ಗುರುವಾರ , ಸೆಪ್ಟೆಂಬರ್ 19, 2019
29 °C

ಕೇಂದ್ರ ಸರ್ಕಾರ ದುಬಾರಿ ದಂಡ ಕ್ರಮವನ್ನು ಮರುಪರಿಶೀಲಿಸಬೇಕು: ಕಮಲ್‌ ನಾಥ್‌

Published:
Updated:

ಭೋಪಾಲ್‌: ‘ಮೋಟಾರು ವಾಹನ (ತಿದ್ದುಪಡಿ) ಮಸೂದೆ 2019’ ಅನ್ವಯ ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸುವ ತನ್ನ ನಿರ್ಧಾರವನ್ನು ಕೇಂದ್ರ ಸರ್ಕಾರವು ಮರುಪರಿಶೀಲಿಸಬೇಕು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ ನಾಥ್‌ ಆಗ್ರಹಿಸಿದ್ದಾರೆ.

‘ರಸ್ತೆ ಅಪಘಾತ ಪ್ರಕರಣಗಳನ್ನು ತಗ್ಗಿಸುವುದು ಹಾಗೂ ಜನರ ಸುರಕ್ಷತೆಯನ್ನು ನಾವೂ ಬಯಸುತ್ತೇವೆ. ಹಾಗೆಂದು ದುಬಾರಿ ದಂಡ ವಿಧಿಸುವುದು ಸಮಂಜಸವಲ್ಲ. ದಂಡವು ಜನರ ಆರ್ಥಿಕ ಸಾಮರ್ಥಕ್ಕೆ ಅನುಗುಣವಾಗಿರಬೇಕು. ಇದು ಆರ್ಥಿಕ ಹಿಂಜರಿತದ ಕಾಲ. ಹಾಗಾಗಿ ದುಬಾರಿ ದಂಡ ಕ್ರಮವನ್ನು ಪುನಃ ಪರಿಶೀಲಿಸಬೇಕು ಮತ್ತು ಇದರಿಂದ ಜನರಿಗೆ ನೆಮ್ಮದಿ ಸಿಗಬೇಕು’ ಎಂದು ಅವರು ಟ್ವಿಟರ್ ಮೂಲಕ ಒತ್ತಾಯಿಸಿದ್ದಾರೆ.

ಮಧ್ಯಪ್ರದೇಶ ಸಾರಿಗೆ ಸಚಿವ ಗೋವಿಂದ ಸಿಂಗ್‌ ರಜಪೂತ್‌ ಅವರು ಕೇಂದ್ರದ ನಿರ್ಧಾರವನ್ನು ‘ತೊಘಲಕ್‌ ನೀತಿ’ ಎಂದು ಟೀಕಿಸಿದ್ದಾರೆ.

‘ಕೇಂದ್ರ ಸರ್ಕಾರದ ಮೋಟಾರ್‌ ವಾಹನ ಮಸೂದೆ ತೊಘಲಕ್‌ ನೀತಿಯಂತಹದು. ಬಹುತೇಕ ದಂಡ ಶುಲ್ಕಗಳು ಸಾಮಾನ್ಯ ಜನರ ಸಾಮರ್ಥವನ್ನು ಮೀರಿವೆ. ಮಧ್ಯಪ್ರದೇಶದ ಜನರು ದುಬಾರಿ ದಂಡದಿಂದ ಸಂಕಷ್ಟ ಅನುಭವಿಸುವುದನ್ನು ನಾನು ಸಹಿಸುವುದಿಲ್ಲ. ಈ ವಿಚಾರವಾಗಿ ಮುಖ್ಯಮಂತ್ರಿ ಕಮಲ್‌ ನಾಥ್‌ ಅವರೊಂದಿಗೆ ನಾನು ಚರ್ಚಿಸುತ್ತೇನೆ’ ಎಂದು ಅವರು ತಿಳಿಸಿದ್ದಾರೆ.

ರಸ್ತೆ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ‘ಮೋಟಾರು ವಾಹನ (ತಿದ್ದುಪಡಿ) ಮಸೂದೆ 2019’ ಕ್ಕೆ ಸಂಸತ್ತು ಒಪ್ಪಿಗೆ ನೀಡಿತ್ತು. ಇದೇ ತಿಂಗಳ ಆರಂಭದಿಂದ ಈ ಕಾನೂನು ರಾಷ್ಟ್ರವ್ಯಾಪಿ ಜಾರಿಗೆ ಬಂದಿದೆ. 

Post Comments (+)