‘ಹಣಕಾಸು ಸಚಿವ ಜೇಟ್ಲಿಗೆ ರಕ್ಷಣಾ ಒಪ್ಪಂದದ ಬಗ್ಗೆ ಏನೇನೂ ಗೊತ್ತಿಲ್ಲ’

7

‘ಹಣಕಾಸು ಸಚಿವ ಜೇಟ್ಲಿಗೆ ರಕ್ಷಣಾ ಒಪ್ಪಂದದ ಬಗ್ಗೆ ಏನೇನೂ ಗೊತ್ತಿಲ್ಲ’

Published:
Updated:
Deccan Herald

ನವದೆಹಲಿ: ‘ರಕ್ಷಣಾ ಸಾಮಗ್ರಿ ಖರೀದಿ ಒಪ್ಪಂದದಲ್ಲಿ ವಿದೇಶಿ ಕಂಪನಿಗಳು ಭಾರತದಲ್ಲಿ ಹೂಡಬೇಕಿರುವ ಬಂಡವಾಳಕ್ಕೆ ಸಂಬಂಧಿಸಿದ ನೀತಿಯ ಬಗ್ಗೆ ಅರುಣ್ ಜೇಟ್ಲಿ ಅವರಿಗೆ ಏನೇನೂ ತಿಳಿದಿಲ್ಲ ಅನಿಸುತ್ತಿದೆ. ಹಣಕಾಸು ಸಚಿವರಾಗಿರುವ ಅವರು ಈ ಬಗ್ಗೆ ಹೇಳುತ್ತಿರುವುದೆಲ್ಲಾ ತಪ್ಪು’ ಎಂದು ಕಾಂಗ್ರೆಸ್ ವಕ್ತಾರ ಆನಂದ್ ಶರ್ಮಾ ಹರಿಹಾಯ್ದಿದ್ದಾರೆ.

‘ವಿದೇಶಿ ಕಂಪನಿಗಳು ಭಾರತದಲ್ಲಿ ಬಂಡವಾಳ ಹೂಡುವಾಗ ಸರ್ಕಾರಿ ಸ್ವಾಮ್ಯದ ಕಂಪನಿ ಜತೆಗೇ ಪಾಲುದಾರಿಕೆ ಮಾಡಿಕೊಳ್ಳಬೇಕು ಮತ್ತು ಆ ಕಂಪನಿಗೆ ಶಸ್ತ್ರಾಸ್ತ್ರ/ಯುದ್ಧೋಪಕರಣ ತಯಾರಿಕೆಯಲ್ಲಿ ಅನುಭವ ಇರಬೇಕು ಎಂಬುದು ನಿಯಮ. ಅಲ್ಲದೆ ಆ ಬಂಡವಾಳವನ್ನು ಎಲ್ಲೆಲ್ಲಿ ಹೂಡಿಕೆ ಮಾಡಲಾಗುತ್ತದೆ ಎಂಬುದರ ಸಂಪೂರ್ಣ ವಿವರವನ್ನೂ ಆ ಕಂಪನಿ ಸರ್ಕಾರಕ್ಕೆ ಸಲ್ಲಿಸಬೇಕು. ನಿಯಮಗಳು ಹೀಗೆಲ್ಲಾ ಇದ್ದರೂ, ಡಸಾಲ್ಟ್–ರಿಲಯನ್ಸ್ ಡಿಫೆನ್ಸ್‌ ಪಾಲುದಾರಿಕೆಗೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಹೇಗೆ ಹೇಳುತ್ತೀರಿ’ ಎಂದು ಅವರು ಜೇಟ್ಲಿಯನ್ನು ಪ್ರಶ್ನಿಸಿದ್ದಾರೆ.

‘ಎಚ್‌ಎಎಲ್‌ ಅನ್ನು ಒಪ್ಪಂದದಿಂದ ಹೊರಗಿಡಲಾಗುತ್ತದೆ ಎಂಬುದು ಸ್ವತಃ ಎಚ್‌ಎಎಲ್‌ಗೆ ತಿಳಿಯುವ ಮೊದಲೇ ಅನಿಲ್ ಅಂಬಾನಿಗೆ ಹೇಗೆ ತಿಳಿಯಿತು? ಒಪ್ಪಂದ ಅಂತಿಮಗೊಳ್ಳುವ 10 ದಿನಗಳ ಮೊದಲಷ್ಟೇ ಏಕೆ ಅನಿಲ್ ಹೊಸ ಕಂಪನಿಯನ್ನು ಸ್ಥಾಪಿಸಿದರು? ಎಚ್‌ಎಎಲ್‌ ಅನ್ನು ಒಪ್ಪಂದದಿಂದ ಕೈಬಿಡಲಾಗುತ್ತದೆ ಎಂಬ ವಿಚಾರ ಪ್ರಧಾನಿ ನರೇಂದ್ರ ಮೋದಿಗೆ ಮಾತ್ರ ತಿಳಿದಿತ್ತು. ಆ ವಿಚಾರವನ್ನು ಬಹಿರಂಗಪಡಿಸುವ ಮೂಲಕ ಮೋದಿ ಅವರು ‘ಸರ್ಕಾರಿ ರಹಸ್ಯ ಮಾಹಿತಿ ಕಾಯ್ದೆ’ಯನ್ನು ಉಲ್ಲಂಘಿಸಿದ್ದಾರೆ’ ಎಂದು ಆನಂದ್ ಶರ್ಮಾ ಆರೋಪಿಸಿದ್ದಾರೆ.

‘ಯುಪಿಎ ಸಿದ್ಧಪಡಿಸಿಕೊಂಡಿದ್ದ ಒಪ್ಪಂದವನ್ನು ರದ್ದುಪಡಿಸುವ ಮುನ್ನ ರಕ್ಷಣಾ ವ್ಯವಹಾರಗಳ ಸಂಸದೀಯ ಸಮಿತಿಯ ಅನುಮತಿ ಪಡೆದಿದ್ದಿರಾ? ವಿಮಾನಗಳ ಸಂಖ್ಯೆಯನ್ನು 126ರಿಂದ 36ಕ್ಕೆ ಇಳಿಸುತ್ತಿದ್ದೀವಿ ಎಂಬುದನ್ನಾದರೂ ಸಮಿತಿಯ ಗಮನಕ್ಕೆ ತಂದಿದ್ದಿರಾ? ಇದ್ಯಾವುದನ್ನೂ ಸರ್ಕಾರ ಮಾಡಿಲ್ಲ. ಹೀಗಾಗಿಯೇ ಈ ವಿಚಾರದಲ್ಲಿ ತನಿಖೆ ನಡೆಯಲೇಬೇಕು. ಸರ್ಕಾರ ಏನು ಬೇಕಾದರೂ ಹೇಳಲಿ. ತನಿಖೆ ನಡೆದರೆ ಸತ್ಯ ಹೊರಗೆ ಬರುತ್ತದೆ’ ಎಂದು ಅವರು ಆಗ್ರಹಿಸಿದ್ದಾರೆ.

ರಫೇಲ್ ಮಹಾ ದರೋಡೆ: ರಾಹುಲ್

‘ರಫೇಲ್ ಮಹಾ ದರೋಡೆ ಬಗ್ಗೆ ಇಷ್ಟೆಲ್ಲಾ ವಿವರಗಳನ್ನು ಬರೆದಿದ್ದಕ್ಕೆ ಅರುಣ್ ಜೇಟ್ಲಿ ಅವರಿಗೆ ಧನ್ಯವಾದಗಳು’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್‌ನಲ್ಲಿ ಲೇವಡಿ ಮಾಡಿದ್ದಾರೆ.

‘ಇದನ್ನೆಲ್ಲಾ ಪರಿಹರಿಸಲು ಜಂಟಿ ಸದನ ಸಮಿತಿ ರಚಿಸಿದರೆ ಹೇಗೆ? ನಿಮ್ಮ ಮಹಾನ್ ನಾಯಕ, ಅವರ ಸ್ನೇಹಿತನನ್ನು ರಕ್ಷಿಸುತ್ತಿದ್ದಾರೆ. ಅದೇ ನಿಮ್ಮ ಸಮಸ್ಯೆ. ಇದನ್ನೆಲ್ಲಾ ಪರಿಶೀಲಿಸಿ, 24 ಗಂಟೆಗಳ ಒಳಗೆ ಉತ್ತರ ನೀಡಿ. ನಾವು ಕಾಯುತ್ತಿರುತ್ತೇವೆ’ ಎಂದು ರಾಹುಲ್ ಅವರು ಅರುಣ್ ಜೇಟ್ಲಿಗೆ ಸವಾಲು ಹಾಕಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !