆ ಸೂಕ್ತ ಚಿಕಿತ್ಸೆ ದೊರೆಯಲು ಹಲವು ಗಂಟೆಗಳೇ ಉರುಳುತ್ತವೆ. ಡಿಆರ್‌ಡಿಒ ಅಭಿವೃದ್ಧಿ ಪಡಿಸಿರುವ ಆಧುನಿಕ ಚಿಕಿತ್ಸಾ ವಿಧಾನ ಹಾಗೂ ಔಷಧಿಗಳು ಕ್ಲಿಷ್ಟ ಪರಿಸ್ಥಿತಿಗಳಲ್ಲಿ ಯೋಧರ ಪ್ರಾಣ ರಕ್ಷಣೆಗೆ ಸಹಕಾರಿಯಾಗಲಿವೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. 

ತುರ್ತು ಸಂದರ್ಭಗಳಲ್ಲಿ ಈ ಔಷಧಿಗಳನ್ನು ಬಳಸುವ ಮೂಲಕ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಬಹುದು. ತೀವ್ರವಾಗಿ ಗಾಯಗೊಂಡ ಮುಂದಿನ ಪ್ರತಿಕ್ಷಣವೂ ಅತ್ಯಮೂಲ್ಯವಾಗಿರುತ್ತದೆ. ಆ ಸಂರ್ಭದಲ್ಲಿ ಸೂಕ್ತ ಪ್ರಥಮ ಚಿಕಿತ್ಸೆ ದೊರೆತರೆ ಹಲವು ತೊಂದರೆಗಳನ್ನು ತಪ್ಪಿಸಬಹುದು ಎನ್ನುತ್ತಾರೆ ಡಿಆರ್‌ಡಿಒದ ನ್ಯೂಕ್ಲಿಯರ್‌ ಮೆಡಿಸಿನ್‌ ಆ್ಯಂಡ್‌ ಅಲೈಡ್‌ ಸೈನ್ಸಸ್‌ ಪ್ರಯೋಗಾಲಯದ ವಿಜ್ಞಾನಿಗಳು. 

ಯುದ್ಧ ಸಂದರ್ಭಗಳಲ್ಲಿ ಭದ್ರತಾ ಸಿಬ್ಬಂದಿ ಅಧಿಕ ರಕ್ತಸ್ರಾವ, ಗಾಯ ಕೊಳೆಯುವಿಕೆ ಅಪಾಯವನ್ನು ಎದುರಿಸುತ್ತಾರೆ. ಆಘಾತ, ನೋವು ಹಾಗೂ ರಕ್ತದ ಪ್ರಮಾಣ ಕಡಿಮೆ(ಹೈಪೊವೊಲೆಮಿಯಾ)ಯಾಗುವುದನ್ನು ತಡೆಯುವುದು ಅತ್ಯಗತ್ಯವಾಗಿರುತ್ತದೆ. ದೇಶಿಯವಾಗಿ ಅಭಿವೃದ್ಧಿ ಪಡಿಸಿರುವ ಔಷಧಿಗಳು ಅರೆಸೈನಿಕ ಪಡೆ ಹಾಗೂ ರಕ್ಷಣಾ ಪಡೆ ಸಿಬ್ಬಂದಿ ಜೀವರಕ್ಷಕವಾಗಿರಲಿದೆ ಎಂದು ಲೈಫ್‌ ಸೈನ್ಸಸ್ ವಿಭಾಗದ ಪ್ರಧಾನ ನಿರ್ದೇಶಕ ಎ.ಕೆ.ಸಿಂಗ್‌ ಹೇಳಿದ್ದಾರೆ. 

ಗ್ಲಿಸೆರೇಟೆಡ್‌ ಸಲೈನ್‌ ಮೈನಸ್‌ 18 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ಉಷ್ಣಾಂಶದಲ್ಲಿಯೂ ಹೆಪ್ಪುಗಟ್ಟುವುದಿಲ್ಲ; ಹಾಗಾಗಿ ಅತಿ ಎತ್ತರದ ಪರ್ವತ ಪ್ರದೇಶಗಳಲ್ಲಿ ಈ ದ್ರಾವಣ ಮಿಶ್ರಣದ ಬಳಕೆ ಉಪಯುಕ್ತವೆನಿಸಿದೆ. ಮಿದುಳು ಅಥವಾ ಶ್ವಾಸಕೋಶಗಳಲ್ಲಿ ಹಾಗೂ ದೇಹದ ಇತರೆ ಭಾಗಗಳಲ್ಲಿ ಗಾಯಗಳಿಂದ ಉಂಟಾಗುವ ಊತವನ್ನು ತಡೆಯಲು ಗ್ಲಿಸೆರೇಟೆಡ್‌ ಸೆಲೈನ್‌ ಸಹಕಾರಿಯಾಗಿದೆ. 

* ಕೈಟೊಸನ್‌ ಜೆಲ್‌: ಕಾಲು, ಎದೆಗೂಡು ಹಾಗೂ ಹೊಟ್ಟೆಯ ಭಾಗಗಳಲ್ಲಿ ಉಂಟಾದ ತೀವ್ರ ಗಾಯದಿಂದ ರಕ್ತಸ್ರಾವನ್ನು ಕೈಟೊಸನ್‌ ಬಳಸಿ ತಡೆಯಬಹುದು. ಈ ಜೆಲ್‌ ಗಾಯದ ಮೇಲೆ ಪದರವನ್ನು ಸೃಷ್ಟಿಸುವ ಮೂಲಕ ರಕ್ತಸ್ರಾವನ್ನು ತಡೆಗಟ್ಟುತ್ತದೆ ಹಾಗೂ ಸೋಂಕು ತಡೆಯುತ್ತದೆ. ಗಾಯದ ಜಾಗಕ್ಕೆ ಜೆಲ್‌ ಹಚ್ಚಿ ಕೆಲ ಸಮಯ ಒತ್ತಿ ಹಿಡಿದರೆ ಸಾಕು, ರಕ್ತಸ್ರಾವ ನಿಲ್ಲುತ್ತದೆ. 

* ಸೋಂಕು ತಡೆಗೆ ಎಚ್‌ಒಸಿಎಲ್‌ : ಯುದ್ಧ ಸಂದರ್ಭಗಳಲ್ಲಿ ಹಾಗೂ ದಟ್ಟ ಕಾಡುಗಳಲ್ಲಿ ಉಂಟಾಗುವ ಗಾಯಗಳು ದೇಹದ ಅಂಗವನ್ನೇ ಕೊಳೆಸುವಷ್ಟು ಸೋಂಕು ಹರಡಿಸುವ ಸಾಧ್ಯತೆ ಹೆಚ್ಚು. ಸೂಕ್ಷ್ಮ ಜೀವಿಗಳಿಂದ ಹರಡುವ ಸೋಂಕು ತಡೆಯಲು ಎಚ್‌ಒಸಿಎಲ್‌ ರಾಸಾಯನಿಕ ಅನುಕೂಲಕರವಾಗಿದೆ. ಆಂಟಿಬಯೋಟಿಕ್‌ ಬಳಕೆಯನ್ನು ಇದರಿಂದ ತಪ್ಪಿಸಬಹುದಾಗಿದೆ. ಗಾಯಕ್ಕೆ ಎಚ್‌ಒಸಿಎಲ್ ರಾಸಾಯನಿಕ ಮಿಶ್ರಣ ಸಿಂಪಡಿಸಿ ತೊಳೆಯುವ ಮೂಲಕ ಸೋಂಕು ತಡೆಯಬಹುದಾಗಿದೆ.

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !